ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಕಲ್ಯಾಣ ಮಹೋತ್ಸವ 28ರಿಂದ

Last Updated 21 ಏಪ್ರಿಲ್ 2017, 8:46 IST
ಅಕ್ಷರ ಗಾತ್ರ

ಕಸಮಳಗಿ (ಖಾನಾಪುರ): ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಕಸಮಳಗಿ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಪ್ರತಿಷ್ಠಾಪನೆ ಮತ್ತು ನೂತನ ವಾಗಿ ನಿರ್ಮಾಣಗೊಂಡ ಜೈನ ಬಸದಿಯ ಲೋಕಾರ್ಪಣೆ ಅಂಗವಾಗಿ ಇದೇ 28ರಿಂದ ಪಂಚ ಕಲ್ಯಾಣ ಮಹೋತ್ಸವ ವನ್ನು ಆಯೋಜಿಸಲಾಗಿದೆ ಎಂದು ಗ್ರಾಮದ ಜಿನ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪಾಲ ಸಾವಂತ ಹೇಳಿದರು.

ಗ್ರಾಮದಲ್ಲಿ ನಿರ್ಮಾಣ ಹಂತದ ಜಿನ ಮಂದಿರದ ಆವರಣದಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ 2005 ಇಸ್ವಿಯಲ್ಲಿ ಗ್ರಾಮದ ಪ್ರಾಥಮಿಕ ಶಾಲೆಗೆ ಕಂಪೌಂಡ್ ನಿರ್ಮಿಸುವ ಸಲುವಾಗಿ ಭೂಮಿ ಅಗೆಯುತ್ತಿದ್ದಾಗ ಭೂಗರ್ಭ ದಿಂದ ದೊರೆತ ಕ್ರಿ.ಶ 11ನೇ ಶತಮಾನದ ಭಗವಾನ್‌ ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಪ್ರತಿಷ್ಠಾಪನೆಯ ಉದ್ದೇಶದಿಂದ ಮೇ 2ರ ವರೆಗೆ ಒಟ್ಟು ಐದು ದಿನಗಳ ಕಾಲ ಗ್ರಾಮದಲ್ಲಿ ಪಂಚ ಕಲ್ಯಾಣ ಮಹೋತ್ಸವವನ್ನು ಆಯೋಜಿಸ ಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಮುಖಂಡ ಮತ್ತು ಪಂಚ ಕಲ್ಯಾಣ ಮಹೋತ್ಸವ ಆಚರಣೆ ಸಮಿತಿ ಸದಸ್ಯ ಪ್ರಮೋದ ಕೊಚೇರಿ ಮಾತ ನಾಡಿ, ಪಂಚ ಕಲ್ಯಾಣ ಮಹೋತ್ಸವದ ಯಜಮಾನ ಪದವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ವಹಿಸಿಕೊಳ್ಳಲಿದ್ದು, ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು, ಶ್ರೀ ವರ್ಧಮಾನ ಸಾಗರಜೀ, ಸಂಘ ಶ್ರೀ ಸಿದ್ಧಸೇನ ಮುನಿಗಳು ಮತ್ತು ಜಿನವಾಣಿ ಮಾತಾಜಿ ನೇತೃತ್ವದಲ್ಲಿ 5 ದಿನಗಳ ಕಾಲ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ರಾಷ್ಟ್ರದ ಮೂಲೆ ಮೂಲೆಗಳಿಂದ ಜೈನ ಬಾಂಧವರು ಆಗಮಿಸಿ ಭಾಗವಹಿಸ ಲಿದ್ದು, ಪಂಚ ಕಲ್ಯಾಣದಲ್ಲಿ ಪಾಲ್ಗೊಳ್ಳಲು ಆಗಮಿಸುವ ಎಲ್ಲ ಬಾಂಧವರಿಗೆ ಊಟ, ಉಪಾಹಾರ, ವಸತಿ, ಕುಡಿಯುವ ನೀರಿನ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬೆಳಗಾವಿ, ಬೀಡಿ ಮತ್ತು ಕಿತ್ತೂರಿನಿಂದ ಕಸಮಳಗಿಗೆ ಬರುವ ಭಕ್ತರಿಗೆ ವಾಯವ್ಯ ಕರ್ನಾಟಕ ಸಾರಿಗೆ ಮತ್ತು ಬೆಳಗಾವಿಯ ಗೋಮ ಟೇಶ್ ಮತ್ತು ಭರತೇಶ್ ಸಂಸ್ಥೆಗಳ ಶಾಲಾ ವಾಹನಗಳಿಂದ ವಾಹನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

28ರಂದು ಧ್ವಜಾರೋಹಣ, ಮಂಟಪ ಉದ್ಘಾಟನೆ, ಧರ್ಮಸಭೆ, ಶಾಂತಿ ಹೋಮಗಳು ನಡೆಯಲಿದ್ದು, 29ರಂದು ಗರ್ಭಕಲ್ಯಾಣ ಪೂಜೆ, ಜಿನಬಾಲಕರ ನಾಮಕರಣ, ತೊಟ್ಟಿಲು ಪೂಜೆ, ಬಾಲಕ್ರೀಡೆ, 30ರಂದು ಜನ್ಮ ಕಲ್ಯಾಣ ಪೂಜೆ, ರಾಜ್ಯಾಭಿಷೇಕ, ರಾಜ ನೃತ್ಯ, ವೈರಾಗ್ಯ ಭಾವನೆ, ದೀಕ್ಷಾವನ ಪ್ರಸ್ಥಾನ, ದೀಕ್ಷಾ ಕಲ್ಯಾಣ, ಮೇ 1ರಂದು ಲಘು ಶಾಂತಿ, ತೀರ್ಥಂಕರ ಮುನಿಗಳ ಆಹಾರಚರ್ಯ, ಜ್ಞಾನ ಕಲ್ಯಾಣ ಸಂಸ್ಕಾರ, ಕುಂಭಾನಯನ, ದೀಕ್ಷಾ ಕಲ್ಯಾಣ, ಸಮವಶರಣ, ಪ್ರಶ್ನೋತ್ತರ ಸಭಾ ಮತ್ತು ಕೊನೆಯ ದಿನವಾದ ಮೇ 2ರಂದು ಸಿದ್ಧಚಕ್ರ ವಿಧಾನ, ವಿಗ್ರಹ ಪ್ರತಿಷ್ಠಾಪನೆ, ನಿರ್ವಾಣ ಕಲ್ಯಾಣಕ, ಮಹಾಭಿಷೇಕ ಮತ್ತು ಧರ್ಮಸಭೆಗಳು ನಡೆಯಲಿವೆ. ಪ್ರತಿದಿನ ಮಂಗಲ ವಾದ್ಯ, ಲಘು ಶಾಂತಿ, ನಿತ್ಯ ವಿಧಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಗೀತ ಆರತಿ ಕಾರ್ಯಕ್ರಮಗಳು ಜರುಗಲಿವೆ.

ಈಗಾಗಲೇ ಕಾರ್ಯಕ್ರಮದ ಸಿದ್ಧತೆ ಗಳು ಯುದ್ಧೋಪಾದಿಯಲ್ಲಿ ನಡೆದಿದ್ದು, ಈ ಧಾರ್ಮಿಕ ಕಾರ್ಯಕ್ಕೆ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ಖಾನಾಪುರ ಶಾಸಕ ಅರವಿಂದ ಪಾಟೀಲ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಕಸಮಳಗಿ ಗ್ರಾಮಸ್ಥರು, ಮಂಗೇನಕೊಪ್ಪ ಗ್ರಾಮ ಪಂಚಾಯ್ತಿಯವರು ಸಹಕಾರ ನೀಡುತ್ತಿದ್ದಾರೆ ಎಂದು ಪಂಚಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಉದ್ಯಮಿ ರಾಜೀವ ದೊಡ್ಡನ್ನವರ ಹೇಳಿದರು.
ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ರಾಜ ಕುಮಾರ ಕಂಚಿ, ಬಸವರಾಜ ಬೇಕಣಿ, ದತ್ತಾ ಡೋರ್ಲೆ, ದೇವೇಂದ್ರ ಗೌಡ್ರ, ಮಹಾವೀರ ಹರದಿ, ಕುಂತಿನಾಥ ಕಲಮನಿ, ವಿನಯ ಬಾಳಿಕಾಯಿ, ಪಂಚ ಕಲ್ಯಾಣ ಸಮಿತಿಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT