ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುನಗುತಾ ಯೋಗ!

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ನಾನೊಂದು ಕಂಪೆನಿ ನಡೆಸುತ್ತಿದ್ದೆ. ಮನೆಗೆಲಸದ ಜತೆಗೆ ಕಂಪೆನಿಯನ್ನೂ ಹೇಗೋ ನಿಭಾಯಿಸುತ್ತಿದ್ದೆ. ಕೆಲಸದಲ್ಲಿ ಸ್ವಲ್ಪ ಹಿಡಿತ ಸಿಕ್ಕಿತು ಅನಿಸುವಷ್ಟರಲ್ಲಿ ಸಿಬ್ಬಂದಿ ಸಮಸ್ಯೆ ಎದುರಾಗುತ್ತಿತ್ತು. ಇಂಥ ಸವಾಲುಗಳ ಮಧ್ಯೆ ಹೇಗಪ್ಪಾ ಕೆಲಸ ಮಾಡೋದು, ಮನಸನ್ನು  ಖುಷಿಯಾಗಿಟ್ಟುಕೊಳ್ಳೋದು ಎಂದು ಒದ್ದಾಡುತ್ತಿರುವಾಗ ಸಿಕ್ಕಿದ್ದು ‘ಲಾಫ್ಟರ್ ಯೋಗ’.

ತಮ್ಮ ಒತ್ತಡದ ಬದುಕಿಗೆ ಹೀಗೊಂದು ಪರಿಹಾರ ಕಂಡುಕೊಂಡ ಅರ್ಚನಾ ರಾವ್, ಈಗ ‘ಲಾಫ್ಟರ್ ಯೋಗ’ದ ಮೂಲಕವೇ ಜನಪ್ರಿಯರಾಗಿದ್ದಾರೆ.
ಹೈದರಾಬಾದ್ ಮೂಲದ ಅರ್ಚನಾ, ಬೆಳೆದಿದ್ದು ಅಹಮದಾಬಾದ್‌ನಲ್ಲಿ. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

‘ಒತ್ತಡಗಳ ನಡುವೆ ಮೊದಲು ನಾನು ನಗುವುದನ್ನು ಕಲಿತು ನಂತರ, ಮತ್ತೊಬ್ಬರನ್ನು ನಗಿಸಬೇಕು ಎನ್ನುವ ಉದ್ದೇಶದಿಂದ ಲಾಫ್ಟರ್ ಯೋಗ ಕಲಿತೆ.  ಬ್ಯುಸಿ ಶೆಡ್ಯೂಲ್‌ನಲ್ಲೂ  ನಗುನಗುತ್ತಾ  ಹೇಗಿರಬೇಕೆಂಬುದನ್ನು ಅರಿತ ನಾನೀಗ ಮೂರು ವರ್ಷಗಳಿಂದ ನಗುವನ್ನು ಹಂಚುತ್ತಿರುವೆ’ ಎನ್ನುತ್ತಾರೆ ಅವರು.


‘ಮುಂಬೈನ ಡಾ.ಮದನ್ ಕಠಾರಿಯಾ ಅವರಿಂದ ಲಾಫ್ಟರ್‌ ಯೋಗ ತರಬೇತಿ ಪಡೆದ ನಂತರ ಅಲ್ಲಲ್ಲಿ ಸಂಘ–ಸಂಸ್ಥೆಗಳಿಗೆ ತರಬೇತಿ ನೀಡಲು ಹೋಗುತ್ತಿದ್ದೆ. ಮುಂದೆ ಕಾರ್ಪೊರೇಟ್ ಕಂಪೆನಿಗಳು ಕರೆಯತೊಡಗಿದವು.  ಒಮ್ಮೆ ಸಿಆರ್‌ಎಸ್‌ನವರು (ಕಾಂಪಿಟೇಷನ್, ಸಕ್ಸಸ್ ರಿವ್ಯೂ) ಮಕ್ಕಳಿಗಾಗಿ ಲಾಫ್ಟರ್ ಯೋಗ ನಡೆಸಿಕೊಡಿ ಎಂದು ಕರೆದಿದ್ದರು.

ಅದನ್ನು ನೋಡಿ ಖುಷಿಪಟ್ಟ ಅವರು ತಮ್ಮ ಸಿಬ್ಬಂದಿಗೂ ಇಂಥ ಕಾರ್ಯಕ್ರಮದ ಅಗತ್ಯವಿದೆ ಎಂದು ಮತ್ತೆ ಕರೆಸಿಕೊಂಡರು. ಹೀಗೆ ಮೂರು ವರ್ಷಗಳಿಂದ ಅನೇಕ ಕಂಪೆನಿಗಳಿಗೆ ಲಾಫ್ಟರ್ ಯೋಗ ಕಾರ್ಯಾಗಾರ ನಡೆಸಿಕೊಟ್ಟಿದ್ದೇನೆ ಎಂದು ತಮ್ಮ ನಗೆ  ಯೋಗವನ್ನು ವಿವರಿಸುತ್ತಾರೆ ಅರ್ಚನಾ.

ಬೆಂಗಳೂರಿನ ಎಚ್‌ಪಿ ಕಂಪೆನಿಯಲ್ಲಿ ಒಂದೇ ಬಾರಿಗೆ ಸಾವಿರ ಜನರಿಗೆ, ಆಟಾಮಿಕ್ ಎನರ್ಜಿ ಸಂಸ್ಥೆ, ಕ್ಯಾನ್ಸರ್ ಪೀಡಿತರು, ವೃದ್ಧಾಶ್ರಮ, ಅನಾಥಾಶ್ರಮ, ಶಾಲಾ–ಕಾಲೇಜು ಹೀಗೆ ಹಲವು ಕಡೆ ತಮ್ಮ ಲಾಫ್ಟರ್ ಯೋಗ ತರಬೇತಿ ನೀಡಿದ್ದಾರೆ ಅವರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ  ಉಚಿತ ಕಾರ್ಯಾಗಾರ ನೀಡುತ್ತಾರೆ ಅವರು.

‘ನಗರದ ದೈನಂದಿನ ಬದುಕಿನಲ್ಲಿ ಮಹಿಳೆಯರು ಹೆಚ್ಚು ಒತ್ತಡಕ್ಕೀಡಾಗುತ್ತಾರೆ. ಮನೆ ಮತ್ತು ಕಚೇರಿ ಕೆಲಸ ಸಮತೋಲನ ಮಾಡುವುದು ಅವರಿಗೆ ಕಷ್ಟಕರವೆನಿಸುತ್ತದೆ. ಇನ್ನು ಪುಟ್ಟ ಮಕ್ಕಳಿಗೆ ಹೋಂವರ್ಕ್, ಫಲಿತಾಂಶ ಭಯ, ದೊಡ್ಡವರಲ್ಲಿ ನಿಗದಿತ ಗುರಿ ತಲುಪುವುದು, ಪ್ರಮೋಷನ್, ಸಂಬಳ ಹೆಚ್ಚಳ, ಅನಾರೋಗ್ಯ ಹೀಗೆ ಅನೇಕ ಕಾರಣಗಳಿಗೆ ಒತ್ತಡ ಉಂಟಾಗುತ್ತದೆ.

ಆದರೆ,  ಅದರ ನಿರ್ವಹಿಸುವ ಕಲೆ ಗೊತ್ತಿಲ್ಲದೇ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ ಇಲ್ಲವೇ ಕೀಳರಿಮೆ ಅನುಭವಿಸುತ್ತಾರೆ. ಅಂಥ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಹೊಂದುವಂಥ ಸೆಷೆನ್‌ಗಳನ್ನು ರೂಪಿಸುತ್ತೇನೆ’ ಎಂದು ವಿವರಿಸುತ್ತಾರೆ ಅವರು.

‘ಸುಮ್ಮನೆ ನಗುವುದರಿಂದ ಆರಂಭವಾದ ಸಂತೋಷ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ, ಸಂತಸ ಇಮ್ಮಡಿಯಾಗುತ್ತದೆ. ನಕ್ಕಾಗ ಮಿದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಯಾಗುತ್ತದೆ. ಆಗ ಫೀಲ್ ಗುಡ್ ಹಾರ್ಮೋನ್ ಬಿಡುಗಡೆಯಾಗುತ್ತದೆ.

ನೀವು ಖುಷಿಯಾಗಿದ್ದಾಗ ಎಂಥ ಕಷ್ಟಕರ ಕೆಲಸವನ್ನಾದರೂ ಸುಲಭವಾಗಿ ಮಾಡಬಹುದು. ಹಾಗಾಗಿ, ನೀವೂ ನಕ್ಕು ಸುತ್ತಲಿನವರನ್ನೂ ನಗಿಸಿ’ ಎಂಬುದು ಅರ್ಚನಾ ಅವರ ಸಲಹೆ.
ಇಮೇಲ್: archana@laughteryogaindia.org
ಫೇಸ್‌ಬುಕ್ ಕೊಂಡಿ:  laguhter yoga with Archana Rao

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT