ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಬರ್ಗರ್‌ ವಡಾ ಪಾವ್‌

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮೂಗಿನ ಹೊರಳೆಗಳು ತಾನೇ ಅಗಲಗಲವಾಗುವಂಥ ಪರಿಮಳ. ಆಲೂಗಡ್ಡೆ, ಕೊತ್ತಂಬರಿ, ಓಂಕಾಳು, ಬಿಸಿ ಎಣ್ಣೆಗೆ ಬಿದ್ದ ಕಡಲೇಹಿಟ್ಟಿನ ವಾಸನೆ.... ವಡಾ ಕೈ ಬೀಸಿ ಕರೆಯುತ್ತಿತ್ತು. ಬಿಸಿಬಿಸಿ ಹೊಗೆಯಾಡುವ ಈ ವಡಾ, ತಣ್ಣಗಿನ ಬನ್‌ನೊಳಗೆ ಅವಿತುಕೊಂಡ ವಡಾ. ಮೇಲೊಂಚೂರು ಬೆಳ್ಳುಳ್ಳಿ ಚಟ್ನಿ. ಸುಂದರವಾದ ಹುಡುಗಿಯ ಮುಖಕ್ಕೆ ಲೇಪಿಸಿದ ಪೌಡರ್‌ನಂತೆ!

ಪುಣೆ, ಮುಂಬೈ, ಲಾತುರ್‌, ಔರಂಗಾಬಾದ್‌ ಕಡೆಯೆಲ್ಲ ಪುದಿನಾ ಚಟ್ನಿ, ಬಳ್ಳೊಳ್ಳಿ ಚಟ್ನಿ ಎರಡೂ ರುಚಿ ಹೆಚ್ಚಿಸಲೆಂದೇ ಲೇಪಿಸಲಾಗಿರುತ್ತದೆ. ತಣ್ಣನೆಯ ಪಾವ್‌ ಹಲ್ಲಿನಂಚಿಗೆ ಮೃದುಕೋಮಲವಾಗಿ ತುತ್ತು ಕಚ್ಚುವಾಗ ಹಬೆಯಾಡುವ ವಡೆಯ ಬಿಸಿ, ತೆರೆದ ಬಾಯಿ ತೆರೆದಂತೆಯೇ ಇಡುತ್ತದೆ. ಈ ಬಿಸಿಗೆ ಹೊನ್ನ ಕಳಶವಿಟ್ಟಂತೆ ಬೆಳ್ಳುಳ್ಳಿ ಚಟ್ನಿಯ ಖಾರ... ಆಹಹಾ... ಮೂಗು, ಕಿವಿ ಎಲ್ಲ ಕಡೆಯೂ ಕಡುಖಾರ ಮತ್ತು ಬಿಸಿ ಎರಡೂ ಸೇರಿ ಕಣ್ಣಾಲಿಗಳು ನೆತ್ತಿಯ ಕಡೆಗೆ ತೇಲಿರುತ್ತವೆ. ಅಷ್ಟಾದರೂ ಕೈ ಬಾಯಿ ಸುಮ್ಮನಿರುತ್ತದೆಯೇ..?

ನಿನ್ನನ್ನು ಮುಗಿಸಿಯೇ ತೀರುವೆ ಎಂಬ ಹಟದಲ್ಲಿ ಇನ್ನೊಂದು ತುತ್ತಿಗೆ ಬಾಯಿ ಹಾಕಿರುತ್ತದೆ. ಬಿಸಿಗೆ ಬುದ್ಧಿ ಕಲಿಸಲೆಂಬಂತೆ ಸಾಸ್‌ಗೆ ಒಂಚೂರು ಅದ್ದಿ ತಿನ್ನಲಾರಂಭಿಸುತ್ತೇವೆ.

ಅಪ್ಪಟ ಮಹಾರಾಷ್ಟ್ರದ ಈ ತಿನಿಸು, ನಮ್ಮ ದೇಶಕ್ಕೆ ಬರ್ಗರ್‌ ಕಾಲಿಡುವ ಮುಂಚೆಯೇ ಅಭ್ಯಾಸದಲ್ಲಿದೆ. ಬೆಳಗ್ಗೆ ತಿಂದರೆ ಉಪಹಾರ, ಮಧ್ಯಾಹ್ನ ತಿಂದರೆ ಹೊಟ್ಟೆ ತುಂಬಿಸುವ, ಶಕ್ತಿ ನೀಡುವ ಊಟ, ಸಂಜೆ ಚಹಾದ ಜೊತೆಗೆ ಸೇವಿಸಿದರಂತೂ ಅತಿ ಸೊಗಸಿನ ಜೊತೆ ತಿನಿಸು.

ಇಂತಿಪ್ಪ ವಡಾಪಾವ್‌ ಮರಾಠಿಗರ ಬದುಕಿನಿಂದ ಬೇರ್ಪಡಿಸಲಾಗದ ತಿನಿಸು. ಗುಜರಾತಿಗಳಿಗೆ ಸಮೋಸಾ, ಕಚೌರಿಗಳಿದ್ದಂತೆ! ಕನ್ನಡಿಗರಿಗೆ ಇಡ್ಲಿ, ದೋಸೆ ಇದ್ದಂತೆ!

ಇದನ್ನು ಕಂಡು ಹಿಡಿದವರು ನಮ್ಮ ದಕ್ಷಿಣದ ವೆಂಕಟೇಶ್‌ ಅಯ್ಯರ್‌, ಶಿವದಾಸ್‌ ಮೆನನ್‌. ಇಬ್ಬರೂ ತಮ್ಮ ಕಾರ್ಪೊರೇಟ್‌ ಕೆಲಸ ಬಿಟ್ಟು ವಡಾ ಪಾವ್‌ ಬಿಸಿನೆಸ್‌ ಆರಂಭಿಸಿಯೇ ಬಿಟ್ರು. ‘ಗೋಲಿ ವಡಾಪಾವ್‌ ನಂ 1’ ಹೆಸರಿನಲ್ಲಿ.

ಎಂ.ಜಿ.ರಸ್ತೆಯ ಗೋಲಿ ಬಳಿ ವಡಾಪಾವ್ ಸವಿಯುತ್ತಿರುವ ಯುವಕರು

ಇದೀಗ ದೇಶದಲ್ಲಿ ಅಂದಾಜು 400 ಔಟ್‌ಲೆಟ್‌ಗಳಿವೆ. ಬಿಸಿಬಿಸಿ ವಡಾಪಾವ್‌, ಕಿಂಗ್‌ ವಡಾಪಾವ್‌, ಮಸಾಲಾ ವಡಾಪಾವ್‌ ಮಾರಾಟ ಮಾಡುತ್ತಿವೆ. ಎಲ್ಲೇ ಹೋದ್ರೂ ಒಂದೇ ತೆರನಾದ ರುಚಿ. ಗುಣಮಟ್ಟ ಮತ್ತು ಒಂದೇ ಅಳತೆಯ ವಡಾಪಾವ್‌ ಸಿಗುತ್ತವೆ.

ವಡಾಪಾವ್‌ ಜನಪ್ರಿಯವಾದ ಕೂಡಲೇ  ಸಾಬೂದಾನಾ ವಡಾ ಪರಿಚಯಿಸಲಾಯಿತು. ಹೊಟ್ಟೆ ತುಂಬಿಸುವಂಥ ರೋಲ್‌ಗಳನ್ನು ಆರಂಭಿಸಲಾಯಿತು. ಎಲ್ಲಕ್ಕೂ ಗಿಣ್ಣದ ಪದರನ್ನು ನೀಡುವ ಆಯ್ಕೆಯನ್ನೂ ಕೊಡಲಾಗಿದೆ. ಎಲ್ಲ ಗೋಲಿ ಕೇಂದ್ರಗಳಲ್ಲೂ ವಡಾಪಾವ್‌ ಜೊತೆಗೆ ಅತಿ ರುಚಿಕರ ಎನಿಸುವ ಇನ್ನೊಂದು ತಿನಿಸೆಂದರೆ ಚೀಸ್‌ ಉಂಗ್ಲೀಸ್‌ (ಗಿಣ್ಣದ ಬೆರಳು) ಐದು ಬೆರಳಿನಾಕಾರದ ಈ ತಿನಿಸು ಆಲೂಗಡ್ಡೆ, ಹಸಿಬಟಾಣಿ, ಎಳೆಜೋಳದಿಂದ ತಯಾರಿಸಲಾದ ಕುರುಕಲು ಇದು.

ಹೊರಗೆಲ್ಲ ಕುರುಕುರು ಎನ್ನಿಸುವ ಈ ಉಂಗ್ಲಿಯನ್ನು ಬಾಯಿಗಿಟ್ಟರೆ ಕರಗುವಷ್ಟು ರುಚಿಕರ. ಮುಗಿದಷ್ಟೂ ತಿನ್ನುವ ಉತ್ಸಾಹ.
ಜೊತೆಗೆ ಎಣ್ಣೆಯಲ್ಲಿ ಕರಿದ ಹಸಿಮೆಣಸಿನಕಾಯಿಯನ್ನು ಕಚ್ಚಿ ಸವಿಯುವ ಸುಖಕ್ಕೆ ಆಗಲೇ ಬಾಯೊಳು ಲಾಲಾರಸ ಜಿನುಗುತ್ತಿತ್ತು.

ಎಂ.ಜಿ. ರಸ್ತೆಯ ಮೆಟ್ರೊ ಸ್ಟೇಷನ್‌ಗೆ ಅಂಟಿಕೊಂಡಂತೆಯೇ ಇರುವ ಗೋಲಿ ವಡಾಪಾವ್‌ ನಂ.1 ಅಂಗಡಿಯತ್ತ ಹೆಜ್ಜೆ ಹಾಕಲು ಇಷ್ಟು ವಿವರಣೆ ಸಾಕು. 30 ರೂಪಾಯಿಗಳಿಂದ ಆರಂಭಿಸಿ, 100 ರೂಪಾಯಿಗಳವರೆಗಿನ ತಿನಿಸುಗಳಿಲ್ಲಿ ಲಭ್ಯ. ಹಾವೇರಿಯ ಹುಡುಗ ಗುರು, ನಗುನಗುತ್ತಲೇ ನಿಮ್ಮ ಆರ್ಡರ್‌ಗಳನ್ನು ಪೂರೈಸುತ್ತಾನೆ. ಒಂದೆರಡು ಉಂಗ್ಲಿ  ತಿಂದು, ವಡಾಪಾವ್‌ ಹೊಟ್ಟೆಗಿಳಿಸಿದರೆ ಹೊಟ್ಟೆಯೊಳಗೊಂದು ಬಿಸಿ ಅಗ್ಗಿಷ್ಟಿಗೆ ಇಟ್ಟ ಹಿತಾನುಭವ. ಗಂಟಲಿಗೊಂದಿಷ್ಟು ಬಿಸಿ ಚಹಾ ಇಳಿದರಂತೂ ಸ್ವರ್ಗದ ಮೆಟ್ಟಿಲಿನಲ್ಲಿ ನಿಂತಂತೆಯೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT