ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರೇ ಆರಂಭಿಸಿದ ಗ್ರಂಥಾಲಯ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

–ಸಹನಾ ಹೆಗಡೆ

ಯಾವುದೇ ಕೆಲಸವಾದರೂ  ಪೂರ್ಣಗೊಳ್ಳಲು ವರ್ಷಗಟ್ಟಲೆ ಬೇಕಾಗುತ್ತದೆ. ಆದರೆ 45 ದಿನಗಳಲ್ಲಿ ಗ್ರಂಥಾಲಯ ಆರಂಭಿಸಿದ್ದಾರೆ  ಅರಕೆರೆಯ ‘ಸೌಥ್‌-ಸಿಟಿ’ ವಸತಿ ಸಮುಚ್ಚಯದ ಮಹಿಳೆಯರು.

ಪುಸ್ತಕಪ್ರೀತಿ, ಓದಿನಲ್ಲಿ ಆಸಕ್ತಿ ಇರುವ ಸಮಾನ ಮನಸ್ಕರು ಒಂದುಗೂಡಿ ಈ ಗ್ರಂಥಾಲಯ ಪ್ರಾರಂಭಿಸಿದ್ದಾರೆ.

‘ಲೈಬ್ರರಿ ಗ್ರೂಪ್‌’ ಎಂದು ಕರೆಯಬಹುದಾದ ಈ ಗುಂಪಿನಲ್ಲಿ ಸದ್ಯ 21 ಮಹಿಳೆಯರಿದ್ದು, ಇದನ್ನು ಗ್ರಂಥಾಲಯದ ಆಡಳಿತ ಮಂಡಳಿ ಎನ್ನಬಹುದು. ಹಾಗಂತ ಇಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ, ಖಜಾಂಚಿ ಎನ್ನುವ ಯಾವುದೇ ಹುದ್ದೆಗಳಿಲ್ಲ,  ಎಲ್ಲರೂ ಸಮಾನರಾಗಿದ್ದು ಗ್ರಂಥಾಲಯದ ಕೆಲಸದ ವೇಳೆ ಹಾಗೂ ಅದಕ್ಕೆ ಹೊರತಾಗಿಯೂ ಇನ್ನಿತರೆ ಕೆಲಸಕಾರ್ಯಗಳನ್ನು ಚಿಕ್ಕ ಚಿಕ್ಕ ಗುಂಪುಗಳಲ್ಲಿ, ಪಾಳಿ ಪದ್ಧತಿಯಲ್ಲಿ ಹಂಚಿಕೊಂಡು ಮಾಡುತ್ತಾರೆ. 

ಪ್ರತಿ ತಿಂಗಳು ಸಭೆ ಸೇರುವ ಮೂಲಕ ಗ್ರಂಥಾಲಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುತ್ತಾರೆ. ಗ್ರಂಥಾಲಯದ ಕಾರ್ಯವೈಖರಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ.

ಆರಂಭದಲ್ಲಿ ಕೇವಲ 70ರಷ್ಟಿದ್ದ ಸದಸ್ಯತ್ವ ಇಂದು 1,000 ದಾಟಿದೆ. ಸದಸ್ಯತ್ವ ನೋಂದಣಿ, ಗುರುತಿನ ಚೀಟಿ, ಪುಸ್ತಕ ಹಾಗೂ ನಿಯತಕಾಲಿಕೆಗಳನ್ನು ಎರವಲು ಕೊಡುವ ಹಾಗೂ ಹಿಂಪಡೆಯುವ ಪ್ರಕ್ರಿಯೆಗಳೆಲ್ಲದರಲ್ಲೂ ವೃತ್ತಿಪರತೆ ಎದ್ದು ಕಾಣುತ್ತದೆ. ದಾನಿಗಳಿಂದ ಕೊಡುಗೆಯಾಗಿ ಬಂದ ಹಳೆಯ ಅತ್ಯಮೂಲ್ಯ ಪುಸ್ತಕ ಹಾಗೂ ನಿಯತಕಾಲಿಕೆಗಳು ಆರಂಭದಲ್ಲಿ   800 ರಷ್ಟಿದ್ದರೆ, ಇಂದು ಗ್ರಂಥಾಲಯದ ಸಂಗ್ರಹದಲ್ಲಿ ವಿವಿಧ ಭಾಷೆಗಳ ಪುಸ್ತಕಗಳೂ ಸೇರಿದಂತೆ ಸುಮಾರು  4800  ಪುಸ್ತಕಗಳಾಗಿವೆ. ವಿವಿಧ ಪ್ರಾದೇಶಿಕ ಭಾಷೆಗಳ  ಸುಮಾರು 60  ಜನಪ್ರಿಯ ನಿಯತಕಾಲಿಕೆಗಳನ್ನು ತರಿಸಲಾಗುತ್ತಿದೆ. ಸ್ಥಳದಲ್ಲಿಯೇ ಕುಳಿತು ಓದಲು ಅನುಕೂಲ ವಾತಾವರಣ ನಿರ್ಮಿಸಲಾಗಿದೆ.
ಆರಂಭದಲ್ಲಿ ದಾನಿಗಳ ನಿಧಿಯನ್ನು ಉಪಯೋಗಿಸಿ  ತಂದ ಹಳೆಯ 4 ಕಪಾಟುಗಳಿದ್ದರೆ, ಇಂದು ಹೊಸ ಕಪಾಟುಗಳೂ ಸೇರಿದಂತೆ ಅವುಗಳ ಸಂಖ್ಯೆ 25ಕ್ಕೇರಿದೆ.

ವಿವಿಧ ಚಟುವಟಿಕೆಗಳಿಗೂ ವೇದಿಕೆ: ಸ್ವಾತಂತ್ರ್ಯೋತ್ಸವ, ಮಕ್ಕಳ ದಿನಾಚರಣೆಯಂತಹ ಸಂದರ್ಭಗಳಲ್ಲಿ ರಸಪ್ರಶ್ನೆ, ಕಥಾಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಇತ್ಯಾದಿ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು, ಇವುಗಳಿಗೆ ನಿರೀಕ್ಷೆಗೂ ಮೀರಿ ಮಕ್ಕಳು ಹಾಗೂ ಪಾಲಕರು ಭಾಗವಹಿಸುತ್ತಿದ್ದಾರೆ. 

ಬಿಡುವಿನ ವೇಳೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವ ಮೂಲಕ ಗ್ರಂಥಾಲಯದ ಬೆಳವಣಿಗೆಗೆ ಮಕ್ಕಳು ಹಾಗೂ ಅನೇಕ ಮಹಿಳೆಯರು  ಶ್ರಮಿಸುತ್ತಿರುವುದು ಗಮನಾರ್ಹ. ಸ್ಥಳ–ಅರಕೆರೆ, ಮೈಕೋ ಲೇಔಟ್‌ ಹತ್ತಿರ, ಜೆ ಪಿ ನಗರ 7 ನೇ ಹಂತ. ತಂಡದ ಸಂಪರ್ಕಕ್ಕೆ: 98452 72727

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT