ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯ ಸೋಗಿನಿಂದ ವಿನಾಶದತ್ತ ಜಲಮೂಲ

Last Updated 21 ಏಪ್ರಿಲ್ 2017, 5:09 IST
ಅಕ್ಷರ ಗಾತ್ರ

ದಾವಣಗೆರೆ: ‘ಆಧುನಿಕತೆಯ ಸೋಗಿ ನಲ್ಲಿ ನಾವು ಕೆರೆ, ಕಾಲುವೆ, ಬಾವಿ ಸೇರಿದಂತೆ ಹಲವಾರು ಜಲಮೂಲ ಗಳನ್ನು ಒತ್ತುವರಿ ಮಾಡಿಕೊಂಡು ಅವುಗಳನ್ನು ವಿನಾಶದಂಚಿಗೆ ತಳ್ಳಿದ್ದೇವೆ. ಇದರ ದುಷ್ಪರಿಣಾಮವನ್ನು ಇಂದು ಅನುಭವಿಸುತ್ತಿದ್ದೇವೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ರಾಜಾರಾಮ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ಗುರುವಾರ ಹಮ್ಮಿಕೊಂಡಿದ್ದ ‘ಮಧ್ಯಕಾಲೀನ ಕರ್ನಾಟಕದ ಜಲ ವಾಸ್ತುಶಿಲ್ಪ’ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.‘ಕುಡಿಯುವ ನೀರಿಗಾಗಿ ಹಾಹಾ ಕಾರ ಉಂಟಾಗಿದೆ. ಇದಕ್ಕೆ ಆಧುನಿಕ ಮನುಷ್ಯನ ಮನಸ್ಥಿತಿಯೇ ಕಾರಣ. ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶದೊಂದಿಗೆ ಕೆರೆ, ನೀರಿನ ಕಾಲುವೆಯ ಮೂಲವನ್ನೇ ಬದಲಾಯಿಸಿ ತನ್ನ ಸುತ್ತಲೂ ಬೃಹತ್‌ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾನೆ. ರಸ್ತೆಗಳು ಕೂಡ ಸಿಮೆಂಟ್‌ಮಯವಾಗಿವೆ. ಇದರಿಂದ ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಹೀಗಾಗಿ ಅಂತರ್ಜಲದಮಟ್ಟ ಕ್ಷೀಣವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉಜ್ಬೇಕಿಸ್ತಾನದ ಖಗೋಳ ವಿಜ್ಞಾನಿ ಅಲ್‌ ಬಿರುನಿ ಅವರು ಭಾರತಕ್ಕೆ ಭೇಟಿ ನೀಡಿದ್ದ ಅವಧಿಯಲ್ಲಿ ಅಂದು ದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಾಣವಾಗಿದ್ದ ಬೃಹತ್‌ ಜಲಾಶಯ ಗಳನ್ನು ನೋಡಿ, ಮೂಕವಿಸ್ಮಿತರಾಗಿ, ಇಂತಹ ಸುಂದರವಾದ ಜಲಾಶಯಗಳನ್ನು ನಾನು ಎಲ್ಲಿಯೂ ನೋಡಿಲ್ಲ. ನೀರಿನ ಸಂರಕ್ಷಣೆಯಲ್ಲಿ ಭಾರತೀಯರ ಜ್ಞಾನ ಶ್ಲಾಘನೀಯ’ ಎಂದು ಉಲ್ಲೇಖಿಸಿದ್ದರು. ಈ ಬಗ್ಗೆ ಇತಿಹಾಸದ ಹಲವು ಪುಸ್ತಕಗಳಲ್ಲಿಯೂ ಪ್ರಸ್ತಾಪವಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಆಳಿದ ಎಲ್ಲಾ ರಾಜಮನೆತನಗಳು ನೀರಿನ ಸಂರಕ್ಷಣೆಗಾಗಿ ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದ್ದವು. ಆದರೆ, ನಾವು ನೀರನ್ನು ರಕ್ಷಣೆ ಮಾಡದೇ ಎಲ್ಲಾ ಜಲಮೂಲಗಳನ್ನು ನಾಶಮಾಡುತ್ತಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದೇ ಸಮಯದಲ್ಲಿ ಅವರು ಈ ಹಿಂದೆ ಜಲಮೂಲಗಳನ್ನು ಹೇಗೆ ರಕ್ಷಣೆ ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ವಿಡಿಯೊ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು.

ಧಾರವಾಡ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಈರಣ್ಣ ಕೆ.ಪತ್ತಾರ್‌ ಮಾತನಾಡಿ, ‘ರಾಜ್ಯದಲ್ಲಿ ಈ ಹಿಂದೆ 30,000 ಕೆರೆಗಳಿದ್ದವು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಆದರೆ, ಇಂದು ಬಹುತೇಕ ಕೆರೆಗಳು ಕಣ್ಮರೆಯಾಗಿವೆ. ಜೊತೆಗೆ ಅರಣ್ಯ ನಾಶವಾಗಿದೆ. ಇದರಿಂದಾಗಿ ಮಳೆಯ ಪ್ರಮಾಣ ಕುಂಠಿತವಾಗಿದ್ದು, ಮನೆ, ಮನೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಹಂತಕ್ಕೆ ತಲುಪಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲಾ ಕೆಲಸವನ್ನು ಸರ್ಕಾರವೇ ಮಾಡಬೇಕು ಎಂಬ ಧೋರಣೆಯನ್ನು ಬಿಟ್ಟು, ನಾವೇನು ಮಾಡಬೇಕು ಎನ್ನುವ ಕಡೆ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಪ್ರೊ.ಟಿ.ವೀರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಪುರಾತತ್ವ, ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಸಹಾ ಯಕ ಪ್ರಾಕ್ತನ ಶಾಸ್ತ್ರಜ್ಞ ಐ.ಎನ್‌.ಗೌಡ, ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ  ಕಲಮರಹಳ್ಳಿ, ಪ್ರೊ.ಎಸ್‌. ಉಮಾಮಹೇಶ್ವರ, ಡಾ.ಆರ್‌. ತಿಪ್ಪಾರೆಡ್ಡಿ, ಎಸ್‌.ಆರ್‌.ಭಜಂತ್ರಿ ಉಪಸ್ಥಿತರಿದ್ದರು. ಡಾ.ಟಿ.ಮಂಜಣ್ಣ ಸ್ವಾಗತಿಸಿದರು.ಪ್ರೊ.ಸದಾಶಿವಪ್ಪ ವಂದಿಸಿದರು. ಪ್ರೊ.ಟಿ.ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT