ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಸಂಜೆಯ ಎರಡು ಪ್ರಸಂಗಗಳು

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಇಷ್ಟುದ್ದ ಹೊಟ್ಟೆ ತುಂಬಿಸೋಕೆ ಏನೆಲ್ಲಾ ಮಾಡ್ಬೇಕು ನೋಡು. ನಂಗೆ ಈ ಕೆಲ್ಸ ಇಷ್ಟ ಇಲ್ಲ ಮಚ್ಚಿ. ಏನು ಮಾಡೋದು, ಬೇರೆ ಕೆಲಸ ಸಿಗ್ತಿಲ್ಲ...’
ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರಂ ಕಟ್ಟೆಯ ಮೇಲೆ ದೀಪದ ಕಂಬಕ್ಕೆ ಒರಗಿದ್ದ ಯುವಕನ ಕಣ್ಣು ತೇಲುತ್ತಿತ್ತು. ಅವನ ಮಾತಿಗೆ ಕಿವಿಯಾಗಿದ್ದವನ ಬಾಯಿಂದ ಅವನ ಹೊಟ್ಟೆಗಿಳಿದಿದ್ದ ಬ್ರ್ಯಾಂಡ್ ಇಂಥದ್ದೇ ಎಂಬುದಕ್ಕೆ ಸಾಕ್ಷಿ ಹೊಮ್ಮುತ್ತಿತ್ತು.

ಕತ್ತಲ ರಾತ್ರಿಯಲ್ಲಿ ‘ಉದ್ಯಾನ್‌’ಗೆ ಕಾಯುತ್ತಿದ್ದ ಅನೇಕರು ತಮಗೆ ಇಷ್ಟವಿದೆಯೋ ಇಲ್ಲವೋ ಅವರ ಮಾತು ಕೇಳಿಸಿಕೊಳ್ಳುತ್ತಿದ್ದರು. ಆ ಪೈಕಿ ಅನೇಕರ ಮನಸು ತಮ್ಮದೇ ಬದುಕಿನ ಆರಂಭದ ದಿನಗಳಿಗೆ ಹೊರಳಿಕೊಂಡಿತ್ತು.

***
‘ಥೂ, ಅವ್ನೂ ಒಬ್ಬ ಯಜಮಾನನಾ...? ಬಾಯಿಗೆ ಬಂದಂಗೆ ಬೈತಾನೆ. ಅಮ್ಮ– ಅಕ್ಕ– ತಂಗೀರನ್ನೂ ಬೀದಿಗೆ ತರ್ತಾನೆ. ಕೈಲಿರೋ ಬಿಸಿ ಟೀ ಗ್ಲಾಸ್ ತೆಗ್ದು ಅವನ ಮುಖಕ್ಕೆ ಬೀಸಿ ಒಗೀಬೇಕು ಅನ್ಸುತ್ತೆ...’

‘ಅಯ್ಯೋ..., ಹಾಗೆಲ್ಲಾ ಮಾಡ್ಬಾರ್ದು ಮಚ್ಚಾ, ಕೂಲ್ ಆಗು. ಇಗೋ ಈ ಕಂಬನೇ ನಿನ್ನ ಓನರ್ ಅಂದ್ಕೋ. ಅವನಿಗೆ ಏನು ಮಾಡ್ಬೇಕು ಅಂದ್ಕೊಂಡಿದ್ದೀಯೋ ಅದನ್ನ ಇದಕ್ಕೇ ಮಾಡು...’

‘ಇವನಿಗೆ, ಮಾಡ್ತೀನಿ ತಾಳು’
ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಕೈಗಳಲ್ಲಿ ಈಗ ಹಳಿ ಪಕ್ಕದ ಕಲ್ಲು ತುಂಬಿತ್ತು. ಲೈಟ್ ಕಂಬದ ಲೋಹ ಠಣ್‌ಠಣಾ ಸದ್ದು ಮಾಡಿ ಸುಮ್ಮನಾಯಿತು. ಸಿಟ್ಟು ತಣಿದ ಮೇಲೆ, ‘ಅಯ್ಯೋ, ಹಳ್ಳಿಯಿಂದ ಬೆಂಗಳೂರಿಗೆ ಬಂದು ಮೇಲೆ ಬೀದಿಬೀದಿ ಅಲೀತಾ ಇದ್ದೆ.

ಹಸಿದು ಕಂಗಾಲಾಗಿದ್ದಾಗ ಕರೆದು ಇಷ್ಟು ಊಟ ಕೊಟ್ಟಿದ್ದ ಯಜಮಾನ ಅವನು. ಎಂಥ ಕೆಲಸ ಮಾಡಿಬಿಟ್ನಲ್ಲಾ...?’ ಅಂತ ಭೋರಿಟ್ಟು ಅಳಲು ಶುರು ಮಾಡಿದ. ಕೆಲವೇ ನಿಮಿಷದ ಹಿಂದಿದ್ದ ಅವನ ಸಿಟ್ಟು ಈಗ ಕಣ್ಣೀರಾಗಿ ಕರಗುತ್ತಿತ್ತು.

***
ಹೀಗೆ ಅಳುತ್ತಿದ್ದವನ ಹೆಸರು ರಾಮಾಂಜಿ. ಚಿಕ್ಕಬಳ್ಳಾಪುರ ತಾಲ್ಲೂಕಿನ ಯಾವುದೋ ಹಳ್ಳಿಯ ಯುವಕ. ಸತತ ಮೂರು ವರ್ಷ ಮಳೆ ಹೋದಾಗ ಕಂಗಾಲಾದ. ಭೂಮಿಯನ್ನು ತಮಿಳುನಾಡಿನಿಂದ ಬಂದ ಸಾಹುಕಾರನೊಬ್ಬ ಗುತ್ತಿಗೆಗೆ ಕೊಟ್ಟು, ಬೆಂಗಳೂರಿಗೆ ಬಂದ. ಹೊಟೆಲ್‌ನಲ್ಲಿ ಕೆಲಸವೇನೋ ಸಿಕ್ಕಿತು. ಆದರೆ ಪುಸ್ತಕ ಹಿಡಿದ ಕೈಗಳಲ್ಲಿ ಎಂಜಲು ಗ್ಲಾಸ್ ತೊಳೆಯೋದು ಗೌರವಕ್ಕೆ ಕಡಿಮೆ ಅಂತ ಮನಸು ಚುಚ್ಚುತ್ತಿತ್ತು.

ಸದಾ ಸರ್ವದಾ ಯಾವುದೋ ಮೂಡ್‌ನಲ್ಲಿ ತೇಲಿದಂತೆ ಇರುತ್ತಿದ್ದ ರಾಮಾಂಜಿ ಎಲ್ಲ ಕೆಲಸಕ್ಕೂ ನಿಧಾನಿಸುತ್ತಿದ್ದ. ಇದನ್ನು ನೋಡಿದಾಗಲೆಲ್ಲಾ ಹೋಟೆಲ್ ಓನರ್‌ ವೆಂಕಟೇಶಪ್ಪನ ಪಿತ್ತ ನೆತ್ತಿಗೆ ಹತ್ತುತ್ತಿತ್ತು. ಬಾಯಿಗೆ ಬಂದಂತೆ ಬೈದು, ಹೊಡೆಯಲು ಕೈ ಎತ್ತುತ್ತಿದ್ದ.

ಅವತ್ತು ರಾಮಾಂಜಿ ತನ್ನ ಗೆಳೆಯನೊಂದಿಗೆ ಟೈಟ್ ಆಗಿ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡ ವೆಂಕಟೇಶಪ್ಪನ ಸ್ನೇಹಿತರೊಬ್ಬರು ಎಲ್ಲವನ್ನೂ ಸವಿಸ್ತಾರ ವರದಿ ಮಾಡಿದ್ದರು.

‘ಕರೆದು ಇಷ್ಟು ಊಟ ಕೊಟ್ಟಿದ್ದ ಯಜಮಾನ ಅವನು. ಎಂಥ ಕೆಲಸ ಮಾಡಿಬಿಟ್ನಲ್ಲಾ...?’ ಎನ್ನುವ ರಾಮಾಂಜಿಯ ಉದ್ಗಾರ ವೆಂಕಟೇಶಪ್ಪನ ಮನಸ್ಸನ್ನೂ ಕಲಕಿತ್ತು.

***
ಈ ಘಟನೆ ನಡೆದು ಸುಮಾರು ಒಂದು ತಿಂಗಳು ಆಗಿರಬೇಕು. ಯಲಹಂಕದ ಎನ್‌ಇಎಸ್ ಹತ್ತಿರ ಇಬ್ಬರು ಗೆಳೆಯರು ಬಾಯಿ ತುಂಬಾ ಹೊಗೆಸೊಪ್ಪು ತುಂಬಿಕೊಂಡು ‘ಗೊಗ್ಗಗ್ಗೋ..., ಗಗ್ಗಗ್ಗಾ...’ ಮಾತನಾಡುತ್ತಿದ್ದರು.

‘ಬಾರೋ ಮಚ್ಚಾ, ರಾಜಕುಮಾರ ಫಿಲಂ ನೋಡಿ ಎಂಜಾಯ್ ಮಾಡೋಣ. ಈ ನಡ್ವೆ ನಮ್ ಓನರ್‌ಗೆ ದೇವ್ರು ಒಳ್ಳೇ ಬುದ್ಧಿ ಕೊಟ್ಟೋನೆ ಕಣಪ್ಪಿ. ಹೊಸ ತಪ್ಪುಗಳಿಗೆ ಬೈಯಲ್ಲ. ಮಾಡಿದ ತಪ್ಪು ಮಾಡಿದ್ರೆ ಮಾತ್ರ ಬೈತಾನೆ. ಮೊದಲಿನಂಗೆ ಅಮ್ಮ– ಅಕ್ಕ ಅನ್ನಲ್ಲ.

ಒಂದು ಚಿಕ್‌ ಮನೆ ನೋಡ್ತಿದ್ದೀನಿ. ಆದ್ರೆ, ಅಮ್ಮನ್ನೂ ಇಲ್ಲಿಗೇ ಕರ್ಕೊಂಡು ಬಂದ್ಬಿಡ್ತೀನಿ...’ ಈ ಮಾತು ಆಡಿದಾಗ ರಾಮಾಂಜಿ ಕುಡಿದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT