ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಡಿಗ್ರಿ ಸೆಲ್ಸಿಯಸ್‌ ದಾಟಿದ ತಾಪಮಾನ

Last Updated 21 ಏಪ್ರಿಲ್ 2017, 7:28 IST
ಅಕ್ಷರ ಗಾತ್ರ

ಗದಗ: ಕಾದು ಕಾವಲಿಯಂತಾದ ರಸ್ತೆಗಳು, ಬೆಂಕಿಯ ಕೆನ್ನಾಲಿಗೆಯಂತೆ ಮುಖಕ್ಕೆ ರಾಚುವ ಬಿಸಿಲು,  ಚರ್ಮ ಸುಡುವಷ್ಟು ತೀವ್ರತೆಯ ಉಷ್ಣಗಾಳಿ, ಬಿಸಿಲಿನ ಝಳದಿಂದ ಮನೆಯಿಂದ ಹೊರಬರಲು ಭಯಪಡುತ್ತಿರುವ ಜನರು.. ಕಳೆದ ಒಂದು ವಾರದಿಂದ ನಗರದ ಜನತೆ ಬಿಸಿಲಿನ ಉಗ್ರ ಸ್ವರೂಪದಿಂದ ತತ್ತರಿಸಿ ಹೋಗಿದ್ದಾರೆ. ಈ ಬಾರಿಯ ಉಷ್ಣಾಂಶವು, ಅಂದರೆ 75 ವರ್ಷಗಳ ಹಿಂದೆ ಏಪ್ರಿಲ್‌ ತಿಂಗಳಲ್ಲಿ ದಾಖಲಾಗಿದ್ದ ಸಾರ್ವಕಾಲಿಕ ದಾಖಲೆಯನ್ನು (41.1 ಡಿಗ್ರಿ ಸೆ.) ಸಮೀಪಿಸುತ್ತಿದೆ. ನಗರದಲ್ಲಿ ಗುರುವಾರ 40 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಕಳೆದ ಒಂದು ವಾರದಿಂದ (ಏ.12ರಿಂದ ಏ.19ರವರೆಗೆ) ನಗರದಲ್ಲಿ ಸರಾಸರಿ 39ರಿಂದ 40 ಡಿಗ್ರಿ ಸೆ. ಉಷ್ಣಾಂಶ ದಾಖಲಾಗುತ್ತಿದ್ದು, ನಗರವಾಸಿಗಳು ಬಿಸಿಲಿನ ತಾಪಕ್ಕೆ ಬಸವಳಿದು ಹೋಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಸರಾಸರಿ 36 ಡಿಗ್ರಿ ಸೆ. ಆಸುಪಾಸಿನಲ್ಲಿದ್ದ ಉಷ್ಣಾಂಶವು ಏಪ್ರಿಲ್‌ನಲ್ಲಿ 40 ಡಿಗ್ರಿ ಸೆ. ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.

ನಗರದ ಏಪ್ರಿಲ್‌ ತಿಂಗಳ ಉಷ್ಣಾಂಶಕ್ಕೆ ಸಂಬಂಧಪಟ್ಟಂತೆ ಭಾರತೀಯ ಹವಾಮಾನ ಇಲಾಖೆಯ ಒಂದು ದಶಕದ ಅಂಕಿ ಅಂಶಗಳನ್ನು ಅವಲೋಕಿಸಿದಾಗ, 2010 ಮತ್ತು 2016ರಲ್ಲಿ ಮಾತ್ರ ಉಷ್ಣಾಂಶ 40  ಡಿಗ್ರಿ ಸೆ. ಗಡಿ ದಾಟಿದೆ. ಕಳೆದ ವರ್ಷ ಅಂದರೆ 2016ರ ಏಪ್ರಿಲ್‌ 27ರಂದು ಗರಿಷ್ಠ 40.5 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿತ್ತು. ನಗರದಲ್ಲಿ 1941ರ ಏಪ್ರಿಲ್‌ 23ರಂದು ದಾಖಲಾದ (41.1 ಡಿಗ್ರಿ ಸೆ.) ಉಷ್ಣಾಂಶವೇ ಈವರೆಗಿನ ಸಾರ್ವಕಾಲಿಕ ದಾಖಲೆ.

ಹವಾಮಾನ ಇಲಾಖೆ ನೀಡಿರುವ ಮುನ್ನೋಟದಂತೆ  ಏಪ್ರಿಲ್‌ನಲ್ಲೇ ಈ ದಾಖಲೆ ಮುರಿಯುವ ಸಾಧ್ಯತೆಗಳಿವೆ. ಏ. 25, 26, 27ರಂದು ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆ. ದಾಟಬಹುದು ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಮೈ ಸುಡುತ್ತಿದೆ ಬಿಸಿಗಾಳಿಗದಗ ಜಿಲ್ಲೆ ಒಣ ಭೂಮಿಯಿಂದ ಕೂಡಿದ ಭೂ ಪ್ರದೇಶವಾಗಿದ್ದು, ಕಳೆದ 4 ವರ್ಷಗಳಿಂದ ಸಮರ್ಪಕವಾಗಿ ಮಳೆ ಲಭಿಸದೆ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಉಷ್ಣಾಂಶದಲ್ಲಿ ಏರಿಕೆ ಆಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತೀವ್ರತೆ ಹೆಚ್ಚು ತಟ್ಟುತ್ತಿದೆ ಎನ್ನುತ್ತಾರೆ  ಹವಾಮಾನ ಇಲಾಖೆಯ ಅಧಿಕಾರಿ ರಾಜು ರೋಖಡೆ.

ನಗರದಲ್ಲಿ ಜಲಮೂಲಗಳು ಕಣ್ಮರೆ ಆಗಿರುವ ಕಾರಣ ತೇವಾಂಶ ಉತ್ಪತ್ತಿ ಆಗುತ್ತಿಲ್ಲ. ಹೀಗಾಗಿ ನಗರದಲ್ಲಿ ಬಿಸಿಲ ಧಗೆಯ ಜತೆಗೆ ಒಣ ಹವೆ ಕೂಡ ಹೆಚ್ಚಿದೆ ಎಂದೂ ರೋಖಡೆ ಹೇಳುವರು.ಬಿಸಿಲ ಧಗೆಯ ಜತೆಗೆ ಒಣ ಹವೆ ಇರುವುದರಿಂದ ರಾತ್ರಿ ವಿಪರೀತ ಸೆಕೆಯ ಅನುಭವಾಗುತ್ತಿದೆ.  ಎಸ್‌.ಎಂ.ಕೃಷ್ಣಾ ನಗರ, ರಾಜೀವ್‌ಗಾಂಧಿ ನಗರ, ಶಹಾಪುರ ಪೇಟೆ, ವಿವೇಕಾನಂದ ಬಡಾವಣೆ, ಬೆಟಗೇರಿ, ಖಾನತೋಟ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಸೆಖೆ ತಾಳಲಾರದೆ, ರಾತ್ರಿ ವೇಳೆ ಮನೆಯಂಗಳದಲ್ಲಿ, ತಾರಸಿ ಮೇಲೆ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುತ್ತಿದ್ದಾರೆ. ಸೊಳ್ಳೆ ಪರದೆಯೇ ಹೊದಿಕೆಯೂ ಆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT