ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲ್ಮ್‌ ಸಿಟಿಯಲ್ಲಿ ಆಟದ ಮೋಜು

ಸುತ್ತಾಣ
Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿಮಾನಿಗಳಿಗೆಂದೇ ಸಿದ್ಧವಾದ ‘ಕಬಾಲಿ ವಾಕ್‌ಥ್ರೂ’, ಒಂದೇ ಕ್ಷಣದಲ್ಲಿ ಸಖತ್‌ ಆಟದ ಮೋಜು ಕೊಡುವ ‘ಸೂಪರ್‌ ಮಿನಿಟ್‌’, ಟಿವಿಯಲ್ಲಿ ‘ಬಿಗ್‌ಬಾಸ್‌’ ನೋಡಿ ಖುಷಿಪಟ್ಟವರಿಗೆ ಆ ಸೆಟ್ ಕಣ್ತುಂಬಿಕೊಳ್ಳುವ ಅವಕಾಶ.

ಇದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಇನೊವೇಟಿವ್‌ ಫಿಲ್ಮ್‌ ಸಿಟಿಯ ಚಿತ್ರಣ. ನಾನಾ ಬಗೆಯ ಹೊಸ ಸಜ್ಜಿಕೆಗಳು ಹಾಗೂ ಪ್ರಯೋಗಗಳ ಮೂಲಕ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಅದು ಯೋಜನೆಗಳನ್ನು ರೂಪಿಸುತ್ತಿದೆ.

‘ಕಬಾಲಿ ವಾಕ್‌ಥ್ರೂ’ ಎನ್ನುವ ಪರಿಕಲ್ಪನೆಯೊಂದಿಗೆ ಸೂಪರ್‌ಸ್ಟಾರ್‌ ರಜನಿಕಾಂತ್ ಅವರ ಅಭಿಯನದ ‘ಕಬಾಲಿ’ ತಮಿಳು ಚಲನಚಿತ್ರವನ್ನು ಇಲ್ಲಿ ಒಂದು ಸೆಟ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರಕ್ಕೆ ಬಳಸಿದಂತಹ ಮೂಲ ಪರಿಕರಗಳು, ವಸ್ತ್ರಗಳನ್ನೇ ಬಳಸಿಕೊಂಡು ಸೃಜಿಸಿರುವ ಈ ತಾಣವು ಸಿನಿಪ್ರಿಯರಿಗೆ ಒಂದು ಹೊಸ ಅನುಭವ ನೀಡಲಿದೆ.

ಪ್ರವೇಶದ್ವಾರದ ಒಳಹೊಕ್ಕು ಮುಂದುವರಿದರೆ ಗುಹೆಯೊಂದಕ್ಕೆ ಹೊಕ್ಕ ಅನುಭವವಾಗುತ್ತದೆ. ಅಲ್ಲಿ ಹತ್ತಾರು ಪರದೆಗಳಲ್ಲಿ ‘ಕಬಾಲಿ’ಯ ರೋಚಕ ದೃಶ್ಯಗಳು ಪ್ರದರ್ಶನಗೊಳ್ಳುತ್ತವೆ. ಮುಂದುವರಿದಂತೆ ಚಿತ್ರದಲ್ಲಿನ ಒಂದೊಂದು ಸನ್ನಿವೇಶವನ್ನೂ ಅದಕ್ಕೆ ಬಳಸಲಾದ ಮೂಲ ಪರಿಕರಗಳೊಂದಿಗೆ ಹಾಗೆಯೇ ಕಟ್ಟಿಕೊಡುವಂತಹ ಪ್ರಯತ್ನ ಮಾಡಲಾಗಿದೆ.

ಚಿತ್ರದಲ್ಲಿ ರಜನಿಕಾಂತ್ ತೊಟ್ಟ ಉಡುಗೆ–ತೊಡುಗೆಗಳೂ ಕಾಣಸಿಗುತ್ತವೆ. ಮಾತ್ರವಲ್ಲ, ‘ಕಬಾಲಿ’ ವಿಮಾನದಲ್ಲಿ ಕುಳಿತು ಮೋಜು ಅನುಭವಿಸುವ ಅವಕಾಶವೂ ಪ್ರೇಕ್ಷಕರಿಗೆ ಉಂಟು.

‘ಮುಂದೆ ಇದೇ ಮಾದರಿಯಲ್ಲಿ ಬಾಹುಬಲಿ–2 ಚಿತ್ರದ ಸಜ್ಜಿಕೆಯನ್ನೂ ರೂಪಿಸುವ ಉದ್ದೇಶ ಹೊಂದಲಾಗಿದೆ. ಮಾತ್ರವಲ್ಲ,  ಭವಿಷ್ಯದಲ್ಲಿ ಉತ್ತಮ ಕನ್ನಡ ಚಿತ್ರಗಳ ಮಾದರಿಗಳನ್ನೂ ಬಳಸಿಕೊಳ್ಳುತ್ತೇವೆ’ಎನ್ನುತ್ತಾರೆ  ಇನೊವೇಟಿವ್‌ ಫಿಲ್ಮ್‌ ಸಿಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಪಾಸನಾ ಮಿತ್ತಲ್‌ .

ಸೂಪರ್ ಮಿನಿಟ್‌ ಮಾದರಿಯಲ್ಲಿ ಪ್ರೇಕ್ಷಕರಿಗಾಗಿ ಹೊಸ ಯೂನಿಟ್ ನಿರ್ಮಾಣಗೊಂಡಿದೆ. ಫಿಲ್ಮ್‌ ಸಿಟಿಗೆ ಬರುವ ಪ್ರೇಕ್ಷಕರಿಗಾಗಿ ಒಂದು ನಿಮಿಷದ ಗೇಮ್‌ಗಳನ್ನು ಈ ಸೆಟ್‌ನಲ್ಲಿ ಆಯೋಜಿಸಲಾಗುತ್ತಿದೆ.

ಬಿಗ್‌ಬಾಸ್‌ ಮಾದರಿ: ಫಿಲ್ಮ್‌ ಸಿಟಿಗೆ ಬರುವವರಲ್ಲಿ ಬಹುಪಾಲು ಮುಂದಿಗೆ ‘ಬಿಗ್‌ಬಾಸ್‌’ ಮನೆ ನೋಡುವ ತವಕ. ಈ ಕಾರ್ಯಕ್ರಮ ಚಿತ್ರೀಕರಣಗೊಂಡಿರುವುದು ಇಲ್ಲಿಯೇ. ‘ಈಗ ಸದ್ಯ ಅದರ ಸೆಟ್‌ ಖಾಲಿ ಇದ್ದು, ಅದನ್ನೇ ಬಳಸಿಕೊಂಡು ‘ಬಿಗ್‌ಬಾಸ್‌ ಸ್ಟೇ ಅಂಡ್‌ ಪ್ಲೇ’ ಎನ್ನುವ ಹೆಸರಿನಲ್ಲಿ ಇಲ್ಲಿ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ.

ಇಲ್ಲಿ ಸೆಟ್‌ ಅನ್ನು ವೀಕ್ಷಣೆ ಮಾಡುವ ಜೊತೆಗೆ ಆಸಕ್ತರಿಗಾಗಿ ಒಂದು ದಿನದ ಮಟ್ಟಿಗೆ ಸ್ಪರ್ಧಿಗಳಾಗುವ ಅವಕಾಶವೂ ಸಿಗುತ್ತದೆ. ಹೀಗೆ ಸ್ಪರ್ಧೆಗೆ ಬಂದವರು  ಹೊರ ಜಗತ್ತಿನ ಸಂಪರ್ಕ ಇಲ್ಲದೇ ಇರಬೇಕಾಗುತ್ತದೆ. ಕಡೆಯಲ್ಲಿ ವಿಜೇತರಿಗೆ ಬಹುಮಾನದ ವ್ಯವಸ್ಥೆಯೂ ಇರುತ್ತದೆ’ ಎಂದು ವಿವರಿಸುತ್ತಾರೆ ಉಪಾಸನಾ. ಫಿಲ್ಮ್‌ ಸಿಟಿಯ ಸಂಪರ್ಕಕ್ಕೆ: 080–2209 9999, 96322 80000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT