ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ರಕ್ಷಣೆಗೆ ಪೊಲೀಸರು ಕಂಕಣಬದ್ಧ’

Last Updated 21 ಏಪ್ರಿಲ್ 2017, 8:41 IST
ಅಕ್ಷರ ಗಾತ್ರ

ಹಾರೂಗೇರಿ: ತಾಯಿ–ತಂದೆ ಹಾಗೂ ಮಡದಿ ಮಕ್ಕಳಿಂದ ದೂರವಿದ್ದು ನಿರಂತರ ವಿಶ್ರಾಂತಿಯಿಲ್ಲದೆ ಸಮಾಜದ ರಕ್ಷಣೆಗಾಗಿ ಹಾಗೂ ಶಾಂತಿ ಕಾಪಾಡಲು ಹಗಲಿರುಳೂ ಶ್ರಮಿಸುವ ಪೊಲೀಸರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅಥಣಿ ಡಿವೈಎಸ್‌ಪಿ ಸತೀಶ ಚಿಟಗುಬ್ಬಿ ಹೇಳಿದರು.ಸ್ಥಳೀಯ ಶ್ರೀ ಸಿದ್ದಿವಿನಾಯಕ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಹಾಗೂ ಹಾರೂಗೇರಿ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಿದ್ದ ‘ನಾವು ಪೊಲೀಸರು ಒಂದೇ ಕುಟುಂಬದವರು’ ಕುಂದು ಕೊರತೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವಾರು ಕಷ್ಟಗಳ ಮಧ್ಯದಲ್ಲಿ ತಮ್ಮ ಸುಖವನ್ನು ಬದಿಗಿಟ್ಟು ಸಮಾಜದ ರಕ್ಷಣೆಗಾಗಿ ಕಂಕಣಬದ್ಧರಾಗುವ ನೀವು ನಿಮ್ಮ ಕುಟುಂಬವನ್ನು ಹಾಗೂ ಸಂಬಂಧಿ ಕರನ್ನು ನಿರ್ಲಕ್ಷಿಸಬಾರದು. ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ ಇಲಾಖೆ ಹಾಗೂ ಕುಟುಂಬಕ್ಕೆ ಒಳ್ಳೆಯ ಹೆಸರು ತರಬೇಕು. ದೇಶ ಮತ್ತು ನಾಡಿನಲ್ಲಿ ಸ್ವಾಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸರ ಕೊಡುಗೆ ಅನನ್ಯವಾದದ್ದು ಎಂದು ಹೇಳಿದರು.

ಹಾರೂಗೇರಿ ಠಾಣೆಯ ಪಿಎಸ್‌ಐ ಮಹಮ್ಮದ್ ರಫೀಕ್ ತಹಶೀಲ್ದಾರ್ ಮಾತನಾಡಿ, ಡಿ.ಜಿ. ಹಾಗೂ ಐ.ಜಿ.ಪಿ ಅವರ ಮಾರ್ಗದರ್ಶನದಂತೆ ರಾಜ್ಯ ದಲ್ಲಿಯೇ ಪ್ರಪ್ರಥಮಬಾರಿಗೆ ‘ನಾವು ಪೊಲೀಸರು ಒಂದೇ ಕುಟುಂಬದವರು’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ಪೊಲೀಸ್ ಹಾಗೂ ಸಮುದಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಗಲು ರಾತ್ರಿ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಬೆನ್ನಲುಬಾಗಿ ಕುಟುಂಬದವರು ಸಹಕರಿಸುತ್ತಿದ್ದು, ಸಮಾಜ ನಿಮಗೆ ಋಣಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ವಿನಾಯಕ ಖೋತ, ಇಸ್ಮಾಯಿಲ್ ದುಂಡಮನಿ, ರಾಜು ಕಟ್ಟೇಕಾರ, ಜಿ.ಎನ್.ಇಂಚಲ ಹಾಗೂ ಪ್ರಕಾಶ ಕವಟ ಕೊಪ್ಪ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಬಹುಮಾನ ನೀಡಿ ಗೌರವಿಸಲಾಯಿತು.ಪೊಲೀಸ್‌್ ಸಿಬ್ಬಂದಿ ತಮ್ಮ ಕರ್ತವ್ಯ ಮತ್ತು ಕುಟುಂಬ ನಿರ್ವಹಣೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಪೊಲೀಸ್‌ ಸಿಬ್ಬಂದಿ ತಮ್ಮ ಕುಟುಂಬ ಪರಿವಾರದೊಂದಿಗೆ ಮನ ರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಸಹ ಭೋಜನ ಸವಿದರು. ಬಸವದರ್ಶನ ಸಂಗೀತ ಬಳಗದವರು ಭಾವಗೀತೆ, ಭಕ್ತಿಗೀತೆ ಹಾಗೂ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.

   
ರಾಯಬಾಗ ಸಿಪಿಐ ಪ್ರೀತಮ್ ಶ್ರೇಯಕರ, ಎಎಸ್‌ಐ ಬಿ.ಎಚ್. ಬಿಸಲ್‌ ನಾಯಕ, ಸಿಬ್ಬಂದಿ ಐ.ಎಂ. ದುಂಡ ಮನಿ, ವಿ.ಎನ್.ಖೋತ, ಆರ್.ಬಿ. ನಾಯಿಕ, ಎ.ಬಿ.ಮಂಗಸೂಳಿ, ವಿಷ್ಣು ಗಾಯಕವಾಡ, ಹಣಮಂತ ಚಗಲಾ, ಎಸ್.ವೈ.ತಳವಾರ, ರಾಜು ಕಟ್ಟೇಕಾರ, ಎಸ್.ವಿ.ಭೋಸಲೆ, ಜಿ.ಎನ್. ಇಂಚಲ, ಜಿ.ಎ.ಹಾವರೆಡ್ಡಿ, ಆರ್.ಎಚ್. ಭಜಂತ್ರಿ, ಎಸ್.ಜೆ.ಬಡಿಗೇರ, ಎಸ್.ಬಿ. ಡಂಗೆನ್ನ ವರ ಹಾಗೂ ಕುಟುಂಬದವರು ಕಾರ್ಯಕ್ರಮದಲ್ಲಿ ಇದ್ದರು.ಎಚ್.ಎನ್. ಮೋಮಿನ್ ಕಾರ್ಯಕ್ರಮ ನಿರೂಪಿಸಿದರು. ಠಾಣಾಧಿಕಾರಿ ಮಹಮ್ಮದ್ ರಫೀಕ್ ತಹಶೀಲ್ದಾರ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT