ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಕಾನ್‌ಸ್ಟೆಬಲ್ ಸೇರಿ ಇಬ್ಬರ ದುರ್ಮರಣ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನೂಲಿನ ಧೋನೆ ಜಂಕ್ಷನ್‌ನಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಎಚ್‌ಎಎಲ್‌ ಠಾಣೆ ಕಾನ್‌ಸ್ಟೆಬಲ್ ಸುರೇಶ್ (26) ಹಾಗೂ ವೈಟ್‌ಫೀಲ್ಡ್‌ನ ಜಯಣ್ಣ (30) ಎಂಬುವರು ಮೃತಪಟ್ಟಿದ್ದು, ಪ್ರೊಬೆಷನರಿ ಎಸ್‌ಐ ಶ್ರೀನಿವಾಸ್ ಹಾಗೂ ಕಾರು ಚಾಲಕ ಮಂಜುನಾಥ್ ಎಂಬುವರು ಗಾಯಗೊಂಡಿದ್ದಾರೆ.

ಕಂದಾಯ ಇಲಾಖೆಯ ಇನ್‌ಸ್ಪೆಕ್ಟರ್‌ವೊಬ್ಬರ 19 ವರ್ಷದ ಮಗಳು ನಾಪತ್ತೆಯಾದ ಸಂಬಂಧ ಎರಡು ತಿಂಗಳ ಹಿಂದೆ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಯುವತಿ ಹೈದರಾಬಾದ್‌ನಲ್ಲಿರುವ ಬಗ್ಗೆ ಮಂಗಳವಾರ ಸಂಜೆ ಮಾಹಿತಿ ಬಂದಿತ್ತು. ಹೀಗಾಗಿ, ಕಾನ್‌ಸ್ಟೆಬಲ್, ಎಸ್‌ಐ ಹಾಗೂ ಯುವತಿಯ ಸಂಬಂಧಿ ಜಯಣ್ಣ ಅವರು ಕಾರಿನಲ್ಲಿ ಅಲ್ಲಿಗೆ ಹೊರಟಿದ್ದರು.

‘ಇನ್ನೋವಾ ಕಾರನ್ನು ಬಾಡಿಗೆ ಪಡೆದು, ರಾತ್ರಿ 1 ಗಂಟೆಗೆ ನಗರದಿಂದ ತೆರಳಿದ್ದರು. ವೇಗವಾಗಿ ವಾಹನ ಚಾಲನೆ ಮಾಡಿರುವ ಮಂಜುನಾಥ್, ಧೋನೆ ಜಂಕ್ಷನ್‌ನಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು, ವಿಭಜಕಕ್ಕೆ ಡಿಕ್ಕಿಯಾಗಿ ಮೂರ್ನಾಲ್ಕು ಸುತ್ತು ಉರುಳಿದೆ. ನಂತರ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಅಪಘಾತದಲ್ಲಿ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಆಗ ಚಾಲಕನ ಪಕ್ಕದ ಸೀಟಿನಲ್ಲೇ ಕುಳಿತು ನಿದ್ರಿಸುತ್ತಿದ್ದ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂದಿನ ಸೀಟಿನಲ್ಲಿ ಮಲಗಿದ್ದ ಜಯಣ್ಣ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶ್ರೀನಿವಾಸ್ ಅವರ ಕುತ್ತಿಗೆ ಮೂಳೆ ಮುರಿದಿದ್ದು, ಕರ್ನೂಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ವಿಭಜಕಕ್ಕೆ ಡಿಕ್ಕಿಯಾಗುತ್ತಿದ್ದಂತೆಯೇ ಹೊರಗೆ ಜಿಗಿದ ಚಾಲಕ, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ತೇಲಸಂಗ ಗ್ರಾಮದ ಸುರೇಶ್, 2011ರಲ್ಲಿ ಇಲಾಖೆ ಸೇರಿದ್ದರು. ಮೊದಲು ಸಂಪಿಗೇಹಳ್ಳಿ ಠಾಣೆಯಲ್ಲಿ ಕೆಲಸ ಮಾಡಿದ್ದ ಅವರು, 2 ವರ್ಷಗಳ ಹಿಂದೆ ಎಚ್‌ಎಎಲ್ ಠಾಣೆಗೆ ವರ್ಗವಾಗಿದ್ದರು. ಮೃತದೇಹವನ್ನು ಗ್ರಾಮಕ್ಕೆ ಕಳುಹಿಸಲಾಗಿದ್ದು, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ. ಜಯಣ್ಣ ಅವರ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT