ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ಹುಟ್ಟಿಸಿದೆ ಜಿಎಸ್‌ಟಿ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಸಭೆಯಲ್ಲಿ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಅನುಮೋದನೆಗೊಂಡಿದ್ದರೂ ಕಾರ್ಯರೂಪಕ್ಕೆ ಬರಲು ಜುಲೈ 1ರವರೆಗೆ ಕಾಯಬೇಕಿದೆ.

ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಯಾಗುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಸೇವಾ ತೆರಿಗೆ, ಸೆಸ್‌ ಹಾಗೂ ಸರ್‌ಚಾರ್ಜ್‌ಗಳು ಒಂದೇ ತೆರಿಗೆ ವ್ಯಾಪ್ತಿಯಲ್ಲಿ ಬರಲಿವೆ. ಇದರಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಲಾಭ ಆಗಲಿದೆ ಎನ್ನಲಾಗುತ್ತಿದೆ.

ದಶಕಗಳ ನಂತರ ತೆರಿಗೆ ವಿಷಯದಲ್ಲಿ ಆದ ಅತಿ ದೊಡ್ಡ ಸುಧಾರಣೆ ಇದು ಎಂದು ಬಣ್ಣಿಸಿರುವ ಸಿಬಿಆರ್‌ಇ ಸಂಸ್ಥೆಯ ಆಗ್ನೇಯ ಏಷ್ಯಾ ವಿಭಾಗದ ಅಧ್ಯಕ್ಷ ಅನ್ಶುಮಾನ್‌, ‘ಜಿಎಸ್‌ಟಿ ಕಾಯ್ದೆ ಅಂಗೀಕಾರವಾದರೆ ನಮ್ಮದು ಏಕೀಕೃತ ಮಾರುಕಟ್ಟೆ ಆಗಲಿದೆ. ಇನ್ನು ಮುಂದೆ ತೆರಿಗೆ ನೀತಿ ಸರಳಗೊಳ್ಳಲಿದೆ, ಉದ್ಯಮ ನಡೆಸುವ ಕೆಲಸ ಸುಲಭಗೊಳ್ಳಲಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಉತ್ತೇಜನ ಸಿಗಲಿದೆ. ಹೀಗಾಗಿ ಭಾರತದ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಲಿದೆ’ ಎಂದಿದ್ದಾರೆ.

ಈಗಿನ ತೆರಿಗೆ ನಿಯಮದ ಪ್ರಕಾರ ಬೇರೆಬೇರೆ ರೀತಿಯ ತೆರಿಗೆ ಕಟ್ಟಬೇಕಿತ್ತು. ವಾಣಿಜ್ಯೋದ್ದೇಶ ಹಾಗೂ ಕೈಗಾರಿಕೆ ಘಟಕಗಳಿಗೆ ಬಾಡಿಗೆಗೆ ನೀಡಲಾದ ಕಟ್ಟಡಗಳ ಮೇಲೆ ಸೇವಾ ತೆರಿಗೆಯನ್ನು ಹಾಕಲಾಗುತ್ತಿತ್ತು.  ಇನ್ನು ಮುಂದೆ ಸೇವಾ ತೆರಿಗೆ ಹಾಗೂ ವ್ಯಾಟ್‌ ಕೂಡ ಜಿಎಸ್‌ಟಿ ನಿಯಮದಡಿ ಬರಲಿದ್ದು ಸ್ಟಾಂಪ್‌ಡ್ಯೂಟಿ ಶುಲ್ಕವನ್ನು ಕಟ್ಟಬೇಕಿಲ್ಲ ಎನ್ನಲಾಗುತ್ತಿದೆ.

ಜಿಎಸ್‌ಟಿ ನಿಯಮದ ಪ್ರಕಾರ ಈ ಎಲ್ಲವನ್ನೂ ಒಂದೇ ತೆರಿಗೆ ವ್ಯಾಪ್ತಿಯಲ್ಲಿ ಪಾವತಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯಲ್ಲಿ ತೆರಿಗೆ ಪಾವತಿಸುವ ನೀತಿಯಿಂದ ಹೊರಬಂದು ಒಟ್ಟಾರೆ ಒಂದೇ ಬಾರಿಗೆ ತೆರಿಗೆ ಪಾವತಿಸುವಂತಾಗು
ತ್ತದೆ. ಇದು ಅನುಕೂಲ ಎನ್ನುವುದು ಅನೇಕರ ಅಭಿಪ್ರಾಯ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತದೆ.

ರಿಯಲ್‌ ಎಸ್ಟೇಟ್‌ನಲ್ಲಿ ಲಾಭ?
ಜಿಎಸ್‌ಟಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಲಾಭ ದಾಯಕವೇ ಎಂಬ ಕುರಿತು ತಜ್ಞರಲ್ಲಿ ಇನ್ನೂ ಸಂದೇಹ ಉಳಿದುಕೊಂಡಿದೆ.
‘ಜಿಎಸ್‌ಟಿ ಕುರಿತು ಇನ್ನೂ ಚರ್ಚೆ ಮುಂದುವರೆದಿದೆ. ಅದು ಜಾರಿಯಾಗುತ್ತದೆಯೇ ಎನ್ನುವ ಬಗ್ಗೆ ಸಂಶಯವಿದೆ. ಒಂದೊಮ್ಮೆ ಜಾರಿಯಾದರೂ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಭಾರಿ ಲಾಭ ಆಗುತ್ತದೆ ಎನಿಸುವುದಿಲ್ಲ. ವ್ಯಾಟ್‌, ಸರ್ವಿಸ್‌ ಟ್ಯಾಕ್ಸ್‌ ಇತ್ಯಾದಿಗಳನ್ನು ಕಟ್ಟುವ ಬದಲು, ಒಂದೇ ತೆರಿಗೆ ಪಾವತಿಸುವುದು ಅನುಕೂಲ ಎನ್ನುವುದು ಬಿಟ್ಟರೆ ಇನ್ಯಾವ ರೀತಿಯಲ್ಲಿಯೂ ಅಭಿವೃದ್ಧಿ ಗೋಚರಿಸುತ್ತಿಲ್ಲ. ಹೊಸ ಜಿಎಸ್‌ಟಿ ಕಾಯ್ದೆ ಪ್ರಕಾರ ತೆರಿಗೆ ಪ್ರಮಾಣ ಶೇ  18 ಇರಲಿದೆ. ಈಗಿನ ತೆರಿಗೆ ಪ್ರಮಾಣಕ್ಕಿಂತ (ಶೇ 15 ಇದೆ) ಇದು ಹೆಚ್ಚೇ ಇದೆ. ಇದರಿಂದ ಗ್ರಾಹಕರಿಗೆ ಹಾಗೂ ಉದ್ಯಮಿಗಳಿಗೆ ಯಾವ ರೀತಿಯಲ್ಲಿಯೂ ಸಹಾಯ ವಾಗುವುದಿಲ್ಲ’ ಎನ್ನುತ್ತಾರೆ ವಿ2 ಹೋಲ್ಡಿಂಗ್ಸ್‌ನ ಪಿಎಲ್‌ವಿ ರೆಡ್ಡಿ.

‘ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಸರ್ಕಾರ ಜಿಎಸ್‌ಟಿ ಕಾಯಿದೆಯ ಬಗೆಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ತೆರಿಗೆ ದರ ಶೇ 18 ಆಗಲಿದೆ ಎನ್ನಲಾಗುತ್ತದೆ. ಆದರೂ ಅದರಲ್ಲೂ ಸ್ಪಷ್ಟತೆ ಇಲ್ಲ. ಹೀಗಾಗಿ ಜುಲೈ 1ರ ನಂತರ ಅಂದರೆ ಕಾಯಿದೆ ಜಾರಿಯಾದ ಬಳಿಕವೇ ಸ್ಪಷ್ಟತೆ ಸಿಗಲಿದೆ. ಈಗಾಗಲೇ ಅನೇಕ ಕಂಪೆನಿಗಳು ಶೇ 12–15ವರೆಗೆ ತೆರಿಗೆ ಕಟ್ಟುತ್ತಿವೆ. ಬೇರೆ ಬೇರೆ ರೀತಿಯ ಟ್ಯಾಕ್ಸ್‌ ಕಟ್ಟುವುದರಿಂದ ಮುಕ್ತಿ ದೊರೆಯುತ್ತದೆ ವಿನಾ ಅಂಥ ದೊಡ್ಡ ಲಾಭವೇನೂ ಕಂಪೆನಿಗಳಿಗೆ ಆಗುವುದಿಲ್ಲ. ಗ್ರಾಹಕರಿಗಂತೂ ಯಾವುದೇ ರೀತಿಯಲ್ಲಿ ಲಾಭ ಆಗುವುದಿಲ್ಲ’ ಎನ್ನುತ್ತಾರೆ ಯುನಿಶೈರ್‌ ಕಂಪೆನಿಯ ಶೈಲಜಾ.

‘ಜಿಎಸ್‌ಟಿಯಿಂದ ಒಂದು ಮಟ್ಟಿಗೆ ಸಹಾಯವಾಗುತ್ತದೆ ಎನಿಸುತ್ತದೆ. ವ್ಯಾಟ್‌, ಸರ್ವಿಸ್‌ ಟ್ಯಾಕ್ಸ್‌, ಇನ್ನೊಂದು ಮತ್ತೊಂದು ಎಂದು ಕಟ್ಟುವ ಜಂಜಾಟ ಇನ್ನು ಮುಂದೆ ಇರುವುದಿಲ್ಲ. ಆದರೆ ಈ ಕಾಯಿದೆ ಬಂದ ನಂತರ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಲಾಭವಾಗುತ್ತದೆ, ಜನರಿಗೆ ಕಡಿಮೆ ಬೆಲೆಯಲ್ಲಿ ಮನೆ ಸಿಗುತ್ತದೆ ಎಂಬುದು ಬರಿ ಊಹೆ ಮಾತ್ರ’ ಎಂಬುದು ಸ್ಫಟಿಕ ಡೆವಲಪರ್ಸ್‌ನ ಮಂದಪ್ಪ ಅವರ ಅಭಿಪ್ರಾಯ.
ಕೆಲವು ವಿಶ್ಲೇಷಣೆಗಳ ಪ್ರಕಾರ ಜಿಎಸ್‌ಟಿ ಕಾಯಿದೆ ಬಂದ ನಂತರ ಅಂದರೆ ಜುಲೈ ಒಂದರ ನಂತರ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬೆಲೆ ಹೆಚ್ಚುವ ಸಾಧ್ಯತೆಯೂ ಇದೆ. ನೋಟು ಅಮಾನ್ಯೀಕರಣದಿಂದಾಗಿ ಮಾರಾಟ ಪ್ರಕ್ರಿಯೆಯಲ್ಲಿ ತೀವ್ರ ಕುಸಿತ ಕಂಡಿದ್ದ ರಿಯಲ್‌ ಎಸ್ಟೇಟ್‌ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಸದ್ಯದಲ್ಲೇ ಬೆಲೆ ಕಡಿಮೆ ಆಗುವ ಸಾಧ್ಯತೆಗಳು ಇಲ್ಲವೇ ಇಲ್ಲ ಎಂಬ ಮಾತು ಸಹ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT