ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿ ಕೆಟ್ಟೀತು ಜೋಕೆ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಜೋರಾಗಿ ಚೀರಿದಾಗ, ಶೀತವಾದಾಗ, ಬಿಡುವಿಲ್ಲದೆ ಮಾತನಾಡಿದಾಗ ಧ್ವನಿ ಗೊರಗೊರ ಅನ್ನುತ್ತದೆ. ಇದು ಗಮನಕ್ಕೆ  ಬಂದರೂ ಬಹುತೇಕರು ಕಡೆಗಣಿಸಿಬಿಡುತ್ತಾರೆ. ನಾವು ಧ್ವನಿಪೆಟ್ಟಿಗೆ ಆರೋಗ್ಯಕ್ಕೆ ಗಮನವನ್ನೇ ಕೊಡುವುದಿಲ್ಲ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ.

‘ಧ್ವನಿಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ’ ಎನ್ನುತ್ತಾರೆ ಎಸ್‌.ಆರ್‌.ಚಂದ್ರಶೇಖರ ವಾಕ್‌ ಮತ್ತು ಶ್ರವಣ ಸಂಸ್ಥೆಯ ತಾಂತ್ರಿಕ ನಿರ್ದೇಶಕ ರಂಗಸಾಯಿ. ‘ಕಾಳಜಿ ವಹಿಸುವುದು ಹೇಗೆ?’ ಎಂಬುದು ನಿಮ್ಮ ಮನದ ಪ್ರಶ್ನೆಯೇ. ನಾನೂ ಇದೇ ಪ್ರಶ್ನೆಯನ್ನು ಅವರೆದುರು ಇಟ್ಟೆ. ಆಗ ಅವರ ಕೊಟ್ಟ ಉತ್ತರ ಇದು...

‘ಧ್ವನಿಯ ಮಹತ್ವವನ್ನು ಜನರು ಅರಿತುಕೊಂಡಿಲ್ಲ. ಜೇನು ಕುಡಿದರೆ ಧ್ವನಿ ಸುಧಾರಿಸುತ್ತದೆ, ಐಸ್‌ಕ್ರೀಂ ತಿಂದರೆ ಧ್ವನಿ  ಹಾಳಾಗುತ್ತದೆ ಎಂದು ನಂಬಿರುವವರು ನಮ್ಮ ನಡುವೆ ಇದ್ದಾರೆ. ಆಹಾರ ಪದಾರ್ಥಗಳಲ್ಲಿ ಇರುವ ಕೆಲವು ಬ್ಯಾಕ್ಟೀರಿಯಾಗಳು ಧ್ವನಿಯ ಮೇಲೆ  ಪ್ರಭಾವ ಬೀರುತ್ತವೆ.

‘ವಿವಿಧ ವಯೋಮಾನದವರಲ್ಲಿ ಭಿನ್ನ ರೀತಿಯ ಧ್ವನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಧ್ವನಿ ಸರಿಯಿಲ್ಲ ಎನಿಸಿದಾಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲುವುದು ಸರಿಯಲ್ಲ. ಎಲ್ಲಾ ಬಗೆಯ ಧ್ವನಿ ಸಮಸ್ಯೆಗಳನ್ನು ಗುಣಪಡಿಸಲು ಸಾಧ್ಯವಿದೆ. ಆದರೆ ಮಾನಸಿಕ ಒತ್ತಡದಿಂದಾಗಿ ಮಧ್ಯವಯಸ್ಸಿನಲ್ಲಿ ಬರುವ ಸ್ಪಾಸ್ಟಿಕ್‌ ಡಿಸ್ಫೋನಿಯಾ (spastic dysphonia) ಎಂಬ ಸಮಸ್ಯೆಯನ್ನು ಮಾತ್ರ ಗುಣಪಡಿಸುವುದು ಕಷ್ಟ.

‘ಧ್ವನಿಯ ರಕ್ಷಣೆಗೆ ವೈದ್ಯರನ್ನು ಭೇಟಿಯಾಗಬೇಕು. ಅವರು ಹಾನಿಯಾದ ಧ್ವನಿಯನ್ನು ಸರಿಮಾಡುವ ಜೊತೆಗೆ ಸಹಜವಾಗಿರುವ ಧ್ವನಿಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದಕ್ಕೆ ಸಲಹೆ ಕೊಡುತ್ತಾರೆ. ಮಧುರ ಕಂಠ ಹೊಂದಿರುವ ಅನೇಕ ಗಾಯಕರು ನಿಯಮಿತವಾಗಿ ವೈದ್ಯರ ಸಲಹೆ ಪಡೆಯುತ್ತಾರೆ.

ಅತಿಯಾದ ಮೊಬೈಲ್‌ ಫೋನ್‌ ಕಿವಿಯ ಮೇಲೆ ಮಾತ್ರವಲ್ಲ, ಧ್ವನಿಯ ಮೇಲೆಯೂ ಪರಿಣಾಮ ಬೀರುತ್ತಿದೆ. ಹೆಚ್ಚು ನಡೆದಾಗ ಸುಸ್ತಾಗುತ್ತದೆ ಎಂದು ನಮಗೆ ತಿಳಿಯುತ್ತದೆ. ಅದರೆ, ಮೊಬೈಲ್‌ನಲ್ಲಿ  ಹೆಚ್ಚು ಮಾತನಾಡಿದರೆ ಧ್ವನಿಗೆ ತೊಂದರೆಯಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬರದಿರುವುದು ವಿಪರ್ಯಾಸ. ಹೆಚ್ಚು ಸಮಯ ಉಪವಾಸವಿರುವುದರಿಂದಲೂ   ಧ್ವನಿಗೆ ತೊಂದರೆ ಆಗುತ್ತದೆ’.
ಸಂಪರ್ಕಕ್ಕೆ: 99029 48970 

ಮಧುರ ಕಂಠ ನಿಮಗೆ ಬೇಕೆ?
*ಟೀ, ಕಾಫಿ, ಆಲ್ಕೋಹಾಲ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ
*ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಿರಿ
*ನಿಧಾನವಾಗಿ ಮಾತನಾಡಿ
*ಮಾತನಾಡುವಾಗ ಸಾಮಾನ್ಯ ರೀತಿಯಲ್ಲಿಯೇ ಉಸಿರಾಡಿ. ಏದುಸಿರು, ಉಸಿರು ಕಟ್ಟುವುದು ಬೇಡ
*ಧೂಮಪಾನದಿಂದ ದೂರವಿರಿ
* ಕರಿದ ಪದಾರ್ಥಗಳ ಸೇವನೆಗೆ ಮಿತಿ ಇರಲಿ.
*ಊಟ ಮಾಡಿದ ತಕ್ಷಣ ಮಲಗಬೇಡಿ. ಅಸಿಡಿಟಿ ಆದೀತು. ಧ್ವನಿಪೆಟ್ಟಿಗೆಯನ್ನು ಇದೂ ಹಾಳುಮಾಡುತ್ತದ
*ನಿಮ್ಮ ಮಾತು ಕೇಳುವವರ ಸಂಖ್ಯೆ ದೊಡ್ಡದಿದೆ ಎಂದು ಕಿರುಚಬೇಡಿ. ಮೈಕ್ರೊಫೋನ್ ಬಳಸಿ

ಸಾಮರ್ಥ್ಯದ ಅರಿವಿರಲಿ
ಎಲ್ಲರ ಧ್ವನಿಪೆಟ್ಟಿಗೆಗೂ ನಿರ್ದಿಷ್ಟ ಸಾಮರ್ಥ್ಯ ಇರುತ್ತದೆ. ಅದನ್ನು ಮೀರಿ ಬಳಸಿದರೆ, ಧ್ವನಿಯಲ್ಲಿ ಸಮಸ್ಯೆ ಎದುರಾಗುತ್ತದೆ. ವೃತ್ತಿಪರ ಗಾಯಕರು, ಶಿಕ್ಷಕರು, ಆರ್‌.ಜೆಗಳು, ರಂಗಭೂಮಿ ಕಲಾವಿದರು, ಭಾಷಣಕಾರರು ಹಾಗೂ ಟೆಲಿಕಾಲರ್‌ಗಳಿಗೆ ಅವರ ಧ್ವನಿಯೇ ಬಂಡವಾಳ. ಈ ಸಮೂಹದಲ್ಲಿಯೇ ಧ್ವನಿಪೆಟ್ಟಿಗೆ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿವೆ.
 –ಡಾ.ಅನಿತಾ ರೆಡ್ಡಿ, ಮುಖ್ಯಸ್ಥೆ, ಸ್ಪೀಚ್ ಸೈನ್ಸ್ ಲ್ಯಾಬ್

ಜೋರಾಗಿ ಕೂಗಿದರೆ ಗಂಟಲಲ್ಲಿ ಗುಳ್ಳೆ ಆಗುತ್ತೆ

‘ನಾವು ಜೋರಾಗಿ ಮಾತನಾಡಿದಾಗ ಅಥವಾ ಕೂಗಿದಾಗ ಗಂಟಲು ಕಟ್ಟಿಕೊಂಡಂತೆ ಆಗುತ್ತೆ’ ಎಂಬುದು ಅನೇಕರ ದೂರು. ಇದೇ ಆಸ್ಪತ್ರೆಯ ವೈದ್ಯೆ ಡಾ.ಬಿ.ಎಸ್.ಪ್ರೇಮಲತಾ ಅವರ ಎದುರು ಈ ವಿಷಯ ಪ್ರಸ್ತಾಪ ಮಾಡಿದೆ. ಅವರು ನನ್ನ ಸಂದೇಹ ಪರಿಹರಿಸಿದರು.

‘ಜೋರಾಗಿ ಕೂಗುವುದರಿಂದ ಧ್ವನಿ ಪೆಟ್ಟಿಗೆ ಮೇಲೆ ಒತ್ತಡ ಹೆಚ್ಚಾಗುತ್ತದೆ. ಧ್ವನಿ ಪೆಟ್ಟಿಗೆಯು ಒಂದು ಹಂತದವರೆಗೆ ಮಾತ್ರ ಒತ್ತಡ ತಡೆದುಕೊಳ್ಳಬಲ್ಲದು. ಇದು ಮಿತಿ ಮೀರಿದರೆ, ಧ್ವನಿ ಪೆಟ್ಟಿಗೆಯ ಒಳಗೆ ಸಣ್ಣದೊಂದು ಗುಳ್ಳೆ ಮೂಡುತ್ತದೆ. ಗುಳ್ಳೆ ದೊಡ್ಡದಾದಂತೆ ಧ್ವನಿ ಸಣ್ಣದಾಗುತ್ತದೆ. ಗುಳ್ಳೆ ಒಡೆದು ರಕ್ತವೂ ಬರಬಹುದು.

‘ಚೀರಾಡುವ ಮಕ್ಕಳಲ್ಲಿ ಈ ಸಮಸ್ಯೆ ಸಾಮಾನ್ಯ. ಕೆಲ ಮಕ್ಕಳಲ್ಲಿ ಇದೇ ಕಾರಣಕ್ಕೆ ಧ್ವನಿಪೆಟ್ಟಿಗೆ ದುರ್ಬಲವಾಗುತ್ತದೆ. ನಾವು ಮಕ್ಕಳಿಗೆ ಥೆರಪಿ (ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ) ನೀಡುವ ಮೂಲಕ ಗುಣಪಡಿಸುತ್ತೇವೆ.

‘ಊಟ ಮಾಡಿದ ತಕ್ಷಣ ಮಲಗುವುದು ಧ್ವನಿಪೆಟ್ಟಿಗೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಆ್ಯಸಿಡಿಟಿ ಸಮಸ್ಯೆ ಉಂಟಾಗಿ ಧ್ವನಿ ಹಾಳಾಗುತ್ತದೆ. ಮಕ್ಕಳಿಗಿಂತ ಈ ಸಮಸ್ಯೆ ದೊಡ್ಡವರಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

‘ಕೆಲವರು ಅನಗತ್ಯವಾಗಿ ಧ್ವನಿಯೇ ಇಲ್ಲದವರಂತೆ ವರ್ತಿಸುತ್ತಾರೆ. ಆಪ್ತಸಮಾಲೋಚನೆ ಮೂಲಕ ಈ ಸಮಸ್ಯೆಗೆ ಪರಿಹಾರ ಸಾಧ್ಯ’.

- ಡಾ.ಬಿ.ಎಸ್.ಪ್ರೇಮಲತಾ

ವಿಶ್ವ ಧ್ವನಿ ದಿನದ ಅಂಗವಾಗಿ ‘ಮೈ ವಾಯ್ಸ್‌, ಮೈ ಲೈಫ್’ ವಿಚಾರ ಸಂಕಿರಣ: ಅತಿಥಿ– ಎನ್.ಪಿ. ನಟರಾಜ, ಎಚ್.ಸಿ. ರಮೇಶ್, ಅಧ್ಯಕ್ಷತೆ– ಎಂ.ಎಸ್. ವೆಂಕಟೇಶ್, ಆಯೋಜನೆ/ ಸ್ಥಳ: ಕೆ.ಎಸ್‌. ಭ್ರಮರಾಂಭ ಮತ್ತು ಕೆ.ಎಸ್‌. ಶ್ರೀರಾಮ ಸಭಾಂಗಣ, ಚಂದ್ರಶೇಖರ್ ಇನ್‌ಸ್ಟಿಟ್ಯೂಟ್‌ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಲಿಂಗರಾಜಪುರ, ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT