ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಎದೆಯಾಳದ ಮೊರೆತ ಈ ‘ಚಾಂದಿನಿ’

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ  ಗಣನೀಯ. ಅನೇಕ ಮಹಿಳೆಯರು ತಮ್ಮದೇ ಆದ ಮ್ಯೂಸಿಕ್ ಬ್ಯಾಂಡ್‌ಗಳನ್ನು ಕಟ್ಟಿಕೊಂಡು ಕಾರ್ಯಕ್ರಮಗಳನ್ನೂ ನೀಡುತ್ತಿದ್ದಾರೆ.

‘ಚಾಂದಿನಿ’ ಎನ್ನುವ ಹೊಸ ಆಲ್ಬಂ ಮೂಲಕ ಸುಗಮಸಂಗೀತ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆ ಮಾಡಿದ್ದಾರೆ.

ಖ್ಯಾತ ಗಾಯಕಿ ಇಂದೂ  ವಿಶ್ವನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಇಪ್ಪತ್ತೈದು ಭಾವಗೀತೆಗಳನ್ನು ಒಳಗೊಂಡಿರುವ ಡಿವಿಡಿಯನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ.

‘ಚಾಂದಿನಿ’ ಹೆಸರಿನ ಆಲ್ಬಮ್ ಅನ್ನು ಹೃಷಿ ಆಡಿಯೊ ಹೊರತಂದಿದೆ. ಈ ಅಲ್ಬಂ ಭಾವಗೀತೆಗಳನ್ನು ಬರೆದವರು, ಸಂಗೀತ ಸಂಯೋಜನೆ, ಹಾಡುಗಾರಿಕೆ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿರುವುದು ವಿಶೇಷ.ಈ ಆಲ್ಬಂನ ಮುಖ್ಯ ಆಕರ್ಷಣೆ  ತೃತೀಯ ಲಿಂಗಿ, ಕವಯಿತ್ರಿ ಚಾಂದಿನಿ. ಅವರದ್ದೊಂದು ಕವಿತೆಯನ್ನು ಈ ಆಲ್ಬಂನಲ್ಲಿ ಬಳಸಿಕೊಳ್ಳಲಾಗಿದೆ. ‘ಚಾಂದಿನಿ ಅವರ ಹೆಸರಿನ ಕವಿತೆಯನ್ನೇ ಈ ಆಲ್ಬಂನಲ್ಲಿ ಬಳಸಿಕೊಂಡಿದ್ದೇವೆ. ಈ ರೀತಿಯ ಆಲ್ಬಂ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ತರಲಾಗಿದೆ. ಈ ಕಾರಣಕ್ಕಾಗಿಯೇ ಆಲ್ಬಂಗೆ ಚಾಂದಿನಿ ಎಂದೇ ಹೆಸರಿಟ್ಟಿದ್ದೇವೆ’ ಎನ್ನುತ್ತಾರೆ ಆಲ್ಬಂಕ್ಕೆ ಸಂಗೀತ ನಿರ್ದೇಶನ ಮಾಡಿರುವ  ಮತ್ತು ಈ ಪ್ರಯತ್ನದ ರೂವಾರಿಯೂ ಆದ ಇಂದೂ.

ಕನ್ನಡದ ಹಿರಿಯ ಹಾಗೂ ಹೊಸ ತಲೆಮಾರಿನ ಕವಯತ್ರಿಯರಾದ ಎಚ್.ಎಲ್.ಪುಷ್ಪಾ, ಮಾಲತಿ ಪಟ್ಟಣಶೆಟ್ಟಿ, ದೀಪಾ ಗಿರೀಶ್, ವನಮಾಲಾ ಸಂಪನ್ನಕುಮಾರ್, ಎಚ್.ಸಿ. ಭುವನೇಶ್ವರಿ, ನಿರ್ಮಲಾ ಎಲಿಗಾರ್, ಪದ್ಮಾ ಟಿ. ಚಿನ್ಮಯಿ, ಪದ್ಮಿನಿ, ದೀಪಾ, ನೂತನ್, ನಳಿನಾ, ನಂದಿನಿ ವಿಶ್ವನಾಥ್, ಜಯಶ್ರೀ ಕಂಬಾರ್, ಶಮಾ ನಂದಿಬೆಟ್ಟ, ಎಸ್.ಪಿ. ವಿಜಯಲಕ್ಷ್ಮೀ, ಶಾಂತಾ ಸನ್ಮತಿ ಕುಮಾರ್ ಅವರ ಹಾಡುಗಳು ಇದರಲ್ಲಿವೆ. ಲೇಖಕಿ ಕಮಲಾ ಹಂಪನಾ ಅವರ ಎಂಟು ಆಧುನಿಕ ವಚನಗಳೂ ಇದರಲ್ಲಿವೆ.

ಹೆಣ್ಣಿನ ಮನೋಲೋಕವನ್ನು, ಪ್ರೀತಿ, ತ್ಯಾಗವನ್ನು ಸಾರುವ ಈ ಕವಿತೆಗಳು, ಹೆಣ್ಣಿನ ಶಕ್ತಿ ಸ್ವರೂಪ ಮತ್ತು ರೂಪಕಗಳನ್ನು ಚಿತ್ರಿಸುವ ಹಾಡುಗಳೂ ಇದರಲ್ಲಿವೆ.

ಸುಗಮಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಾಯಕಿಯರಾದ ಸಂಗೀತಾ ಕಟ್ಟಿ, ಅರ್ಚನಾ ಉಡುಪ, ನಾಗಚಂದ್ರಿಕಾ ಭಟ್  ಕೆ.ಎಸ್. ಸುರೇಖಾ, ಶ್ರುತಿ ರಾವ್, ಅಲ್ಕಾ ಸಂದೀಪ್, ಕುಸುಮಾ ಜೈನ್, ಮಾಲಿನಿ ಕೇಶವ್, ಇಂದೂ ವಿಶ್ವನಾಥ್ ಹಾಡಿದ್ದಾರೆ.  ಹರ್ಷಿ ಆಡಿಯೊ ಸಂಸ್ಥೆ ಮಾಲೀಕರಾದ ಹೇಮಾ ಅರುಣ್ ಸಿಂಗ್ ಅವರು ಈ ಸಿಡಿಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 
ಸಂಪರ್ಕಕ್ಕೆ: 99164 82401 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT