ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಕ್ಕೆ ತಕ್ಕಂತೆ ಬದಲಾಗಬೇಕು ಆಹಾರ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆಹಾರ ಪದ್ಧತಿಯ ಪೂರ್ವಗ್ರಹಪೀಡಿತ ವಿಚಾರ ಕುರಿತು ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ ಅವರು ಪಾರದರ್ಶಕವಾಗಿ ಬರೆದಿರುವ (ಪ್ರ.ವಾ. 17) ಲೇಖನವನ್ನು ಮತ್ತಷ್ಟು ವಿಸ್ತರಿಸಿ ಹೇಳಬಹುದು.

ಗೊರೂರುನಂತೆಯೇ ತುಸು ಪಶ್ಚಿಮಕ್ಕೆ ನಮ್ಮದು ಆಲೂರು ಸೀಮೆ. ನೋಡ ನೋಡುತ್ತಲೇ ಅಡವಿ ಬರಿದಾದ ಕಥನವದು. ನಾವಿನ್ನೂ ಚಿಕ್ಕವರು: ನಮ್ಮೂರಲ್ಲಿ ಕದರಮ್ಮ ಎಂಬ ಮುದುಕಮ್ಮ ಇತ್ತು.  ಐವತ್ತು ಅರವತ್ತು ಆಡುಗಳನ್ನು ಸಾಕಿತ್ತು. ಹಿಂಡಾಗಿ ಕಾಡಿಗೆ ಮೇಯಲು ಹೊಡೆದುಕೊಂಡು ಹೋಗುತ್ತಿತ್ತು. ಆಡು ಸಾಕಾಣಿಕೆ, ಕೃಷಿ ಒಕ್ಕಲುಗಳಿಗೆ ತುಸು ಆರ್ಥಿಕ ಪೋಷಕವಾಗಿತ್ತು. ಕೃಷಿಗೂ ಅಡವಿಗೂ ಯಾವಾಗಲೂ ದ್ವಂದ್ವ ಯುದ್ಧ. ಇವೆರಡರ ಹೊಂದಾಣಿಕೆಯ ಕೊಂಡಿ ಕಳಚಿಕೊಂಡದ್ದೇ ಪರಿಸರ ನಾಶವೆಂದಾಗಿದೆ.

ಒಂದು ಆಡು ಜೀವಮಾನದಲ್ಲಿ ಅದೆಷ್ಟು ಎಳೆ ಗಿಡಮರಗಳ ಸೊಪ್ಪು ಕುಡಿಗಳನ್ನು ಕತ್ತರಿಸಿ ನುಂಗುತ್ತದೆಂಬ ಲೆಕ್ಕವೇ ಗಾಬರಿ ಹುಟ್ಟಿಸುತ್ತದೆ. ಆಡುಗಳಿದ್ದ ಊರಿನ ತೋಟ ತುಡಿಕೆಗಳೆಲ್ಲ ಹಾಳು ಎಂಬ ವಾಡಿಕೆ ಮಾತಿದೆ. ಹಾಗಾದರೆ ಆಗ ನಮ್ಮೂರ ಕದರಮ್ಮನಂತಹವರ ಆಡುಕೊಟ್ಟಿಗೆಗಳು ಅದೆಷ್ಟು ಅಡವಿಗಳನ್ನು ಹಿಕ್ಕೆ ಹಾಕಿರಬೇಕು!

ಬಲೂಚಿಸ್ತಾನ, ಆಫ್ಘಾನಿಸ್ತಾನಗಳಂತಹ ದೇಶಗಳು ಬರಡಾಗಿರುವುದೇ ಈ ಆಡು ಸಾಕಾಣಿಕೆಯಿಂದ ಎಂದು ಮಾಹಿತಿ ಹೇಳುತ್ತಿದೆ.  ಅಷ್ಟೇ ಏಕೆ? ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಮೂರೂವರೆ ಲಕ್ಷ ಆಡುಗಳಿದ್ದರೆ ಯಾವ ಅರಣ್ಯ ಇಲಾಖೆ ಗಿಡ ಬೆಳೆಸಲಾದೀತೆಂದು ಸಿರಿಗೆರೆ ಸ್ವಾಮಿಗಳು ರೈತರಿಗೆ ‘ಆಡು ಸಾಕಬೇಡಿ’ ಎಂದು ಕರೆನೀಡಿ ಹಳ್ಳಿ ಹಳ್ಳಿ ತಿರುಗಿದ್ದುಂಟು.

ನಮ್ಮೂರ ಕದರಮ್ಮನ ಕೊಟ್ಟಿಗೆ ಸಂಪತ್ತಿಗೆ ಸಿರಿಗೊಳ್ಳುತ್ತಿದ್ದ ನಾನು ಕೂಡ ಊರಲ್ಲಿ ‘ಆಡು ಸಾಕಬೇಡಿರಿ’ ಎಂದು ಹೇಳುತ್ತಾ ಮೊದಲಾಗಿ ನಮ್ಮ ಮನೆಯ ಆಡುಗಳನ್ನೆಲ್ಲಾ ಮಾರಾಟ ಮಾಡಿ ಕುರಿಗಳನ್ನು ಬದಲಿಯಾಗಿ ತಂದು ನಮ್ಮ ಹಳ್ಳಿಯನ್ನು ಹಸಿರಾಗಿಸಿದ್ದುಂಟು. ಇದೊಂದು ವಾತಾಪಿ ನ್ಯಾಯವೂ ಹೌದು.

ಈ ಮೇಲಿನ ವಿಚಾರವನ್ನು ಇಲ್ಲಿ ಹೇಳಲು ಕಾರಣವಿದೆ. ಯಾವುದೇ ಪ್ರಾಣಿ ಅಥವಾ ಸಾಕುಪ್ರಾಣಿ ನಮ್ಮಂತೆ ಅದೊಂದು ಜೀವ ಹೌದು. ಹಾಗೆಂದು ಕಾಲಕ್ಕೆ ತಕ್ಕಂತೆ ಸಾಕುವ ರೀತಿಯನ್ನು, ತಿನ್ನುವ ರೀತಿಯನ್ನು ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಾಲ ಕೇಳುವುದಿಲ್ಲ. ಅಷ್ಟೇ ಏಕೆ ಈಗ ಅಡವಿಯಲ್ಲಿ ಅಥವಾ ಗೋಮಾಳಗಳಲ್ಲಿ ದನ ಮೇಯಿಸಲು ಸ್ಥಳವನ್ನು ಎಲ್ಲಿ ಹುಡುಕುವುದು! ನಿಜ. ಮನುಷ್ಯ ಜೀವ ಹೆಚ್ಚಿ ಹುಳುತು ಹೋದಂತೆಲ್ಲ ಪ್ರಾಣಿಪಕ್ಷಿ ಅಡವಿ ಜಾಲ ನರಳುತ್ತಿದೆ. ಈ ಕತ್ತರಿಸಿದ ಹಾದಿಗಳೇ ಇಂದು ಆಗಸದಿಂದ ಮೋಡಗಳನ್ನು ನೆಲಕ್ಕಿಳಿಸಲಾರದ ನೋವುಗಳು. ಈಗಿನ ಪರಿಸ್ಥಿತಿಯಲ್ಲಿ ಗುಳುಗುಳನೆ ನುಂಗುವ ಆಡುಗಳಿಂದ ಅಡವಿ ಸಂಪನ್ಮೂಲವನ್ನು ಉಳಿಸಿಕೊಳ್ಳಲು ಕಟ್ಟಿ ಸಾಕುವ ಆಡು ಜಾತಿಗಳು ಅನಿವಾರ್ಯ. ಅಂತೆಯೇ ದನಗಳು ಕೂಡ.
ದನಗಳು ಕೃಷಿಯ ಬೆನ್ನೆಲುಬು. ಈಗಂತೂ ಹಳ್ಳಿಗಳು ಉಸಿರಾಡುತ್ತಿರುವುದೇ ಕ್ಷೀರಧಾರೆಯಿಂದ. ಸಂತೆ ಹಾಗೂ ಮಕ್ಕಳು ಮರಿ ಖರ್ಚು ಗ್ರಾಮೀಣದಲ್ಲಿ ನಡೆಯುತ್ತಿರುವುದೇ ಹಾಲಿನ ಸಹಕಾರ ತತ್ವದಿಂದ. ಹಿಂದೂಸ್ತಾನ ಒಮ್ಮೆ ಹಾಲುಕೊಡುವ ಗೋವು ಹೊರತುಪಡಿಸಿ ದನಗಳನ್ನು ಆಹಾರ ಪದ್ಧತಿಗೆ, ಯಜ್ಞಯಾಗಾದಿಗಳ ಪವಿತ್ರತೆಯಿಂದಲೇ ರೂಢಿಸಿಕೊಂಡಿತ್ತು. ಬುದ್ಧನ ಕಾಲಕ್ಕೆ ತಿರುವು ಪಡೆದುಕೊಂಡು ಗಾಂಧಿಯ ಕಾಲಕ್ಕೆ ಮತ್ತಷ್ಟು ಪವಿತ್ರತೆ ಗೋವುಗಳಿಗೊದಗಿತು. ಅದು ಧರ್ಮ ಧರ್ಮದೊಳಗಿನ ಕದನ ವಸ್ತುವಾಗಿ ವರ್ತಮಾನವಂತೂ ಕದನದ ತಾಣವಾಗಿದೆ.

ನಾವು ಕಂಡಂತೆಯೇ ರೈತನಿಗೆ ದನಗಳು ಸಂಪತ್ತಾಗಿದ್ದವು. ಗೇಯ್ಮೆಯ ಸಾಧನಗಳಾಗಿದ್ದವು. ಕರೆಯುವ ಜೀವಗಳಾಗಿದ್ದವು. ಆತನಿಗೆ ಹೊರೆಯಾಗದಂತೆ ಸಂತೆಗೆ ಚಲಿಸಿ ಅಲ್ಲೂ ಹರೆಯದ ಜೀವಗಳನ್ನು ಕೊಳ್ಳಲು ಕೈಗೆ ಕಾಸು ನೀಡುತ್ತಿದ್ದವು. ಇದ್ದರೂ ಸತ್ತರೂ ಆಹಾರದ ಮೂಲಗಳಾಗಿದ್ದವು. ಇದ್ದಾಗ ಪಾವಿತ್ರ್ಯ, ಸತ್ತಾಗ ಆಹಾರ; ಈ ಮನುಷ್ಯನೆಂಬುವನ ಬಡತನಕ್ಕೆ ಜೀವಕೊಂಡಿಗಳಾಗಿದ್ದವು. ಆಡು, ಕುರಿ, ಕೋಳಿ ಮಾಂಸಗಳನ್ನು ಕೊಳ್ಳಲಾರದ ಬಡವರ ನೆರವೂ ಆಗಿದ್ದವು. ಒಂದು ದನ ಸತ್ತರೆ ಅದರ ಮಾಂಸ ಭಕ್ಷಣೆಗಾದರೆ, ಮೂಳೆ ಸಕ್ಕರೆಯನ್ನು ಬಿಳುಪಾಗಿಸುವ ಫ್ಯಾಕ್ಟರಿ ವಸ್ತುವಾಗುತ್ತಿತ್ತು. ಕಾಲಕ್ಕೆ ತಕ್ಕಂತೆ ಸತ್ತ ದನ ತಿನ್ನುವುದು ಹೀನತೆಯ ಪರಮಾವಧಿ ಹೌದು. ಆದರೆ ರೈತನಿಗೆ ಉಪಯೋಗಕ್ಕೆ ಬರದ, ಮಾಂಸಕ್ಕಾಗಿಯೇ ಕೊಯ್ಯಬಹುದಾದ, ತಿನ್ನಬಹುದಾದ ಆಹಾರಕ್ಕೆ ಯಾಕೆ ಇಷ್ಟು ಬಂಧನ! ಇದೇ ಈಗಿನ ನಿಜ, ಗಾಂಧಿ ಕೂಡ ಗೋಹತ್ಯೆ ಪ್ರೋತ್ಸಾಹಿಸಲಿಲ್ಲ. ಹಿಂದೂ ಧರ್ಮದ ಅಹಿಂಸಾತತ್ವಕ್ಕೆ ಅದೊಂದು ಪೋಷಕ ಎಂದರು. ಆದರೆ ಗೋಸಂರಕ್ಷಣೆ ಎಂಬುದರ ಅರ್ಥ ‘ದುರ್ಬಲರ ಅಸಹಾಯಕರ ರಕ್ಷಣೆ’  ಎಂದೇ ಹೇಳಿದ್ದಾರೆ. ಮುಂದುವರಿದು ಹೇಳುತ್ತಾ ‘ತಾರ್ಕಿಕವಾಗಿ ಮಾತನಾಡುವುದಾದರೆ ಗೋಸಂರಕ್ಷಣೆ ಮಾಡುವ ಹಿಂದು ಪ್ರತಿಯೊಂದು ಪ್ರಾಣಿಯನ್ನೂ ರಕ್ಷಿಸಬೇಕು’ ಎಂದು ಹೇಳಿದ್ದಾರೆ.  ಈ ನಡುವೆ ಕಾಲಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವುದೇ ಬುದ್ಧಿವಂತಿಕೆ. ಪಂಜಾಬ್‌ ರಾಜಸ್ತಾನ ಗುಜರಾತ್‌ಗಳಂಥ ಅತಿಯಾಗಿ ಗೋಭಕ್ಷಣೆ ಇಲ್ಲದ ರಾಜ್ಯಗಳಲ್ಲಿ ಗೋವುಗಳು ರೈತರಿಗೆ ಹೊರೆಯಾಗುತ್ತಿವೆ. ಹಳ್ಳಿಗರು ಪೇಟೆಗೆ ಅಟ್ಟುವುದು ಪೇಟೆಯವರು ಹಳ್ಳಿಗೆ ಅಟ್ಟುವ ಕಾರ್ಯ ನಡೆದಿದೆ. ಕದ್ದು ಮುಚ್ಚಿ ಬಾಂಗ್ಲಾ ಗಡಿವರೆಗೆ ದಾಟಿಸುವ ಬಲಿಷ್ಠರೇ ಈ ಹಾದಿಯ ದಂದೆಯಲ್ಲಿದ್ದಾರೆ.

ಈ ದೇಶ ಬಹುಸಂಸ್ಕೃತಿಗಳ ದೇಶ ಅವರವರ ಆಹಾರ ಅವರು ತಿನ್ನಲಿ ಎನ್ನುವುದು ದೊಡ್ಡಸ್ತಿಕೆ. ದನಗಳ ಕತೆ ಇದಾದರೆ ನಾಯಿ ಎಂಬುದು ನಾರಾಯಣ. ಅದು ಮಹಾಭಾರತ ಕಥೆ ಪ್ರಾರಂಭವಾದಾಗ ಸಭೆಯಲ್ಲಿ ಕುಳಿತು ಬಯ್ಯಿಸಿಕೊಂಡು ಆಚೆಗೆ ಹೋದ ರೂಪಕ. ಅಂತಿಮದಲ್ಲಿ ಧರ್ಮರಾಯನೊಡನೆ ಸ್ವರ್ಗಕ್ಕೆ ಹೋದ ಸಂಗಾತಿ. ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ನಾಗಲೋಕದ ಪ್ರಮುಖ ಪವಿತ್ರ ಆಹಾರ. ಇಲ್ಲಿ ಪ್ರಾಣಿ ಪ್ರಿಯರೇನೋ ಕೊಲ್ಲಬಾರದೆನ್ನುತ್ತಾರೆ. ಅವನ್ನೆಲ್ಲಾ ರೈತಾಪಿ ಗ್ರಾಮಕ್ಕೆ ತಂದು ಸುರಿದರೆ ಏನು ಮಾಡಬೇಕು.  ಅಂದು ಮುನಿಸಿಪಾಲಿಟಿಯವರು ಸಂಖ್ಯೆ ಹೆಚ್ಚಾದಾಗ ವಿಷವಿಟ್ಟು ಕೊಂದು ನಿಯಂತ್ರಿಸುತ್ತಿದ್ದರು. ಮರಕ್ಕೊಂದು ನಾಯಿಯನ್ನು ಬುಡದಲ್ಲಿ ಹೂಳಿ ಗೊಬ್ಬರ ಮಾಡುತ್ತಿದ್ದರು. ಅದು ಬೇಡ ತಿನ್ನುವ ಕಡೆಗೆ ಯಾಕೆ ಸಾಗಿಸಬಾರದು?
ಇನ್ನು ಆಂಜನೇಯ ರೈತಾಪಿಗೆ ಪೂಜ್ಯನೂ ಹೌದು ಕಾಟ ನೀಡುವ ಕಪಿಯೂ ಹೌದು. ಹಬ್ಬ ಹರಿದಿನಗಳಲ್ಲಿ ಮದುವೆ ತಿಥಿ ಊಟಗಳಲ್ಲಿ ಅವು ಮಲೆನಾಡ ಕೆಲವರಿಗೆ ಬೇಟೆಯ ಪ್ರಾಣಿ ಆಹಾರಗಳು. ಅವುಗಳನ್ನು ಹೊಡೆದು ಕೊಲ್ಲುವಂತಿಲ್ಲ ಎಂಬ ಕಾನೂನು ಅದೇನೆಲ್ಲ ಅವಾಂತರ ತಂದಿತು ಎಂಬುದಕ್ಕೆ ಕಲ್ಕುಳಿ ಹೆಗಡೆಯವರ ‘ಮಂಗನ ಬ್ಯಾಟೆ’ ಕಾದಂಬರಿ ಓದಬೇಕು. ಮೊನ್ನೆ ಮೂವತ್ತು ಮಂಗಗಳನ್ನು ವಿಷವಿಟ್ಟು ಕೊಂದ ರೈತನ ಸ್ಥಾನದಲ್ಲಿ ರೈತರ ಹೊಲಗದ್ದೆ ತೋಟದೊಳಗೆ ಧಾರ್ಮಿಕರು ಪ್ರಾಣಿಪ್ರಿಯರು ನಿಂತು ಆಲೋಚಿಸಬೇಕು. ಅಲ್ಲಿ ನಿಂತು ನರರು ಪ್ರಾಣಿಗಳ ಬಗ್ಗೆ ಜೀವ ಕೊಂಡಿಯ ಪರಂಪರೆಯ ಜ್ಞಾನ ಹುಡುಕಿಕೊಳ್ಳಬೇಕು. ಅದೇ ಬದುಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT