ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ಸಾಂಪ್ರದಾಯಿಕ ಖಾದ್ಯ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಿಸಿ ಬಿಸಿ ಪಡ್ಡು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಘಮ್ಮೆನ್ನುವ ಬೇಳೆ ಹೋಳಿಗೆ, ಕಾಯಿ ಹೋಳಿಗೆ... ಇವೆಲ್ಲಾ ಯಾವುದೊ ಹೋಟೆಲ್‌ನ ಮೆನು ಅಲ್ಲ. ಸಂಜಯನಗರದ ಬೀದಿ ಬದಿಯಲ್ಲಿ ಆಶಾ ರಾಜಗೋಪಾಲ್ ಅವರ ತಳ್ಳುಗಾಡಿ ಹೋಟೆಲ್‌ನಲ್ಲಿ ಬಿಕರಿಯಾಗುವ ಖಾದ್ಯಗಳಿವು.

ಆಂಧ್ರಪ್ರದೇಶ ಮೂಲದ ಆಶಾ ಸಣ್ಣ ವಯಸ್ಸಿನಲ್ಲೇ ಬೆಂಗಳೂರಿನಲ್ಲೇ ಬಂದು ಇಲ್ಲಿಯೇ ನೆಲೆಸಿದ್ದಾರೆ. ಬಹಳ ವರ್ಷಗಳಿಂದ ಚಕ್ಕುಲಿ, ಕೋಡುಬಳೆ ಮುಂತಾದ ಕುರುಕಲು ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆಶಾ ಅವರ ಕುಂಟುಂಬ, ಬ್ರಾಂಡೆಡ್‌ ಕುರುಕುಲುಗಳ ಮಾರುಕಟ್ಟೆ ಪ್ರವೇಶದಿಂದಾಗಿ ಇವರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿ ವ್ಯಾಪಾರದಲ್ಲಿ ನಷ್ಟವುಂಟಾಗಿ ಜೀವನ ನಿರ್ವಹಣೆ ಕಷ್ಟ ಎನಿಸಿದಾಗ ತಳ್ಳುಗಾಡಿ ವ್ಯಾಪಾರಕ್ಕಿಳಿದರು.

ತಳ್ಳು ಗಾಡಿ ಹೋಟೆಲ್‌ ಪ್ರಾರಂಭಿಸಿ ಎಂಟು ತಿಂಗಳಾಗಿದೆ ಅಷ್ಟೆ. ಗಂಡ ರಾಜಗೋಪಾಲ್ ಅವರು ಆಶಾ ಅವರಿಗೆ ನೆರವಾಗುತ್ತಾರೆ. ಅಡುಗೆ ಕಾರ್ಯ ಮತ್ತು ವ್ಯಾಪಾರ ಎರಡರಲ್ಲೂ ರಾಜಗೋಪಾಲ್ ಅವರೂ ಸಮಾನ ಶ್ರಮ ವಹಿಸುತ್ತಾರೆ.

‘ಇಡ್ಲಿ, ಚಿತ್ರಾನ್ನ, ದೋಸೆ ಎಲ್ಲ ಕಡೆ ಸಿಗುತ್ತದೆ. ಪಡ್ಡು, ಹೋಳಿಗೆ ತಿನ್ನಲು, ಹಳ್ಳಿ ಮನೆ ಅಥವಾ ಇನ್ನಾವುದೇ ದೊಡ್ಡ ಹೋಟೆಲ್‌ ಹುಡುಕಿಕೊಂಡು ಹೋಗಬೇಕು. ಹಾಗಾಗಿ ನಾವು ಈ ತಿನಿಸುಗಳನ್ನು ಮಾಡಲು ಪ್ರಾರಂಭಿಸಿದೆವು’ ಎನ್ನುತ್ತಾರೆ ಆಶಾ. ಇವರು ಮಾಡುವ ಈ ತಿನಿಸುಗಳು ಟೆಕಿಗಳು, ಕಾಲೇಜು ಹುಡುಗರು, ಶ್ರಮಿಕ ವರ್ಗದವರು, ಅಧಿಕಾರಿಗಳಿಗೂ ಅಚ್ಚುಮೆಚ್ಚು.

‘ಗ್ರಾಹಕರನ್ನು ಪ್ರೀತಿಯಿಂದ ಮಾತನಾಡಿಸುತ್ತೇವೆ. ಆದಷ್ಟು ತ್ವರಿತವಾಗಿ ಅವರು ಕೇಳಿದ್ದು ನೀಡುವ ಪ್ರಯತ್ನ ಮಾಡುತ್ತೇವೆ. ಇದರಿಂದ ನಮ್ಮನ್ನು ಗ್ರಾಹಕರು ಹುಡುಕಿಕೊಂಡು ಬರುತ್ತಾರೆ’ ಎಂಬುದು ಆಶಾ ಅವರ ಹೆಮ್ಮೆಯ ಮಾತು.

ಸಂಜೆ 6.30ರಿಂದ ರಾತ್ರಿ 10.30ರವರೆಗೆ ವ್ಯಾಪಾರ ಮಾಡುವ ಆಶಾ ಅವರಿಗೆ ಇಲ್ಲಿಯವರೆಗೆ ಯಾವ ಅಹಿತಕರ  ಅನುಭವವಾಗಿಲ್ಲವಂತೆ. ‘ಇಲ್ಲಿಯವರೆಗೆ ಯಾವ ಅಧಿಕಾರಿಗಳೂ, ಪೊಲೀಸರೂ ನಮಗೆ ಕಿರುಕುಳ ನೀಡಿಲ್ಲ. ಬಡವರ ಮೇಲೆ ಕರುಣೆಯುಳ್ಳವರೂ ಈಗಲೂ ಇದ್ದಾರೆ ಸಾರ್’ ಎದು ನಗುತ್ತಾರೆ ಅವರು.

ಆಶಾ ದಂಪತಿಗೆ ಅವರ ಹತ್ತಿರದ ಸಂಬಂಧಿಗಳಾದ ಲಕ್ಷ್ಮೀ ಮತ್ತು  ಶ್ರೀನಿವಾಸ್ ನೆರವಾಗುತ್ತಾರೆ. ವಿಶೇಷ ವಾಗಿ ಶನಿವಾರ ಮತ್ತು ಭಾನುವಾರಗಳಂದು ಗ್ರಾಹಕರ ಒತ್ತಡ ಹೆಚ್ಚಿದ್ದಾಗ ಅವರ ನೆರವು ಬೇಕೇ ಬೇಕು. ಇಬ್ಬರೇ ಅಷ್ಟು ಗ್ರಾಹಕರನ್ನು ನಿಭಾಯಿಸಲು ಆಗುವುದಿಲ್ಲ’ ಎಂಬುದು ರಾಜಗೋಪಾಲ್ ಮಾತು.

ಬೀದಿ ಬದಿ ವ್ಯಾಪಾರಿಗಳ ಊಟ ಉಪಾಹಾರಗಳು ಶುಚಿಯಾಗಿರುವುದಿಲ್ಲ ಎಂಬುದು ಗ್ರಾಹಕರ ಸಾಮಾನ್ಯ ದೂರು. ಹಾಗಾಗಿ ಇವರು ಶುಚಿತ್ವಕ್ಕೆ ಮಹತ್ವ ನೀಡುತ್ತಾರೆ.

‘ಗುಣಮಟ್ಟದ ಎಣ್ಣೆ, ದಿನಸಿಗಳನ್ನೇ ಅಡುಗೆಗೆ ಬಳಸುತ್ತೇವೆ. ಇದರಿಂದ ಸಹಜವಾಗಿಯೇ ನಾವು ಮಾಡುವ ತಿನಿಸುಗಳ ರುಚಿ ಹೆಚ್ಚುತ್ತದೆ’ ಎಂದು ವಿವರಿಸುತ್ತಾರೆ ಈ ದಂಪತಿ.

‘ವರ್ಷದ ಹಿಂದೆ ಸಂಸಾರ ನಡೆಸಲು ಕಷ್ಟದ ಸ್ಥಿತಿ ಇತ್ತು. ತಳ್ಳುಗಾಡಿಯಿಂದ ನಮ್ಮ ಜೀವನ ಸುಧಾರಿಸಿದೆ’ ಎಂದು ನೆಮ್ಮದಿಯ ನಗೆ ಬೀರುತ್ತಾರೆ ಆಶಾ ಮತ್ತು ರಾಜಗೋಪಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT