ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ಇನ್ನೂ ಹದಗೆಡುವ ಮುನ್ನ ಸಾಲ ಮನ್ನಾ ಮಾಡಿ

Last Updated 21 ಏಪ್ರಿಲ್ 2017, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಬರದ ದವಡೆಗೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದುಃಸ್ಥಿತಿಗೆ ತಲುಪುವ ಮೊದಲು ಸಾಲ ಮನ್ನಾ ಮಾಡಬೇಕು ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಒತ್ತಾಯಿಸಿದರು.ಬಿಜೆಪಿ, ಕಾಂಗ್ರೆಸ್ ಸಾಲಮನ್ನಾ ವಿಚಾರದಲ್ಲಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ  ಸಂಪೂರ್ಣ ವಿಫಲವಾಗಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಸಾಲ ಮನ್ನಾ ನಿರೀಕ್ಷೆಯಿಂದ ಬಹುತೇಕ ರೈತರು ಮರುಪಾವತಿ ಮಾಡಿಲ್ಲ. ಸಾಲ ಮರುಪಾವತಿ ಅವಧಿ ಮೀರಿದ ಕಾರಣ ಬಡ್ಡಿ ದರ ಕೂಡ ಜಾಸ್ತಿಯಾಗಿದೆ. ಹೀಗಾದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬಡ್ಡಿ ಹೆಚ್ಚಳ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಗೆ ಮತದಾರರ ತಕ್ಕ ಪಾಠ: ಯಾವುದೇ ಅಭಿವೃದ್ಧಿಯ ಯೋಜನೆ ಇಲ್ಲದೇ ವೈಯಕ್ತಿಕ ಪ್ರತಿಷ್ಠೆಗೆ ಉಪ ಚುನಾವಣೆ ನಡೆಸಿದ ಬಿಜೆಪಿ ಹಾಗೂ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡೂ ಕ್ಷೇತ್ರಗಳ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಕುಟುಕಿದರು.ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಬಿಜೆಪಿಗೆ ಎಚ್ಚರಿಕೆಯ ಗಂಟೆ. ಬಿ.ಎಸ್.ಯಡಿಯೂರಪ್ಪ ರೈತರ ವಿಶ್ವಾಸ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಜಾತಿ ಹಾಗೂ ಹಣದ ಮೇಲೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಯಡಿಯೂರಪ್ಪ ಅವರಿಗೆ ಚುನಾವಣೆ, ಅಧಿಕಾರದ ಸಮಯದಲ್ಲಿ ಮಾತ್ರ ರೈತರು ನೆನಪಾಗುತ್ತಾರೆ. ನಂತರ ಸಂಪೂರ್ಣವಾಗಿ ಕಡೆಗಣಿಸುತ್ತಾರೆ. ಉಪ ಚುನಾವಣೆ ವೇಳೆಯೂ ಸಾಲ ಮನ್ನಾ ಕುರಿತು ಪ್ರಸ್ತಾಪಿಸಿದ್ದರು. ಆದರೆ, ಅವರ ಮಾತನ್ನು ಯಾವ ರೈತರೂ ನಂಬಲಿಲ್ಲ ಎಂದರು.‘ಸಂಸದರಾಗಿ ಯಡಿಯೂರಪ್ಪರ ಕೊಡುಗೆ ಏನಿದೆ. ಅಧಿಕಾರ, ಸ್ವಾರ್ಥ ಬಿಟ್ಟು ಬೇರೆ ಏನೂ ಕೊಡುಗೆ ಇಲ್ಲ’ ಎಂದು ದೂರಿದರು.

ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್‌ ಸ್ಪರ್ಧೆ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದಆವಶ್ಯಕತೆ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಶೀಘ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಚುನಾವಣೆ ಸಮಯದಲ್ಲಿ ವಿವಿಧ ಪಕ್ಷಗಳ ನಾಯಕರು ಪಕ್ಷ ಬದಲಿಸುವುದು ಸಹಜ. ಆದರೆ, ಯಾರು ಸೇರ್ಪಡೆಯಾಗುತ್ತಾರೆ ಎನ್ನುವುದು ಮುಖ್ಯ. ಜೆಡಿಎಸ್ ಪಕ್ಷಕ್ಕೂ ಶೀಘ್ರ ಹಲವು ಮುಖಂಡರು ಸೇರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT