ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ

Last Updated 21 ಏಪ್ರಿಲ್ 2017, 5:17 IST
ಅಕ್ಷರ ಗಾತ್ರ

ಶಿವಮೊಗ್ಗ:  ತಾಲ್ಲೂಕಿನ ಹಾಯ್‌ಹೊಳೆ ಸಮೀಪ ಸಂತ್ರಸ್ತರಿಗೆ ಮೀಸಲಿಟ್ಟಿರುವ ಜಮೀನು ಹಾಗೂ ಗ್ರಾಮದ ದೊಡ್ಡಕೆರೆಯ ಜಾಗವನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆ (ಸಿಆರ್‌ಪಿಎಫ್) ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನಾ ರ್‍್ಯಾಲಿ ನಡೆಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಗಸವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಯ್‌ಹೊಳೆಯಲ್ಲಿ ಚಕ್ರಾ, ಸಾವೆಹಕ್ಲು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ವೆ ಸಂಖ್ಯೆ 167 ರಲ್ಲಿ 2,033 ಎಕರೆ ಇದೆ. ಈ ಪೈಕಿ ಚಕ್ರಾ-, ಸಾವೆಹಕ್ಲು ಯೋಜನಾ ಸಂತ್ರಸ್ತರಿಗೆ 1,048 ಎಕರೆ ಮತ್ತು ಶರಾವತಿ ಯೋಜನಾ ಸಂತ್ರಸ್ತರಿಗೆ 885 ಎಕರೆ ಭೂಮಿ ಮಂಜೂರು ಮಾಡಿ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ. ಸುತ್ತಲೂ 100 ಎಕರೆ ವಿಸ್ತೀರ್ಣದ ದೊಡ್ಡಕೆರೆಯಿದೆ. ಆದರೆ, ಕೆಲ ಪ್ರಭಾವಿ ವ್ಯಕ್ತಿಗಳು ಈ ಸ್ಥಳದಲ್ಲಿ 30 ರಿಂದ 40 ಎಕರೆಯಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಜಮೀನಿನ ಸುತ್ತ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ದೊಡ್ಡಕೆರೆ ಹಿನ್ನೀರು ಪ್ರದೇಶ ಸಂಪೂರ್ಣವಾಗಿ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿ ಅಪರೂಪದ ಪ್ರಾಣಿ, ಪಕ್ಷಿಗಳಿವೆ. ಕಾಡುಪ್ರಾಣಿಗಳಿಗೆ ಕೆರೆ ನೀರೇ ಆಶ್ರಯವಾಗಿದೆ. ಕೆರೆಯಲ್ಲಿ ನೀರು ಕುಡಿಯಲು ಬರುವ ಪ್ರಾಣಿಗಳು ವಿದ್ಯುತ್ ತಾಗಿ ಸಾವನ್ನಪ್ಪುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅನಧಿಕೃತವಾಗಿ ದೇವಾಲಯ ನಿರ್ಮಾಣ ಮಾಡಿ ಒತ್ತುವರಿ ಜಮೀನು ಉಳಿಸಿಕೊಳ್ಳುವ ಯತ್ನ ನಡೆಸ ಲಾಗುತ್ತಿದೆ.  ತಕ್ಷಣವೇ ಜಿಲ್ಲಾಡಳಿತ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದಿರುವ  ಒತ್ತುವರಿ ತೆರವುಗೊಳಿಸಿ, ಸಂರಕ್ಷಿಸುವ ಕೆಲಸ ಮಾಡಬೇಕು. ತಪ್ಪಿಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಹಾಗೂ ಗ್ರಾಮದಲ್ಲಿರುವ ಪುರಾತನ ವಿಜ್ಞೇಶ್ವರ ಸ್ವಾಮಿ ದೇವಸ್ಥಾನ ನವೀಕರಣಗೊಳಿಸಿ ಮುಜರಾಯಿ ಇಲಾಖೆಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಭಾನುಪ್ರಸಾದ್, ವಿಷ್ಣುಪ್ರಸಾದ್, ರವೀಂದ್ರ, ಹೊರಕೇರಪ್ಪ, ಈರಪ್ಪ, ರಾಜಣ್ಣ, ವೆಂಕಪ್ಪ, ಹರೀಶ್, ಕಾಂತರಾಜ್, ಹನುಮಂತಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT