ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ, ವಿರೋಧ ಪಕ್ಷದವರ ವಾಕ್ಸಮರ

Last Updated 20 ಏಪ್ರಿಲ್ 2017, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯು ಗದ್ದಲ ಹಾಗೂ ಗೊಂದಲದ ಗೂಡಾಗಿ ಪರಿವರ್ತಿತವಾಯಿತು. ಆಡಳಿತ ಹಾಗೂ ವಿರೋಧ ಪಕ್ಷದವರ ಆರೋಪ, ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು.ಅಧಿಕಾರಿಗಳು ಮಾತನಾಡುವುದು ಬೇಡ, ಮೊದಲು ತಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಸದಸ್ಯ ಕೆ.ಇ. ಕಾಂತೇಶ್ ಮಾತನಾಡಿ, ‘ಮೊದಲು ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ‘ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವ ರೀತಿ ಕ್ರಮ ವಹಿಸಿದ್ದಾರೆ ಎಂದು ಅಧಿಕಾರಿಗಳು ಮೊದಲು ಮಾಹಿತಿ ನೀಡಲಿ. ನಂತರ ಚರ್ಚೆ ಮುಂದುವರಿಸೋಣ’ ಎಂದರು.

ಇದಕ್ಕೆ ಆಡಳಿತಾರೂಢ ಕಾಂಗ್ರೆಸ್–ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಆರಂಭವಾಯಿತು. ಒಂದು ಹಂತದಲ್ಲಿ ಸಭೆಯಲ್ಲಿ ಏನು ಚರ್ಚೆ ನಡೆಯುತ್ತಿದೆ ಎಂಬುದೇ ತಿಳಿಯದಂತಹ ಸ್ಥಿತಿ ಉಂಟಾಯಿತು. ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಪೀಠದ ಎದುರು ಧಾವಿಸಿ, ಪ್ರತಿಭಟನೆ ನಡೆಸಿದರು. ಈ ನಡುವೆ ಅಧ್ಯಕ್ಷರು ಎರಡು ಬಾರಿ ಸಭೆಯನ್ನು ಮುಂದೂಡಿದರು.

‘ಕಳೆದ ಸಾಲಿನಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಗೆ ₹ 37.77 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 34.65 ಕೋಟಿ ವಿನಿಯೋಗಿಸಲಾಗಿದೆ. ತುರ್ತು ಕುಡಿಯುವ ನೀರಿನ ಯೋಜನೆಗಳಿಗೆ ಮೂರು ಹಂತದಲ್ಲಿ ಒಟ್ಟು ₹ 1.50 ಕೋಟಿ ಒದಗಿಸಲಾಗಿದೆ. ಜಿಲ್ಲೆಯ 14 ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ಋತುವಿನಲ್ಲಿ 201 ಕೊಳವೆಬಾವಿಗಳನ್ನು ವಿವಿಧ ಗ್ರಾಮಗಳಲ್ಲಿ ಕೊರೆಸಲಾಗಿದ್ದು, 61 ವಿಫಲವಾಗಿವೆ’ ಎಂದು ಸಿಇಒ ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದರು. ಅವರು ಮಧ್ಯಾಹ್ನ ಅಧ್ಯಕ್ಷರ ಅನುಮತಿ ಮೇರೆಗೆ ಮಾತನಾಡಿದರು.

‘ಇದು ಕೇವಲ ಕಾಗದದ ಮೇಲಿನ ಪ್ರಗತಿ. ವಾಸ್ತವದಲ್ಲಿ ಜನರಿಗೆ ಕುಡಿಯಲು ನೀರು ದೊರೆಯುತ್ತಿಲ್ಲ. ಕಾಗೋಡು ತಿಮ್ಮಪ್ಪ ಸಚಿವರಾದ ನಂತರ ಸಮಸ್ಯೆ ಎಲ್ಲವೂ ಸರಿಹೋಗಿದೆಯೇ’ ಎಂದು ಸದಸ್ಯ ಕಾಂತೇಶ್ ಪ್ರಶ್ನಿಸಿದರು. ಕಾಂಗ್ರೆಸ್ ಸದಸ್ಯ ಕಲಗೋಡು ರತ್ನಾಕರ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜಕೀಯ ಪ್ರೇರಿತ ಆರೋಪ ಮಾಡುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಸದಸ್ಯರ ನಡುವೆ ಮತ್ತೊಮ್ಮೆ ಮಾತಿನ ಚಕಮಕಿ ನಡೆಯಿತು.ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಉಪಸ್ಥಿತರಿದ್ದರು.

ಮನವಿ ಮೇರೆಗೆ ಸಭೆ ಆಯೋಜನೆ: ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಆಗ್ರಹಿಸಿ, ವಿರೋಧ ಪಕ್ಷವಾದ ಬಿಜೆಪಿ ಸದಸ್ಯರು ಸಿಇಒಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿತ್ತು.ಸಂಬಂಧಿಸಿದ ಇಲಾಖಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬರ, ಕುಡಿಯುವ ನೀರಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡ ಪುಸ್ತಕ ಮುದ್ರಿಸಲಾಗಿತ್ತು. ಆದರೆ, ಸಭೆಯ ಬಹುತೇಕ ಸಮಯ ಗದ್ದಲ, ಧರಣಿ, ಕೂಗಾಟಗಳಿಗೆ ಮೀಸಲಾಯಿತು. ಕುಡಿಯುವ ನೀರು, ಬರದ ಬಗ್ಗೆ ಗಂಭೀರ ಚರ್ಚೆ ನಡೆಯದೆ ಕೆಲ ಸದಸ್ಯರ ಪ್ರತಿಷ್ಠೆಯ ಗೂಡಾಗಿ ಸಭೆಯೇ ಅಸ್ತವ್ಯಸ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT