ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಮಾರುಕಟ್ಟೆ ಕಾಮಗಾರಿ ಆರಂಭಿಸಿ

Last Updated 21 ಏಪ್ರಿಲ್ 2017, 9:08 IST
ಅಕ್ಷರ ಗಾತ್ರ

ಕಾರವಾರ: ಗಾಂಧಿ ಮಾರುಕಟ್ಟೆ ಸಮೀಪವೇ ಸುಸಜ್ಜಿತ ಮೀನು ಮಾರುಕಟ್ಟೆಗೆ ಅಡಿಗಲ್ಲು ಹಾಕಿ ಶೀಘ್ರವೇ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕೆಂದು ಒತ್ತಾಯಿಸಿ ಮೀನು ಮಾರಾಟ ಮಹಿಳೆಯರು ಗುರುವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದರು.ಮೀನು ಮಾರಾಟವನ್ನು ಸ್ಥಗಿತಗೊಳಿಸಿ, ನಗರಸಭೆ ಕಚೇರಿಗೆ ಬಂದಿದ್ದ ನೂರಾರು ಮಹಿಳೆಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿಥಿಲಾವಸ್ಥೆಯ ನೆಪವೊಡ್ಡಿ ಮುಖ್ಯ ಮೀನು ಮಾರುಕಟ್ಟೆ ಕಟ್ಟಡವನ್ನು ಕೆಡವಿದ ನಗರಸಭೆಯು, ಸುಸಜ್ಜಿತ ಮೀನು ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಕಟ್ಟಡ ಕೆಡವಿ ಒಂದೂವರೆ ವರ್ಷ ಕಳೆದರೂ ಇನ್ನೂ ಹೊಸ ಮಾರುಕಟ್ಟೆ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು.

‘ಕಡಲತೀರದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮೀನು ಮಾರುಕಟ್ಟೆ ವ್ಯವಸ್ಥಿತವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಈ ಮಾರುಕಟ್ಟೆಯೂ ತೆರವುಗೊಳ್ಳಲಿದ್ದು, ನಾವು ಅತಂತ್ರವಾಗಲಿದ್ದೇವೆ. ಹೀಗಾಗಿ ಕೂಡಲೇ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಬೇಕು’ ಎಂದು ಮೀನು ಮಾರಾಟ ಮಹಿಳೆಯರ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಒತ್ತಾಯಿಸಿದರು.

ಅಧ್ಯಕ್ಷರೊಂದಿಗೆ ವಾಗ್ವಾದ

ಹಳೆಯ ಮೀನು ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರೊಂದಿಗೆ ಮೀನು ಮಾರಾಟ ಮಹಿಳೆಯರು ವಾಗ್ವಾದ ನಡೆಸಿದರು.‘ಮೀನು ಮಾರುಕಟ್ಟೆ ನಿರ್ಮಾಣ ವಿಷಯದಲ್ಲಿ ನಗರಸಭೆಯು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಬೇಡ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನೂ ನಾವು ಕಾಯುವುದಿಲ್ಲ. ಏ.28 ಅಕ್ಷಯ ತೃತೀಯ ಹಬ್ಬವಿದ್ದು, ಅಂದೇ ನೂತನ ಮಾರುಕಟ್ಟೆಗೆ ಅಡಿಗಲ್ಲು ಹಾಕಬೇಕು’ ಎಂದು ಒತ್ತಾಯಿಸಿದರು.

ಎಂಟು ದಿನಗಳಲ್ಲಿ ತೆರವು ‘ಇಲ್ಲಿನ 39 ಗುಂಟೆಗೆ ಜಾಗದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ₹ 8 ಕೋಟಿಯನ್ನು ಮೀಸಲಿಡಲಾಗಿದೆ. ಸುತ್ತಲಿನ             ಮಟನ್‌ ಮಾರುಕಟ್ಟೆ ಹಾಗೂ ಮಳಿಗೆಗಳನ್ನು ಇನ್ನು ಎಂಟು ದಿನಗಳಲ್ಲಿ ಖುಲ್ಲಾಪಡಿಸಲಾಗುವುದು’  ಎಂದು ಪ್ರಭಾರ ಪೌರಾಯುಕ್ತ ಕೆ.ಎಂ.ಮೋಹನರಾಜ್‌ ತಿಳಿಸಿದರು. 
ಮಾಂಸ ಮಾರಾಟಗಾರರು ಕೆಇಬಿ ಕಚೇರಿ ಬಳಿಯಿರುವ ನಗರಸಭೆಯ 19 ಗುಂಟೆ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬಹುದು. ಶೆಡ್‌ಗಳನ್ನು ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲೇ ಹಾಕಬೇಕು. ಉಳಿದ ಮೂಲಸೌಕರ್ಯ ವ್ಯವಸ್ಥೆಯನ್ನು ನಗರಸಭೆಯಿಂದ ಮಾಡಿ ಕೊಡಲಾಗುವುದು’  ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT