ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಜಮೀನು ಕೊಟ್ಟವರಿಗೆ ಸಿಗದ ಪರಿಹಾರ

Last Updated 21 ಏಪ್ರಿಲ್ 2017, 5:26 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಕೆಳಸೇತುವೆ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯು ತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ವಾಹನ ಚಾಲಕರು ಮತ್ತು ಹೊಸನಗರ ಬಡಾವಣೆ ನಿವಾಸಿಗಳು, ಕಡೂರು, ಐಯ್ಯನಹಳ್ಳಿ, ಕಾಳಘಟ್ಟ ಮೊದಲಾದ ಗ್ರಾಮಗಳ ಗ್ರಾಮಸ್ಥರು ಇದರಿಂದ ರೋಸಿಹೋಗಿದ್ದಾರೆ.

ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿ ಹೊಸನಗರ ಬಡಾವಣೆ –ಕಡೂರು ಮೊದಲಾದ ಗ್ರಾಮಗಳಿಗೆ ಹೋಗುವ ಸಂಪರ್ಕ ರಸ್ತೆಯಲ್ಲಿದ್ದ ರೈಲ್ವೆ ಗೇಟನ್ನು ಮೂರ್ನಾಲ್ಕು ತಿಂಗಳ ಹಿಂದೆ ಮುಚ್ಚಲಾಯಿತು. ಪಕ್ಕದಲ್ಲಿ ನಿರ್ಮಿಸಿರುವ ಇನ್ನೂ ಪೂರ್ಣಗೊಳ್ಳದ ಕಿರಿದಾದ ಕೆಳಸೇತುವೆ ಮೂಲಕ ಹಾದು ಹೋಗುವಂತೆ ರೈಲ್ವೆ ಇಲಾಖೆ ಸೂಚಿಸಿತು.
ಇಲ್ಲಿಂದ ಹಾದು ಹೋಗುವ ವಾಹನಗಳ ಚಾಲಕರು, ಪಾದಚಾರಿಗಳು ಪರದಾಡುವಂತಾಗಿದೆ. ಗೇಟ್‌ ಬಳಿಯ ಚರಂಡಿಗೆ ಹಾಕಿದ್ದ ಸ್ಲ್ಯಾಬ್‌ ಸಹ ವಾಹನಗಳ ದಟ್ಟಣಿಯಿಂದ ಮುರಿದು ಹೋಗಿದ್ದು, ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಮಣ್ಣಿನ ರಸ್ತೆ ತುಂಬ ಗುಂಡಿಗಳಿದ್ದು, ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂದು ಹೊಸನಗರ ಬಡಾವಣೆಯ ನಿವಾಸಿಗಳು ಹಾಗೂ ಜಮೀನುಗಳಿಗೆ ನಿತ್ಯ ಓಡಾಡುವ ರೈತರು ಆರೋಪಿಸಿದ್ದಾರೆ.

ಸಿಗದ ಪರಿಹಾರ:  ಕೆಳ ಸೇತುವೆ ಪಕ್ಕದಲ್ಲಿ ಗ್ರಾಮದ ಕುನಗಲಿ ವಿರೂಪಾಕ್ಷಪ್ಪ ಹಾಗೂ ಕೆಂಚಪ್ಪ ಎಂಬುವರಿಗೆ ಸೇರಿದ್ದ ಜಮೀನಿನ ಭಾಗಗಳನ್ನು ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿ ಕೊಳ್ಳಲಾಯಿತು. ವಿರೂಪಾಕ್ಷಪ್ಪ ಅವರಿಗೆ ಸೇರಿದ ಜಮೀನಿನಲ್ಲಿ 6 ಗುಂಟೆ ಹಾಗೂ ಎ.ಆರ್‌.ಪುಟ್ಟಸ್ವಾಮಿ ಅವರಿಗೆ ಸೇರಿದ 1.5 ಗುಂಟೆ ಜಾಗವನ್ನು ರೈಲ್ವೆ ಇಲಾಖೆ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಆದರೆ, ಇದುವರೆಗೂ ಇಲಾಖೆಯಿಂದ ಯಾವುದೇ ಹಣ ಸಂದಾಯವಾಗಿಲ್ಲ ಎಂದು ಕುನಗಲಿ ವಿರೂಪಾಕ್ಷಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಣ ಸಂದಾಯವಾಗುವವರೆಗೆ ರಸ್ತೆ ನಿರ್ಮಾಣಕ್ಕೆ ಅವಕಾಶಕೊಡುವುದಿಲ್ಲ ಎಂದು ವಿರೂಪಾಕ್ಷಪ್ಪನವರ ಮಗ ಮಂಜುನಾಥ್‌ ಪಟ್ಟುಹಿಡಿದಿದ್ದಾರೆ. ಗುತ್ತಿಗೆದಾರ ಭಾಸ್ಕರ್‌ರೆಡ್ಡಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಜಮೀನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಎಂಜಿನಿಯರ್‌ ಶಶಿಧರ್ ಹೇಳಿದ್ದನ್ನು ಮಾಡುವುದಷ್ಟೆ ನನ್ನ ಕೆಲಸ’ ಎಂದು ಪ್ರತಿಕ್ರಿಯಿಸಿದರು.  ‘ಜಿಲ್ಲಾಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿ, ನಮಗೆ ಪರಿಹಾರ ಕೊಡಿಸುವ ಭರವಸೆ ನೀಡುವವರೆಗೂ ಕಾಮಗಾರಿಗೆ ಅವಕಾಶ ನೀಡುವುದಿಲ್ಲ’ ಎಂದು ಮಂಜುನಾಥ್‌ ತಿಳಿಸಿದ್ದಾರೆ.

ಕಡೂರು, ಐಯ್ಯನಹಳ್ಳಿ, ಕಾಳಘಟ್ಟ ಗ್ರಾಮಗಳಿಗೆ ಸಂಚರಿಸುವ ಸಲುವಾಗಿ ರೈಲ್ವೆ ಇಲಾಖೆ ಮೇಲು ಸೇತುವೆಯನ್ನೇನೋ ನಿರ್ಮಿಸಿದೆ. ಆದರೆ, ಈ ಮಾರ್ಗದಲ್ಲಿ ಪೊಲೀಸ್‌ ಠಾಣೆ ಇರುವುದರಿಂದ ಪದೇ ಪದೇ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಾರೆಂಬ ಆತಂಕದಿಂದ ಎಷ್ಟೋ ಚಾಲಕರು ಕಿರಿದಾದ ಕೆಳ ಸೇತುವೆಯ ಹಾದಿಯನ್ನೇ ಹಿಡಿಯುತ್ತಾರೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ.

ನೀರು ನಿಲ್ಲುವ ಸಾಧ್ಯತೆ: ಕೆಳ ಸೇತುವೆಯು ನೆಲ ಮಟ್ಟದಿಂದ 2–3 ಅಡಿ ತಗ್ಗಿನ ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಹಾಗೆ ಆದಲ್ಲಿ ಸಂಚಾರ ತೀರಾ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಈ ಬಗ್ಗೆ ಗ್ರಾಮಸ್ಥರು ರೈಲ್ವೆ ಇಲಾಖೆ ಗುತ್ತಿಗೆ ದಾರರನ್ನು ಕೆೇಳಿದರೆ, ನೀರು ನಿಲ್ಲದಂತೆ ವ್ಯವಸ್ಥೆ ಮಾಡುತ್ತೇವೆ ಎಂದಷ್ಟೇ ಹೇಳುತ್ತಿದ್ದಾರೆ. ಮಳೆಗಾಲ ಸನ್ನಿಹಿತವಾಗುತ್ತಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.ಎಂಜಿನಿಯರ್‌ ಹಾಗೂ ಗುತ್ತಿಗೆದಾರರು ನೀರು ನಿಲ್ಲದಂತೆ ವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರಾದ ಈಶ್ವರಪ್ಪ, ದಿವಾಕರ್‌, ಬಸವರಾಜ್‌, ಲೋಕೇಶ್‌, ನಾಗರಾಜ್‌, ಶಿವಕುಮಾರ್‌, ಮಂಜುನಾಥ, ತಿಮ್ಮಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT