ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಳೆಗಾಲದೊಳಗೆ ಕಾಮಗಾರಿ ಪೂರ್ಣ’

Last Updated 21 ಏಪ್ರಿಲ್ 2017, 9:11 IST
ಅಕ್ಷರ ಗಾತ್ರ

ಶಿರಸಿ: ಕೆರೆ ಹೂಳೆತ್ತುವ ಕಾಮಗಾರಿಗೆ ಟೆಂಡರ್್ ಹಾಕಲು ಗುತ್ತಿಗೆದಾರರು ಹಿಂದೇಟು ಹಾಕಿರುವುದನ್ನು ಸವಾಲಾಗಿ ಸ್ವೀಕರಿಸಿರುವ ನಗರಸಭೆ ದೇವಿಕೆರೆಯ ಹೂಳೆತ್ತುವ ಕಾಮಗಾರಿಯನ್ನು ಆಡಳಿತದ ನೇರ ಉಸ್ತುವಾರಿಯಲ್ಲಿ ನಡೆಸುತ್ತಿದೆ.ನಗರದ ಪ್ರಮುಖ ಕೆರೆಗಳಲ್ಲೊಂದಾದ ದೇವಿಕೆರೆ 3.5 ಎಕರೆ ವಿಸ್ತೀರ್ಣದಲ್ಲಿದೆ. ಕಳೆದ ವರ್ಷ ಕೆರೆ ಹೂಳೆತ್ತುವ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ಬಾರಿ ಇನ್ನುಳಿದ ಕಾಮಗಾರಿಗೆ ನಗರಸಭೆ ಮೂರು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಭಾಗವಹಿಸಲಿಲ್ಲ. ಈ ಕಾರಣ ವಿಶೇಷ ಸಭೆ ಕರೆದು ನಿರ್ಣಯಿಸಿದ ನಗರಸಭೆ ಹಿಟಾಚಿ, ಟಿಪ್ಪರ್ ಬಾಡಿಗೆ ಪಡೆದು ಕೆರೆ ಹೂಳೆತ್ತಲು ಪ್ರಾರಂಭಿಸಿದೆ. ನಗರಸಭೆ ಅಧ್ಯಕ್ಷ  ಪ್ರದೀಪ ಶೆಟ್ಟಿ ಗುರುವಾರ ಹೂಳೆತ್ತುವ ಕಾಮಗಾರಿಗೆ ಸಾಂಕೇತಿಕ ಚಾಲನೆ ನೀಡಿದರು.

‘ದೇವಿಕೆರೆಯಲ್ಲಿ ನಾಲ್ಕು ಅಡಿ ಹೂಳನ್ನು ತೆಗೆಯಲು ನಿರ್ಧರಿಸಲಾಗಿದೆ. ಈ ಹಿಂದೆ ಅರ್ಧ ಕೆಲಸ ಮಾಡಲಾಗಿದ್ದು, ಮಳೆಗಾಲ ಪ್ರಾರಂಭವಾದ ಕಾರಣ ಪೂರ್ತಿಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮಳೆಗಾಲ ಪ್ರಾರಂಭವಾಗುವುದರೊಳಗೆ ಕೆಲಸ ಪೂರ್ಣಗೊಳಿಸಿ ಮಾದರಿ ಕೆರೆ ಮಾಡಲಾಗುವುದು. ಒಟ್ಟು 17 ಸಾವಿರ ಕ್ಯೂಬಿಕ್ ಮೀಟರ್ ಮಣ್ಣನ್ನು ತೆಗೆಯಲಾಗುವುದು. ಕೆರೆಯ ಮಧ್ಯೆ ನಡುಗಡ್ಡೆ ಮಾಡಿ ಸುತ್ತ ಕಟ್ಟೆಯನ್ನು ಕಟ್ಟಿ ಉದ್ಯಾನ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕೆರೆ ಅಭಿವೃದ್ಧಿಗೆ ₹ 38 ಲಕ್ಷ ನಿಗದಿಯಾಗಿದೆ’ ಎಂದರು. 

ನಗರಸಭೆಯ ಒಂದು ಜೆಸಿಬಿ ಮತ್ತು ಎರಡು ಟಿಪ್ಪರ್ ಇದ್ದರೆ ಒಂದು ಹಿಟಾಚಿ ಮತ್ತು ಆರು ಟಿಪ್ಪರ್ ಬಾಡಿಗೆ ಪಡೆಯಲಾಗಿದೆ. ದಿನದ ಕಸ ಸಂಗ್ರಹಣೆ ಪೂರ್ಣಗೊಂಡ ಮೇಲೆ ಆ ವಾಹನಗಳನ್ನು ಹೂಳೆತ್ತುವ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.ನಗರಸಭೆಯ ನಿಕಟಪೂರ್ವ ಅಧ್ಯಕ್ಷರು, ಹಾಲಿ ಅಧ್ಯಕ್ಷರ ಮುತುವರ್ಜಿಯಿಂದ ದೇವಿಕೆರೆ ಅಭಿವೃದ್ಧಿ ಆಗುತ್ತಿದೆ. ಕೆಲಸ ಪೂರ್ಣಗೊಂಡ ನಂತರ ಇದೊಂದು ಸುಂದರ ತಾಣವಾಗಿ ರೂಪುಗೊಳ್ಳುತ್ತದೆ ಎಂದು ವಾರ್ಡ್ ಸದಸ್ಯ ಅರುಣ ಕೋಡ್ಕಣಿ ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಅರುಣಾ ವೆರ್ಣೇಕರ, ಪೌರಾಯುಕ್ತ  ಮಹೇಂದ್ರ ಕುಮಾರ, ಸದಸ್ಯರಾದ ಶ್ರೀಕಾಂತ ತಾರೀಬಾಗಿಲು, ವೀಣಾ ಶೆಟ್ಟಿ, ರವಿ ಚಂದಾವರ, ರಮೇಶ ಆಚಾರಿ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಗೌರವ ಸಲಹೆಗಾರ ಶಿವಾನಂದ ಕಳವೆ, ಅನಿಲ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT