ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಶೋಧಿಸಿದಷ್ಟು ವಿಚಾರಗಳು’

Last Updated 20 ಏಪ್ರಿಲ್ 2017, 5:13 IST
ಅಕ್ಷರ ಗಾತ್ರ

ಚಿತ್ರದುರ್ಗ: ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ಬುಧವಾರ ಚಿತ್ರದುರ್ಗಕ್ಕೆ ಸಂಬಂಧಿಸಿದ ಪುರಾತತ್ವ ಮತ್ತು ಇತಿಹಾಸಪರಂಪರೆ ಕುರಿತ ಒಂದು ದಿನದ ಪ್ರಾದೇಶಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ತುಮಕೂರು ವಿಶ್ವವಿದ್ಯಾಲಯದ ನೂರಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ 5.30ಕ್ಕೆ  ಚಿತ್ರದುರ್ಗದ ಏಳು ಸುತ್ತಿನ ಕೋಟೆಯಿಂದ ಕ್ಷೇತ್ರ ಅಧ್ಯಯನ ಆರಂಭಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಡಿ.ನಾಗರಾಜ್ (ನಾಗು ಆರ್ಟ್‍ಸ್‍) ಮತ್ತು ಇತಿಹಾಸ ಪ್ರಾಧ್ಯಾಪಕ ಡಾ.ಎಚ್. ಗುಡದೇಶ್ವರಪ್ಪ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳನ್ನು ರಾಮದೇವರ ಒಡ್ಡು , ಕಹಳೆ ಬತೇರಿ, ಅರಮನೆ ಆವರಣ, ಹಳೆ ಮುರುಘಾಮಠ, ಸಂಪಿಗೆ ಸಿದ್ದೇಶ್ವರ, ಗಾಳಿಮಂಟಪ, ಗೋಪಾಲಸ್ವಾಮಿ ಹೊಂಡ, ಒನಕೆ ಓಬವ್ವನಕಿಂಡಿ ಕರೆದೊಯ್ದು ಮಾಹಿತಿ ನೀಡಿದರು. ಕೋಟೆಯಲ್ಲಿರುವ ಶಾಸನ, ಲಿಪಿಗಳು, ಬಂಡೆಯ ಮೇಲಿನ ರೇಖಾ ಚಿತ್ರಗಳ ಕುರಿತು ವಿವರಣೆ ನೀಡಿದರು.

ಮಧ್ಯಾಹ್ನದ ಅವಧಿಯಲ್ಲಿ ಚಂದ್ರವಳ್ಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಅಂಕಲಿಮಠದೊಳಗಿನ ಗುಹೆಯನ್ನು ಪರಿಚಯಿಸಿದರು. ಹುಲಿ ಗುಂದಿ ಸಿದ್ದೇಶ್ವರನ ಬಂಡೆ ಪಕ್ಕದಲ್ಲಿರುವ ಮಯೂರು ಶಾಸನ, ಮಯೂರ ವರ್ಮ ಕಟ್ಟಿಸಿದ ಕರ್ನಾಟಕದ ಮೊದಲ ಕೆರೆ ಕುರಿತು ವಿವರಣೆ ನೀಡಲಾಯಿತು.  ಸಂಜೆ ಐಎಂಎ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ಡಾ. ಬಿ.ರಾಜಶೇಖರಪ್ಪ ಮಾತನಾಡಿ, ‘ಕೋಟೆನಾಡು ಚಿತ್ರದುರ್ಗದ ಇತಿಹಾಸದಲ್ಲಿ ಸಂಶೋಧಿ ಸಿದಷ್ಟು  ಹೊಸ ಹೊಸ ವಿಚಾರಗಳು ತೆರೆದು ಕೊಳ್ಳುತ್ತವೆ’ಎಂದರು.

‘ಸಂಶೋಧನಾ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪ್ರತಿಯೊಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲದಿದ್ದರೆ ಸಂಪೂರ್ಣ ಇತಿಹಾಸ ತಿಳಿದುಕೊಳ್ಳಲು ಸಾಧ್ಯವಾಗು ವುದಿಲ್ಲ. ಇಲ್ಲಿನ ಚಂದ್ರವಳ್ಳಿ ಶಾಸನಕ್ಕೆ ಅತ್ಯಂತ ಪುರಾತನ ಐತಿಹ್ಯವಿದೆ’ ಎಂದರು. ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಎಲ್.ಪಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಬಿ.ಟಿ ಚಾರುಲತಾ ವಿಶೇಷ ಉಪನ್ಯಾಸ ನೀಡಿದರು. ಪ್ರೊ. ಯು.ಎಸ್ ಮೂರ್ತಿ, ಎಂ. ಕೊಟ್ರೇಶ್, ಸಂಪನ್ಮೂಲ ವ್ಯಕ್ತಿ ಡಿ.ನಾಗರಾಜ್ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT