ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಯಾಬಜಾರ್‌’ ಜಾದೂಗೆ ಅರವತ್ತು!

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನೂರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಚಿತ್ರರಂಗದ ಅತ್ಯುತ್ತಮ ಕಲಾಕೃತಿಗಳಲ್ಲೊಂದು ತೆಲುಗಿನ ‘ಮಾಯಾಬಜಾರ್’. ಈ ಚಿತ್ರ ರಜತಪರದೆಗೆ ಬಂದು ಆರು ದಶಕಗಳೇ ಕಳೆದರೂ ಭಾರತೀಯ ಚಿತ್ರರಂಗದ ವಿಶೇಷಗಳನ್ನು ಪ್ರಸ್ತಾಪಿಸುವಾಗ ‘ಮಾಯಾಬಜಾರ್’ ಇಲ್ಲದೇ ಅದು ಮುಗಿಯುವುದೇ ಇಲ್ಲ.

ಶತಮಾನ ಕಂಡ ಭಾರತ ಚಿತ್ರರಂಗದಲ್ಲಿ ಶ್ರೇಷ್ಠ ಚಿತ್ರಗಳ ಆಯ್ಕೆಗಾಗಿ ‘ಸಿ.ಎನ್.ಎನ್. – ಐ.ಬಿ.ಎನ್.’ ನಡೆಸಿದ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದದ್ದು ಇದೇ ‘ಮಾಯಾಬಜಾರ್’.

ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ‘ಮಾಯಾಬಜಾರ್’ ಕನ್ನಡ ಭಾಷೆಗೆ ಡಬ್ ಆದ ಕೊನೆಯ ಚಿತ್ರ ಕೂಡ.

‘ಮಾಯಾಬಜಾರ್’  ಹಲವು ಹತ್ತು ವೈಶಿಷ್ಟ್ಯಗಳನ್ನು ತನ್ನಲ್ಲಿಟ್ಟುಕೊಂಡು ಈಗಲೂ ಚಿತ್ರರಸಿಕರ ಆಕರ್ಷಣೆ ಉಳಿಸಿಕೊಂಡಿರುವ ಸಿನಿಮಾ. ಇದು ಭಾರತೀಯರಲ್ಲಿ ಮನೆಮಾತಾಗಿರುವ ‘ಮಹಾಭಾರತ’ ಕಥನವನ್ನು ಆಧರಿಸಿದ ಚಿತ್ರ. ಆದರೆ ಈ ಚಿತ್ರದಲ್ಲಿ ಪಾಂಡವರು ಕಾಣಿಸಿಕೊಳ್ಳುವುದೇ ಇಲ್ಲ. ಅಭಿಮನ್ಯು–ಶಶಿರೇಖಾ ಪ್ರಣಯ ಪ್ರಸಂಗದ ಕಥೆಯನ್ನು ಹೆಣೆದದ್ದು ಹೆಸರಾಂತ ಕಥೆಗಾರ ಪಿಂಗಾಲಿ ನಾಗೇಂದ್ರರಾವ್. ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದು ಆಗಿನ ಖ್ಯಾತ ನಿರ್ದೇಶಕ ಕೆ.ವಿ. ರೆಡ್ಡಿ. ದಕ್ಷಿಣ ಭಾರತದ ಪ್ರಸಿದ್ಧ ಚಿತ್ರ ತಯಾರಿಕಾ ಸಂಸ್ಥೆ ‘ವಿಜಯಾ ಪ್ರೊಡಕ್ಷನ್‌’ಗಾಗಿ ಈ ಚಿತ್ರವನ್ನು ನಿರ್ಮಿಸಿದವರು ಬಿ. ನಾಗಿರೆಡ್ಡಿ ಹಾಗೂ ಚಕ್ರಪಾಣಿ. ಆ ಕಾಲಕ್ಕೆ ಅತಿ ಅದ್ದೂರಿ ಚಿತ್ರವೆಂಬ ವಿಶೇಷತೆ ಗಳಿಸಿದ್ದ ‘ಮಾಯಾಬಜಾರ್’ಗೆ ಆಗ ಆದ ಖರ್ಚು 2 ಲಕ್ಷ ರೂಪಾಯಿ!

ಸ್ಪೆಷಲ್ ಎಫೆಕ್ಟ್ಸ್, ಗ್ರಾಫಿಕ್ಸ್ ಇವೆಲ್ಲ ಈಗಿನ ಸಿನಿಮಾ ತಯಾರಿಕೆಯಲ್ಲಿ ಸಾಮಾನ್ಯ ಸಂಗತಿಗಳು. 60 ವರ್ಷಗಳ ಹಿಂದೆ ಇದ್ಯಾವುದೂ ಇಲ್ಲದ ಸಂದರ್ಭದಲ್ಲೂ ‘ಮಾಯಾಬಜಾರ್’ ಸೃಷ್ಟಿಸಿದ ಜಾದೂಲೋಕ ವಿಸ್ಮಯ ಹುಟ್ಟಿಸುವಂತಹುದು. ಈ ಚಿತ್ರದಲ್ಲಿ ಲ್ಯಾಪ್‌ಟ್ಯಾಪ್ ಇದೆ. ಐ–ಪ್ಯಾಡ್ ಇದೆ, ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯ ಹೇಳಿಸುವ ಜಾದೂಯಂತ್ರವೂ ಇದೆ. ಆಗ ಇವೆಲ್ಲ ಕೇವಲ ಪರಿಕಲ್ಪನೆಗಳು, ಭ್ರಮೆಗಳು. ಆದರೆ ಇಂದು ಇವೆಲ್ಲಾ ನೈಜಸಂಗತಿಗಳು.

ನೂರಾರು ಮಿನಿಯೇಚರ್‌ಗಳಿದ್ದ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಿಸಿದ್ದು ‘ಮಾಯಾಬಜಾರ್’ ನ ವಿಶೇಷಗಳಲ್ಲೊಂದು. ಚಿತ್ರೀಕರಣಕ್ಕಾಗಿ ರೂಪಿಸಲಾಗಿದ್ದ ದ್ವಾರಕಾನಗರದಲ್ಲಿ 300ಕ್ಕೂ ಹೆಚ್ಚು ಮಿನಿಯೇಚರ್ ಮನೆಗಳು ಸಿದ್ಧಗೊಂಡಿದ್ದವು. ಹಗಲಿನಲ್ಲಿ ಹುಣ್ಣಿಮೆ ಬೆಳಕಿನ ಎಫೆಕ್ಟ್ಸ್‌ ತಂದುಕೊಟ್ಟಿದ್ದು ದೃಶ್ಯಾವಳಿಯನ್ನು ಕಂಡು ಆ ಕಾಲದ ಹಿಂದಿ ಚಿತ್ರರಂಗದ ಖ್ಯಾತ ತಂತ್ರಜ್ಞರೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಈ ಅಚ್ಚರಿಯನ್ನು ಸೃಷ್ಟಿಸಿದ್ದು ಛಾಯಾಗ್ರಾಹಕ, ಮಾರ್ಕೊಸ್ ಬಾರ್ಟ್ಲೆ ಎನ್ನುವ ಆಂಗ್ಲೋ ಇಂಡಿಯನ್.

ಸಿನಿಮಾ ಛಾಯಾಗ್ರಹಣದಲ್ಲಿ ಪಳಗಿದ್ದ ಬಾರ್ಟ್ಲೆ, ಕಪ್ಪು ಬಿಳುಪಿನ ಯುಗದಲ್ಲಿ ಅದ್ಭುತ ದೃಶ್ಯಾವಳಿಗಳನ್ನು ರೂಪಿಸುವ ಮೂಲಕ ಇಡೀ ಸಿನಿಮಾ ಜಗತ್ತು ‘ಮಾಯಾಬಜಾರ್‌’ನತ್ತ ನೋಡುವಂತೆ ಮಾಡಿದ್ದರು.

ದಕ್ಷಿಣ ಭಾರತದ ಪ್ರತಿಭಾವಂತ ನಟ ನಟಿಯರಿದ್ದ ‘ಮಾಯಾಬಜಾರ್’ ಚಿತ್ರದಲ್ಲಿ ಮೂವರು ಮಹಾನಟರಿದ್ದರು: ಎನ್.ಟಿ. ರಾಮರಾವ್, ಎಸ್.ವಿ. ರಂಗರಾವ್ ಹಾಗೂ ಅಕ್ಕಿನೇನಿ ನಾಗೇಶ್ವರ ರಾವ್. ಈ ಚಿತ್ರದಲ್ಲಿನ ಎನ್.ಟಿ.ಆರ್. ಅವರ ಕೃಷ್ಣನ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ, ಮುಂದೆ 18 ಚಿತ್ರಗಳಲ್ಲಿ ಅವರು ಕೃಷ್ಣನಾಗಿ ಅಭಿನಯಿಸಬೇಕಾಯಿತು. ‘ಮಾಯಾಬಜಾರ್’ ಬಿಡುಗಡೆ ಸಂದರ್ಭದಲ್ಲಿ ಈ ಶ್ರೀಕೃಷ್ಣನ 40 ಸಾವಿರ ಕ್ಯಾಲೆಂಡರ್‌ಗಳು ಮುದ್ರಣವಾಗಿ ಪ್ರೇಕ್ಷಕರ ಮನೆ ತಲುಪಿದ್ದವು.

‘ಶಶಿರೇಖಾ ಪರಿಣಯ’ ಹಾಗೂ ‘ಘಟೋತ್ಕಚ’ ಎಂಬ ಶೀರ್ಷಿಕೆಗಳನ್ನು ಚಿತ್ರೀಕರಣ ಸಂದರ್ಭದಲ್ಲಿ ಬಳಸಲಾಗಿದ್ದರೂ ಅಂತಿಮವಾಗಿ ಸಿನಿಮಾ ಬಿಡುಗಡೆಯಾಗುವಾಗ ಪಡೆದ ಹೆಸರು ‘ಮಾಯಾಬಜಾರ್’.

ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಸಿದ್ಧಗೊಂಡ ಮೊದಲ ಭಾರತೀಯ ಚಿತ್ರವೆನ್ನಿಸಿಕೊಂಡ ಅಗ್ಗಳಿಕೆಯ ‘ಮಾಯಾಬಜಾರ್’ ಮೂಲತಃ 5 ಗಂಟೆಗಳ ಸುದೀರ್ಘ ಚಿತ್ರ. ಆದರೆ ಅದನ್ನು ಪ್ರದರ್ಶನಕ್ಕಾಗಿ 2 ಗಂಟೆ 45 ನಿಮಿಷಗಳಿಗೆ ಮಿತಿಗೊಳಿಸಲಾಯಿತು.

ಸಂಗೀತ ಲೋಕದ ದಂತಕಥೆ ಎನ್ನಿಸಿಕೊಂಡಿದ್ದ ಘಂಟಸಾಲ ಸ್ವರ ಸಂಯೋಜನೆ ಮಾಡಿ ಮಾಂತ್ರಿಕ ಸ್ಪರ್ಶ ನೀಡಿದ್ದ ಹಾಡುಗಳು ಈಗಲೂ ಜನಪ್ರಿಯ. ‘ವಿವಾಹ ಭೋಜನವಿದು..’ ಹಾಡು ಎಲ್ಲ ಕಾಲದ ಭೋಜನಪ್ರಿಯರ ಪ್ರಾರ್ಥನಗೀತೆಯೇ ಸರಿ.

ಅಸಂಖ್ಯ ಯುವ ಹೃದಯಗಳಿಗೆ ಲಗ್ಗೆ ಇಟ್ಟಿದ್ದ ನಟಿ ಸಾವಿತ್ರಿ ಈ ಚಿತ್ರದಲ್ಲಿ ಶಶಿರೇಖೆಯಾಗಿ ಅಭಿನಯಿಸಿದ್ದರು. ರೇಲಂಗಿ, ಸಂಧ್ಯಾ (ಜಯಲಲಿತಾ ಅವರ ತಾಯಿ), ಸೂರ್ಯಕಾಂತಂ, ಅಲ್ಲು ರಾಮಲಿಂಗಯ್ಯ, ನಾಗಭೂಷಣಂ ಹಾಗೂ ಗುಮ್ಮಡಿ ತಾರಾಗಣದಲ್ಲಿದ್ದ ಪ್ರಮುಖರು.

‘ಮಾಯಾಬಜಾರ್’ 1957ರಲ್ಲಿ ಮೊದಲ ಬಾರಿ ತೆರೆಕಂಡಾಗ, 25 ಚಿತ್ರಮಂದಿರಗಳಲ್ಲಿ 25 ವಾರ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತ್ತು. ಎರಡನೇ ಭಾರಿ ಚಿತ್ರಮಂದಿರಗಳಿಗೆ ಬಂದಾಗ 40 ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿತು. 2010ರಲ್ಲಿ ವರ್ಣಲೇಪನದೊಂದಿಗೆ ಡಿಜಿಟಲ್ ರೂಪದಲ್ಲಿ ತೆರೆಕಂಡ ಚಿತ್ರ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ್ದೇ ಅಲ್ಲದೆ, ಆಂಧ್ರಪ್ರದೇಶ್ 10ನೇ ತರಗತಿಯ ‘ಆಂಗ್ಲ’ ಪಠ್ಯದಲ್ಲಿ ಸೇರಿಕೊಂಡಿತು.

ಅರವತ್ತು ವರ್ಷಗಳ ಹಿಂದೆ ಯಾವುದೇ ಸಾಫ್ಟ್‌ವೇರ್ ನೆರವಿಲ್ಲದೆ ರೂಪುಗೊಂಡ ‘ಮಾಯಾಬಜಾರ್’, ಭಾರತದ ಸಾರ್ವಕಾಲಿನ ಶ್ರೇಷ್ಠ ಚಿತ್ರಗಳಲ್ಲಿ ಒಂದೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ, ಭಾರತ ಹಾಗೂ ಇಂಡೋನೇಷ್ಯಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. v

* ಏಪ್ರಿಲ್ 22ರಂದು ‘ಮಾಯಾಬಜಾರ್‌’ ಚಿತ್ರದ ಪ್ರದರ್ಶನ ಹಾಗೂ ಸಿನಿಮಾ ಸಂವಾದ ಬೆಂಗಳೂರಿನಲ್ಲಿ ನಡೆಯಲಿದೆ.

ಸ್ಥಳ: ಜಿ.ವಿ. ಜನ್ಮಶತಾಬ್ದಿ ಸಭಾಂಗಣ, ಬೆಂಗಳೂರು.
ಸಮಯ: ಸಂಜೆ 5ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT