ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಶೀಘ್ರ ಪರಿಹರಿಸಿ

Last Updated 21 ಏಪ್ರಿಲ್ 2017, 8:52 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಇದೆ. ಹಾಗಾಗಿ ಜಿಲ್ಲೆಯ ಯಾವುದೇ ಭಾಗದಲ್ಲಿ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ಜರುಗಿದ ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ತಾಲೂಕಿನ ನಗರ, ಪಟ್ಟಣ, ಗ್ರಾಮ ಹಾಗೂ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಲ್ಲೂಕು ಮಟ್ಟದ ಅಧಿಕಾರಿಗಳದ್ದಾಗಿದೆ. ಹಾಗಾಗಿ ವಾರಕ್ಕೊಮ್ಮೆ ಕುಡಿಯುವ ನೀರಿನ ಪೂರೈಕೆ ಪ್ರಗತಿ ಪರಿಶೀಲನೆ ಮಾಡುವಂತೆ ಸಚಿವರು ಸೂಚಿಸಿದರು.

ನಗರ, ಪಟ್ಟಣ, ಗ್ರಾಮ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಂಡು ಬರುವ ನೀರಿನ ಸಮಸ್ಯೆಯನ್ನು ಆಯಾ ಮತಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ ಉಮಾಶ್ರೀ, ನೀರಿನ ಸಮಸ್ಯೆ ಇರುವ ಪ್ರದೇಶಗಳ ಸಂಪೂರ್ಣ ಮಾಹಿತಿಯ ಜೊತೆಗೆ ಅಲ್ಲಿ ಲಭ್ಯವಿರುವ ಜಲ ಮೂಲಗಳ ಬಗ್ಗೆಯೂ ವಿವರ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಮಖಂಡಿ ತಾಲೂಕಿನಲ್ಲಿ ಒಟ್ಟು 363 ಜನವಸತಿಗಳು, 68 ಗ್ರಾಮ ಹಾಗೂ 38 ಗ್ರಾಮ ಪಂಚಾಯ್ತಿಗಳು ಇವೆ. 363 ಜನವಸತಿಗಳ ಪೈಕಿ 94 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಒಟ್ಟು 68 ಗ್ರಾಮಗಳ ಪೈಕಿ 11ರಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಲಿದೆ. ಅಗತ್ಯವಿದ್ದಲ್ಲಿ ಕೊಳವೆಬಾವಿ ಕೊರೆದು ನೀರು ಪೂರೈಸಬೇಕು. ಇಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸಚಿವರು ಸೂಚಿಸಿದರು.  ಕೊಣ್ಣೂರು ಗ್ರಾಮದ ಗುಡ್ಡಸಾಲು, ಧಾರವಾಡ ವಸತಿ, ಕೌಟಗಿ ಗ್ರಾಮದ ಗೌರೋಜಿ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಚರ್ಚಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲು ಸೂಚಿಸಿದರು.

‘ಜಮಖಂಡಿ ಪುರಸಭೆ ವ್ಯಾಪ್ತಿಯಲ್ಲಿ 108 ಪವರ್ ಪಂಪ್, 44 ಕೈ ಪಂಪ್‌ಗಳು ಚಾಲನೆಯಲ್ಲಿವೆ.  ಇನ್ನು ಎರಡು  ಮೂರು ದಿನಗಳಲ್ಲಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ.  ಆಗ ಹಿಪ್ಪರಗಿ ಬ್ಯಾರೇಜ್‌ಗೆ 1400 ಕ್ಯುಸೆಕ್ಸ್ ನೀರು ಬರಲಿದೆ. ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ’ ಎಂದು ಜಮಖಂಡಿ ಉಪವಿಭಾಗಾಧಿಕಾರಿ          ರವಿ ಕರಿಲಿಂಗಣ್ಣವರ ಸಭೆಗೆ ತಿಳಿಸಿದರು.ರಬಕವಿ-–ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ 178 ಪವರ್ ಪಂಪ್ ಹಾಗೂ 24 ಕೈ ಪಂಪ್‌ನ ಕೊಳವೆಬಾವಿಗಳು ಇವೆ. ಕೃಷ್ಣಾ ನದಿಗೆ ನೀರು ಬಂದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಕೊಳವೆ ಬಾವಿಗಳಲ್ಲಿ ನೀರಿನ ಸಮೃದ್ಧಿ ಹೆಚ್ಚಲಿದೆ ಎಂದು ಕರಿಲಿಂಗಣ್ಣವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT