ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲಿರುವುದು, ಉಗುರು ಕತ್ತರಿಸಲಲ್ಲ!

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆಫೀಸಿನಿಂದ ಮನೆಗೆ ಹೊರಡುವ ಸಮಯ. ಯಾವಾಗ ಬಸ್ಸು ಬರುತ್ತದೋ ಎಂದು ಕಾಯುತ್ತಾ ಕುಳಿತಿರುವಾಗ ಕಾಣಿಸಿದ್ದು ಒಂದು ಬದಿ ತುಂಡಾದ ಕಿರುಬೆರಳ ಉಗುರು. ಯಾಕೋ ಕಿರಿಕಿರಿಯಾಗಿ ತಕ್ಷಣ ಅದನ್ನು ಸರಿಮಾಡಲು – ಅಂದರೆ ಉಗುರು ಕತ್ತರಿಸಲು ಬಳಕೆಯಾದದ್ದು ಹಲ್ಲು! ಇದು ಬಹಳಷ್ಟು ಜನರು ದಿನವೂ ಮಾಡುವ ಸರ್ವೇಸಾಮಾನ್ಯ ಸಂಗತಿ.

‘ಒನಿಕೊಫೇಜಿಯಾ’ ಎಂದು ವೈಜ್ಞಾನಿಕವಾಗಿ ಕರೆಯಲಾಗುವ ಈ ಉಗುರು ಕಚ್ಚುವಿಕೆ ಎಲ್ಲಾ ವಯಸ್ಸಿನ ಜನರಲ್ಲಿ ಕಂಡುಬರುವ ಸಾಮಾನ್ಯ ಅಭ್ಯಾಸ. ಮಕ್ಕಳಿದ್ದಾಗಲೇ ಆರಂಭವಾಗುವ ಈ ಅಭ್ಯಾಸ ಹಾಗೆಯೇ ಚಟವಾಗಿ ಮುಂದುವರಿಯುತ್ತದೆ.  ಹದಿಹರೆಯದವರಲ್ಲಿ ಅತೀ ಹೆಚ್ಚು, ಸುಮಾರು ನಲವತ್ತೈದರಷ್ಟು ಜನರಲ್ಲಿ ಇರುತ್ತದೆ. ಆನುವಂಶಿಯವಾಗಿ ಬರುವ ಸಾಧ್ಯತೆ ಇದ್ದು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು. ಅರಿವಿಲ್ಲದೆ ಮಾಡುವ, ಕೆಲವೊಮ್ಮೆ ಚಟವಾಗಿ ಅಂಟಿಕೊಳ್ಳುವ ಈ ಉಗುರು ಕಚ್ಚುವಿಕೆಯಿಂದ ನಮ್ಮ ಆರೋಗ್ಯ ವಿಶೇಷವಾಗಿ ದಂತಾರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಾಗಬಹುದು.

ನಮ್ಮ ಹಲ್ಲುಗಳು ಮಾಡುವ ಕೆಲಸಗಳು ಅನೇಕ. ತಿಂದ ಆಹಾರವನ್ನು ಚೆನ್ನಾಗಿ ತುಂಡರಿಸಿ ಅಗಿಯಲು, ಮಾತು ಸ್ಪಷ್ಟವಾಗಿ ಬರಲು, ಮುಖದ ಬೆಳವಣಿಗೆ ಸರಿಯಾಗಿ ಆಗಲು, ಸೌಂದರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಹಲ್ಲುಗಳು ಬೇಕು. ಆದರೆ ಉಗುರು ಕತ್ತರಿಸುವುದು ಹಲ್ಲುಗಳ ಕೆಲಸ ಅಲ್ಲವೇ ಅಲ್ಲ. ಹಾಗಿದ್ದ ಅವು ಈ ಕೆಲಸಕ್ಕೆ ಬಳಕೆಯಾಗುತ್ತಿರುವುದರ ಕುರಿತು ಹಲವು ಕಾರಣಗಳಿವೆ. ಸಾಮಾನ್ಯವಾಗಿ ಇರುವ ಕಾರಣಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.

1. ಬೇಸರ: ಮನೆಯಲ್ಲಿ ಯಾರೂ ಇಲ್ಲ. ಟೀವಿ ನೋಡುತ್ತಾ ಕುಳಿತರೆ ಅದರಲ್ಲಿ ಬರೀ ಬೇಡದ ರಾಜಕೀಯ. ಸಮಯ ಹೋಗುತ್ತಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಾ ಎದುರಿಗಿನ ಟೀವಿಯನ್ನೇ ದಿಟ್ಟಿಸುತ್ತಾ ಮಾಡುವ ಕೆಲಸ ಹಲ್ಲಿನಿಂದ ಉಗುರು ಟ್ರಿಮ್ಮಿಂಗ್!

2. ಆತಂಕ: ತುಂಬಾ ಬೇಕಾದವರ ಮದುವೆ. ಮನೆಮಂದಿಯೆಲ್ಲಾ ಸೇರಿ ಹೊರಟಿದ್ದಾಗಿದೆ. ಮುಕ್ಕಾಲು ದಾರಿ ಬಂದ ಮೇಲೆ ಸಿಕ್ಕಿದ್ದು ಟ್ರಾಫಿಕ್ ಜಾಮ್. ಮಾಡುವುದೇನು, ಕಾಯದೇ ವಿಧಿಯಿಲ್ಲ. ಸರಿಯಾದ ಸಮಯಕ್ಕೆ ಹೋಗುತ್ತೇವೋ ಇಲ್ಲವೋ ಆತಂಕ. ಕಾಲು ಕಾರಿನ ಬ್ರೇಕ್ ಮೇಲಾದರೆ, ಬಾಯಿಗೆ ಉಗುರು ಕತ್ತರಿಸುವ ಕೆಲಸ!

3. ಒತ್ತಡ: ಪದವಿಯ ಅಂತಿಮ ಪರೀಕ್ಷೆಯ ದಿನ. ಚೆನ್ನಾಗಿಯೇ ಓದಿದ್ದಾಗಿದೆ. ಆದರೂ ಪ್ರಶ್ನೆಪತ್ರಿಕೆ ಕೊಡುವ ಮೊದಲು ಮನಸ್ಸಿನಲ್ಲಿ ನಾನಾ ಯೋಚನೆ. ಆಕಸ್ಮಾತ್ ಕಷ್ಟ ಇದ್ದು ಫೇಲಾದರೆ, ಮುಂದಿನ ಗತಿ? ಲೀಕಾಗಿದೆಯೋ ಏನೋ? — ತಲೆ ಎಲ್ಲಾ ದಿಕ್ಕಿನಲ್ಲಿ ಓಡುತ್ತಿದ್ದರೆ ಹಲ್ಲಿನಿಂದ ಕಟ್ ಕಟ್ ಎಂದು ಉಗುರು ಕಡಿಯುವಿಕೆ!

4.  ಇವೆಲ್ಲದರ ಜತೆ ಕೆಲವರಿಗೆ ಉಗುರು ಕತ್ತರಿಸುವ ಸಾಧನ ಕುರಿತು ಹೆದರಿಕೆಯೂ ಇರುತ್ತದೆ. ಉಗುರಿಗೆ ಜೀವವಿಲ್ಲ, ಹಾಗಾಗಿ ಅದನ್ನು ಕತ್ತರಿಸುವಾಗ ನೋವಾಗುವುದಿಲ್ಲ. ಆದರೆ ಉಗುರಿಗೆ ಅಂಟಿದಂತಿರುವ ಚರ್ಮ ಮೃದುವಾಗಿದ್ದು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಎಚ್ಚರದಿಂದ ಉಗುರು ಕತ್ತರಿಸದೇ ಹೋದಲ್ಲಿ ನೋವು, ಗಾಯವಾಗಬಹುದು. ಸಾಧನಕ್ಕಿಂತ ಬಾಯಿಯ ಮೂಲಕ ನಿಧಾನವಾಗಿ ಕತ್ತರಿಸಬಹುದು, ನಿಯಂತ್ರಣವಿರುತ್ತದೆ ಎಂದೂ ಕೆಲವರು ಭಾವಿಸುತ್ತಾರೆ.

5.  ಕೆಲವು ಸಂದರ್ಭಗಳಲ್ಲಿ ಈ ಉಗುರು ಕಚ್ಚುವಿಕೆ  ಗೀಳುರೋಗದ ಚಿಹ್ನೆಯೂ ಆಗಿರಬಹುದು. ಅತಿ ಚಟುವಟಿಕೆಯ ಮಕ್ಕಳಲ್ಲೂ ಈ ಚಟವಿರುವ ಸಂಭವವಿದೆ.

ಉಗುರು ಕಚ್ಚುವಿಕೆಯ ಪರಿಣಾಮಗಳು
1.  ಪಾರೋನಿಕಿಯಾ ಎಂಬುದು ಉಗುರು ಮತ್ತು ಸುತ್ತಲಿನ ಚರ್ಮವನ್ನು ಕಾಡುವ ಸೋಂಕು. ಪದೇ ಪದೇ ಕಚ್ಚುವುದರಿಂದ ಉಗುರಿನ ಚರ್ಮದಲ್ಲಿನ ರಂಧ್ರಗಳಿಂದ ಬಾಕ್ಟೀರಿಯಾದಂಥ ಸೂಕ್ಷಾಣುಜೀವಿಗಳು ಒಳ ಹೊಕ್ಕುತ್ತವೆ. ಇದರಿಂದ ಬೆರಳ ತುದಿ  ಊದಿ, ಕೆಂಪಗಾಗಿ ಮುಟ್ಟಿದೊಡನೆ ನೋವಾಗುತ್ತದೆ. ಕೆಲವೊಮ್ಮೆ ರಕ್ತಸ್ರಾವ ಮತ್ತು ಉಗುರಿನಲ್ಲಿ ಬಿರುಕು ಕಾಣಿಸಬಹುದು.

2. ಯಾವುದೇ ವಸ್ತುವನ್ನು ಮುಟ್ಟಲು, ಹಿಡಿಯಲು, ತೆಗೆಯಲು ನಾವು ಬಳಸುವುದು ಕೈಗಳು.  ಹೀಗೆ ಏನೆಲ್ಲವನ್ನು ಮುಟ್ಟಿ ಬಂದ ಕೈಗಳನ್ನು ಬಾಯಿಗೆ ಇಟ್ಟು ಹಲ್ಲಿನಿಂದ ಉಗುರು ಕತ್ತರಿಸಿದಾಗ ಆ ಎಲ್ಲಾ ಕಸ, ರೋಗಾಣುಗಳು ಬಾಯಿ ಮತ್ತು ವಸಡಿನ ಮೂಲಕ ದೇಹಕ್ಕೆ ನೇರವಾಗಿ ಪ್ರವೇಶಿಸುತ್ತವೆ. ಸೋಂಕಾಗುವ ಸಾಧ್ಯತೆ ಹೆಚ್ಚುತ್ತದೆ.

3. ಚೂಪಾದ ಉಗುರನ್ನು ಹಲ್ಲಿನಿಂದ ಕತ್ತರಿಸುವಾಗ ಅದು ಮೃದುವಾದ ವಸಡಿಗೆ ತಾಗಿ ಗಾಯವಾಗಿ ಅಲ್ಲಿಯೂ ಊತ, ಉರಿ, ರಕ್ತಸ್ರಾವ ವಾಗಬಹುದು. ಆಗಾಗ್ಗೆ ಹೀಗಾಗಿ ವಸಡಿನ ಉರಿಯೂತಕ್ಕೂ ಇದು ಕಾರಣವಾಗಬಹುದು.

4.  ಹಲ್ಲಿನ ಹೊರಕವಚ ಎನಾಮೆಲ್ ಗಟ್ಟಿಯಿದ್ದರೂ ಪದೇ ಪದೇ ಉಗುರು ಕಚ್ಚಿದಾಗ ಬೀಳುವ ಹೆಚ್ಚಿನ ಒತ್ತಡಕ್ಕೆ ಸವೆಯುತ್ತದೆ. ಇದರಿಂದ ಹಲ್ಲು ತುಂಡಾಗುವಿಕೆ, ದುರ್ಬಲ ಹಲ್ಲುಗಳು, ಹುಳುಕು, ಬಿರುಕು ಸಾಮಾನ್ಯ ತೊಂದರೆಗಳು. ದೀರ್ಘಕಾಲದ ಉಗುರು ಕಚ್ಚುವಿಕೆಯಿಂದ ಹಲ್ಲಿನ ನಡುವೆ ಜಾಗವೂ ಕಾಣಿಸಿಕೊಳ್ಳಬಹುದು.

5. ಹಲ್ಲಿನಿಂದ ಉಗುರು ಕಚ್ಚಿ ಅದು ಅಂಕು ಡೊಂಕು, ಮುರಿದು, ಕೆಂಪಗಾಗಿ  ನೋವಿನ ಜತೆಗೆ ನೋಡಲೂ ಚಂದವಲ್ಲ. ದಿನನಿತ್ಯವೂ ಬಳಸಬೇಕಾದ ಎಲ್ಲರಿಗೂ ಕಾಣಿಸುವ ಉಗುರು ಹೀಗಾದಾಗ ಸಾಮಾಜಿಕವಾಗಿ ಬೆರೆಯಲು ಮುಜುಗರ ಉಂಟಾಗುವುದು ಸಹಜ.ಕೆಲವೊಮ್ಮೆ ಇದು ಆತ್ಮವಿಶ್ವಾಸವನ್ನೇ ಕುಂದಿಸಬಹುದು. 

ಪರಿಹಾರ
ಉಗುರು ಕಚ್ಚುವ ಅಭ್ಯಾಸ ಮಕ್ಕಳಲ್ಲಿ ಶುರುವಾದರೂ ಬೆಳೆಯುತ್ತಾ, ಬುದ್ಧಿ ಬಂದಂತೆ ಕಡಿಮೆ ಯಾಗುತ್ತದೆ. ಹದಿಹರೆಯ ಮತ್ತು ಪ್ರೌಢಾವಸ್ಥೆಯಲ್ಲಿ ಇದು ಚಟವಾಗಿ ಮುಂದುವರಿದಾಗ ಪ್ರತಿಬಂಧಿಸುವುದು ಅಗತ್ಯ.

* ವಾರಕ್ಕೊಮ್ಮೆ ಉಗುರನ್ನು ಚಿಕ್ಕದಾಗಿ ಚೊಕ್ಕವಾಗಿ ಕತ್ತರಿಸಿ ಉದ್ದ ಬೆಳೆಯದಂತೆ ಎಚ್ಚರ ವಹಿಸುವುದು.

* ಉಗುರು ಕಚ್ಚಲು ಆರಂಭಿಸಿದೊಡನೆ ಎಚ್ಚರಿಸುವಂತೆ ಆಪ್ತ ಗೆಳೆಯ/ಸಹೋದ್ಯೋಗಿ/ಕುಟುಂಬದವರಿಗೆ ಹೇಳುವುದು

* ಇದಕ್ಕೆಂದೇ ಸಿಗುವ ಕಹಿ ದ್ರಾವಣ, ವಿಶೇಷ ನೇಲ್ ಪಾಲಿಶ್ ಅಥವಾ ಎಣ್ಣೆಯನ್ನು ಬೆರಳಿಗೆ ಹಚ್ಚಿಕೊಳ್ಳುವುದು.

* ಬೇಸರ, ಆತಂಕ, ಒತ್ತಡ ಉಂಟಾದಾಗ ಪ್ರಯತ್ನಪೂರ್ವಕವಾಗಿ ಕೈಗಳನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸುವುದು (ಚೆಂಡಾಟ, ಪುಸ್ತಕ ಓದು, ಬರೆಯುವುದು, ಪೇಂಟ್ ಮಾಡು, ಹೊಲಿಗೆ ಇತ್ಯಾದಿ)

* ಯೋಗ, ಧ್ಯಾನದ ಮೂಲಕ ಮನಸ್ಸಿನ ಒತ್ತಡವನ್ನು ಆದಷ್ಟೂ ಕಡಿಮೆ ಮಾಡುವುದು.

* ಇದಾವುದೂ ಫಲ ನೀಡದಿದ್ದಲ್ಲಿ ದಂತವೈದ್ಯರು ಮತ್ತು ಮನೋವೈದ್ಯರ ಸಲಹೆ ಅಗತ್ಯ.

* ಉಗುರು ಕಚ್ಚುವ ಚಟದಿಂದ ಹೊರಬರಲು ತಾಳ್ಮೆ ಹಾಗೂ ಸತತ ಪ್ರಯತ್ನದ ಜೊತೆ ನೆನಪಿಡಬೇಕಾದ ಮುಖ್ಯ ಅಂಶ – ಹಲ್ಲಿರುವುದು ಉಗುರನ್ನು ಕತ್ತರಿಸಲು ಅಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT