ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಮಕ್ಕಳ ತಾಯಿ!

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹಡೆದದ್ದು ಕೇವಲ ನಾಲ್ಕು ಮಕ್ಕಳನ್ನು, ಪಡೆದದ್ದು ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು! ‘ಸಾವಿರ ಮಕ್ಕಳ ತಾಯಿ’ ಎನ್ನುವ ಈ ಹಿರಿಮೆ ಮಹಾರಾಷ್ಟ್ರದ ಸಿಂಧೂತಾಯಿ ಅವರಿಗೆ ಸಲ್ಲಬೇಕು.

ಸಿಂಧೂತಾಯಿ ಹುಟ್ಟಿದ್ದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪಿಂಪ್ರಿ ಮೇಘೆ ಎಂಬ ಹಳ್ಳಿಯಲ್ಲಿ. ಪ್ರಸ್ತುತ ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವ ಈ ತಾಯಿ ಓದಿರುವುದು ಕೇವಲ ನಾಲ್ಕನೇ ತರಗತಿವರೆಗೆ.

ಸಿಂಧೂತಾಯಿ ಜನಿಸಿದ್ದು ನ. 14, 1948ರಂದು. ತಂದೆಯ ಹೆಸರು ಅಭಿಮಾನ ಜಿ ಸಾಥೆ. ತಾಯಿಗೆ ಬೇಡವಾದ ಈ ಮಗುವನ್ನು ತಂದೆಯು ಪ್ರೀತಿಯಿಂದ ಬೆಳೆಸಿ ಅದೇ ಹಳ್ಳಿಯ ಪ್ರಾಥಮಿಕ ಶಾಲೆಗೆ ಸೇರಿಸಿದರು. ವೃತ್ತಿಯಿಂದ ದನಗಾಹಿಯಾಗಿದ್ದ ಸಾಥೆಯ ಈ ಕೆಲಸವನ್ನು ಯಾರಾದರೂ ಮೆಚ್ಚಲೇಬೇಕು. ನಾಲ್ಕನೆಯ ಕ್ಲಾಸು ಪಾಸು ಮಾಡಿದ ನಂತರ ‘ಚಿಂದಿ’ ಎಂಬ ಹೆಸರಿನ ಈ ಹುಡುಗಿಯ ವಿದ್ಯಾಭ್ಯಾಸ ನಿಂತಿತು.

ಹತ್ತನೇ ವಯಸ್ಸಿನಲ್ಲಿ 30 ವರ್ಷದ ಶ್ರೀಹರಿ ಸಪಕಾಳ್‌ ಎನ್ನುವವರೊಂದಿಗೆ ಮದುವೆ ನಡೆಯಿತು. ಇಪ್ಪತ್ತು ವರ್ಷ ತಲಪುವುದರಲ್ಲಿ ಮೂರು ಮಕ್ಕಳಾದವು. ನಾಲ್ಕನೆಯ ಮಗು ಗರ್ಭದಲ್ಲಿದ್ದ ಸಂದರ್ಭದಲ್ಲಿ ಹೆಂಡತಿಯನ್ನು ಗಂಡ ಮನೆಯಿಂದ ಹೊರಹಾಕಿದ. ಊರಿನ ಮುಖಂಡನೊಬ್ಬ ಸಿಂಧೂತಾಯಿ ಚಾರಿತ್ರ್ಯದ ಬಗ್ಗೆ ಹೊಲಸು ಮಾತನಾಡಿದ. ಆತನ ಮಾತನ್ನು ನೆಚ್ಚಿಕೊಂಡಿದ್ದ ಶ್ರೀಹರಿ ತನ್ನ ಹೆಂಡತಿಯನ್ನು ಮನೆಯಿಂದ ಹೊರಹಾಕಿದ.

ಮನೆಯಿಂದ ಹೊರಬಿದ್ದ ತುಂಬುಗರ್ಭಿಣಿ ಒಂದು ದನದ ಕೊಟ್ಟಿಗೆಯಲ್ಲಿ ಹೆಣ್ಣುಮಗುವನ್ನು ಹಡೆದಳು. ಹಸಿಮೈಯಲ್ಲಿ ತವರು ಮನೆಗೆ ಬಂದ ಮಗಳನ್ನು ತಾಯಿ ಮನೆಗೆ ಸೇರಿಸಲಿಲ್ಲ. ಬಾಣಂತಿಯು ತನ್ನ ಕೂಸನ್ನು ಕಂಕುಳಲ್ಲಿ ಎತ್ತಿಕೊಂಡು ಪಿಂಪ್ರಿಯ ರೈಲ್ವೆ ನಿಲ್ದಾಣ ತಲುಪಿದರು. ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತು. ಆದರೆ, ವಿವೇಕ ಅವರ ಕೈಯನ್ನು ಹಿಡಿಯಿತು.

ರೈಲಿನಲ್ಲಿ ತನ್ನ ಸುಮಧುರ ಕಂಠದಿಂದ ಮರಾಠಿ ಗೀತೆಗಳನ್ನು ಹಾಡುತ್ತಾ ಭಿಕ್ಷೆ ಬೇಡಿದರು. ಟಿಕೆಟ್ ಕೊಳ್ಳಲು ಹಣವಿಲ್ಲದ್ದರಿಂದ ಟಿ.ಸಿ.ಗಳು ರೈಲಿನಿಂದ ಇಳಿಸುತ್ತಿದ್ದರು. ಆಗ ಬೇರೊಂದು ರೈಲು ಹತ್ತಿ ಹಾಡಿ ಹಣ ಗಳಿಸುತ್ತಿದ್ದರು. ಬದುಕಿನ ಈ ಪಯಣದಲ್ಲೇ ಅವರಿಗೆ ಹಲವಾರು ಅನಾಥ ಮಕ್ಕಳ ಪರಿಚಯವಾಯಿತು. ಅವರನ್ನು ಸಾಕಿದರು.

ಒಂದು ದಿನ ತನ್ನ ಐದು ವರ್ಷದ ಮಗಳೊಂದಿಗೆ ಮಲ್ಕಾಪುರ ಎಂಬ ಪಟ್ಟಣಕ್ಕೆ ಬಂದ ಆಕೆ, ಅಲ್ಲಿನ ಶ್ರೀಕೃಷ್ಣನ ಗುಡಿಯಲ್ಲಿ ದೇವರಿಗೆ ಕೈಮುಗಿದು, ‘ಈಗ ಬರುವೆ’ ಎಂದು ಮಗಳನ್ನು ಅಲ್ಲಿಯೇ ಬಿಟ್ಟು ಹೊರಟರು. ಗುಡಿಯ ಬಾಗಿಲಿನಲ್ಲಿ ಕುಳಿತಿದ್ದ ಮುಸ್ಲಿಂ ಮಹಿಳೆಗೆ, ‘ನನ್ನ ಮಗಳನ್ನು ನೀವು ಸಾಕಿಕೊಳ್ಳಿ’ ಎಂದು ವಿನಂತಿಸಿಕೊಂಡು ತನ್ನ ದಾರಿ ಹಿಡಿದರು. ಕೃಷ್ಣನ ಮೂರ್ತಿಗೆ ಕೈಮುಗಿಯುವಾಗ – ‘ನಾನು ಇನ್ನು ಮುಂದೆ ಚಿಂದಿ ಅಲ್ಲ; ನನ್ನ ಹೆಸರು ಸಿಂಧೂತಾಯಿ’ ಎಂದು ಹೇಳಿಕೊಂಡರು. ಇದೊಂದು ರೀತಿಯಲ್ಲಿ ಪುನರ್‌ಜನ್ಮ!

ಹೋರಾಟದ ಬದುಕು
ಸಿಂಧೂತಾಯಿ ಬಾಲ್ಯದಿಂದಲೂ ಹೋರಾಟದ ಮನೋಭಾವ ಉಳ್ಳವರು. ಗಂಡನ ಮನೆಯಲ್ಲಿದ್ದಾಗ, ಹಳ್ಳಿಯ ಮುಖಂಡನ ದುಷ್ಟತನವನ್ನು ವಿರೋಧಿಸಿದ್ದರು. ಕಾಡಿನಲ್ಲಿ ಸಿಗುವ ಸೆಗಣಿಯನ್ನು ಸಂಗ್ರಹಿಸಿ ಬೆರಣಿ ಮಾಡಿ ಮಾರುವುದು ಆ ಹಳ್ಳಿಯ ಹೆಣ್ಣುಮಕ್ಕಳಿಗೆ ಜೀವನೋಪಾಯವಾಗಿತ್ತು.

ಹಳ್ಳಿಯ ಮುಖಂಡ ತೀರ ಕಡಿಮೆ ಬೆಲೆಗೆ ಬೆರಣಿ ಕೊಂಡು, ಹಲವು ಪಟ್ಟು ಬೆಲೆಗೆ ಅವುಗಳನ್ನು ಮಾರುತ್ತಿದ್ದ. ಇದನ್ನು ಸಿಂಧೂತಾಯಿ (ಆಗಿನ್ನೂ ಚಿಂದಿ) ಪ್ರತಿಭಟಿಸಿದ್ದರು. ಇವಳ ಮತ್ತು ಇತರ ಮಹಿಳೆಯರ ಪ್ರತಿಭಟನೆಯು ಜಿಲ್ಲಾಧಿಕಾರಿಯನ್ನು ತಲುಪಿ, ಅವರೇ ಇವರ ಬಳಿಗೆ ಬಂದು ನೋವನ್ನು ಆಲಿಸಿ, ನ್ಯಾಯ ದೊರಕಿಸಿದನು. ಇದರಿಂದ ಅವಮಾನಿತನಾದ ಮುಖಂಡನು, ಸಿಂಧೂತಾಯಿಯ ಮೇಲೆ ಲೈಂಗಿಕ ಆರೋಪ ಹೊರಿಸಿದ. ಇದರಿಂದಾಗಿ ಆಕೆ ಗಂಡನ ಮನೆಯಿಂದ ಹೊರಬೀಳಬೇಕಾಯಿತು.

ಆತ್ಮಹತ್ಯೆಯ ಮಾನಸಿಕ ಪರಿಸ್ಥಿತಿಯಿಂದ ಹೊರ ಬಂದ ಸಿಂಧೂತಾಯಿ ತನ್ನ ಅನಾಥ ಮಕ್ಕಳಿಗಾಗಿ ಮನೆಯೊಂದನ್ನು ಬಾಡಿಗೆಗೆ ಹಿಡಿದರು. ಊರೂರು ಸುತ್ತಾಡಿ, ಹಾಡಿ ಹಣಗಳಿಸಿ, ಮಕ್ಕಳನ್ನು ಸಾಕಿದರು. ಅವರ ನಿಸ್ವಾರ್ಥ ಸೇವೆಯು ಸುತ್ತಮುತ್ತಲ ನಗರಗಳಲ್ಲಿ ಹಬ್ಬಿ, ದಾನಿಗಳು ಹಣಸಹಾಯ ನೀಡಿದರು. ಇದರ ಫಲವಾಗಿ, ಪುಣೆಗೆ ಸಮೀಪದ ಹಡಪಸಾರದಲ್ಲಿ ‘ಸನ್ಮತಿ ಬಾಲನಿಕೇತನ’ ಎಂಬ ಹೆಸರಿನ ಅನಾಥಾಶ್ರಮ ನಿರ್ಮಾಣವಾಯಿತು. ಈ ಕಟ್ಟಡದ ನಿರ್ಮಾಣದ ಹಂತದಲ್ಲಿ, 80 ವರ್ಷದ ಆಕೆಯ ಪೂರ್ವಾಶ್ರಮದ ಗಂಡ ಹುಡುಕಿಕೊಂಡು ಬಂದ. ಹೆಂಡತಿಯ ಕ್ಷಮಾಪಣೆ ಕೇಳಿದ ಆತ, ಜೊತೆಯಲ್ಲಿರಲು ಅವಕಾಶ ಕೊಡಲು ಕೇಳಿಕೊಂಡ. ಆಗ ಆಕೆ ಹೇಳಿದ್ದು – ‘ಈ ಆಶ್ರಮದಲ್ಲಿ ನೀನು ಇರಬಹುದು. ನನ್ನ ಗಂಡನಾಗಿ ಅಲ್ಲ, ಮಗುವಾಗಿ’. ಈಗ ಶ್ರೀಹರಿ ಕೂಡ ಅಲ್ಲಿನ ಮಕ್ಕಳಲ್ಲೊಬ್ಬ.

ಸಿಂಧೂತಾಯಿ ಹೋರಾಟಕ್ಕೆ ಹಲವು ಆಯಾಮಗಳಿವೆ. ಅವರು, 84 ಹಳ್ಳಿಗಳ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದ ಅರಣ್ಯಾಧಿಕಾರಿಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಹುಲಿಗಳ ಸಂರಕ್ಷಣೆ ಹೆಸರಿನಲ್ಲಿ, ಕಾಡಿಗೆ ಹೊಂದಿಕೊಂಡಿದ್ದ ಹಳ್ಳಿಗಳಿಂದ ಸುಮಾರು 5000 ಸಾವಿರ ಜನರನ್ನು ಒಕ್ಕಲೆಬ್ಬಿಸುವುದು ಅವರಿಗೆ ಸರಿಕಾಣಲಿಲ್ಲ. ಅರಣ್ಯ ಸಚಿವರನ್ನು ಭೇಟಿಯಾದ ಅವರು – ‘ಮಂತ್ರಿಗಳೇ ಇದು ಪ್ರಜಾಪ್ರಭುತ್ವದ ದೇಶ. ಇಲ್ಲಿ ಪ್ರಜೆಗಳ ಕ್ಷೇಮಕ್ಕೆ ಮೊದಲ ಆದ್ಯತೆ, ನಂತರ ಹುಲಿಗಳ ಸಂರಕ್ಷಣೆ’ ಎಂದು ವಾದಿಸಿ ಜಯಗಳಿಸಿದರು. ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿತು.

ಈಗ ಒಟ್ಟು ಆರು ಅನಾಥಾಲಯಗಳನ್ನು, ಮಹಿಳಾ ವಸತಿಗಳನ್ನು ಸಿಂಧೂತಾಯಿ ನಿರ್ವಹಿಸುತ್ತಿದ್ದಾರೆ. ಈಕೆಯ ಅನಾಥಾಲಯದಲ್ಲಿ ಬೆಳೆದ ಹಲವಾರು ಮಕ್ಕಳು ಸುಪ್ರಸಿದ್ಧ ವಕೀಲರು, ಡಾಕ್ಟರುಗಳು, ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಸಿಂಧೂ ತಾಯಿ ತನ್ನದೊಂದು ಟೀವಿ. ಸಂದರ್ಶನದಲ್ಲಿ – ‘ನನಗೆ 1400 ಮಕ್ಕಳು, 250 ಅಳಿಯಂದಿರು ಮತ್ತು 36 ಸೊಸೆಯಂದಿರು ಇದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮಹಾಮಾತೆಗೆ ‘ಕರ್ನಾಟಕ ಸರ್ಕಾರ’ ಈಗ ‘ಬಸವ ಪುರಸ್ಕಾರ’ ನೀಡಿದೆ. ಮಹಾನ್‌ ಮಾನವತಾವಾದಿಯ ಹೆಸರಿನ ಪ್ರಶಸ್ತಿ ಮಹಾತಾಯಿಗೆ ಸಂದಿರುವುದು ಅರ್ಥಪೂರ್ಣ.

ಆತ್ಮಕಥೆ ಮತ್ತು ಚಲನಚಿತ್ರ
ಸಿಂಧೂತಾಯಿಯು ‘ನಾನು ಸಿಂಧೂತಾಯಿ’ ಎಂಬ ಹೆಸರಿನಲ್ಲಿ ತಮ್ಮ ಆತ್ಮಕಥೆಯನ್ನು ಬರೆದಿದ್ದಾರೆ. ಈ ಆತ್ಮಕಥೆಯನ್ನಾಧರಿಸಿ, ಅನಂತ ಮಹಾದೇವನ್ ಅವರು ‘ಮೀ ಸಿಂಧೂ ತಾಯಿ ಸಪ್‌ಕಾಳ್’ ಎಂಬ ಮರಾಠಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಸಿಂಧೂತಾಯಿ ಅವರಿಗೆ ಈವರೆಗೆ ನೂರಾರು ಸೇವೆಗಳು ಸಂದಿವೆ. ತಮಗೆ ಬಂದ ಎಲ್ಲ ಪ್ರಶಸ್ತಿಗಳ ಹಣವನ್ನು ಅವರು ತಾವು ನಡೆಸುತ್ತಿರುವ ಅನಾಥಾಲಯಗಳಿಗೆ ನೀಡಿದ್ದಾರೆ. ಸ್ವಂತಕ್ಕಾಗಿ ಏನನ್ನೂ ಉಳಿಸಿಕೊಂಡಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT