ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೊಳವೆಬಾವಿ: ನೀರಿಗೆ ತತ್ವಾರ

Last Updated 20 ಏಪ್ರಿಲ್ 2017, 6:15 IST
ಅಕ್ಷರ ಗಾತ್ರ

ಕನಕಗಿರಿ: ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ ಅವರ ಸ್ವಗ್ರಾಮ ಹುಲಿಹೈದರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.ಗ್ರಾಮದ 19 ಕೊಳವೆಬಾವಿಗಳು ಬತ್ತಿಹೋಗಿದ್ದು, ಜನರು ನೀರಿಗಾಗಿ ಪರದಾಡುವಂತಾಗಿದೆ.‘ಇಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸಮ್ಮ ಸೇರಿದಂತೆ 11 ಸದಸ್ಯರಿದ್ದಾರೆ. ಯಾರೊಬ್ಬರೂ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದ ನಾಲ್ಕು ವಾರ್ಡ್‌ಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದೆ. ದೂರದ ಹೊಲಗಳಿಗೆ ಜಲಕ್ಕಾಗಿ ಗ್ರಾಮಸ್ಥರು ಅಲೆದಾಡುತ್ತಿದ್ದಾರೆ.\‘ಮೂರು ತಿಂಗಳಿಂದ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಕೂಲಿ ಬಿಟ್ಟು ನೀರು ಸಂಗ್ರಹಿಸಬೇಕಾಗಿದೆ’ ಎಂದು ಗ್ರಾಮಸ್ಥ ಪರಶುರಾಮ ತಿಳಿಸಿದರು.ನೀರಿನ ಕೊರತೆಯಿಂದಾಗಿ ಗ್ರಾಮದಲ್ಲಿ ಗೋಶಾಲೆ ತೆರೆಯಲು ತಾಲ್ಲೂಕು ಆಡಳಿತ ಹಿಂದೇಟು ಹಾಕಿದೆ. ಜಾನುವಾರುಗಳಿಗೆ ಮೇವು ಸಿಗದಂತಾಗಿದೆ. ರೈತರು ದನಕರುಗಳನ್ನು ಮಾರಾಟ ಮಾಡಿ ಗುಳೆ ಹೋರಟಿದ್ದಾರೆ.

‘ವರ್ಷದಲ್ಲೇ ಎಂಟು ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಒಂದರಲ್ಲಿ ಅಲ್ಪ ನೀರಿತ್ತು. ಈಗ ಅದೂ ಬತ್ತಿದೆ. ಖಾಸಗಿ ವ್ಯಕ್ತಿಗಳು ಕೊರೆಸಿದ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡುವ ಪ್ರಯತ್ನವೂ ವಿಫಲವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ ತಿಳಿಸಿದರು.
‘ಗ್ರಾಮದಲ್ಲಿ ಟ್ಯಾಂಕರ್ ನೀರು ಪೂರೈಸಬೇಕಾದ ಸ್ಥಿತಿ ಇದೆ. ನೀರಿಲ್ಲದೆ ಶುದ್ಧ ನೀರಿನ ಘಟಕಗಳು ಬಂದ್‌ ಆಗಿವೆ. ಅಧಿಕಾರಿಗಳು ಮೂಗಿಗೆ ತುಪ್ಪ ಸವರುತ್ತಿದ್ದಾರೆ’ ಎಂದು ಜನ ಆಪಾದಿಸಿದರು.

ನೀರು ಪೂರೈಕೆಗೆ ಪೈಪ್‌ಲೈನ್, ಮೋಟಾರ್‌ ಅಳವಡಿಸಲಾಗಿದೆ. ಆದರೆ, ಗ್ರಾಮದಲ್ಲಿ ಜಲಮೂಲವೇ ಸಿಗುತ್ತಿಲ್ಲ. ಇದರಿಂದ ಸಮಸ್ಯೆ ಎದುರಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸಮ್ಮ, ಅಭಿವೃದ್ಧಿ ಅಧಿಕಾರಿ ರಾಮು ನಾಯಕ ತಿಳಿಸಿದರು.ಮೆಹಬೂಬ ಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT