ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರೆವ ತಾಯಿಯ ಮನದ ಮಾತು

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಣಬಿಸಿಲಿಗೆ ರೊಟ್ಟಿಯಂತಾಗಿದ್ದ ನೆಲಕ್ಕೆ ಆ ಬಾಲಕ, ತಾನು ಹಾರ್ಲಿಕ್ಸ್‌ ಕುಡಿಯುವ ಸ್ಟೀಲ್‌ ಮಗ್‌ನಿಂದ ನೀರು ಹುಯ್ದ. ‘ಚೊಂಯ್...’ ಅಂತ ಗೊಣಗುತ್ತಾ ಮುಖ ಸಿಂಡರಿಸಿತು ನೆಲ.

‘ನಿಂಗ್ಯಾಕೋ ನನ್ನ ಉಸಾಬರಿ? ಸುಮ್ಮನೆ ಹೋಗಿ ಆಡ್ಕೋಬಾರ್ದಾ?’ ಅಂತ ಸಿಟ್ಟಿನಿಂದ ಕೇಳಿ ಬಾಲಕ ನೀರು ಹುಯ್ದ ಜಾಗದಲ್ಲಿ ಬಿಸಿ ಹೊಗೆ ಉಗುಳಿತು.

ಬಾಲಕ ಮನೆಯಿಂದ ಮತ್ತೊಂದು ಮಗ್‌ ನೀರು ತಂದು ಹುಯ್ದು, ‘ಅಳ್ಬೇಡ... ನಾನು ನಿಂಗೆ ನೀರು ಕೊಡ್ತೀನಿ’ ಅಂದ.

‘ನಂಗೆ ತುಂಬಾನೆ ಸೆಖೆಯಾಗಿತ್ತು. ಹ್ಯಾಂಡ್‌ ಶವರ್‌ನಲ್ಲಿ ಸ್ನಾನ ಮಾಡ್ಕೊಂಡು  ನೀರೂ ಕುಡ್ಕೊಂಡು ಬಂದೆ. ಹಾಯೆನಿಸಿತು. ಅದಕ್ಕೆ ನಿಂಗೂ ನೀರು ಕೊಡೋಣ ಅನ್ನಿಸ್ತು’.

‘ನನ್ನ ದಾಹ ನೀಗಲು ಒಂದು ಮಗ್‌ ನೀರು ಸಾಕಾಗಲ್ಲ ಕಣೋ ಪುಟ್ಟ. ನಿನ್ನ ಮನೆಯ ಸಂಪಿನ ನೀರೂ ಸಾಕಾಗಲ್ಲ. ನಾಲ್ಕು ದಿನ ಮಳೆ ಹುಯ್ದರೂ ದಾಹ ತಣಿಯಲ್ಲ ಗೊತ್ತಾ?’

‘ಹಾಗಿದ್ದರೆ ನಾನೇನು ಮಾಡಬೇಕು?’
‘ನಿನ್ನಿಂದಾಗಲ್ಲ ಬಿಡು’

‘ಹಾಗೆಲ್ಲ ಹೇಳಬೇಡ. ಯಾರಿಗಾದರೂ ಸಹಾಯ ಮಾಡುವುದು ನಂಗಿಷ್ಟ. ಹೇಳು ಏನು ಮಾಡ್ಬೇಕು?’

‘ಗಿಡ ನೆಡಬೇಕು, ನೀರು ಮಿತವಾಗಿ ಬಳಸಬೇಕು, ತುಂಬಾ ಹೊತ್ತು ಫ್ಯಾನ್‌ ಹಾಕೋ ಬದಲು ಮನೆಯೊಳಗೂ ಗಿಡ ಬೆಳೆಸಬೇಕು, ಗಾಜಿನ ಬಾಗಿಲು ಬಳಸೋದನ್ನು ಕಡಿಮೆ ಮಾಡಬೇಕು, ಮನೆಗೆ ಸಂಪು ಕಟ್ತೀರಲ್ಲ ಆಗ ಮಳೆಯ ನೀರಿಗಂತ ಇನ್ನೊಂದು ಸಂಪು ಕಟ್ಬೇಕು.. ಹೀಗೆ ತುಂಬಾ ಇದೆ ಕಣೋ. ನೀನು ನಿನ್ನ ಪುಟ್ಟ ಕೈಗಳಲ್ಲಿ ಏನ್ಮಾಡ್ತೀಯಾ?’

‘ಹೇ.. ನೀನು ಗಿಡ ನೆಡ್ಬೇಕು ಅಂದಾಗ ನೆನಪಾಯ್ತು. ನಮ್ಮನೆಯ ತುಳಸಿ ಗಿಡಕ್ಕೆ ನಿನ್ನೆ ನಾನು ಸಹಾಯ ಮಾಡಿದೆ ಗೊತ್ತಾ? ತುಂಬಾ ಬಿಸಿಲಲ್ವಾ ಬಾಯಾರಿಕೆ ಆಗಿತ್ತೇನೊ ಪಾಪ. ನಾನು ಊಟ ಮಾಡಿದ್ಮೇಲೆ ನೀರು ಕುಡೀತಿದ್ದಾಗ  ಗಿಡದ ನೆನಪಾಯ್ತು. ಹೋಗಿ ನೋಡ್ತೀನಿ! ಸೊಂಟ ಬಗ್ಗಿಸಿಕೊಂಡು ನಿಂತಿತ್ತು. ಎಲೆಗಳೆಲ್ಲಾ ಸಪ್ಪಗಾಗಿದ್ದವು. ಓಡಿ ಹೋಗಿ ಒಂದು ಮಗ್‌ ನೀರು ಹಾಕಿ ಅದರ ತಲೆ ಮೇಲೂ ಸುರಿದೆ. ಸಂಜೆ ನಿದ್ದೆಯಿಂದೆದ್ದು ಮತ್ತೆ ನೋಡ್ತೀನಿ... ಗಿಡ ನೆಟ್ಟಗೆ ನಿಂತಿತ್ತು! ಇನ್ನು ನಾನೇ ಅದನ್ನು ನೋಡ್ಕೋತೀನಿ ಅಂತ ಅಮ್ಮ ಮತ್ತು ಪಪ್ಪಂಗೆ ಹೇಳಿದ್ದೀನಿ’

ನೆಲ ಈಗ ಹೊಗೆ ಉಗುಳಲಿಲ್ಲ. ಬಾಲಕನ ಜತೆ ಸ್ನೇಹದಿಂದ ಮಾತನಾಡಿತು.

‘ನನ್ನ ಬಗ್ಗೆ ಕಾಳಜಿ ವಹಿಸೋರೇ ಕಡಿಮೆಯಾಗಿದ್ದಾರೆ ಮಾರಾಯ. ಎಲ್ಲಾ ಕಡೆ ಕಾಂಕ್ರೀಟು, ಬ್ರಿಕ್ಸು, ಡಾಂಬರು ಅಂತ ನನಗೆ ಉಸಿರಾಡೋದಿಕ್ಕಾಗಲಿ, ಒಂದು ಗುಟುಕು ನೀರು ಕುಡಿಯೋದಕ್ಕಾಗಲಿ ಅವಕಾಶ ಇಲ್ಲದಂತೆ  ಮುಚ್ಚಿ ಬಿಡುತ್ತಿದ್ದಾರೆ’

‘ಕಾಂಕ್ರೀಟು, ಡಾಂಬರು, ಬ್ರಿಕ್ಸ್‌ ಎಲ್ಲಾ ಹಾಕಿದ್ರೆ ನೀಟಾಗಿರುತ್ತಲ್ವಾ? ದಿನಾ ಬೆಳಿಗ್ಗೆ ಗೇಟಿಗೆ ನೀರು ಹಾಕೋರಿಗೆ, ರಸ್ತೆ ಗುಡಿಸೋ ಭಾಗ್ಯ ಆಂಟಿ ಮತ್ತು ಆ ಅಜ್ಜಿಗೆ ಸುಲಭ ಆಗುತ್ತಲ್ವಾ? ದೊಡ್ಡ ದೊಡ್ಡ ಕಟ್ಟಡ ಇದ್ದರೇ ತಾನೇ ಅದು ದೊಡ್ಡ ಸಿಟಿಯಾಗುತ್ತೆ ಅಲ್ವಾ ನೀನೊಂದು ಕೆಲಸ ಮಾಡು ಮಳೆ ಬರುತ್ತಲ್ವಾ ಆಗ ಬೇಕಾದಷ್ಟು ನೀರು ಕುಡಿದುಬಿಡು. ಒಂಟೆ ಹಾಗೇ ಮಾಡುತ್ತೆ ಗೊತ್ತಾ?’ ಅಂತ ದೊಡ್ಡ ಸಲಹೆ ಕೊಟ್ಟ ಬಾಲಕ.

ನೆಲ ಇನ್ನೊಂದು ನೋವನ್ನು ಬಾಲಕನ ಬಳಿ ಹೇಳಿತು.

‘ನೋಡಪ್ಪಾ ಈ ಬೆಂಗಳೂರಲ್ಲಿ ಇಡೀ ಸಿಟಿಯೇ ಮುಳುಗಿಹೋಗುವಷ್ಟು ಮಳೆ ಬಂದ್ರೂ ಮೋರಿ, ಮ್ಯಾನ್‌ಹೋಲ್‌ ಪಾಲಾಗುತ್ತದೆ. ಹಿಂದೆಲ್ಲಾ ಮೊದಲ ಮಳೆಗೆ ಮಣ್ಣಿನ ಘಮಲು ಅಂದ್ರೆ ಸುವಾಸನೆ ತಗೋಳ್ಳೋದೇ ಒಂದು ಸುಖ ಅಂತಿದ್ರು ಜನ. ಈಗ? ಮಣ್ಣು ಇದ್ದರೆ ತಾನೇ ಮಣ್ಣಿನ ವಾಸನೆ ಗೊತ್ತಾಗೋದು?’.

‘ನೀನು ಹೇಳಿದ್ದು ಅರ್ಥವಾಯ್ತು. ಎಲ್ಲರೂ ಗಿಡ ಬೆಳೆಸಿ, ಮಳೆ ನೀರನ್ನು ಜೋಪಾನ ಮಾಡಿದ್ರೂ ನೀನು ತಂಪಾಗಿರುತ್ತೀಯಾ?‘
‘ಹೌದು ಪುಟ್ಟ. ನಿಂಗೊತ್ತಾ ಈ ಬೆಂಗಳೂರಲ್ಲಿ ಒಂದು ಕೋಟಿ ಒಂದು ಲಕ್ಷ ಜನರಿದ್ದಾರೆ. ಅವರಲ್ಲಿ ಅರ್ಧ ಪಾಲು ಜನರಾದ್ರೂ ಗಿಡ ಬೆಳೆಸಿ ನೀರು ಉಳಿಸಿ, ಕೆರೆಗಳನ್ನು ಕಾಪಾಡಿದ್ರೆ ಈ ಬೆಂಗಳೂರು ಸ್ವರ್ಗವಾಗುತ್ತದೆ ಕಣೋ’

‘ನಮ್ಮನೆಗೆ ಸಖತ್‌ ಬಿಸಿಲು ಬೀಳುತ್ತೆ ಅದಕ್ಕೆ ಗಿಡಗಳು ಚೆನ್ನಾಗಿ ಬೆಳೆಯೋದೇ ಇಲ್ಲ ಅಂತ ಅಮ್ಮ ಹೇಳ್ತಿದ್ರು. ಆದರೂ ನಾವು ಗಿಡ ನೆಟ್ಟಿದ್ದೀವಿ. ಅಮ್ಮ ನಂಗೆ ಅಂತಾನೇ ನಾಲ್ಕು ಹೂ ಕುಂಡ ತಂದು ಕೊಡ್ತಾರಂತೆ. ನಾನು ಒಂದರಲ್ಲಿ ಇನ್ನೂ ಒಂದು ತುಳಸಿ ಗಿಡ ಹಾಕ್ತೀನಿ. ಬೇವಿನ ಗಿಡ ತುಂಬಾ ಆಮ್ಲಜನಕ ಕೊಡುತ್ತೆ ಅದೊಂದು ಇರ್ಲಿ. ಇನ್ನು ಎರಡರಲ್ಲಿ ಹೂವಿನ ಗಿಡ ನೆಡ್ತೀನಿ’.

‘ನಿಮ್ಮನೆ ಸುತ್ತಮುತ್ತ ಪರವಾಗಿಲ್ಲ ಕಣೋ. ಮಳೆ ನೀರು ಇಂಗಿಸ್ತೀರಿ, ಗಿಡ ಮರಗಳೆಲ್ಲಾ ಇವೆ. ನೀನು ಬೇರೆ ನಾಲ್ಕು ಗಿಡ ಹಾಕೋ ಯೋಚನೆ ಮಾಡಿದ್ದೀ. ಹಾಗೂ ಹೀಗೂ ಸ್ವಲ್ಪ ತಂಪಾಗಿರುತ್ತೆ’.

‘ಅಮ್ಮ ಹೇಳ್ತಿದ್ರು, ನಾಳೆ ಶನಿವಾರ ಭೂಮಿ ದಿನ ಅಂತೆ. ಹಾಗಂದ್ರೇನು ನಿನ್ನ ಬರ್ತ್‌ಡೇನಾ? ಅವತ್ತು ಸಿಟಿಯಲ್ಲಿ ತುಂಬಾ ಕಾರ್ಯಕ್ರಮ ಮಾಡ್ತಾರಂತೆ. ಭಾಷಣ ಮಾಡ್ತಾರಂತೆ.  ಫೇಸ್‌ಬುಕ್‌ನಲ್ಲಿಯೂ  ತೋರಿಸಿದ್ರು ಅಮ್ಮ’.

‘ಮಗು, ಸ್ವಾತಂತ್ರ್ಯೋತ್ಸವ ದಿನ ಇದ್ಯಲ್ಲ ಅದೇ ನೀವು ಇಂಡಿಪೆಂಡೆನ್ಸ್‌ ಡೇ  ಅಂತೀರಲ್ಲ? ವರ್ಷಕ್ಕೊಂದೇ ದಿನ. ಮರುದಿನ? ಎಲ್ಲಾ ಠುಸ್‌! ಹಾಗೇ ಪ್ರತಿ ಏಪ್ರಿಲ್‌ 22ರಂದು ಜಗತ್ತಿನಲ್ಲೆಲ್ಲಾ ಭೂಮಿ ದಿನ ಆಚರಿಸ್ತಾರೆ. ಭಾಷಣ, ಬ್ಲಾಗ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ರವಾನೆಯಾಗ್ತವೆ. ಮರುದಿನ? ಅದೂ ಠುಸ್ಸ್‌’ ಎಂದು ನೆಲ ಮೂಗು ಮುರಿಯಿತು.

ಬಾಲಕ ಅನುನಯದಿಂದ ಹೇಳಿದ,
‘ನಾವು ಹೆಚ್ಚು ಹೆಚ್ಚು ಕರೆಂಟ್‌ ಬಳಸಿದಷ್ಟೂ ಭೂಮಿ ಮತ್ತು ವಾತಾವರಣದ ತಾಪಮಾನ ಹೆಚ್ಚುತ್ತದೆಯಂತೆ. ಅದಕ್ಕೆ ಪ್ರತಿ ವರ್ಷ ಭೂಮಿ ದಿನದಂದು ಜಗತ್ತಿನಲ್ಲೆಲ್ಲಾ ರಾತ್ರಿ ಒಂದು ಗಂಟೆ ಯಾವುದೇ ರೂಪದಲ್ಲೂ ವಿದ್ಯುತ್‌ ಬಳಸುವುದಿಲ್ಲವಂತೆ’. ನೆಲ ನೆಗಾಡಿತು.

‘ವರ್ಷದಲ್ಲಿ ಒಂದು ದಿನ ಒಂದು ಗಂಟೆ ವಿದ್ಯುತ್‌ ಬಳಸದೇ ಇರೋದನ್ನು ಮೆಚ್ಚುತ್ತೇನೆ. ಆದರೆ ವರ್ಷವಿಡೀ ನೀವು ವಿದ್ಯುತ್‌ ಖರ್ಚು ಮಾಡೋದಕ್ಕೆ ಲಂಗುಲಗಾಮು ಇಲ್ಲ ಅಲ್ವೇ?’

ಬಾಲಕನಿಗೆ ನೆಲದ ನೋವು ಅರ್ಥವಾಯಿತು. ಓಡಿಹೋಗಿ ತುಳಸಿಗಿಡಕ್ಕೆ ಮತ್ತೆ ನೀರು ಎರೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT