ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಮನೆ ತಣ್ಣಗಿಡೋದು ಹೇಗೆ?

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಿರು ಬೇಸಿಗೆ ಶುರುವಾಗಿದೆ. ಮನೆ ಒಳಗೆ ಮತ್ತು ಹೊರಗೆ ನಿಲ್ಲುವುದೇ ಕಷ್ಟ. ನಡೆದಾಡುವುದು ಬರೀ ಬೆವರಿಳಿಸುವ ಮಾತು. ಮನೆಯಲ್ಲೇ ಇರೋಣ ಎಂದರೆ ಗೋಡೆಗಳ ಬಿಸಿ ಮೈ ತಾಕುತ್ತದೆ. ಫ್ಯಾನ್‌ ಗಾಳಿಯೂ ಬಿಸಿ. ಏರ್‌ಕೂಲರ್‌ಗಳಿಗೆ ಇಡೀ ಮನೆಯನ್ನು ತಣ್ಣಗಿಡುವಷ್ಟು ಸಾಮರ್ಥ್ಯವಿಲ್ಲ. ಬಿಸಿ ಗಾಳಿಯೇ ಬೀಸುತ್ತಿರುವಾಗ ತಣ್ಣನೆಯ ಗಾಳಿಯಾದರೂ ಎಲ್ಲಿಂದ ಬಂದೀತು? ಇಂಥ ಸನ್ನಿವೇಶದಲ್ಲಿ ಮನೆಯನ್ನು ತಣ್ಣಗಿಡೋದಾದರೂ ಹೇಗೆ ಎಂಬುದು ನಗರದ ಬಹುತೇಕರ ಪ್ರಶ್ನೆ.

ಮಹಡಿ ಮನೆಗಳಿರುವ ಕಡೆ ಕೆಳಗಿನ ಮನೆಯವರಿಗೆ ತಂಪು ಅನುಭವ. ಮೇಲಿನ ಮನೆಯವರಿಗೆ ರಾತ್ರಿಯಾದರೂ ಸುಡುವ ಗೋಡೆ–ನೆಲ. ಗಾಢ ನಿದ್ರೆಗೆ ಸಲ್ಲುವ ಜಾವಗಳಲ್ಲಿ ಬೀಸುವ ತಂಗಾಳಿ ಅನುಭವಕ್ಕೆ ಬರುವುದೇ ಇಲ್ಲ! ಇವೆಲ್ಲ, ಸ್ವಂತಕ್ಕೋ, ಬಾಡಿಗೆಗೋ ಒಂದು ಸೂರು ಉಳ್ಳವರ ಮಾತು. ಆದರೆ ಸೂರೇ ಇಲ್ಲದವರಿಗೆ ಬೇಸಿಗೆ ಒಂದು ಸಮಸ್ಯೆಯೇ ಅಲ್ಲ ಎಂಬ ಮಾತನ್ನೂ ಒಪ್ಪಲೇಬೇಕು.

ಕಿಟಕಿ –ಬಾಗಿಲು: ಹಗಲು–ರಾತ್ರಿ ಮನೆಗೆ ಗಾಳಿ ಬರುವುದೇ ಮನೆಯ ಕಿಟಕಿ, ಬಾಗಿಲುಗಳಿಂದ. ಹೀಗಾಗಿ ಅವುಗಳನ್ನು ಯಾವಾಗ ತೆರೆದಿರಬೇಕು? ಎಷ್ಟು ತೆರೆದಿರಬೇಕು? ಪರದೆಗಳಿಂದ ಹೇಗೆ ಮುಚ್ಚಿರಬೇಕು ಎಂಬುದು ಮನೆಯ ಉಷ್ಣಾಂಶವನ್ನು ನಿರ್ಧರಿಸುತ್ತದೆ.
ಬೆಳಗಿನ ಜಾವದಿಂದ ಬೆಳಕಾಗುವವರೆಗೆ ಬೀಸುವ ತಣ್ಣನೆಯ ಗಾಳಿ ಮನೆಯಲ್ಲಿ ಸುಳಿದಾಡಬೇಕೆಂದರೆ, ರಾತ್ರಿ ಮಲಗುವ ಮುಂಚೆಯೇ ಕಿಟಕಿಗಳನ್ನು ತೆರೆದಿಡಬೇಕು. ಮುಂಜಾವಿನ ಸವಿನಿದ್ರೆಗೊಂದು ಸೊಗಸು ಕೂಡ ತಂಗಾಳಿಯಿಂದಲೇ ದೊರಕುತ್ತದೆ. ನೇರವಾಗಿ ಸೂರ್ಯನ ಕಿರಣಗಳು ಮನೆಗೆ ಬೀಳುವ ದಿಕ್ಕಿನಲ್ಲಿ ಕಿಟಕಿ, ಬಾಗಿಲುಗಳಿದ್ದರೆ ಅವುಗಳಿಗೆ ತೆಳು ಪರದೆಗಳನ್ನು ಅಳವಡಿಸಬೇಕು. ಬಿಸಿ ಗಾಳಿ ಬರುವ ಕಿಟಕಿಗಳಿಗೆ ದಪ್ಪನೆಯ ಪರದೆಗಳನ್ನು ಅಳವಡಿಸಬೇಕು.

ಫ್ಯಾನ್‌ ಕೂಲರ್‌!: ಕೂಲರ್‌ಗಳು ಮಾತ್ರ ವಾತಾವರಣವನ್ನು ತಂಪು ಮಾಡುತ್ತವೆ ಎಂಬುದು ನಂಬಿಕೆ ಅಷ್ಟೆ. ನಿಲ್ಲಿಸಿದ ಫ್ಯಾನ್‌ ಮುಂದೆ, ಸಮೀಪದಲ್ಲಿ ಮಂಜು ತುಂಬಿದ ಬಟ್ಟಲನ್ನು ಇಡುವ  ಮೂಲಕವೂ ತಣ್ಣನೆಯ ಗಾಳಿಯನ್ನು ಮನೆಯಲ್ಲಿ ಸೃಷ್ಟಿಸಲು ಸಾಧ್ಯ.

ಹಾಸಿಗೆಯೂ ಮುಖ್ಯ: ಕೊಠಡಿಗಳನ್ನು ತಂಪಾಗಿಸುವುದು ಎಂದರೆ, ಕೂಲರ್‌, ಫ್ಯಾನ್‌ಗಳನ್ನು ಬಳಸುವುದು ಎಂದಷ್ಟೇ ಅರ್ಥವಲ್ಲ. ಬದಲಿಗೆ ಹಾಸಿಗೆ, ತಲೆದಿಂಬು, ಹೊದಿಕೆಗಳನ್ನು ವಾತಾವರಣಕ್ಕೆ ತಕ್ಕಂತೆ ಬದಲಾಯಿಸುವುದು ಎಂದೂ ಅರ್ಥ. ಹತ್ತಿಯಿಂದ ತಯಾರಿಸಿದ ಬೆಡ್‌ಶೀಟ್‌, ಸರಾಗವಾಗಿ ಗಾಳಿ ಆಡಲು ಅವಕಾಶವಿರುವಂತೆ ನಿರ್ಮಿಸಿದ ತಲೆದಿಂಬುಗಳನ್ನು ಬಳಸುವುದರಿಂದಲೂ ಉಷ್ಣಾಂಶವನ್ನು ನಿರ್ವಹಣೆ ಮಾಡಬಹುದು ಎನ್ನುತ್ತಾರೆ ಗಾಂಧಿನಗರದ ಗೃಹಿಣಿ ಶೀಲಾ.

ಗಿಡ ನೆಡಿ: ಮನೆಯನ್ನು ತಂಪಾಗಿಡುವ ಈ ಎಲ್ಲ ಪ್ರಯತ್ನಗಳೂ ಕಷ್ಟಕರ ಎನ್ನಿಸುವುದಾದರೆ, ಇಂದೇ ಮನೆಯ ಮುಂದೆ ಒಂದು ಗಿಡ ನೆಡಿ ಎಂಬುದು ನಾಣ್ಣುಡಿಯಂತಾಗಿದೆ!

ಮರಗಳಿರುವ ಮನೆಗಳು ಸದಾ ನೆರಳಿನಲ್ಲಿರುತ್ತವೆ. ತಂಪಾಗಿರುತ್ತದೆ. ಮರಗಳ ನೆರಳಿನ ಆಶ್ರಯವಿಲ್ಲದ ಮನೆಗಳು ಬಳಲುತ್ತವೆ. ಮುಂದಿನ ವರ್ಷ ಬಳಲಬಾರದು ಎನ್ನುವವರು ಈಗಲೇ ಗಿಡ ನೆಡಬಹುದು.  

ದೇಹದ ಉಷ್ಣಾಂಶ ಗಮನಿಸಿ!
ಬೇಸಿಗೆಯಲ್ಲಿ ಬಹುತೇಕರು ಮನೆ, ಕೊಠಡಿಗಳ ಉಷ್ಣಾಂಶವನ್ನು ಗಮನಿಸಿ, ಅದನ್ನು ತಂಪು ಮಾಡುವ ಯತ್ನದಲ್ಲಿರುತ್ತಾರೆ. ಅದು ಪೂರ್ಣ ಸರಿಯಲ್ಲ. ಏಕೆಂದರೆ, ವಾತಾವರಣದ ಉಷ್ಣಾಂಶವು ದೇಹದ ಉಷ್ಣಾಂಶವನ್ನು ಏರುಪೇರು ಮಾಡುವುದರಿಂದ, ಆ ಕಡೆಗೂ ಗಮನ ಹರಿಸಬೇಕು.

ಬೇಸಿಗೆ ವೇಳೆಯಲ್ಲಿ ಅತಿ ಹೆಚ್ಚು ನೀರು ಕುಡಿಯಬೇಕು. ಏಕೆಂದರೆ, ನೀರಿನ ಅಂಶವು ದೇಹದಿಂದ ಬೆವರಿನ ಮೂಲಕವೇ ಹೆಚ್ಚು ಹೊರಗೆ ಹೋಗುತ್ತದೆ. ಮೂತ್ರಕೋಶಗಳ ಕಾರ್ಯ ಕಡಿಮೆಯಾಗುತ್ತದೆ. ಮೂತ್ರಪಿಂಡಗಳಲ್ಲಿ ಕಲ್ಲುಗಳೂ ರೂಪುಗೊಳ್ಳುವ ಅಪಾಯವಿರುತ್ತದೆ ಎನ್ನುತ್ತಾರೆ ವೈದ್ಯ ಡಾ.ಎಂ.ಲಿಂಗರಾಜ. ದಿನದಲ್ಲಿ ಹಲವು ಬಾರಿ. ಮುಖ, ಕತ್ತು, ತೋಳು, ಕಂಕುಳು ಸೇರಿದಂತೆ ದೇಹದ ಹಲವೆಡೆ ತಣ್ಣನೆಯ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಅದು ಉಷ್ಣಾಂಶವನ್ನು ಸಮತೋಲಿತ ಸ್ಥಿತಿಯಲ್ಲಿಡುತ್ತದೆ. ಹೀಗಾಗಿ ಮನೆಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇರಬಾರದು. ಮಕ್ಕಳು ಮತ್ತು ವೃದ್ಧರಲ್ಲಿ ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದರು.

* ಸನ್‌ಸ್ಟ್ರೋಕ್‌, ನಿರ್ಜಲೀಕರಣ ಸಮಸ್ಯೆಗಳನ್ನು ಎದುರಿಸಬೇಕೆಂದರೆ ಅತಿ ಹೆಚ್ಚು ನೀರು ಸೇವಿಸಬೇಕು. ಬಿಸಿಲಿನಲ್ಲಿ ಹೆಚ್ಚು ನಡೆಯಬಾರದು.
-ಡಾ.ಎಂ.ಲಿಂಗರಾಜ್‌, ಫಿಜಿಶಿಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT