ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲಾದರೂ ಸರಿ, ನಟಿಸುವುದು ಮುಖ್ಯ...

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಐ ಲವ್‌ ಆ್ಯಕ್ಟಿಂಗ್‌’
ನೆಚ್ಚಿನ ತಿನಿಸನ್ನು ಕಂಠಪೂರ್ತಿ ತಿಂದು ‘ಅದ್ಭುತ ರುಚಿ’ ಎಂದಷ್ಟೇ ಉತ್ಕಟತೆಯಿಂದ ನಟನೆಯ ಪ್ರೀತಿಯ ಬಗ್ಗೆ ಹೇಳಿಕೊಳ್ಳುವಾಗ, ಆ ಹುಡುಗಿಯ ಧ್ವನಿಯಲ್ಲಿಯೇ ನಟನೆಯ ವ್ಯಾಮೋಹದ ಗಂಧ ಸೂಸುತ್ತಿತ್ತು.

‘ನಟನೆ ಎಂದರೆ ನಟನೆ ಅಷ್ಟೆ. ಅದರಲ್ಲಿ ಹಿರಿತೆರೆ–ಕಿರುತೆರೆ, ರಂಗಭೂಮಿ ಅಂತೆಲ್ಲ ಏನಿಲ್ಲ. ನಟಿಸುವುದು ಮತ್ತು ಅದರ ಮೂಲಕ ಖುಷಿಪಡುವುದು ಮುಖ್ಯ’ ಎನ್ನುವಷ್ಟು ಪ್ರಬುದ್ಧೆ ಅಪೇಕ್ಷಾ ಪುರೋಹಿತ್‌. ಅಭಿನಯದ ಕುರಿತಾದ ಅವರ ಪ್ರೀತಿ ಮತ್ತು ಅಪೇಕ್ಷೆಗಳಿಗೆ ತಕ್ಕ ಅವಕಾಶಗಳ ಫಲವನ್ನೂ ಅವರೀಗ ಸವಿಯುತ್ತಿದ್ದಾರೆ.

ಅಪೇಕ್ಷಾ ಬಾಗಲಕೋಟೆಯವರು. ನಟಿಯಾಗಿ ಹೆಸರುಗಳಿಸಬೇಕು ಎಂಬ ಆಸೆಯೇನೂ ಅವರಿಗಿರಲಿಲ್ಲ. ಓದಿದ್ದು ಫ್ಯಾಷನ್‌ ಡಿಸೈನಿಂಗ್‌. ನೃತ್ಯವೆಂದರೆ ಜೀವ ಉತ್ಸಾಹದಿಂದ ಪುಟಿದೇಳುತ್ತಿತ್ತು. ಅನೇಕ ಕಾಲೇಜು, ಅಂತರ್‌ಕಾಲೇಜು ಸ್ಪರ್ಧೆಗಳು, ಕಾರ್ಯಕ್ರಮಗಳಲ್ಲೆಲ್ಲ ನೃತ್ಯ ಪ್ರದರ್ಶನ ನೀಡುತ್ತಿದ್ದ ಇವರಿಗೆ ನಟನೆಯ ಅವಕಾಶ ದೊರಕಿಸಿಕೊಟ್ಟಿದ್ದೂ ನೃತ್ಯವೇ. ಇವರ ನೃತ್ಯಚಾತುರ್ಯವನ್ನು ನೋಡಿಯೇ ಸುವರ್ಣ ವಾಹಿನಿಯವರು ‘ಭಾಗ್ಯಲಕ್ಷ್ಮಿ’ ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದರು. ಅಪೇಕ್ಷಾ ತೆರೆಯ ಲೋಕಕ್ಕೆ ಅಡಿಯಿಟ್ಟಿದ್ದು ಹೀಗೆ.

ಮೊದಮೊದಲು ನಟನೆಯ ಬಗ್ಗೆ ಅವರಿಗೆ ಅಷ್ಟೇನೂ ಗಾಢವಾದ ಪ್ರೀತಿ ಇರಲಿಲ್ಲ. ಆದರೆ ನಟನೆಯ ಹಲವು ಆಯಾಮಗಳು – ಅದರಿಂದ ಜನರನ್ನು ತಲುಪುವ ಅವಕಾಶಗಳ ಬಗ್ಗೆ ಅರಿವಾಗುತ್ತಾ ಹೋದಂತೆ ಬಣ್ಣದ ಜಗತ್ತಿನ ಅಗಾಧ ಸಾಧ್ಯತೆಗಳ ಬಗ್ಗೆ ಅಚ್ಚರಿ ಹುಟ್ಟುತ್ತಾ ಹೋಯಿತು. ಇದೇ ತನ್ನ ಬದುಕನ್ನು ರೂಪಿಸಿಕೊಳ್ಳುವ ದಾರಿ ಎಂದು ನಿರ್ಧರಿಸಲೂ ತುಂಬ ಸಮಯವೇನೂ ಬೇಕಾಗಲಿಲ್ಲ.

‘ಉತ್ತರ ಕರ್ನಾಟಕದಿಂದ ಬಂದ ನನಗೆ ಚಿತ್ರರಂಗದಲ್ಲಿ ಯಾವ ಗಾಡ್‌ಫಾದರ್‌ ಕೂಡ ಇರಲಿಲ್ಲ. ಯಾರ ಪರಿಚಯವೂ ಇರಲಿಲ್ಲ. ಬೆಂಗಳೂರು ಭಾಷೆಯನ್ನು ಕಲಿತುಕೊಂಡಿದ್ದೂ ಇಲ್ಲಿಗೆ ಬಂದ ಮೇಲೆಯೇ. ಆದರೆ ಒಮ್ಮೆ ಕಿರುತೆರೆಯಲ್ಲಿ ನಟಿಸಲು ಪ್ರಾರಂಭಿಸಿದಾಗ ಎಲ್ಲರೂ ನನ್ನನ್ನು ತುಂಬು ಮನಸ್ಸಿನಿಂದ ಬರಮಾಡಿಕೊಂಡರು, ಪ್ರೋತ್ಸಾಹಿಸಿದರು, ತಿದ್ದಿದರು. ಹಾಗೆಯೇ ಸಿನಿಮಾದಲ್ಲಿ ಅವಕಾಶ ಸಿಕ್ಕಿ ನಟಿಸಿದಾಗ ಅಲ್ಲಿಯೂ ಎಲ್ಲ ಹಿರಿಯ ಕಲಾವಿದರು, ತಂತ್ರಜ್ಞರು ನನ್ನನ್ನು ಮನೆಮಗಳಂತೆ ಕಂಡರು. ಯಾರೂ ಇಲ್ಲದೇ ಇಲ್ಲಿಗೆ ಬಂದಿದ್ದ ನನಗೆ ಇಲ್ಲೊಂದು ದೊಡ್ಡ ಕುಟುಂಬವೇ ದೊರಕಿದೆ’ ಎಂದು ಭಾವುಕವಾಗಿ ಹೇಳಿಕೊಳ್ಳುತ್ತಾರೆ.

ಅಂದಹಾಗೆ, ಅಪೇಕ್ಷಾ ಅವರನ್ನು ಕಿರುತೆರೆಯಿಂದ ಹಿರಿತೆರೆಗೆ ಕರೆತಂದ ಸಿನಿಮಾ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ‘ಕಾಫೀ ತೋಟ’. ಈ ಸಿನಿಮಾಕ್ಕೆ ಅವಕಾಶ ಸಿಕ್ಕಿದ್ದೂ ತುಂಬ ವಿಚಿತ್ರವಾಗಿ. ಅದನ್ನು ಅಪೇಕ್ಷಾ ವಿವರಿಸುವುದು ಹೀಗೆ:

‘ಭಾಗ್ಯಲಕ್ಷ್ಮಿ ಧಾರಾವಾಹಿ ಒಂದೇ ವರ್ಷಕ್ಕೆ ಮುಗಿದುಹೋಯ್ತ. ನನಗಾಗಲೇ ನಟನೆಯ ರುಚಿ ಹತ್ತಿತ್ತು. ನನ್ನೊಳಗಿನ ಕಲಾವಿದೆಗೆ ಇನ್ನೂ ಸಾಬೀತು ಮಾಡುವುದು ಬಾಕಿ ಇದೆ ಅನಿಸುತ್ತಿತ್ತು. ಆಗ ಯಾವುದಾದರೂ ಧಾರಾವಾಹಿಗೆ ಅವಕಾಶ ಸಿಗಬಹುದೇನೋ ಎಂಬ ಆಸೆಯಲ್ಲಿ ಟಿ.ಎನ್‌. ಸೀತಾರಾಮ್‌ ಅವರ ಕಚೇರಿಗೆ ಹೋಗಿದ್ದೆ. ಆಡಿಷನ್‌ ಕೂಡ ಮಾಡಿಕೊಂಡಿದ್ದರು. ಆದರೆ ಆಮೇಲೆ ಯಾವ ಧಾರಾವಾಹಿಯನ್ನೂ ಅವರು ಮಾಡಲಿಲ್ಲ. ನಾನೂ ಮರೆತುಬಿಟ್ಟಿದ್ದೆ. ಅದಾದ ಒಂದೂವರೆ ವರ್ಷದ ನಂತರ ಅವರು ನನಗೆ ಕರೆ ಮಾಡಿ ‘ಕಾಫಿ ತೋಟ’ ಎಂಬ ಸಿನಿಮಾ ಮಾಡ್ತಿದ್ದೇವೆ. ನೀವೊಂದು ಪಾತ್ರ ಮಾಡಬೇಕು’ ಎಂದಾಗ ಅಚ್ಚರಿ. ನಾನಾಗ ಬಾಗಲಕೋಟೆಯಲ್ಲಿದ್ದೆ. ಯಾವುದೋ ಪುಟ್ಟ ಪಾತ್ರ ಇರಬಹುದು ಅಂದುಕೊಂಡು ಬೆಂಗಳೂರಿಗೆ ಬಂದು ಟಿಎನ್‌ಎಸ್‌ ಭೇಟಿಯಾದೆ. ನನಗೆ ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನೇ ನೀಡಿದ್ದರು. ತುಂಬಾ ಖುಷಿಯಾಯ್ತು’ ಎಂದು ಖುಷಿಯಿಂದ ಹೇಳಿಕೊಳ್ಳುವ ಅವರು, ನಂತರ ‘ಕಿನಾರೆ’ ಮತ್ತು ‘ಕಾಣದ ಕಡಲಿಗೆ’ ಎಂಬ ಇನ್ನೆರಡು ಚಿತ್ರಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

‘‘ಕಾಫಿ ತೋಟ’ ನನ್ನ ಪಾಲಿಗೆ ಪಾಠಶಾಲೆ’’ ಎಂದು ನಮ್ರತೆಯಿಂದ ಹೇಳಿಕೊಳ್ಳುತ್ತಾರೆ ಅವರು. ‘ಸೀತಾರಾಮ್‌ ಬಳಿ  ಸಾಕಷ್ಟು ಬೈಸಿಕೊಂಡಿರಬೇಕಲ್ಲ?’ ಎಂದು ಕೆಣಕಿದರೆ ‘ಅದಂತೂ ಇದ್ದಿದ್ದೇ ಬಿಡಿ’ ಎಂದು ನಗುತ್ತಾರೆ.

ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಗೊತ್ತಾದಾಗ ಎಲ್ಲರೂ ‘ಸೀತಾರಾಮ್‌ ಸಿಕ್ಕಾಪಟ್ಟೆ ಬೈಯ್ತಾರೆ’ ಎಂದೆಲ್ಲ ಹೇಳಿ ಹೆದರಿಸಿಬಿಟ್ಟಿದ್ದರಂತೆ. ಆ ಹೆದರಿಕೆಯಲ್ಲಿಯೇ ಶೂಟಿಂಗ್‌ಗೆ ತೆರಳಿದ ಅಪೇಕ್ಷಾಗೆ ಅಭಯ ನೀಡಿದವರು ಛಾಯಾಗ್ರಾಹಕ ಅಶೋಕ್ ಕಶ್ಯಪ್‌.

‘ಅಶೋಕ್‌ ಕಶ್ಯಪ್‌ ನಮ್ಮಂಥ ಕಿರಿಯ ನಟರು ಮತ್ತು ಹಿರಿಯ ನಟರು ಇಬ್ಬರ ಜತೆಗೂ ಚೆನ್ನಾಗಿ ಬೆರೆಯುತ್ತಿದ್ದರು. ನಮ್ಮಿಬ್ಬರ ನಡುವೆ ಅವರು ಸೇತುವೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

ಸ್ವಭಾವತಃ ಸಾದಾ ಸೀದಾ ಸೈಲೆಂಟ್‌ ಹುಡುಗಿ ಆಗಿರುವ ಅಪೇಕ್ಷಾ ‘ಕಾಫೀ ತೋಟ’ದಲ್ಲಿ ಖಡಕ್‌ ಫೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ತಮ್ಮ ದೇಹ–ಸ್ವಭಾವ ಎರಡನ್ನೂ ಸಾಕಷ್ಟು ಪಳಗಿಸಿದ್ದಾರೆ ಕೂಡ.

‘ಎಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟ ನಿಮಗೆ?’ ಎಂದು ಕೇಳಿದರೆ ‘ನನಗೆ ನಟಿಸಲು ಇಷ್ಟ. ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಬೇಕು. ಒಂದಕ್ಕಿಂತ ಇನ್ನೊಂದು ಭಿನ್ನವಾಗಿರಬೇಕು. ನನ್ನನ್ನೂ ನನ್ನೊಳಗಿನ ಕಲಾವಿದೆಯನ್ನೂ ಆ ಪಾತ್ರಗಳು ಬೆಳೆಸುವಂತಿರಬೇಕು’ ಎನ್ನುವ ಅಪೇಕ್ಷಾ ಅವರಿಗೆ, ‘ಆಪ್ತಮಿತ್ರ’ ಸಿನಿಮಾದಲ್ಲಿ ಸೌಂದರ್ಯ ನಟಿಸಿದಂಥ ಪಾತ್ರಕ್ಕೆ ಒಮ್ಮೆಯಾದರೂ ಜೀವ ತುಂಬಬೇಕು ಎಂಬ ಆಸೆಯೂ ಇದೆ.

ತಾವು ಕಲಿತ ಫ್ಯಾಷನ್‌ ಡಿಸೈನಿಂಗ್‌ ಅನ್ನು ಈ ಕ್ಷೇತ್ರದಲ್ಲಿಯೇ ಬಳಕೆ ಮಾಡಿಕೊಳ್ಳಬೇಕು ಎಂಬ ಆಸೆ ಅವರದು. ಹಾಗಾಗಿ ತಮ್ಮ ಪಾತ್ರಗಳಿಗೆ ಅವರೇ ವಸ್ತ್ರವಿನ್ಯಾಸ ಮಾಡಿಕೊಳ್ಳುತ್ತಾರೆ.

ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರೂ ಅವರು ಕಿರುತೆರೆಗೆ ವಿದಾಯ ಹೇಳಿಲ್ಲ. ಇತ್ತೀಚೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

‘ಸೆಲೆಬ್ರಿಟಿ ಆಗಬೇಕು ಎಂಬ ಆಸೆ ಇರುವವರಿಗೆ ಒಮ್ಮೆ ಸಿನಿಮಾದಲ್ಲಿ ನಟಿಸಿದ ಮೇಲೆ ಮತ್ತೆ ಕಿರುತೆರೆಗೆ ಬರಬಾರದು ಎಂದೆಲ್ಲ ಇರುತ್ತದೆ. ಆದರೆ ನನಗೆ ಅಂಥ ಯಾವ ಆಸೆಯೂ ಇಲ್ಲ. ನನಗೆ ನಟಿಸುವುದು ಇಷ್ಟ. ಒಳ್ಳೆಯ ಅವಕಾಶ ಎಲ್ಲಿಯೇ ಸಿಕ್ಕರೂ ನಟಿಸುತ್ತೇನೆ’ ಎನ್ನುತ್ತಾರಾದರೂ ಕನ್ನಡ ಬಿಟ್ಟು ಬೇರೆ ಭಾಷೆಗಳಿಗೆ ಹೋಗಲು ಸಿದ್ಧರಿಲ್ಲ.

‘ಈಗಾಗಲೇ ತೆಲುಗು–ತಮಿಳು ಸಿನಿಮಾಗಳಿಗೆ ಅವಕಾಶ ಬಂದಿತ್ತು. ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಲು ಅವಕಾಶ ಸಿಕ್ಕಿತ್ತು. ಆದರೆ ಕನ್ನಡದಲ್ಲಿ ನಟಿಸುವ ಮಜಾ ಬೇರೆ ಕಡೆಗಳಲ್ಲಿ ಸಿಗುವುದಿಲ್ಲ. ಆದ್ದರಿಂದ ಒಲ್ಲೆ ಎಂದಿದ್ದೇನೆ. ಇಲ್ಲಿಯೇ ಇದ್ದು ಇನ್ನಷ್ಟು ಬೆಳೆಯುವುದು ನನ್ನ ಉದ್ದೇಶ’ ಎನ್ನುವ ಅಪೇಕ್ಷಾ ಅವರಿಗೆ ಸ್ವಂತ ನೆಲದಲ್ಲಿಯೇ ಬೇರು ಬಿಟ್ಟು ಚಿಗಿಯುವ ಛಲ–ಪ್ರತಿಭೆ ಎರಡೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT