ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಸಲಹೆ

Last Updated 21 ಏಪ್ರಿಲ್ 2017, 6:07 IST
ಅಕ್ಷರ ಗಾತ್ರ

ಕೊಪ್ಪಳ: ‘ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಬೀದರ್‌ ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣಾ ತಾಯಿ ಹೇಳಿದರು.ನಗರದ ಪ್ರವಚನ ಸೇವಾ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ನಡೆದ ‘ಜೀವನದರ್ಶನ’ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.

‘ಪ್ರಶ್ನಿಸುವ ಮನೋಭಾವ ಇದ್ದವರೇ ಒಬ್ಬ ಶ್ರೇಷ್ಠ ವಿಜ್ಞಾನಿ. ತತ್ವಜ್ಞಾನಿ, ದಾರ್ಶನಿಕರು, ಸಾಧಕರು ಆಗಿದ್ದಾರೆ. ರೂಢಿಗತ ಸಂಪ್ರದಾಯಗಳನ್ನು ಮರುಮಾತಿಲ್ಲದೇ ಒಪ್ಪಿಕೊಳ್ಳುವುದರಿಂದ ನಾವು ಹೊಸ ಆಲೋಚನೆಗಳನ್ನು ಮಾಡುವುದೇ ಇಲ್ಲ. ಮುಖ್ಯವಾಗಿ ಮಕ್ಕಳನ್ನು ಮಾತನಾಡಲು, ಪ್ರಶ್ನಿಸಲು ಬಿಡಬೇಕು’ ಎಂದು ಅವರು ಹೇಳಿದರು.

‘12ನೇ ಶತಮಾನದಲ್ಲಿ ಇಂಥ ರೂಢಿಗತ ಸಂಪ್ರದಾಯಗಳನ್ನು ಪ್ರಶ್ನಿಸಿದ್ದರಿಂದಲೇ ಅನೇಕ ಶರಣರು ಹುಟ್ಟಿಕೊಂಡರು. ಶರಣರು ತಮ್ಮ ಕಾಯಕ ಮಾಡುತ್ತಲೇ ಜನಸಾಮಾನ್ಯರೊಳಗೆ ಸಾಮಾನ್ಯರಾಗಿ ಬೆರೆತರು. ಪ್ರತಿ ಶರಣರೂ ಪ್ರವಾದಿ ಸಮಾನರಾಗಿದ್ದರು. ಆದರೆ, ಸಂತರೆನಿಸಿಕೊಂಡವರು ಅಧ್ಯಾತ್ಮ ಜೀವನಕ್ಕೆ ಕಾಲಿಟ್ಟ ಬಳಿಕ ತಮ್ಮ ಕಾಯಕದ ಬದುಕು ಮುಂದುವರಿಸಲು ಆಗಲಿಲ್ಲ’ ಎಂದು ಶರಣರು ಮತ್ತು ಸಂತರ ನಡುವಿನ ಭಿನ್ನತೆಯನ್ನು ವಿವರಿಸಿದರು.

‘ಸರಿಯಾದ ಗುರುವಿಗೆ ಶರಣಾಗಿ ನಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು. ಶರಣಾಗತಿ ಎಂದರೆ ಗುಲಾಮಗಿರಿ ಅಲ್ಲ. ಗುಲಾಮಗಿರಿ ಇದ್ದಲ್ಲಿ ಶಿಷ್ಯತ್ವ ಬರುವುದಿಲ್ಲ. ಗುರುವಿನ ಬಳಿ ಹೋಗಿ ಭೌತಿಕ ಸಂಪತ್ತು ಕೇಳಬಾರದು. ಬದಲಾಗಿ ಅನಂತ ಜ್ಞಾನದ ಸಂಪತ್ತನ್ನು ಕೇಳಿ ಗಳಿಸಬೇಕು. ಈ ರೀತಿ ಗುರುವಿನ ಪುತ್ರನಾಗಬೇಕು. ಪುತ್ರನಿಗಿರುವ ಸಲುಗೆಯೇ ಗುರುವಿನ ಮೇಲೂ ಇದ್ದು ಜ್ಞಾನ ಸಂಪತ್ತಿನ ವಾರಸುದಾರರಾಗಬೇಕು’ ಎಂದು ಅವರು ಹೇಳಿದರು.
‘ಜಗತ್ತಿನಲ್ಲಿ ಹಲವಾರು ಅಚ್ಚರಿಗಳಿವೆ. ನಮಗೆ ಅಚ್ಚರಿಪಡುವುದೂ ಗೊತ್ತಿರಬೇಕು. ಹಾಗೆ ನೋಡಿದರೆ ಈ ನಮ್ಮ ದೇಹವೇ ಒಂದು ಅಚ್ಚರಿ.ಆದರೆ, ಇದರ ಅಂತರಂಗವನ್ನು ನೋಡದೆ ಕೇವಲ ಭೌತಿಕ ಸೌಂದರ್ಯದತ್ತ ಗಮನ ಕೊಡುತ್ತೇವೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT