ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಂಗ್ ಸಮಸ್ಯೆಯಲ್ಲ; ಪೂರ್ವಗ್ರಹ ಪೀಡಿತ ಮನಸಿನ ತೊಂದರೆ’

Last Updated 20 ಏಪ್ರಿಲ್ 2017, 7:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ನಿಮಗೆ ಬಾಂಗ್‌ (ಪ್ರಾರ್ಥನೆಯ ಕರೆ) ಕಿರಿಕಿರಿ ಮಾಡು ತ್ತಿದ್ದರೆ ಅದು ಬಾಂಗ್‌ ಸಮಸ್ಯೆಯಲ್ಲ. ನಿಮ್ಮೊಳಗಿರುವ ಪೂರ್ವಗ್ರಹ ಪೀಡಿತ ಮನಸ್ಸಿನ ತೊಂದರೆ. ಅದನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದೀರಿ ಅಷ್ಟೆ’ ಎಂದು ಸಾಹಿತಿ, ರಂಗಕರ್ಮಿ ಯೋಗೇಶ್‌ ಮಾಸ್ಟರ್‌, ಗಾಯಕ ಸೋನು ನಿಗಮ್‌ ಅವರ ಟ್ವಿಟರ್‌ ಹೇಳಿಕೆಗೆ ಪ್ರತಿ ಕ್ರಿಯಿಸಿದ್ದಾರೆ.

ನಗರದಲ್ಲಿ ಬುಧವಾರ ತಮ್ಮ ಮೊದಲ ನಿರ್ದೇಶನದ ಸಿನಿಮಾ ‘ಮರಳಿ ಮನೆಗೆ’ ಬಿಡುಗಡೆ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರಿಯಿ ಸಿದರು.‘ಬಾಂಗ್‌ ಎಲ್ಲರಿಗೂ ಎಚ್ಚರವಾಗಲು ಅಲರಾಂ ಇದ್ದಂತೆ. ಅದನ್ನು ನಾವು ಎಚ್ಚರಿಕೆಯ ಗಂಟೆಯಂತೆ ಭಾವಿಸಬೇಕು. ಮಸೀದಿ ಪಕ್ಕ ಮನೆ ನಿರ್ಮಿಸಿಕೊಂಡು ಬಾಂಗ್‌ ಕೂಗಬಾರದೆಂದರೆ ಹೇಗೆ? ಪ್ರಾರ್ಥನೆಯ ಕರೆ ಕೇಳಬೇಕು. ದೇವಸ್ಥಾನಗಳಲ್ಲೂ ಗಂಟೆ, ಜಾಗಟೆ ಸದ್ದು ಮೊಳಗಬೇಕು. ಇಲ್ಲದಿದ್ದರೆ ಮನುಷ್ಯನಿಗೆ ಏನೋ ಕಳೆದುಕೊಂಡಂತೆ ಖಾಲಿ ಭಾವನೆ ಕಾಡಲಾರಂಭಿಸುತ್ತದೆ’ ಎಂದರು.

‘ತ್ರಿವಳಿ ತಲಾಖ್‌ ಕೂಡ ಬೇಕಾಬಿಟ್ಟಿ ಬಳಕೆ ಸಲ್ಲದು. ಇಸ್ಲಾಂ ಧರ್ಮದಲ್ಲಿ ತಲಾಖ್‌ ದುರ್ಬಳಕೆಗೆ ಅವಕಾಶವಿಲ್ಲ. ಆದರೆ, ಅದನ್ನು ಕೆಲವರು ಬೇಕಾ ಬಿಟ್ಟಿ, ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವು ದರ ಬಗ್ಗೆ ನೇರವಾಗಿ ಖಂಡಿಸುತ್ತೇನೆ. ಹೆಣ್ಣು ಮಗು ಹುಟ್ಟಿತೆನ್ನುವ ಕಾರಣಕ್ಕೆ ತಲಾಖ್‌ ನೀಡಿರುವ ನಿದರ್ಶನಗಳಿವೆ. ಇಂತಹ ದುರ್ಬಳಕೆ ತಡೆಯಬೇಕು’ ಎಂದರು.

ದಾವಣಗೆರೆಯಲ್ಲಿ ಇತ್ತೀಚೆಗೆ ತಮ್ಮ ಮೇಲೆ ನಡೆದ ಬಲಪಂಥೀಯ ಯುವ ಕರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಆ ಘಟನೆ ಬಹಳ ಬೇಸರ ಉಂಟು ಮಾಡಿದೆ. ನನ್ನ ಮೇಲೆ ದಾಳಿ ನಡೆಸಿದ ಹುಡುಗರ ಮೇಲೆ ಬೇಸರ, ದುಃಖವಿದೆ. ಅವರು ನನ್ನ ಬಗ್ಗೆ ಮತ್ತು ನನ್ನ ಕೃತಿಗಳ ಬಗ್ಗೆ ಓದಿಕೊಂಡಿದ್ದರೆ ಆ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಟೀಕಾಗ್ರಂಥ ಪ್ರಕಟಿಸಿ ವೈಚಾರಿಕ ವಾಗ್ವಾದ ನಡೆಸಲು ಅವಕಾಶವಿತ್ತು. ಆದರೆ, ಯಾರದೋ ಕುಮ್ಮಕ್ಕಿಗೆ, ಪ್ರಚೋದನೆಗೆ ಒಳಗಾಗಿ ಕೃತ್ಯ ಎಸಗಿದ್ದಾರೆ. ಅವರಿಗೆ ಪ್ರಚೋದನೆ ನೀಡಿರುವ ಜನರ ಬಗ್ಗೆ ನನಗೆ ಆಕ್ರೋಶವಿದೆ’ ಎಂದರು.

‘80ರ ದಶಕದಲ್ಲಿ ನಾಟಕವಾಗಿ ಪ್ರಚಲಿತವಾಗಿದ್ದ ತಮ್ಮದೇ ರಚನೆಯ ‘ಮರಳಿ ಮನೆಗೆ’ ಕಥೆ ಸಿನಿಮಾವಾಗಿ ಮೇ 5ರಂದು ರಾಜ್ಯದಾದ್ಯಂತ ಬಿಡುಗಡೆ ಯಾಗುತ್ತಿದೆ. ಈ ಸಿನಿಮಾ ಜನರನ್ನು ತಲುಪುವ ವಿಶ್ವಾಸವಿದೆ. ಇದರಲ್ಲಿ ವೈಚಾ ರಿಕ ಕಿಡಿ, ಬಂಡಾಯ ನಿರೀಕ್ಷೆ ಬೇಡ. ಕಥೆಗೆ ನ್ಯಾಯ ಒದಗಿಸುವ ರೀತಿಯಲ್ಲಿ ಸಿನಿಮಾ ಮೂಡಿಬಂದಿದೆ. ಜನರ ಮನಸ್ಸು ಗೆಲ್ಲುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT