ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳ ಮನೆ ಬಾಗಿಲಲ್ಲೇ ಚಿಕಿತ್ಸೆ

Last Updated 21 ಏಪ್ರಿಲ್ 2017, 6:05 IST
ಅಕ್ಷರ ಗಾತ್ರ

ಬೀದರ್: ನಗರಕ್ಕೆ ಹೈಟೆಕ್ ‘ಸಂಚಾರಿ ನೇತ್ರ ಚಿಕಿತ್ಸಾಲಯ’ ಬಂದಿದೆ. ಇಲ್ಲಿನ ಡಾ. ಸಿದ್ದಾರೆಡ್ಡಿ ದೃಷ್ಟಿ ಆಸ್ಪತ್ರೆಯು ಸಂಚಾರಿ ನೇತ್ರ ಚಿಕಿತ್ಸಾಲಯ ಸೇವೆಯನ್ನು ಆರಂಭಿಸಿದ್ದು, ರೋಗಿಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ದೊರೆಯಲಿದೆ.ಆಸ್ಪತ್ರೆಯು ಇಲ್ಲಿನ ಮೈಲೂರಿನಲ್ಲಿ ಗುರುವಾರ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಿತ್ತು. ನಗರದ ಎಲ್ಲ 35 ವಾರ್ಡ್‌ಗಳಲ್ಲೂ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲು ಉದ್ದೇಶಿಸಿದೆ.

ವಾಹನದಲ್ಲಿ ರೋಗಿಗಳ ತಪಾಸಣೆಗೆ ಎರಡು ಪ್ರತ್ಯೇಕ ವಿಭಾಗ, ಆಪ್ತ ಸಮಾಲೋಚಕ, ಪೊರ್ಟೆಬಲ್ ಕಂಪ್ಯೂಟರ್ ಕಣ್ಣು ಪರೀಕ್ಷೆ ಯಂತ್ರ, ರಕ್ತದೊತ್ತಡ, ಮಧುಮೇಹ ಪರೀಕ್ಷಾ ಯಂತ್ರ, ವಿಸನ್‌ ಚಾರ್ಟ್‌, ಕನ್ನಡಕ ಅಂಗಡಿ ಇದೆ. ರೋಗಿಗಳಿಗೆ ಕುಳಿತುಕೊಳ್ಳಲು 10 ಆಸನಗಳು ಇವೆ.  ವಾಹನದ ಮೇಲೆ ಸೋಲಾರ್ ಪ್ಲೇಟ್‌ ಅಳವಡಿಸಲಾಗಿದೆ. ಚಿಕಿತ್ಸಾಲಯದಲ್ಲಿ ಇರುವ ಯಂತ್ರ, ಫ್ಯಾನ್, ದೀಪಗಳು ಸೌರಶಕ್ತಿ ಮೇಲೆಯೇ ಕಾರ್ಯ ನಿರ್ವಹಿಸುತ್ತವೆ.
ಅಗತ್ಯವಾದಾಗ ಬಳಸಲು ಬ್ಯಾಟರಿ ಕೂಡ ಇದೆ. ನೆರಳಿನ ವ್ಯವಸ್ಥೆ ಕಲ್ಪಿಸಲು ಟೆಂಟ್ ಹಾಕುವ ಸೌಕರ್ಯವೂ ಇದೆ ಎಂದು ತಿಳಿಸುತ್ತಾರೆ ಡಾ. ಸಿದ್ದಾರೆಡ್ಡಿ ದೃಷ್ಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಆನಂದಂ ಪಿಳ್ಳೈ.

‘ಮೊದಲ ಬಾರಿಗೆ ಅತ್ಯಾಧುನಿಕ ಸಂಚಾರಿ ನೇತ್ರ ಚಿಕಿತ್ಸಾಲಯವನ್ನು ಬೀದರ್‌ಗೆ ಪರಿಚಯಿಸಲಾಗಿದೆ. ಇದನ್ನು ಬಳಸಿಕೊಂಡು ಇಡೀ ಜಿಲ್ಲೆಯಲ್ಲಿ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲು ಯೋಜಿಸಲಾಗಿದೆ’ ಎಂದು ಹೇಳುತ್ತಾರೆ ಅವರು.ಮೊದಲು ನಗರದ ಎಲ್ಲ ವಾರ್ಡ್‌ಗಳಲ್ಲಿ ಉಚಿತ ಶಿಬಿರ ನಡೆಸಲಾಗುವುದು. ಹಂತ ಹಂತವಾಗಿ ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ಇತರೆ ತಾಲ್ಲೂಕುಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು. ಸಾರ್ವಜನಿಕರು ಈ ಸೇವೆಯ ಪ್ರಯೋಜನ ಪಡೆಯಬೇಕು. ರೋಗಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು  ಆನಂದಂ ಪಿಳ್ಳೈ ಹೇಳಿದರು.

ಚಾಲನೆ: ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಸಂಚಾರಿ ನೇತ್ರ ಚಿಕಿತ್ಸಾಲಯಕ್ಕೆ ಚಾಲನೆ ನೀಡಿದರು.ಡಾ. ಎಸ್‌.ಎಸ್‌. ಸಿದ್ದಾರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಗುರಮ್ಮ ಸಿದ್ದಾರೆಡ್ಡಿ, ಶೇಖ್ ಮುಸ್ತಾಕ್‌ ಅಲಿ, ಲೀಲಾವತಿ ಚಾಕೋತೆ, ಡಾ.ಎಚ್.ಬಿ.ಭರಶಟ್ಟಿ, ಕೆ.ಎಸ್.ಚಳಕಾಪುರೆ, ಡಾ. ರಶ್ಮಿ ಶೀಲವಂತ, ಡಾ.ದಯಾನಂದ ಮೂರ್ತಿ, ಸತ್ಯಮ್ಮ ವಿಶ್ವಕರ್ಮ, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT