ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳ ಸಂರಕ್ಷಣೆ ಎಲ್ಲರ ಹೊಣೆ

Last Updated 20 ಏಪ್ರಿಲ್ 2017, 5:37 IST
ಅಕ್ಷರ ಗಾತ್ರ

ಯಾದಗಿರಿ: ‘ಸಮಾಜದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ನಿರಂತರ ನಡೆಯುತ್ತಿದೆ. ಅವುಗಳನ್ನು ರಕ್ಷಿಸುವ ಹೊಣೆ ಸಮಾಜದ ಮೇಲೆಯೂ ಇದೆ’ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಪಾಟೀಲ ಹೇಳಿದರು.ನಗರದ ಡಾನ್ ಬಾಸ್ಕೊ ಶಾಲೆ ಸಭಾಂಗಣದಲ್ಲಿ ಡಾನ್‌ಬಾಸ್ಕೊ ಸಮಾಜ ಸೇವಾ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಪೊಲೀಸ್‌ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಮಟ್ಟಿಗೆ ಹಮ್ಮಿಕೊಂಡಿರುವ ‘ನಾಯಕತ್ವ ತರಬೇತಿ ಶಿಬಿರ’ದಲ್ಲಿ ಬುಧವಾರ ಅವರು ಮಾತನಾಡಿದರು.

‘ಬಾಲನ್ಯಾಯ ಕಾಯ್ದೆ ಪ್ರಕಾರ ಸಂವಿಧಾನ ಮಕ್ಕಳಿಗೆ ಹಲವು ಹಕ್ಕುಗಳನ್ನು ಕಲ್ಪಿಸಿದೆ. ಆದರೆ, ಸಮಾಜದಲ್ಲಿ ಮಕ್ಕಳು ಜೀವಿಸುವ ಹಕ್ಕುಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಉಸಿರಾಡುವ ಮುನ್ನವೇ ಭ್ರೂಣಹತ್ಯೆ ನಡೆಸಿ ಜೀವಿಸುವ ಹಕ್ಕನ್ನು ಚಿವುಟಿ ಹಾಕುವ ಕೃತ್ಯಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ’ ಎಂದರು.‘ಪೋಷಕರು ಮಕ್ಕಳ ರಕ್ಷಣೆಯ ಹಕ್ಕನ್ನು ಕಾಪಾಡುತ್ತಿದ್ದಾರೆ. ಆದರೆ, ಸಂವಿಧಾನಬದ್ಧವಾಗಿರುವ ‘ಭಾಗವಹಿಸುವ ಹಕ್ಕ’ನ್ನು ಶೇ 70ರಷ್ಟು ಪೋಷಕರು ಮಕ್ಕಳಿಂದ ಕಸಿದುಕೊಂಡಿದ್ದಾರೆ. ಕಲಿಕೆಯಲ್ಲಿ ಮಗುವಿಗೆ ಒಂದು ಆಸೆ ಇದ್ದರೆ, ತಮ್ಮ ಆಸೆ ಈಡೇರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಪೋಷಕರು ಕಂಡ ಕನಸನ್ನು ನನಸು ಮಾಡಲು ಮಗು ತನ್ನೆಲ್ಲಾ ಆಸೆ–ಆಕಾಂಕ್ಷೆಗಳನ್ನು ತ್ಯಜಿಸುತ್ತದೆ. ಅಂತಹ ಸಂದರ್ಭದಲ್ಲಿ ‘ಭಾಗವಹಿಸುವ ಹಕ್ಕು’ ಉಲ್ಲಂಘನೆಯಾಗುತ್ತದೆ. ಇಂತಹ ಹಕ್ಕುಗಳನ್ನು ಸಮಾಜ ರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಪೊಲೀಸ್ ಘಟಕಾಧಿಕಾರಿ ದಿಲೀಪ್ ಸಾಗರ್‌ ಮಾತನಾಡಿ,‘ಪೊಲೀಸ್ ಇಲಾಖೆ ಕೇವಲ ಅಪರಾಧ ಜಗತ್ತಿಗೆ ಮೀಸಲಿಲ್ಲ. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಮಕ್ಕಳಿಗೆ ದಾರಿದೀಪವಾಗುವಂತಹ ಕಾರ್ಯ ಮಾಡಲು ಪೊಲೀಸರು ಸಿದ್ಧರಿದ್ದಾರೆ. ಮಕ್ಕಳು ಭಯಪಡದೆ ಪೊಲೀಸ್ ಘಟಕಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಬೇರೆ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿದ್ದರೆ, ಸಂಕಷ್ಟ ಸ್ಥಿತಿಯಲ್ಲಿದ್ದರೆ ಪೊಲೀಸ್‌ ಘಟಕಕ್ಕೆ ಮೊದಲು ಮಾಹಿತಿ ಮುಟ್ಟಿಸಬೇಕು. ನೀವು ನೀಡುವ ಒಂದು ಚಿಕ್ಕ ಮಾಹಿತಿಯಿಂದ ಮಗುವಿನ ಭವಿಷ್ಯ ರಕ್ಷಣೆಯಾಗುತ್ತದೆ’ ಎಂದು ಹೇಳಿದರು.

ಫಾದರ್ ಸಜಿ ರೆಕ್ಟರ್ ಮಾತನಾಡಿ,‘ಸರ್ಕಾರ ಅತ್ಯಂತ ಕಠಿಣ ಕಾನೂನು, ನಿಯಮಗಳನ್ನು ಜಾರಿಗೊಳಿಸಿದ್ದರೂ ಇದುವರೆಗೂ ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ತೊಲಗಿಲ್ಲ. ಮಕ್ಕಳು ನಾಯಕತ್ವದ ಗುಣ ಬೆಳೆಸಿಕೊಂಡು ಇಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶಕ್ತಿ ಬೆಳೆಸಿಕೊಳ್ಳಬೇಕು. ಎಲ್ಲರೂ ನಾಯಕರಾಗಲು ಸಾಧ್ಯವಿಲ್ಲ. ಆದರೆ, ಧೈರ್ಯ, ಸಾಹಸ, ಮಾನವೀಯತೆಯಂತಹ ಗುಣ ಬೆಳೆಸಿಕೊಂಡಾಗ ಮಾತ್ರ ನಾಯಕತ್ವದ ಗುಣ ಬರುತ್ತದೆ. ಅಂತಹ ನಾಯಕತ್ವದಿಂದ ದೇಶ ಅಭಿವೃದ್ಧಿಪಥದತ್ತ ಸಾಗಲು ಸಾಧ್ಯ’ ಎಂದು ಹೇಳಿದರು.ಬಾಲಕಾರ್ಮಿಕ ಜಿಲ್ಲಾ ರಕ್ಷಣಾಧಿಕಾರಿ ರಘುವೀರ್ ಸಿಂಗ್‌್ ಠಾಕೂರ್, ಡಾನ್‌ಬಾಸ್ಕೊ ಸಮಾಜ ಸೇವಾಕೇಂದ್ರದ ಸಂಚಾಲಕ ಶರಣಪ್ಪ, ಶರಣಬಸಯ್ಯ, ಸಾಬಯ್ಯ, ಬಿ.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT