ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಆದೇಶಕ್ಕೆ ನಾಲ್ಕು ತಿಂಗಳು

Last Updated 21 ಏಪ್ರಿಲ್ 2017, 9:19 IST
ಅಕ್ಷರ ಗಾತ್ರ

ಬಳ್ಳಾರಿ: ಸರ್ಕಾರಿ ಉದ್ಯಾನದ ಒತ್ತುವರಿ ತೆರವು ಮಾಡಿ ಎಂದು ಜಿಲ್ಲಾಧಿಕಾರಿ ಆದೇಶ ನೀಡಿ ನಾಲ್ಕು ತಿಂಗಳಾಗಿದೆ. ತೆರವು ಮಾಡಿದ ಬಳಿಕ ಅಳವಡಿಸಲೆಂದು ಪಾಲಿಕೆಯು ಫಲಕವನ್ನೂ ಸಿದ್ಧಪಡಿಸಿದ್ದಾಗಿದೆ. ಆದರೆ ತೆರವು ಕಾರ್ಯಾಚರಣೆ ಮಾತ್ರ ಇನ್ನೂ ನಡೆದಿಲ್ಲ.ಇದೇ ವೇಳೆ, 1998ರಲ್ಲಿ ಬಡಾವಣೆಯನ್ನು ನಿರ್ಮಿಸಿದ ಜಮೀನು ಮಾಲೀಕರು, ಉದ್ಯಾನದ ಜಾಗದ ಬದಲಿಗೆ 2 ಎಕರೆ ಜಮೀನನ್ನು ಪ್ರಾಧಿಕಾರದ ಸ್ವಾಧೀನಕ್ಕೇ ನೀಡಿರುವುದಾಗಿ ಹೇಳಿ ಪತ್ರಗಳನ್ನೂ ಕೊಟ್ಟಿದ್ದಾರೆ. ಅವುಗಳನ್ನು ಮತ್ತು ಸ್ಥಳವನ್ನು ಪರಿಶೀಲಿಸಲು ಪಾಲಿಕೆಯ ಆಯುಕ್ತರಿಗೆ ಮತ್ತು ಕಾರ್ಯಪಾಲಕ ಎಂಜಿನಿಯರಿಗೆ ಸಮಯವೇ ಇಲ್ಲ. ಈ ನಡುವೆ, ಉದ್ಯಾನದ ನಿರ್ವಹಣೆ ಎಂಬುದು ಯಾರಿಗೂ ಬೇಡವಾದ ಕೂಸಾಗಿದೆ ಎನ್ನುತ್ತಾರೆ ಜನರು.

ಇದು ನಗರ ಹೊರವಲಯದಲ್ಲಿರುವ ರಾಮೇಶ್ವರಿನಗರ ಬಡಾವಣೆಯಲ್ಲಿರುವ ಉದ್ಯಾನದ ಪರಿಸ್ಥಿತಿ.  ಕಳೆದ ಆಗಸ್ಟ್‌ನಲ್ಲಿ ಕಂದಾಯ ನಿರೀಕ್ಷರು, ಕೊಳಗಲ್ಲು ಗ್ರಾಮ ಲೆಕ್ಕಾಧಿಕಾರಿ ಮತ್ತು ತಾಲ್ಲೂಕು ಮೋಜಿಣಿದಾರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದ ಉಪವಿಭಾಗಾಧಿಕಾರಿ ಪಿ.ಎನ್‌.ಲೋಕೇಶ್‌ ಅವರು, ಒತ್ತುವರಿ ಆಗಿರುವುದನ್ನು ಖಚಿತ ಪಡಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

ಬಡಾವಣೆಯನ್ನು ನಿರ್ಮಿಸಿದ ಮಹೇಶ್ ಆರ್‌ ಅಗಿವಾಲ್‌ ಅವರು ಉದ್ಯಾನವನ್ನು ಅಭಿವೃದ್ಧಿಪಡಿಸುವುದಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಮಾಣಪತ್ರವನ್ನೂ ನೀಡಿದ್ದ ಬಗ್ಗೆ ಅವರು ಉಲ್ಲೇಖಿಸಿದ್ದರು. ಪ್ರಾಧಿಕಾರದ ಅನುಮೋದಿತ ನಕ್ಷೆಯ ಪ್ರಕಾರ, ಒತ್ತುವರಿ ಮಾಡಲಾಗಿರುವ ಸ್ಥಳವು ಉದ್ಯಾನಕ್ಕೆ ಸೇರಿದ್ದೆಂದು ಹೇಳಿದ್ದರು.

ಅವರ ವರದಿಯನ್ನು ಆಧರಿಸಿಯೇ ಜಿಲ್ಲಾಧಿಕಾರಿ ‘ಉದ್ಯಾನಕ್ಕೆ ಮೀಸಲಿರಿಸಿದ ಸ್ಥಳದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು 25*15 ಚದರಡಿಯ ಸ್ಥಳದಲ್ಲಿ ಬುನಾದಿ ಹಾಕಿ ವೇದಿಕೆ ಮತ್ತು ಶೆಡ್‌ ನಿರ್ಮಿಸಿದೆ. ಇನ್ನೊಂದೆಡೆ 15*15 ಚದರಡಿಯಲ್ಲಿ ದೊಡ್ಡ ಕುಣಿಯನ್ನು ತೋಡಿದೆ. ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ’ ಎಂದು ಕಳೆದ ಡಿಸೆಂಬರ್‌ 8ರಂದು ಪಾಲಿಕೆ ಆಯುಕ್ತರಿಗೆ ಆದೇಶ ನೀಡಿದ್ದರು.

ಆದರೆ ಆದೇಶ ಜಾರಿಗೆ ಬಂದಿಲ್ಲ. ‘ಆದೇಶ ಜಾರಿಗೊಳಿಸಿ ಎಂದು ಆಯುಕ್ತರಾದಿಯಾಗಿ, ಕಾರ್ಯಪಾಲಕ ಎಂಜಿನಿಯರ್‌, ಕಿರಿಯ ಎಂಜಿನಿಯರ್ ಎಲ್ಲರನ್ನೂ ಭೇಟಿ ಮಾಡಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಥಳ ಪರಿಶೀಲನೆಗೆ ಬರುತ್ತೇವೆ ಎಂದು ಸಬೂಬು ಹೇಳುವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ದೂರುದಾರ, ಬಡಾವಣೆ ನಿವಾಸಿ ಜಿ.ರುದ್ರಪ್ಪ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT