ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಕಬ್ಬು ಬೆಳೆಯತ್ತ ರೈತರ ಚಿತ್ತ

Last Updated 20 ಏಪ್ರಿಲ್ 2017, 5:48 IST
ಅಕ್ಷರ ಗಾತ್ರ

ಚಿಂಚೋಳಿ: ಉತ್ತಮ ಮಳೆ ಹಾಗೂ ಬೆಳೆ ಜತೆಗೆ ನಿರೀಕ್ಷಿತ ದರ ಲಭಿಸಿದ್ದರಿಂದ ಉತ್ತೇಜಿತರಾದ ತಾಲ್ಲೂಕಿನ ರೈತರು ಪ್ರಸಕ್ತ ವರ್ಷ ತಮ್ಮ ಚಿತ್ತ ಕಬ್ಬು ಬೆಳೆ ಬೇಸಾಯದತ್ತ ಹರಿಸಿದ್ದಾರೆ.ಕುಂಚಾವರಂ, ವೆಂಕಟಾ ಪುರ ಹಾಗೂ ಶಾದಿಪುರ ಮತ್ತು ಚಿಮ್ಮನ ಚೋಡ್‌, ಐನಾಪುರದ ರೈತರು ಕಬ್ಬು ಬೇಸಾಯದತ್ತ ಆಸಕ್ತಿ ತೋರಿದ್ದಾರೆ.ನೀರಾವರಿ ಸೌಲಭ್ಯ ಹೊಂದಿರುವ ರೈತರು ವರ್ಷದಲ್ಲಿ ಪಡೆಯಬಹುದಾದ ಏಕೈಕ ಬೆಳೆ ಎಂದರೆ ಕಬ್ಬು. ಇದರಲ್ಲಿ ಮಿಶ್ರ ಬೆಳೆ ಬೇಸಾಯಕ್ಕೆ ಅಷ್ಟು ಅನುಕೂಲವಿಲ್ಲ. ಹೀಗಾಗಿ ರೈತರು ಉಳುಮೆ ಮಾಡಿ ಹದ ಮಾಡಿದ ಹೊಲದಲ್ಲಿ ವಿವಿಧ ತಳಿಯ ಕಬ್ಬಿನ (ದಂಟು) ಬೀಜ ಹಾಕಿ ಬಿತ್ತನೆ ನಡೆಸುವುದು ವಾಡಿಕೆ.

10 ರಿಂದ 12 ತಿಂಗಳ ಅವಧಿಯ ಬೆಳೆಯಾದ ಕಬ್ಬು ಬೇಸಾಯದಿಂದ ಹೈನುಗಾರಿಕೆ ಜತೆಗೆ ಬೆಲ್ಲ ಮಾಡಲು, ಕಬ್ಬು ಕಟಾವಿಗೆ ಹೀಗೆ ಕಾರ್ಮಿಕರಿಗೂ ಹೆಚ್ಚಿನ ಕೆಲಸ ಕೊಡಬಹುದಾದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಹು ಉಪಯೋಗಿ ಬೆಳೆ ಇದಾಗಿದೆ.ತಾಲ್ಲೂಕಿನಲ್ಲಿ ಕಬ್ಬು ಅರೆಯಲು ಯಾವುದೇ ಕಾರ್ಖಾನೆಯಿಲ್ಲ. ಇದರಿಂದ ರೈತರು ನೆರೆಯ ತೆಲಂಗಾಣ, ಆಂಧ್ರ, ಕರ್ನಾಟಕದ ಬೀದರ್‌ ಮತ್ತು ಯಾದಗಿರಿ, ಮತ್ತು ಕಲಬುರ್ಗಿಯ ಸಕ್ಕರೆ ಕಾರ್ಖಾನೆಗಳನ್ನು ಅವಲಂಬಿಸಿದ್ದಾರೆ.

ಇಲ್ಲಿನ ಕುಂಚಾವರಂ ಭಾಗದಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸಲು ರೈತರು ದಲ್ಲಾಳಿಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ವಿವಿಧ ಕಾರ್ಖಾನೆಗಳು ದಲ್ಲಾಳಿಗಳ ಮೂಲಕ ಬಂದ ಕಬ್ಬು ಪಡೆದು ಹಣ ಪಾವತಿಸಿದೆ. ಇದರಲ್ಲಿ ರೈತರಿಗೆ ಸಾಕಷ್ಟು ಹಾನಿಯಾಗಿದೆ.  ಸೂಕ್ತ ದರ ಮತ್ತು ಕಬ್ಬು ಸಾಗಣೆ ನಡೆಯದೇ ಬೆಳೆ ಸುಟ್ಟು ಹಾಕಿದ ಸಂದರ್ಭಗಳು ಎದುರಾಗಿದ್ದವು.

ಇಂಥ ಕಹಿ ಘಟನೆಗಳ ಮಧ್ಯೆ ಕೂಡ ಕಳೆದ ವರ್ಷ ಉತ್ತಮ ಬೆಲೆ ಲಭಿಸಿದ್ದ ರಿಂದ ರೈತರು ಹರ್ಷಚಿತ್ತರಾಗಿ ಈ ವರ್ಷ ಕಬ್ಬು ಬೆಳೆಯತ್ತ ಗಮನ ಹರಿಸಿದ್ದಾರೆ. ‘ಕಳೆದ ವರ್ಷ ತಾಲ್ಲೂಕಿನಲ್ಲಿ ಪ್ರತಿ ಟನ್‌ ಕಬ್ಬಿಗೆ ₹2,800 ರಿಂದ ₹ 3,500ವರೆಗೆ ದರ ಲಭಿಸಿದೆ. ಇದು ಕೂಡ ಬೇಸಾಯ ಕ್ಷೇತ್ರ ಹೆಚ್ಚಳಕ್ಕೆ ಕಾರಣ ವಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾ ಯಿತಿ ಸದಸ್ಯ ಹಾಗೂ ಶಿವರಾಂಪುರದ ಕಬ್ಬು ಬೆಳೆಗಾರ ಚಿರಂಜೀವಿ ಪಾಪಯ್ಯ.

‘ನಮ್ಮೂರಿನಲ್ಲಿ ಕಳೆದ ವರ್ಷ ಕಬ್ಬಿನ ಬೆಳೆಯ ಕ್ಷೇತ್ರಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ 25ಕ್ಕಿಂತ ಅಧಿಕ  ಪ್ರದೇಶದಲ್ಲಿ ಹೆಚ್ಚಳ ಗೋಚರಿಸಿದೆ’ ಎಂದರು. ಕುಂಚಾವರಂ, ಶಾದಿಪುರದಲ್ಲಿ  ಶೇ 35ರಷ್ಟು ಹೆಚ್ಚಳವಾಗಿದ್ದು, ಬಹುತೇಕ ಕಡೆಗಳಲ್ಲಿ ರೈತರು ಕಬ್ಬು ಬೆಳೆ ಬೇಸಾಯ ದತ್ತ ಚಿತ್ತ ಹರಿಸಿ ಆಶಾದಾಯಕ ನಿರೀಕ್ಷೆಯಲ್ಲಿದ್ದಾರೆ. ವೆಂಕಟಾಪುರದಲ್ಲಿ ಶೇ 35ರಷ್ಟು ಕ್ಷೇತ್ರದಲ್ಲಿ ಹೆಚ್ಚಳ ವಾಗಿದೆ ಎಂದು ಗೋಪಾಲ ಭಜಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT