ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ಆಡಳಿತದ ಪಾರಮ್ಯ ಕಡೆಗೂ ಉರುಳಿದ ನ್ಯಾಯಚಕ್ರ

Last Updated 20 ಏಪ್ರಿಲ್ 2017, 19:33 IST
ಅಕ್ಷರ ಗಾತ್ರ

ಬಾಬರಿ ಮಸೀದಿ ಧ್ವಂಸ ಪ್ರಕರಣದ ನ್ಯಾಯಚಕ್ರ ಹೆಚ್ಚು ಕಡಿಮೆ ಸ್ಥಗಿತಗೊಂಡು ಕಾಲು ಶತಮಾನವೇ ಉರುಳಿತ್ತು. ನ್ಯಾಯನೀಡಿಕೆಯ ಈ ಚಕ್ರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಮತ್ತೆ ಚಾಲನೆ ನೀಡಿದೆ. ನ್ಯಾಯದಾನ ಪ್ರಕ್ರಿಯೆ ಮತ್ತಷ್ಟು ಮಂದಗತಿ ಹಿಡಿಯದಂತೆ ಎರಡು ವರ್ಷಗಳ ಗಡುವು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿರುವುದು ಶ್ಲಾಘನೀಯ. ಇಂತಹ ನ್ಯಾಯಾಂಗ ನಿರ್ದೇಶನ ಬಹಳ ತಡವಾಗಿ ಬಂದರೂ  ಸ್ವಾಗತಾರ್ಹ. ನ್ಯಾಯಚಕ್ರವನ್ನು ಕದಲಿಸಿರುವ ಜೊತೆ ಜೊತೆಗೆ ನ್ಯಾಯಾಲಯದ ಈ ತೀರ್ಪು ಮುಂಬರುವ ವರ್ಷಗಳಲ್ಲಿ ದೇಶ ರಾಜಕಾರಣದ ಪಾಲಿಗೆ ಗಣನೀಯ ಸಾಧಕ ಬಾಧಕಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಬಿಜೆಪಿಯ ಮಹಾರಥಿ ಎಂದೇ ಹೆಸರಾದ ಲಾಲ್ ಕೃಷ್ಣ ಅಡ್ವಾಣಿ ಅವರು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯಸೂಚಿಯನ್ನು ದೇಶದ ಮೂಲೆ ಮೂಲೆಗೆ ತಲುಪಿಸಿ ಹಿಂದೂ ಸಮೂಹ ಸನ್ನಿಯನ್ನೇ ಬಡಿದೆಬ್ಬಿಸಿದ್ದರು. ದೇಶ ರಾಜಕಾರಣದ ದಿಕ್ಕನ್ನು ಎಲ್ಲ ಕಾಲಕ್ಕೂ ಬದಲಾಯಿಸಿದ ಈ ವಿದ್ಯಮಾನ 1992ರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾಗಿತ್ತು.

ಹಿಂದುತ್ವವನ್ನು ದೇಶ ರಾಜಕಾರಣ ಸಂವಾದದ ಮಧ್ಯವೇದಿಕೆಗೆ ಎಳೆದು ತಂದು ಎಲ್ಲ ಕಾಲಕ್ಕೂ ಪ್ರತಿಷ್ಠಾಪಿಸಿ ಅದರ ಫಲವನ್ನು ಬಿಜೆಪಿಗೆ ಉಣಬಡಿಸಿದ ಅಡ್ವಾಣಿಯವರು ಯಾವುದೇ ವ್ಯಕ್ತಿಗತ ರಾಜಕೀಯ ಪ್ರತಿಫಲದಿಂದ ವಂಚಿತರಾಗಿ ತೆರೆಮರೆಗೆ ಸರಿಯಬೇಕಾಗಿ ಬಂದ ಈ ಬೆಳವಣಿಗೆ ಅವರ ಪಾಲಿನ ದುರಂತವೇ ಇದ್ದೀತು. ತಾವು ಹರಿಯಬಿಟ್ಟ ಸಿದ್ಧಾಂತದ  ಅಲೆ ಕಾಲು ಶತಮಾನದ ನಂತರ ಮತ್ತೆ ಹೀಗೆ ತಮ್ಮನ್ನು ಸುತ್ತಿಕೊಂಡು ಅಲ್ಲಾಡಿಸೀತು ಎಂದು ಅವರು ನೆನೆಸಿರಲಾರರು.

ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ, ವಿಷ್ಣುಹರಿ ದಾಲ್ಮಿಯಾ ಸೇರಿದಂತೆ 13 ಮಂದಿ ಮೇಲೆ ಮಸೀದಿ ಧ್ವಂಸಕ್ಕೆ ಪಿತೂರಿ ನಡೆಸಿದ ಗಂಭೀರ ಆರೋಪಗಳನ್ನು ತಾಂತ್ರಿಕ ದೋಷದ ಮೇರೆಗೆ ಅಧೀನ ನ್ಯಾಯಾಲಯ ಕೈಬಿಟ್ಟಿತ್ತು. ಈ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಪಿತೂರಿಯ ಗಂಭೀರ ಆಪಾದನೆಗಳ ಬದಲಿಗೆ ಅಕ್ರಮ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಸರಳ ಆಪಾದನೆಗಳನ್ನಷ್ಟೇ ಈ ನಾಯಕರ ಮೇಲೆ ಹೊರಿಸಲಾಗಿತ್ತು. ಪಿತೂರಿ ಆಪಾದನೆ ಕೈಬಿಟ್ಟ ತೀರ್ಪನ್ನು  ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಪ್ರಶ್ನಿಸಿದ್ದು 2011ರಲ್ಲಿ. ಆಗ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. 2014ರಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಅಧಿಕಾರ ಸೂತ್ರ ಹಿಡಿಯಿತು. ಇತ್ತೀಚೆಗೆ ಉತ್ತರಪ್ರದೇಶದಲ್ಲೂ ಬಿಜೆಪಿಯದೇ ಸರ್ಕಾರ. ಆಳುವ ಪಕ್ಷದ ‘ಪಂಜರದ ಗಿಣಿ’ಯಾಗಿರುವ ಸಿಬಿಐ, ಬಿಜೆಪಿ ಹಿತಕ್ಕೆ ಅನುಗುಣವಾಗಿ  ತನ್ನ ನಿಲುವನ್ನು ಬದಲಿಸಬೇಕಿತ್ತು ಎಂಬ ಗುಸುಗುಸು ತಿಂಗಳೊಪ್ಪತ್ತಿನಿಂದ ಆ ಪಕ್ಷದ ವಲಯಗಳಲ್ಲೂ ಕೇಳಿ ಬರುತ್ತಿದೆ. ಆದರೂ ಸುಪ್ರೀಂ ಕೋರ್ಟ್ ಮುಂದಿನ ತನ್ನ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯುವುದಾಗಲಿ, ಅದನ್ನು ತೆಳುವಾಗಿಸುವುದಾಗಲೀ ಸಿಬಿಐಗೆ ಅಷ್ಟು ಸರಳವಿರಲಿಲ್ಲ.

ನಾಯಕರು ವಿಚಾರಣೆ ಎದುರಿಸಿ ಖುಲಾಸೆಯಾಗುವುದೇ ಅತ್ಯುತ್ತಮ ಮಾರ್ಗ ಎಂಬುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಪಾಲ್ಗೊಂಡಿದ್ದ ಬಿಜೆಪಿಯ ಅತ್ಯುನ್ನತ ಸಮಿತಿ ಬುಧವಾರ ರಾತ್ರಿ ತೀರ್ಮಾನಿಸಿದೆ. ಪಿತೂರಿಯ ಆಪಾದನೆ ರುಜುವಾತಾಗುವುದಿಲ್ಲ ಎಂಬುದು ಬಿಜೆಪಿ ನಂಬಿಕೆ. ಮತ್ತೊಮ್ಮೆ ಹಿಂದು- ಮುಸ್ಲಿಂ ಧ್ರವೀಕರಣದ ಎಲ್ಲ ದಟ್ಟ ಸಾಧ್ಯತೆಗಳಿರುವ ಈ ವಿದ್ಯಮಾನ ಇನ್ನೂ ಎರಡು ವರ್ಷಗಳಾಚೆಗೂ ಜೀವಂತ ಮಿಡಿಯಲಿದೆ ಎಂಬುದು ತಾನು ಕೋರದೆ ಒದಗಿ ಬಂದಿರುವ ವರವೆಂದು ಬಿಜೆಪಿ ಭಾವಿಸಿದ್ದರೆ ಅಚ್ಚರಿಪಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT