ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಅನುದಾನದ ಕೊರತೆಯದ್ದೇ ಪ್ರತಿಧ್ವನಿ

Last Updated 21 ಏಪ್ರಿಲ್ 2017, 5:24 IST
ಅಕ್ಷರ ಗಾತ್ರ

ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಡಿಯುವ ನೀರಿಗೆ ಕೊಡುತ್ತಿರುವ ಅನುದಾನ ಕಡಿಮೆಯಾಗಿದೆ. ಹಿಂದೆ ಕೇಂದ್ರ ಸರ್ಕಾರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನವನ್ನು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ನೀಡುತ್ತಿತ್ತು. ಆದರೆ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಅನುದಾನವನ್ನು ಶೇ 20ಕ್ಕೆ ಇಳಿಸಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಗುರುವಾರ ಕರೆಯಲಾಗಿದ್ದ ತಾಲ್ಲೂಕು ಪಂಚಾಯ್ತಿ ಉಪ ಸಮಿತಿಗಳ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.‘ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಸಂಸದ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಶೀಘ್ರ ನಿಯೋಗದೊಂದಿಗೆ ಹೋಗೋಣ. ಅವರು ಮನಸ್ಸು ಮಾಡಿದರೆ ತಾಲ್ಲೂಕು ಪಂಚಾಯ್ತಿಗಳಿಗೆ ಕೇಂದ್ರ ಸರ್ಕಾರದಿಂದಲೂ ಅನುದಾನ ಕೊಡಿಸಲು ಸಾಧ್ಯವಿದೆ’ ಎಂದು ತಿಳಿಸಿದರು.

ಸದಸ್ಯೆ ಜ್ಯೋತಿ ಮುರಳೀಧರ್ ಮಾತನಾಡಿ, ‘ತಾಲ್ಲೂಕು ಪಂಚಾಯ್ತಿಗೆ ಪ್ರತಿವರ್ಷ ಕೇವಲ ₹ 6 ಲಕ್ಷ  ಅನುದಾನ ನೀಡಲಾಗುತ್ತಿದೆ. ಇದರಲ್ಲಿ ಅಂಗನವಾಡಿ ಹೊಸ ಕಟ್ಟಡ ನಿರ್ಮಾಣ, ಶಾಲಾ ರಿಪೇರಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಗ್ರಾಮ ಪಂಚಾಯ್ತಿಗೆ ₹ 30 ಲಕ್ಷ ಅನುದಾನ ನೀಡಲಾಗುತ್ತಿದೆ. ನಮಗೆ ಬರುವ ಅನುದಾನ ತೀರಾ ಕಡಿಮೆಯಾಗಿದೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ನಮಗೆ ಗೌರವ ಕೊಡುತ್ತಿಲ್ಲ. ಶಾಸಕರೂ ಸೇರಿದಂತೆ ಬರ ನಿರ್ವಹಣೆ ಯೋಜನೆಯಡಿ ನಡೆಯುವ ಕಾಮಗಾರಿ ಮಾಹಿತಿಯನ್ನು ನಮಗೆ ನೀಡುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾವು ಜನರ ಬಳಿಗೆ ಹೋಗುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಶಾಸಕರು ಪಟ್ಟಿ ಕೊಟ್ಟರೆ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ನಮ್ಮ ವ್ಯಾಪ್ತಿಯಲ್ಲಿ ಕೆಲವು ಕಾಮಗಾರಿಗಳನ್ನು ಮಾಡಿ ಎಂದು ಪಟ್ಟಿ ಕೊಟ್ಟರೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಆಡಳಿತ ಕ್ಯಾರೆ ಎನ್ನುತ್ತಿಲ್ಲ’ ಎಂದು ಸದಸ್ಯ ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.‘ನಿಮ್ಮನ್ನು ಗೆಲ್ಲಿಸಿದ್ದು ಶಾಲೆ, ಅಂಗನವಾಡಿ ರಿಪೇರಿ ಮಾಡಿ ಎಂದಲ್ಲ. ವೈಯಕ್ತಿಕವಾಗಿ ಮತದಾರರಿಗೆ ನೀವು ಏನು ಕೊಡುಗೆ ನೀಡಿದ್ದೀರಿ? ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಸೌಲಭ್ಯ ಒದಗಿಸಬೇಕೆಂದು ಜನ ಕೇಳುತ್ತಿದ್ದಾರೆ. ತಾಲ್ಲೂಕು ಪಂಚಾಯ್ತಿಯಲ್ಲಿ ಅನುದಾನದ ಕೊರತೆ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವು ತಲೆ ಎತ್ತಿಕೊಂಡು ತಿರುಗಲು ಸಾಧ್ಯವಿಲ್ಲ’ ಎಂದು ಸದಸ್ಯೆ ಸುವರ್ಣ ಟೀಕಪ್ಪ ಅಭಿಪ್ರಾಯಪಟ್ಟರು.

‘ತಾಲ್ಲೂಕು ಪಂಚಾಯ್ತಿಗೆ ಕೊಡುವ ಅನುದಾನ ಹೆಚ್ಚಿಸುವಂತೆ ಈಗಾಗಲೇ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಸು ಸಾಕಾರಗೊಂಡರೆ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಬಹುದು’ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಮಾತನಾಡಿ, ‘ನಮ್ಮ ವ್ಯಾಪ್ತಿಯಲ್ಲಿ ಸುಮಾರು 12 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪ್ರತಿ ಶೌಚಾಲಯಕ್ಕೆ  ₹12,000 ಬಿಲ್ ಮಾಡಿ ಗ್ರಾಮ ಪಂಚಾಯ್ತಿಗೆ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದರೆ, ₹ 10,000 ಮಾತ್ರ ಬಿಡುಗಡೆ ಮಾಡಿದ್ದಾರೆ. ಸರ್ಕಾರ ನೀಡುವ ಸಹಾಯಧನದಲ್ಲಿ ಕಡಿತ ಮಾಡಲು ಏನು ಕಾರಣ’ ಎಂದು ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳು ಹೇಳಿದ ಯಾವುದೇ ಕೆಲಸವಾಗುತ್ತಿಲ್ಲ. ಆದರೆ ಎಂಜಿನಿಯರ್ ಹಾಗೂ ಗುತ್ತಿಗೆ ದಾರರು ಹೇಳಿದ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ಬೇಗ ಅನು ಮೋದನೆ ಸಿಗುತ್ತಿದೆ. ಹೀಗೆ ಆಗುವು ದಾದರೆ ಜನಪ್ರತಿನಿಧಿಗಳಾಗಿ ನಾವು ಏಕೆ ಇರಬೇಕು?’ ಎಂದು ಸದಸ್ಯೆ ಜ್ಯೋತಿ ಮುರಳಿಧರ್ ಖಾರವಾಗಿ ಹೇಳಿದರು.
‘ಶೌಚಾಲಯಕ್ಕೆ ನೀಡುವ ಸಹಾಯಧನದಲ್ಲಿ ಕಡಿತ ಮಾಡುವ ಅಧಿಕಾರವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಎಂಜಿನಿಯರ್‌ಗಳಿಗೆ ಕೊಟ್ಟವರು ಯಾರು? ಹಾಗೆ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸ ಬೇಕಾಗುತ್ತದೆ’ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಎಚ್ಚರಿಕೆ ನೀಡಿದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಚ್.ಕೆ.ಪರಶುರಾಮ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ್ ಬರದವಳ್ಳಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಣಾ ಅಣಾಧಿಕಾರಿ ಸಿದ್ದಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT