ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 1.21 ಲಕ್ಷ ಕ್ವಿಂಟಲ್‌ ಈರುಳ್ಳಿ ಖರೀದಿ

Last Updated 21 ಏಪ್ರಿಲ್ 2017, 8:56 IST
ಅಕ್ಷರ ಗಾತ್ರ

ಬಾಗಲಕೋಟೆ: ಬೆಂಬಲ ಬೆಲೆಯಡಿ ಜಿಲ್ಲೆಯ ರೈತರಿಂದ ಕ್ವಿಂಟಲ್‌ಗೆ ₹ 624ರಂತೆ ಈರುಳ್ಳಿ ಖರೀದಿಸಿದ್ದ ರಾಜ್ಯ ಸರ್ಕಾರ, ಅದನ್ನು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 20ರಂತೆ ಮಾರಾಟ ಮಾಡಿದೆ.ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಸರ್ಕಾರದ ಪರವಾಗಿ ರಾಜ್ಯ ಸಹಕಾರಿ ಮಾರಾಟ ಮಂಡಳ ಜಿಲ್ಲೆಯಲ್ಲಿ 2,093 ರೈತರಿಂದ 1,21,226 ಕ್ವಿಂಟಲ್ ಈರುಳ್ಳಿ ಖರೀದಿಸಿದೆ. ಬಾಗಲಕೋಟೆ, ಕೆರೂರು, ಹುನಗುಂದ, ಮುಧೋಳ ಹಾಗೂ ಬೀಳಗಿಯಲ್ಲಿ ಇದಕ್ಕಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಖರೀದಿ ಮಾಡಿದ ಈರುಳ್ಳಿಗೆ ರೈತರಿಗೆ ₹8.04 ಕೋಟಿ ಪಾವತಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ರೈತರಿಗೆ ಎರಡನೇ ಕಂತಿನ ಬಾಕಿ ಹಣ ₹3.9 ಕೋಟಿ ಬಿಡುಗಡೆಯಾಗಿದ್ದು, ಅದನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ಹಾಕಲಾಗಿದೆ.

ಯಶವಂತಪುರ ಮಾರುಕಟ್ಟೆ: ಖರೀದಿಸಿದ ಈರುಳ್ಳಿಗೆ ರೈತರಿಗೆ ₹8 ಕೋಟಿಗೆ ಹೆಚ್ಚು ಪಾವತಿಸಿದ್ದರೂ ಅದನ್ನು ಮಾರಾಟ ಮಾಡಿದ್ದರಿಂದ ಸರ್ಕಾರಕ್ಕೆ ಕೇವಲ ₹1,19 ಕೋಟಿ ಮಾತ್ರ ಬಂದಿದೆ. ಜಿಲ್ಲೆಯಲ್ಲಿ ಖರೀದಿಸಿದ ಈರುಳ್ಳಿಯನ್ನು ಸಹಕಾರ ಮಾರಾಟ ಮಂಡಳದ ಅಧಿಕಾರಿಗಳೇ ಬೆಂಗಳೂರಿನ ಯಶವಂತ ಪುರ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದ್ದಾರೆ. ಕ್ವಿಂಟಲ್‌ಗೆ ಕನಿಷ್ಠ ₹20ರಿಂದ ಗರಿಷ್ಠ ₹200ಕ್ಕೆ ಮಾರಾಟವಾಗಿದೆ. ‘ಈರುಳ್ಳಿ ಖರೀದಿಯ ನಂತರ ಕೆಲವು ವರ್ತಕರು ನೀಡಿದ್ದ ಚೆಕ್‌ಗಳು ಕೂಡ ಬೌನ್ಸ್ ಆಗಿವೆ’ ಎಂದು ಸಹಕಾರ ಮಾರಾಟ ಮಹಾಮಂಡಳದ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ವೇತನ, ಸಾಗಣೆ ವೆಚ್ಚವೂ ಬಂದಿಲ್ಲ: ಎರಡು ತಿಂಗಳು ಕಾಲ ಖರೀದಿ ಕೇಂದ್ರ ತೆರೆದು ಖರೀದಿಸಿದ ಈರುಳ್ಳಿ ಸಂಗ್ರಹಿಸಿಟ್ಟು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಣೆ ಮಾಡಿದೆ. ಮಾರುಕಟ್ಟೆಯಲ್ಲಿ ಹಮಾಲಿ ಕೂಲಿ, ಖರೀದಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಿದ ಸಿಬ್ಬಂದಿಯ ಖರ್ಚು–ವೆಚ್ಚ ಹಾಗೂ ವೇತನವೂ ಈರುಳ್ಳಿ ಮಾರಾಟದಿಂದ ವಾಪಸ್ ಬಂದಿಲ್ಲ ಎಂದು ಅಧಿಕಾರಿ ತಿಳಿಸಿದರು.

ಅಸಹಾಯಕತೆ ಬಳಸಿಕೊಂಡರು:  ‘ಖರೀದಿ ಕೇಂದ್ರಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಈರುಳ್ಳಿ ಆವಕಗೊಂಡಿತು. ಹೀಗೆ ಸಂಗ್ರಹಗೊಂಡ ಈರುಳ್ಳಿಯನ್ನು ಶೇಖರಿಸಿ ಇಡುವುದು ನಮಗೂ ಸವಾಲಿನ ಸಂಗತಿಯಾಗಿತ್ತು. ಈರುಳ್ಳಿ ಬಹುಬೇಗನೇ ಕೆಟ್ಟು ಹೋಗುವುದರಿಂದ ಖರೀದಿಸಿದ್ದನ್ನು ತಕ್ಷಣ ಮಾರಾಟ ಮಾಡುವ ಅನಿವಾರ್ಯತೆಯೂ ಇತ್ತು. ಈ ಅಸಹಾಯಕತೆಯನ್ನು ಯಶವಂತಪುರ ಮಾರುಕಟ್ಟೆಯ ವರ್ತಕರು ಚೆನ್ನಾಗಿ ಬಳಕೆ ಮಾಡಿಕೊಂಡರು. ಬಾಯಿಗೆ ಬಂದ ಬೆಲೆಗೆ ಕೇಳಿದರು. ಅವರು ಕೇಳಿದ ಬೆಲೆಗೆ ಮಾರಾಟ ಮಾಡದಿದ್ದರೆ ಈರುಳ್ಳಿ ಕೆಟ್ಟು ಹೋಗುತ್ತಿತ್ತು. ಹಾಗಾಗಿ ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೇ ಮಾರಾಟ ಮಾಡಲಾಯಿತು’ ಎಂದು ಅಧಿಕಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT