ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದ್ಯಪಾನ ಮುಕ್ತ’ ಘೋಷಣೆಗೆ ಸೀಮಿತ

Last Updated 21 ಏಪ್ರಿಲ್ 2017, 6:16 IST
ಅಕ್ಷರ ಗಾತ್ರ

ಕುಷ್ಟಗಿ: ‘ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ಹಾವಳಿ ಮುಂದುವರಿದಿದ್ದು, ಸಾಮಾಜಿಕ ವ್ಯವಸ್ಥೆ ಹದಗೆಡುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.‘ಪಟ್ಟಣದಿಂದ ಮದ್ಯವನ್ನು ತಂದು ಕಿರಾಣಿ, ಚಹದ ಅಂಗಡಿ, ಪಾನ್‌ಬೀಡಾ ಅಂಗಡಿಗಳು ಸೇರಿದಂತೆ ಕೆಲವರು ಮನೆಯಲ್ಲಿಯೇ ನಿರಾತಂಕವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕ್ರಮ ಜರುಗಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಸುಲಭವಾಗಿ ಮದ್ಯ ಕೈಗೆ ಸಿಗುತ್ತಿರುವುದರಿಂದ ಗ್ರಾಮದಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಬಾಲಕರು, ಯುವಕರು ಮದ್ಯದ ದಾಸರಾಗುತ್ತಿದ್ದಾರೆ. ದುಡಿದ ಹಣದ ಬಹಳಷ್ಟನ್ನು ಕುಡಿತದ ಚಟಕ್ಕೆ ಖರ್ಚು ಮಾಡುತ್ತಿರುವುದರಿಂದ ಅನೇಕ ಬಡ ಕುಟುಂಬಗಳು ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಬಹುತೇಕ ಮನೆಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ’ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಸರಿಗೆ ಮದ್ಯ ಮುಕ್ತ: ‘ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಮುಂದಾಗಿದ್ದ ಪೊಲೀಸರು ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿ ಕಠಿಣ ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದ ನಂತರ ಕಡಿಮೆಯಾಗಿತ್ತು. ಪೊಲೀಸರು ‘ಮದ್ಯಪಾನ ಮುಕ್ತ ಗ್ರಾಮ’ ನಾಮಫಲಕ ಅಳವಡಿಸಿದ್ದರು. ಆದರೆ ಈಗ ಯಥಾರೀತಿ ಮುಂದುವರೆದಿದ್ದು ಮದ್ಯ ಮುಕ್ತ ಗ್ರಾಮ ಹೆಸರಿಗೆ ಮಾತ್ರ ಎನ್ನುವಂತಾಗಿದೆ’ ಎಂದು ಗ್ರಾಮದ ಪ್ರಮುಖರಾದ ಶರಣಪ್ಪ ಲೈನದ, ಶಿವಪುತ್ರಪ್ಪ ಗುರಿಕಾರ, ಹನುಮಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮದ 10– 15 ಕಡೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಮೊದಲು ದರ ಕಡಿಮೆ ಇತ್ತು. ಮದ್ಯಪಾನ ಮುಕ್ತ ಗ್ರಾಮ ಎಂದು ಘೋಷಿಸಿದ ನಂತರ ಹತ್ತು ಇಪ್ಪತ್ತು ರೂಪಾಯಿ ಹೆಚ್ಚಾಗಿದೆ’ ಎಂದು ಜನ ವಿವರಿಸಿದರು.

ಸಿಪಿಐ ಹೇಳಿಕೆ: ‘ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಮದ್ಯ ಅಕ್ರಮ ಮಾರಾಟ ಮುಂದುವರಿದಿದ್ದರೆ ನಿಯಂತ್ರಿಸಲಾಗುವುದು.  ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಗಿರೀಶ್‌ ರೋಡ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT