ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೀ ಲೈಂಗಿಕ ಆಸಕ್ತಿಯೂ ರೋಗದ ಲಕ್ಷಣ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಯಾವುದೇ ವಿಷಯದಲ್ಲಾಗಲೀ, ಮಿತಿಮೀರಿದ ಬಯಕೆ ಸಮಸ್ಯೆಗೆ ದಾರಿಯಾಗಬಹುದು. ಅದು ಲೈಂಗಿಕತೆಗೂ ಹೊರತಲ್ಲ. ಈ ಹಿಂದಿನ ಸಂಚಿಕೆಯಲ್ಲಿ ‘ನಿರಂತರ ಲೈಂಗಿಕ ಉದ್ರಿಕ್ತತೆ’ ಸಮಸ್ಯೆ ಬಗ್ಗೆ ಚರ್ಚಿಸಲಾಗಿತ್ತು. ಸಮಸ್ಯೆಯ ಸ್ವರೂಪ, ಪರಿಣಾಮಗಳು ಹಾಗೂ ಅದಕ್ಕೆ ಲಭ್ಯ ಚಿಕಿತ್ಸೆಗಳ ಬಗ್ಗೆಯೂ ವಿವರಿಸಲಾಗಿತ್ತು. ಈ ಬಾರಿಯೂ ಅಂಥದ್ದೇ ಮತ್ತೊಂದು ಸಮಸ್ಯೆಯ ಪೂರ್ಣ ಮಾಹಿತಿ ನೀಡಲಾಗುತ್ತಿದೆ. ಅದೇ ‘ಹೈಪರ್‌ ಸೆಕ್ಷುಯಾಲಿಟಿ’ (ಅತಿಯಾದ ಲೈಂಗಿಕ ಬಯಕೆ).

ಸದಾ ಲೈಂಗಿಕತೆಯಲ್ಲಿ ಆಸಕ್ತಿ ತುಂಬಿಕೊಂಡಿರುವುದು, ಯಾವಾಗಲೂ ಉದ್ರಿಕ್ತವಾಗಿರುವುದು, ಅತಿಯಾದ ಲೈಂಗಿಕ ಚಟುವಟಿಕೆಯನ್ನು ಒಂದು ಬಗೆಯ ಮಾನಸಿಕ ಸಮಸ್ಯೆ ಎಂದು ‘ಡಯಾಗ್ನಸ್ಟಿಕ್ ಅಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್’ (ಡಿಎಸ್‌ಎಂ) ಪರಿಗಣಿಸಿದೆ.

ಈ ಹೈಪರ್‌ ಸೆಕ್ಷುಯಾಲಿಟಿ ಸಮಸ್ಯೆ ಹೊಂದಿರುವವರಲ್ಲಿ ಲೈಂಗಿಕ ಬಯಕೆಯನ್ನು ಹತ್ತಿಕ್ಕುವ ಸಾಮರ್ಥ್ಯ ಕಡಿಮೆ ಇರುತ್ತದೆ. ಅವರಲ್ಲಿ ಆ ಬಯಕೆಯ ಉತ್ಕಟತೆ ಎಷ್ಟರ ಮಟ್ಟಿಗೆ ಇರುತ್ತದೆಂದರೆ, ಅವರ ಜೀವನವೇ ಲೈಂಗಿಕತೆ ಮೇಲೆ ಅವಲಂಬಿತವಾಗಿದೆ ಎನ್ನುವಂತೆ ವರ್ತಿಸುತ್ತಿರುತ್ತಾರೆ.
ಈ ರೀತಿಯ ವರ್ತನೆ ಜೀವನಶೈಲಿಯ ಮೇಲೆ ಪರಿಣಾಮ ಬೀರುವುದು ಸಹಜ ಸಂಗತಿಯೇ. ಅತಿಯಾದ ಲೈಂಗಿಕ ಉತ್ಕಟತೆಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ಅಪಾಯಕಾರಿ ಲೈಂಗಿಕ ನಡವಳಿಕೆಯನ್ನು ವ್ಯಕ್ತಪಡಿಸಬಹುದು. ಉದಾಹರಣೆಗೆ, ವೇಶ್ಯೆಯರೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಹಾಗೂ ಹಲವರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಬೆಳೆಸುವುದು – ಹೀಗೆ ಹಲವು ಅಪಾಯಕಾರಿ ದಾರಿಯಲ್ಲಿ ಸಾಗಿಬಿಡಬಹುದು. ಇದರಿಂದ ಲೈಂಗಿಕತೆಯಿಂದ ಹರಡುವ ಸೋಂಕುಗಳಿಗೆ ಬಲಿಯಾಗುವ ಸಾಧ್ಯತೆಯೂ ಇದೆ.

ವೈಯಕ್ತಿಕ ಸಂಬಂಧಗಳ ಮೇಲೆ ಈ ಸಮಸ್ಯೆಯ ಪರಿಣಾಮ ಇನ್ನಷ್ಟು ಗಾಢವಾಗಿರುತ್ತದೆ. ತಮ್ಮ ಜೊತೆಗಾರರಿಗೆ ನಂಬಿಕಸ್ಥರಾಗಿ ಉಳಿಯಲು ಸಾಧ್ಯವಾಗದೇ ಇರುವುದು ವೈಯಕ್ತಿಕ ಸಂಬಂಧದಲ್ಲಿ ಬಿರುಕು ತರುತ್ತದೆ. ಜೊತೆಗೆ ಇನ್ನೊಬ್ಬರೂ ವಿನಾಕಾರಣ ಇದರಿಂದ ತೊಂದರೆಗೆ ಒಳಗಾಗಬಹುದು. ವಿಚಿತ್ರ ಎಂದರೆ, ಈ ಸಮಸ್ಯೆ ಇರುವ ಎಷ್ಟೋ ಮಂದಿಗೆ, ‘ಇದೊಂದು ಸಮಸ್ಯೆ’ ಎಂದೇ ಅನ್ನಿಸುವುದಿಲ್ಲ. ಬದಲಾಗಿ, ಅವರು ತಮ್ಮ ಲೈಂಗಿಕ ಪರಾಕ್ರಮವೇ ಪ್ರತಿಷ್ಠೆಯ ಸಂಕೇತ ಎಂದು ಭಾವಿಸುತ್ತಾರೆ.

ಮಹಿಳೆಯರಲ್ಲಿ ಈ ರೀತಿಯ ಅನಿಯಂತ್ರಿಯ ಲೈಂಗಿಕ ಬಯಕೆಗೆ ಹಿಂದೆ ‘ಅನಿಯಂತ್ರಿತ ಲೈಂಗಿಕ ಉನ್ಮಾದ ಸಮಸ್ಯೆ’ ಎನ್ನುತ್ತಿದ್ದರು. ಪುರುಷರಲ್ಲಿ ಇದೇ ಸ್ಥಿತಿಯನ್ನು ‘ಅನಿಯಂತ್ರಿತ ಲೈಂಗಿಕ ಕಾಮನೆ ಸಮಸ್ಯೆ’ ಎಂದು ಹೆಸರಿಸಿದ್ದರು. ಈಗ ‘ಹೈಪರ್‌ಸೆಕ್ಷುಯಾಲಿಟಿ’ ಎನ್ನಲಾಗುತ್ತಿದೆ.

ಈ ಸಮಸ್ಯೆ, ಇನ್ನಿತರ ಪ್ರಮುಖ ಆರೋಗ್ಯ ಸಮಸ್ಯೆಯನ್ನು ಅವಲಂಬಿಸಿರಬಹುದು. ಬೇರೆ ಆರೋಗ್ಯ ಸಮಸ್ಯೆಗಳಿಗೆ ತಳಕು ಹಾಕಿಕೊಂಡೇ ಅತಿಯಾದ ಲೈಂಗಿಕತೆಯ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಬೈಪೋಲಾರ್ ಅಥವಾ ಮನೋವ್ಯಾಧಿಯ ಸಮಸ್ಯೆಯಿದ್ದವರಿಗೆ ಕೆಲವೊಮ್ಮೆ  ಉನ್ಮಾದದ ಭಾಗವಾಗಿ ಲೈಂಗಿಕ ಉತ್ಕಟತೆಯೂ ಅನುಭವಕ್ಕೆ ಬರುತ್ತದೆ. ನರಸಂಬಂಧಿ ಸಮಸ್ಯೆಗಳನ್ನು ಹೊಂದಿರುವ ರೋಗಿಗಳು, ಅಂದರೆ ಅಲ್ಜಮೈರ್, ಮೆದುಳು ಸಂಬಂಧಿ ಗಂಭೀರ ಸಮಸ್ಯೆಗಳಿದ್ದವರೂ ಇಂಥ ಲಕ್ಷಣಗಳನ್ನು ಎದುರಿಸಬೇಕಾಗಬಹುದು. ಪಾರ್ಕಿನ್‌ಸನ್‌ ಕಾಯಿಲೆಗೆ ನೀಡುವ ಔಷಧಗಳೂ ಕೆಲವು ವೇಳೆ ಅತಿಯಾದ ಲೈಂಗಿಕತೆಗೆ ಪ್ರಚೋದನೆಯಾಗಬಹುದು.

ಚಿಕಿತ್ಸೆಯ ಆಯ್ಕೆಗಳೇನು?
ಮಿತಿ ಮೀರಿದ ಲೈಂಗಿಕ ಚಟುವಟಿಕೆಯು ಇನ್ನೊಂದು ಆರೋಗ್ಯ ಸಮಸ್ಯೆಯ ಫಲವೇ ಎಂಬುದನ್ನು ಅವಲಂಬಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಉದ್ರೇಕ ನಿಯಂತ್ರಣ ಔಷಧಗಳು ಈ ವಿಷಯದಲ್ಲಿ ಸಹಾಯಕ್ಕೆ ಬರಬಹುದು. ಟೆಸ್ಟೊಸ್ಟೆರೋನ್‌ ಮಟ್ಟವನ್ನು ತಗ್ಗಿಸುವಂಥ ಔಷಧಗಳು ಉಪಯೋಗಕ್ಕೆ ಬರುತ್ತವೆ. ಸಂವಹನ ಥೆರಪಿಯೂ ಸಮಸ್ಯೆಯಿರುವವರಿಗೆ ತಮ್ಮ ನಡವಳಿಕೆಯನ್ನು ಕಂಡುಕೊಳ್ಳಲು ಹಾಗೂ ಉದ್ವೇಗ ನಿಯಂತ್ರಣಕ್ಕೆ ಸಹಕಾರಿ.

ಸೆಕ್ಸ್‌ಸೋಮ್ನಿಯಾ
ಅತಿಯಾದ ಲೈಂಗಿಕ ಬಯಕೆಯ ಮತ್ತೊಂದು ಸ್ವರೂಪದ ಇನ್ನೂ ಒಂದು ಸಮಸ್ಯೆ ಎಂದರೆ ನಿದ್ದೆಯಲ್ಲಿನ ಲೈಂಗಿಕ ಚಟುವಟಿಕೆ. ಇದನ್ನು ‘ಸೆಕ್ಸ್‌ಸೋಮ್ನಿಯಾ’ ಎನ್ನುತ್ತಾರೆ.

ಆಳವಾದ ನಿದ್ದೆ ಹಾಗೂ ಜಾಗೃತ ಸ್ಥಿತಿ – ಈ ಎರಡರ ನಡುವಿನ ಅವಧಿಯಲ್ಲಿ ತಮಗೇ ಅರಿವಿಲ್ಲದಂತೆ ನಿದ್ದೆಯಲ್ಲಿಯೇ ಹಸ್ತಮೈಥುನ ಅಥವಾ ಲೈಂಗಿಕಕ್ರಿಯೆ ನಡೆಸುವುದನ್ನು ‘ಸೆಕ್ಸ್‌ಸೋಮ್ನಿಯಾ’ ಎನ್ನುತ್ತಾರೆ.

ಸೆಕ್ಸ್‌ಸೋಮ್ನಿಯಾಗೆ ಒಳಗಾದವರು ನಿದ್ದೆಯಲ್ಲೇ ನಡೆದು ಹೋಗಿ, ಬೇರೆ ಯಾರೊಂದಿಗೋ ಲೈಂಗಿಕ ಚಟುವಟಿಕೆ ನಡೆಸಬಹುದು. ಹೀಗೆ ನಿದ್ದೆಯಲ್ಲೇ ನಡೆದು, ಲೈಂಗಿಕಕ್ರಿಯೆ ನಡೆಸಿದ ಅಥವಾ ಅತ್ಯಾಚಾರ ನಡೆಸಿದ ಹಲವು ಪ್ರಕರಣಗಳೂ ಇವೆ.

ಅಂದಹಾಗೆ, ‘ಸೆಕ್ಸ್‌ಸೋಮ್ನಿಯಾ’ ಪ್ಯಾರಾಸೋಮ್ನಿಯಾದ (ನಿದಿರೆಯ ಸಮಸ್ಯೆ) ಭಾಗವೇ?
ಮೊದಲೇ ಹೇಳಿದಂತೆ, ಆಳವಾದ ನಿದ್ದೆ ಹಾಗೂ ಜಾಗೃತ ಸ್ಥಿತಿ ಈ ಎರಡರ ನಡುವಿನ ಅವಧಿಯಲ್ಲಿ ಸಮಸ್ಯೆ ಗೋಚರಿಸುತ್ತದೆ. ತಮಗೆ ಅರಿವಿಲ್ಲದಂತೆ ನಿದ್ದೆಯಲ್ಲಿ ನಡೆಯುವುದು, ನಿದ್ದೆಯಲ್ಲಿ ತಿನ್ನುವುದು, ನಿದ್ದೆಯಲ್ಲಿ ಮಾತನಾಡುವುದು, ಹಲ್ಲು ಕಡಿಯುವುದು ಪ್ಯಾರಾಸೋಮ್ನಿಯಾದ ಲಕ್ಷಣಗಳು.

ಈ ಸಮಸ್ಯೆಗೆ ನಿರ್ದಿಷ್ಟ ಕಾರಣವೆಂದೇನೂ ಇಲ್ಲ. ಆದರೆ ನಿದ್ದೆಗೆ ಅಡ್ಡಿ ತರುವಂಥ, ಅಂದರೆ ಒತ್ತಡ, ನಿದ್ರಾಹೀನತೆ, ಉಸಿರುಗಟ್ಟುವಿಕೆ, ಔಷಧ, ಮದ್ಯಪಾನ ಇನ್ನಿತರ ಅಂಶಗಳು ಈ ‘ಸೆಕ್ಸ್‌ಸೋಮ್ನಿಯಾ’ಗೆ ಪ್ರಚೋದಕಗಳಾಗಬಹುದು.

ಈ ಸಮಸ್ಯೆ ಮೊದಲು ಪರಿಣಾಮ ಬೀರುವುದು ವೈಯಕ್ತಿಕ ಬದುಕಿನ ಮೇಲೆ. ‘ಸೆಕ್ಸ್‌ಸೋಮ್ನಿಯಾ’ಗೆ ಒಳಗಾಗಿರುವವರು, ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟುಕೊಳ್ಳುವುದು, ತಮ್ಮ ನಡವಳಿಕೆಯಿಂದ ತಾವೇ ಮುಜುಗರ ಅನುಭವಿಸುವಂಥ ಸ್ಥಿತಿ ಎದುರಾಗುತ್ತದೆ.

‘ಸೆಕ್ಸ್‌ಸೋಮ್ನಿಯಾ’ದಿಂದಾಗಿಯೇ ಹಲವು ಅತ್ಯಾಚಾರ ಪ್ರಕರಣಗಳು ನಡೆದಿವೆ. ಈ ಬಗ್ಗೆ ಅಧಿಕೃತ ಚಿಕಿತ್ಸೆ ನಡೆದ ನಂತರವೇ ಖುಲಾಸೆಯಾಗಿದ್ದು ಕಂಡುಬಂದಿದೆ. 2005ರಲ್ಲಿ ಟೊರೆಂಟೊದಲ್ಲಿ ನಡೆದ ಪ್ರಕರಣವೊಂದರಿಂದ ಮೊದಲ ಬಾರಿಗೆ ಜನರಿಗೆ ‘ಸೆಕ್ಸ್‌ಸೋಮ್ನಿಯಾ’ ಬಗ್ಗೆ ತಿಳಿದುಬಂದಿದ್ದು. ‘ಸೆಕ್ಸ್‌ಸೋಮ್ನಿಯಾ’ ಕುರಿತು  ಈಗಲೂ ತಿಳಿವಳಿಕೆಯ ಕೊರತೆಯಿದೆ.

‘ಸೆಕ್ಸ್‌ಸೋಮ್ನಿಯಾ’ಗೆ ಚಿಕಿತ್ಸೆ ಸರಳ. ಇದರ ಮೂಲ ಕಾರಣ, ಅಂದರೆ ನಿದ್ರಾಹೀನತೆಯನ್ನು ನಿವಾರಿಸಿದರೆ, ‘ಸೆಕ್ಸ್‌ಸೋಮ್ನಿಯಾ’ ನಿವಾರಣೆಯೂ ಸಾಧ್ಯವಿದೆ. ಉದಾಹರಣೆಗೆ, ನಿದ್ರಾಹೀನತೆ ಸಮಸ್ಯೆಯ ಚಿಕಿತ್ಸೆಗೆ ಬಳಸುವ ‘ಸಿಪಿಎಪಿ’ (ಕಂಟಿನ್ಯುಯಸ್ ಪಾಸಿಟಿವ್ ಏರ್‌ವೇ ಪ್ರೆಷರ್‌) ಯಂತ್ರದಿಂದ ಚಿಕಿತ್ಸೆ ಫಲಕಾರಿಯಾಗಬಹುದು. ಇದರೊಂದಿಗೆ ಆತಂಕ ನಿವಾರಣಾ ಔಷಧಿಗಳನ್ನು ಸೇವಿಸುವುದೂ ಯಶಸ್ವಿ ಫಲಿತಾಂಶ ನೀಡಿದೆ.­
ಮುಂದುವರೆಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT