ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಎದುರು ನಿಜಲಿಂಗಪ್ಪ ಪುತ್ಥಳಿ ಸ್ಥಾಪಿಸಿ

Last Updated 21 ಏಪ್ರಿಲ್ 2017, 5:29 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸೀಬಾರದಲ್ಲಿನ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು. ದೆಹಲಿಯ ಸಂಸತ್ ಭವನದ ಎದುರು ನಿಜಲಿಂಗಪ್ಪ ಪುತ್ಥಳಿ ಸ್ಥಾಪಿಸಬೇಕು’ ಎಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದರು.ಗುರುವಾರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಂಸತ್ತಿನ ಎದುರು ಎಸ್‌ಎನ್‌ ಪುತ್ಥಳಿ ಸ್ಥಾಪಿಸುವ ಕುರಿತು ಕರ್ನಾಟಕದ ಸಂಸದರು, ಮುಖ್ಯಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕರು, ಟ್ರಸ್ಟ್‌ನ ಅಧ್ಯಕ್ಷರ  ನ್ನೊಳಗೊಂಡು ಸ್ಪೀಕರ್ ಹಾಗೂ ಸರ್ಕಾರದೊಂದಿಗೆ ಚರ್ಚೆ ಮಾಡಬೇಕು’ ಎಂದು ಸಲಹೆ ನೀಡಿದರು.‘ನಿಜಲಿಂಗಪ್ಪ ಏಕೀಕರಣದ ರೂವಾರಿ ಮಾತ್ರವಲ್ಲ. ರಾಷ್ಟ್ರೀಯ ಕಾಂಗ್ರೆಸ್‌ನ ಮುಖಂಡರಾಗಿದ್ದರು. ಆದರ್ಶ ರಾಜಕಾರಣಿ. ಅವರು ಬಯಸಿದ್ದರೆ ದೇಶದ ಯಾವ ಉನ್ನತ ಹುದ್ದೆಯನ್ನಾದರೂ  ಅನುಭವಿಸ ಬಹುದಿತ್ತು. ಅವೆಲ್ಲವನ್ನೂ ಬಿಟ್ಟ ಸರಳ, ಸಜ್ಜನಿಕೆಯಿಂದ ಬಾಳಿದವರು. ಇಂಥ ನಾಯಕರ ಪುತ್ಥಳಿಯನ್ನು ಈ ಸಮಾಧಿ ಆವರಣದ ಎದುರು ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು. ‘ಪ್ರಸ್ತುತ ವಿಧಾನಸೌಧದ ಎದುರಿಗಿರುವ ಎಸ್‌ಎನ್‌ ಪುತ್ಥಳಿ ಸರಿಯಿಲ್ಲ. ಅವರು ಕಚ್ಚೆಪಂಚೆ ಕೋಟು ಹಾಕಿರುವ ಶೈಲಿಯ ಪುತ್ಥಳಿ ಪ್ರತಿಷ್ಠಾಪಿಸಬೇಕು. ಈಗಿರುವುದನ್ನು ಬದಲಾಯಿಸಬೇಕು’ ಎಂದು ಒತ್ತಾಯಿಸಿದರು.

‘ಎಸ್‌.ಎನ್‌.ಸ್ಮಾರಕ ಟ್ರಸ್ಟ್ ಸಾಕಷ್ಟು ಕೆಲಸ ಮಾಡುತ್ತಿದೆ. ಆ ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು, ಈ ಸ್ಥಳವನ್ನು ಪ್ರವಾಸೋದ್ಯಮ ತಾಣವ­ನ್ನಾಗಿ­ಸಬೇಕು. ಸೀಬಾರದ ಈ ಸ್ಥಳ ಪ್ರವಾಸಿ ಕೇಂದ್ರಗಳ ಪಟ್ಟಿಗೆ ಸೇರಬೇಕು’ ಎಂದು ಆಶಿಸಿದರು.ರಾಜ್ಯದಾದ್ಯಂತ ಜನ್ಮದಿನ ಮಾಡಿಸಿ: ‘ನಿಜಲಿಂಗಪ್ಪ ಜನ್ಮದಿನಾಚರಣೆ ಕೇವಲ ಪುತ್ಥಳಿಗೆ ಹಾರ ಹಾಕಿ ಮುಗಿಸುವಂಥದ್ದಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಶೇಷವಾಗಿ ಆಚರಿಸಿ, ಅವರ ಸಾಧನೆ, ಹೋರಾಟ, ಆದರ್ಶದ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು’ ಎಂದರು. ಬೆಂಗಳೂರಿನಲ್ಲಿ ನಿಜಲಿಂಗಪ್ಪ ಭವನ ನಿರ್ಮಾಣ ಮಾಡಬೇಕು. ನಿಜಲಿಂಗಪ್ಪನವರ ಜೀವನ ಚರಿತ್ರೆ ಗ್ರಾಮ ಪಂಚಾಯ್ತಿಯಿಂದ ಶಾಸನ ಸಭೆವರೆಗೂ ತಲುಪಬೇಕು. ಅದಕ್ಕಾಗಿ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಸರ್ಕಾರವೇ ಮುದ್ರಿಸಿ ಕೊಡಬೇಕು. ಅದು ಶೈಕ್ಷಣಿಕ ಸ್ಥಳಗಳ ಮೂಲಕ ಮಕ್ಕಳಿಗೆ ತಲುಪುವಂತಾಗಬೇಕು’ ಎಂದರು.

‘ಸ್ಮಾರಕ: ಮಧ್ಯಸ್ಥಿಕೆಗೆ ಸಿದ್ದ’: ‘ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವಾಗಿಸುವ ವಿಚಾರದ ಬಗ್ಗೆ ಮಾಹಿತಿ ಇದೆ. ಇದನ್ನು ಬಹಿರಂಗವಾಗಿ ಮಾತನಾಡುವುದು ಬೇಡ. ಸರ್ಕಾರವು ನಿಜಲಿಂಗಪ್ಪ ಕುಟುಂಬದ ಸದಸ್ಯ ರರೊಂದಿಗೆ ಕುಳಿತು ಗಂಭೀರವಾಗಿ ಚರ್ಚೆ ಮಾಡಬೇಕು. ಅವರಿಗೆ ಏನು ಬೇಕು ಎಂದು ತಿಳಿದುಕೊಂಡು ಒಂದು ನಿರ್ಧಾರಕ್ಕೆ ಬರಬೇಕು. ಈ ವಿಚಾರದಲ್ಲಿ ಬೇಕಾದರೆ ಸರ್ಕಾರ ಮತ್ತು ಕುಟುಂಬದ ನಡುವೆ ನಾನು ಮಧ್ಯಸ್ಥಿಕೆ ವಹಿಸುತ್ತೇನೆ’ ಎಂದರು.

‘ಭದ್ರಾ ಮೇಲ್ದಂಡೆ’ಗೂ ಬೆಂಬಲ: ‘ಬಯಲು ಸೀಮೆ ನೀರಾವರಿ ಹೋರಾಟಕ್ಕೆ ನಾವು ಆರಂಭದಿಂದಲೂ ಬೆಂಬಲ ನೀಡುತ್ತಿದ್ದೇವೆ. ವಾರದ ಹಿಂದೆ ಇದೇ ವಿಚಾರವಾಗಿ ಪ್ರವಾಸ ಆರಂಭಿಸಿದ್ದೆ. ಬಾಹುಬಲಿ ಸಿನಿಮಾ ವಿಷಯದಿಂದಾಗಿ ಅದಕ್ಕೆ ಅಡ್ಡಿಯಾಯಿತು. ಈ 28ರ ಪ್ರತಿಭಟನೆ ಮುಗಿದ ಮೇಲೆ ಪುನಃ ಹೋರಾಟ ಆರಂಭವಾಗುತ್ತದೆ. ತುಮಕೂರು, ಕೋಲಾರ, ಚಿತ್ರದುರ್ಗಕ್ಕೆ ನೀರಾವರಿ ಯೋಜನೆ ಕಲ್ಪಿಸುವ ಹೋರಾಟಕ್ಕೆ ಕೈ ಜೋಡಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ವಾಟಾಳ್ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT