ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಹವ್ಯಾಸಗಳೇ ಭವಿಷ್ಯಕ್ಕೆ ದಾರಿದೀಪ

Last Updated 21 ಏಪ್ರಿಲ್ 2017, 5:15 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಭವಿಷ್ಯಕ್ಕೆ ಈ ಹವ್ಯಾಸಗಳೇ ದಾರಿ ದೀಪವಾಗಬಹುದು ಎಂದು ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಪ್ರೊ.ಎನ್. ದಿವಾಕರರಾವ್ ಕಿವಿಮಾತು ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ‘ಸುವರ್ಣ ಸಂಭ್ರಮ – 2017’ ವಾರ್ಷಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾನ್ ಸಾಧಕರ ಜೀವನ ಚರಿತ್ರೆ ಅವಲೋಕಿಸಿದರೆ, ಹವ್ಯಾಸಗಳೇ ಅವರನ್ನು ಉನ್ನತ ಸ್ಥಾನಕ್ಕೆ ತಲುಪಲು ದಾರಿ ತೋರಿವೆ. ವಿದ್ಯಾರ್ಥಿಗಳು ನಿಶ್ಚಿತ ಗುರಿ ಇಟ್ಟುಕೊಂಡು ಶೈಕ್ಷಣಿಕ ಬದುಕು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.‘ಸಾಧನೆ ಮಾಡುವ ದಾರಿಯಲ್ಲಿ ಸವಾಲುಗಳು ಎದುರಾಗುತ್ತವೆ. ಅಡ್ಡಿ, ಆತಂಕಗಳಂತೂ ಸಹಜ. ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯೇ ನಮಗೆ ಮಾರ್ಗದರ್ಶಕ ವಾಗುತ್ತದೆ. ಉನ್ನತ ವ್ಯಕ್ತಿಗಳ ವಿಚಾರಧಾರೆ ಆತ್ಮವಿಶ್ವಾಸ ತುಂಬುತ್ತದೆ’ ಎಂದು ಸಲಹೆ ನೀಡಿದರು.

ಸಾಧನೆ ಮಾಡಲು ಹೊರಟವನಿಗೆ ಯಾವುದೂ ಅಸಾಧ್ಯವಲ್ಲ. ಪ್ರಬಲ ಮನೋಬಲ, ಪರಿಶ್ರಮ, ಮಾಡುವ ಕೆಲಸದಲ್ಲಿ ಶ್ರದ್ದೆ ಇದ್ದರೆ ಸಾಕು, ಸಾಧನೆ ಎಂಬುದು ಕಟ್ಟಿಟ್ಟಬುತ್ತಿ. ಯಾವುದೇ ಚಟುವಟಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಎಂದು ಎಚ್ಚರಿಸಿದರು.ಶಿಕ್ಷಣ ಉದ್ಯಮವಲ್ಲ, ಅದು ಮಾರಾಟದ ಸರಕೂ ಅಲ್ಲ. ಅದೊಂದು ಜೀವನ ಕ್ರಮ. ಬದುಕು ರೂಪಿಸಬೇಕೇ ಹೊರತು, ದುಬಾರಿಯಾಗಬಾರದು. ಪಡೆಯುವ ಶಿಕ್ಷಣದಲ್ಲಿ ಉದಾತ್ತ ಮೌಲ್ಯಗಳು, ಅರಿವು ಹೆಚ್ಚಿಸುವ ಅಂಶಗಳು ಇದ್ದು, ಕೌಶಲಕ್ಕೆ ಆದ್ಯತೆ ನೀಡಬೇಕು ಎಂದರು.

ಅನೇಕ ಯುವಕರು ತಮ್ಮ ಮನಸ್ಸಿಗೆ ವಿರುದ್ಧವಾದ ಉದ್ಯೋಗದಲ್ಲಿ ತೊಡಗಿದ್ದಾರೆ. ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಯುವಕರು ಸಾಧ್ಯವಾದಷ್ಟು ತಮಗಿಷ್ಟಬಂದ, ಆಸಕ್ತಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು. ಒಂದು ಪಕ್ಷ ಸಾಧ್ಯವಾಗದೆ ಇದ್ದರೆ ವೃತ್ತಿ ಗೌರವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

‘ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ. ಸುಂದರ ಜೀವನದ ಕಲ್ಪನೆ, ಅದರ ಮುನ್ನೋಟ, ಪ್ರತಿಯೊಂದು ನಡೆ ನಿಮ್ಮದೇ ಜವಾಬ್ದಾರಿಯಾಗಿದೆ. ಇತರರ ಅವಲಂಬನೆ ಏನೂ ಉಪಯೋಗವಿಲ್ಲ. ಹಿರಿಯರ ಸಲಹೆ ವಿಮರ್ಶಿಸಿ, ಸ್ವಂತ ಆಲೋಚನೆಯ ನಿರ್ಧಾರ ತೆಗೆದುಕೊಳ್ಳಿ. ವೈಯಕ್ತಿಕ ಆದರ್ಶ, ಮೌಲ್ಯಗಳ ಮೇಲೆ ನಂಬಿಕೆ ಇರಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜಿ.ನಾರಾಯಣಮೂರ್ತಿ, ಮಧು ಕುಮಾರ್, ಡಾ.ಸತೀಶ್ ಕುಮಾರ್ ಶೆಟ್ಟಿ, ಎಸ್.ಎಂ. ಪ್ರಸನ್ನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT