ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಕ್ಕೆ ಜಾತಿ, ಆದಾಯ ಪ್ರಮಾಣಪತ್ರ ಕಡ್ಡಾಯ

Last Updated 21 ಏಪ್ರಿಲ್ 2017, 5:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರದ ವಿವಿಧ ಯೋಜನೆಯಡಿ ಅರ್ಹ ಅಂಗವಿಕಲ ಫಲಾನುಭವಿಗಳಿಗೆ ಸಿಗುವಂಥ ಎಲ್ಲ ರೀತಿಯ ಸೌಲಭ್ಯ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಂಗವಿಕಲರ ಕುಂದುಕೊರತೆಗಳ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಸ್ತಿ, ಜಮೀನು, ಆದಾಯ ಹೆಚ್ಚಿದ್ದರೆ ಅಂಗವಿಕಲರಾದರೂ ಸರ್ಕಾರದ ಸೌಲಭ್ಯ ಸಿಗುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸೇರಿದಂತೆ ಎಲ್ಲ ಅಂಗವಿಲಕರಿಗೂ ಸರ್ಕಾರ ಆದಾಯ ನಿಗದಿಗೊಳಿಸಿದೆ. ಗ್ರಾಮೀಣ ಭಾಗದ ಅಂಗವಿಕಲರಿಗೆ ವಾರ್ಷಿಕ ₹ 11,500, ನಗರಪ್ರದೇಶದ ನಿವಾಸಿಗಳಿಗೆ ₹ 17,500 ಒಳಗೆ ಆದಾಯವಿದ್ದರೆ ಮಾತ್ರ ಅಂಗವಿಲಕರ ಕೋಟಾದಡಿ ವಿವಿಧ ಸೌಲಭ್ಯಗಳು ಸಿಗಲಿವೆ ಎಂದು ತಿಳಿಸಿದರು.

ಆಧಾರ್ ಕಾರ್ಡ್ ನೋಂದಣಿಯನ್ನು ಕೆಲ ಅಂಗವಿಲಕರು ಮಾಡಿಸಿಲ್ಲ. ಆದ್ದರಿಂದ ನಮ್ಮ ಮನೆಗಳ ಸಮೀಪ ಅಥವಾ ನಾವಿರುವಲ್ಲಿಗೆ ಬಂದು ನೋಂದಣಿ ಮಾಡಿಸಿ ಎಂಬ ಬೇಡಿಕೆ ಇಟ್ಟಿದ್ದು, ತಾಲ್ಲೂಕಿನಲ್ಲಿ ಎಷ್ಟು ಮಂದಿ ಅಸಹಾಯಕ ಅಂಗವಿಕಲರಿದ್ದಾರೆ ಎಂಬ ಕುರಿತು ಮಾಹಿತಿ ಸಂಗ್ರಹಿಸಬೇಕು. ಅಲ್ಲದೆ ವಾಸಿಸುವ ವಿಳಾಸದ ಮಾಹಿತಿ ಪಡೆಯಬೇಕು ಎಂದು ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಜೆ.ವೈಶಾಲಿಗೆ ಸೂಚನೆ ನೀಡಿದರು.

ಸರ್ಕಾರದ ಸೌಲಭ್ಯವನ್ನು ನೇರವಾಗಿ ಅಂಚೆ ಕಚೇರಿ ಮೂಲಕ ತಲುಪಿಸಿ, ಸ್ಮಾರ್ಟ್ ಕಾರ್ಡ್ ಬೇಡ ಎಂಬ ಬೇಡಿಕೆಯನ್ನು ಅಂಗವಿಕಲರಲ್ಲಿ ಕೆಲವರು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ. ಫಲಾನುಭವಿಗಳು ಬ್ಯಾಂಕ್ ಅಥವಾ ಅಂಚೆ ಕಚೇರಿ ಇಷ್ಟಪಟ್ಟರೆ, ಅವುಗಳ ಮೂಲಕ ಸರ್ಕಾರದ ಸೌಲಭ್ಯಗಳು ದೊರೆಯಲಿವೆ. ಮುಂದಿನ ದಿನಗಳಲ್ಲಿ ಅಂಗವಿಕಲರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸುವ ಮೂಲಕ ನೇರವಾಗಿ ಆನ್‌ಲೈನ್‌ನಲ್ಲೇ ಸೌಲಭ್ಯ ದೊರಕಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಜಗದೀಶ್ ಮಾತನಾಡಿ, ಶಸ್ತ್ರಚಿಕಿತ್ಸಕರ ಮತ್ತು ವೈದ್ಯರ ಸಹಿಯನ್ನೆ ನಕಲು ಮಾಡಿ ಸರ್ಕಾರದ ಯೋಜನೆಗಳನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಇಂಥ ಪ್ರಕರಣಗಳು ಪತ್ತೆಯಾದರೆ, ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಇಲಾಖೆ ಅಧಿಕಾರಿ ಜೆ.ವೈಶಾಲಿ, ‘ಅರ್ಹ ಅಂಗವಿಕಲರು ಮಾಸಾಶನ ಪಡೆಯಲು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಕಡ್ಡಾಯ. ಆದರೆ, ಸಾಧನ ಸಲಕರಣೆ ಪಡೆಯಲು ಇವುಗಳ ಅಗತ್ಯವಿಲ್ಲ. ಪಡಿತರ ಚೀಟಿ ಇದ್ದರೆ ಸಾಕು’ ಎಂದು ತಿಳಿಸಿದರು.ನಿವೇಶನ ರಹಿತರಿಗೆ ನಿವೇಶನ, ಆಶ್ರಯ ಮನೆ ಹಂಚಿಕೆ, ಅರ್ಹ ವ್ಯಕ್ತಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಇಲಾಖೆಯಿಂದ ಧನಸಹಾಯದ ಜತೆಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ವ್ಯವಸ್ಥೆ, ಅಡುಗೆ ಅನಿಲ ಸಂಪರ್ಕ, ವಿವಿಧ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಸಾಧನಾ ಸಲಕರಣೆಗಳು, ತ್ರಿಚಕ್ರ ವಾಹನಗಳು ಸೇರಿದಂತೆ ಮತ್ತಿತರ ಇಲಾಖೆ ಸೌಲಭ್ಯಗಳನ್ನು ಅಂಗವಿಕಲರು ಪಡೆದುಕೊಳ್ಳಬಹುದಾಗಿದೆ ಎಂದರು.

ಜಿಲ್ಲೆಯ ಆರು ತಾಲ್ಲೂಕುಗಳಿಂದ ಬಂದಿದ್ದ ಅಂಗವಿಕಲರು ವಿವಿಧ ರೀತಿಯ ಸಮಸ್ಯೆಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಳಿ ತೋಡಿಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT