ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾದಾಯಿಗೆ ನೀರು ಹರಿಸಲು ಆಗ್ರಹ’

Last Updated 21 ಏಪ್ರಿಲ್ 2017, 7:25 IST
ಅಕ್ಷರ ಗಾತ್ರ

ನರಗುಂದ: ನೀರಿನ ಹೆಸರಲ್ಲಿ ರಾಜಕಾರಣ ನಿಲ್ಲಿಸಿ ಮಲಪ್ರಭೆಗೆ ಮಹಾದಾಯಿ ನೀರು ಹರಿಸಲು ಮುಂದಾಗಬೇಕು ಎಂದು   ಮಹಾದಾಯಿ ಹೋರಾಟ ಸಮಿತಿ ಸದಸ್ಯ ಬಸಪ್ಪ ಭಜಂತ್ರಿ  ಆಗ್ರಹಿಸಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 645ನೇ ದಿನವಾದ ಗುರುವಾರ  ಮಾತನಾಡಿದರು.ಉತ್ತರ ಕರ್ನಾಟಕ ನಿರಂತರ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಇಲ್ಲಿಯವರೆಗೆ ಆಯ್ಕೆಯಾಗಿ ಆಡಳಿತ ನಡೆಸಿದ  ಈ  ಭಾಗದ ಜನಪ್ರತಿನಿಧಿಗಳಿಂದ ಎಳ್ಳಷ್ಟು ಪ್ರಯತ್ನ ನಡೆಯುತ್ತಿಲ್ಲ. ಇದರಿಂದ ಈ ಭಾಗದ ರೈತರು ತೊಂದರೆಗೆ ಒಳಗಾಗುತ್ತಿದ್ದಾರೆ. ಆದರೆ ರೈತರ ಸಂಕಷ್ಟಕ್ಕೆ ಯಾವೊಬ್ಬ ಜನಪ್ರತಿನಿಧಿಯೂ ಕನಿಷ್ಠ ಸ್ಪಂದನೆ ತೋರುತ್ತಿಲ್ಲ. ಇದು ಆತಂಕಕಾರಿ ಸಂಗತಿ ಎಂದು ಆರೋಪಿಸಿದರು.

25 ವರ್ಷಗಳಿಂದ ಉತ್ತರ ಕರ್ನಾಟಕದ ರೈತರ ಶೋಷಣೆ ನಡೆಯುತ್ತಲೇ ಇದೆ. ಇದನ್ನು ನಿಲ್ಲಿಸದಿದ್ದರೆ ಶಾಸಕ, ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತಿದೆ.  ನ್ಯಾಯಮಂಡಳಿ ತೀರ್ಪನ್ನು ಪದೇ ಪದೇ ಮುಂದೂಡುವ ಹುನ್ನಾರ ನಡೆಯುತ್ತಿದೆ. ಇದನ್ನು ತಡೆಯಲು ಮುಂದಾಗಬೇಕು. ಈ ಧೋರಣೆ ಮುಂದುವರಿದರೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾದಾಯಿ ಹೋರಾಟ ಸಮಿತಿ  ಸದಸ್ಯ ಚಂದ್ರಗೌಡ ಪಾಟೀಲ ಮಾತನಾಡಿ, ‘ನಾವು ನಮ್ಮ ನ್ಯಾಯುಯುತ ಹಕ್ಕನ್ನು ಕೇಳುತ್ತಿದ್ದೇವೆ. ಅದನ್ನು ಪೂರೈಸಲು ಮುಂದಾಗಬೇಕು. ಇಲ್ಲವಾದರೆ ರೈತರ ರೊಚ್ಚಿಗೇಳುತ್ತಾರೆ. ರೈತರು ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಿದೆ’ ಎಂದು ಹೇಳಿದರು.‘ನಮ್ಮ ಗೋರಿ ಮೇಲೆ ಆಡಳಿತ ನಡೆಸುವುದು ನಿರಂತರವಾಗುತ್ತದೆ. ಇದರ ಬಗ್ಗೆ ರೈತರು ಎಚ್ಚರಗೊಳ್ಳ ಬೇಕಿದೆ. ಸಂಘಟಿತವಾಗಿ ಹೋರಾಟ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಜ್ಯ ಹಾಗೂ ಕೇಂದ್ರ  ಸರ್ಕಾರ ಮಹಾದಾಯಿಗೆ ಸರಿಯಾಗಿ ಗಮನ ಹರಿಸುತ್ತಿಲ್ಲ. ಇದು ಸಲ್ಲದು. ಕೂಡಲೇ ನಮ್ಮ ಪಾಲಿನ ನೀರನ್ನು ನಮಗೆ ದೊರಕಿಸಿಕೊಳ್ಳಲು  ಮುಂದಾಗಬೇಕು’  ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಎಸ್‌.ಬಿ. ಜೋಗಣ್ಣವರ, ಹನಮಂತ ಸರನಾಯ್ಕರ, ವಾಸು ಚವ್ಹಾಣ, ವಿರೂಪಾಕ್ಷಿ ಪಾರಣ್ಣವರ, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಗುಡದೇರಿ, ಯಲ್ಲಪ್ಪ ಚಲುವಣ್ಣವರ, ವೀರಣ್ಣ ಸೊಪ್ಪಿನ, ಲಕ್ಷ್ಮಣ ಮುನೇನ ಕೊಪ್ಪ, ಗಂಗಮ್ಮ ಹಡಪದ, ಶ್ರೀಮತಿ ಆಯಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT