ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಇರಲವ್ವ ಮನೆ ತುಂಬ...

Last Updated 22 ಏಪ್ರಿಲ್ 2017, 3:50 IST
ಅಕ್ಷರ ಗಾತ್ರ

ಅತ್ತ ಲ್ಯಾಪ್‌ಟಾಪ್‌ ಒಳಗೆ ಮುಳುಗಿ ಹೋಗಿರುವ ಅಪ್ಪ, ಇತ್ತ ರಿಮೋಟ್‌ ಗಟ್ಟಿಯಾಗಿ ಹಿಡಿದು ಟಿ.ವಿ.ಯ ಧಾರಾವಾಹಿಯೊಳಗೆ ಕಳೆದು ಹೋಗಿರುವ ಅಮ್ಮ, ಇವರಿಬ್ಬರ ಸಹವಾಸವೂ ಬೇಡವೆಂಬಂತೆ ಮೊಬೈಲ್‌ ಅನ್ನೇ ಜಗತ್ತು ಮಾಡಿಕೊಂಡು ಸೋಫಾ ಮೇಲೆ ಬಿದ್ದುಕೊಂಡಿರುವ ಮಗು...

ನಗರಗಳ ಬಹುತೇಕ ಮನೆಗಳಲ್ಲಿ ಈ ಚಿತ್ರಣ ಸಾಮಾನ್ಯ. ನಗರಗಳಷ್ಟೇ ಅಲ್ಲ ಹಳ್ಳಿಯ ಮಕ್ಕಳಿಗೂ ಈಗ ಮೊಬೈಲ್‌ ಆಕರ್ಷಣೆ ಹೆಚ್ಚಾಗಿದೆ. ಮೊಬೈಲ್‌, ಐಪ್ಯಾಡ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ನಂಥ ಆಧುನಿಕ ಉಪಕರಣಗಳು ಹಾಗೂ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಸೆಳೆತಕ್ಕೆ ಸಿಲುಕಿಕೊಂಡಿರುವ ಮಕ್ಕಳು ಪುಸ್ತಕಗಳನ್ನು ಮರೆಯುತ್ತಿದ್ದಾರೆಯೇ?

ಕಾನ್ವೆಂಟು–ಶಾಲೆಗೆ ದಾಖಲಾಗಿ ಅಕ್ಷರ ಕಲಿಯುತ್ತಿರುವ ಬಹುತೇಕ ಮಕ್ಕಳು ಶಿಕ್ಷಕರ ಒತ್ತಾಯಕ್ಕೆ, ಹೋಮ್‌ ವರ್ಕ್‌ ಎಂಬ ಗುಮ್ಮಕ್ಕೆ ಹೆದರಿ ಪಠ್ಯ ಪುಸ್ತಕಗಳನ್ನು ಹಿಡಿಯುತ್ತಾರೆಯೇ ಹೊರತು ಪುಸ್ತಕಗಳ ಮೇಲಿನ ಪ್ರೀತಿಯಿಂದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆಧುನಿಕ ಉಪಕರಣಗಳ ಆಕರ್ಷಣೆ ಹೆಚ್ಚಾಗಿರುವ ಈ ಕಾಲದಲ್ಲಿ ಪುಟ್ಟ ಪೋರರಿಗೆ ಪುಸ್ತಕ ಪ್ರೀತಿ ಬೆಳೆಸುವುದೊಂದು ದೊಡ್ಡ ಸವಾಲು.

ಅಕ್ಷರ ಕಲಿತು ಓದುವ ಬಲ ಗಳಿಸಿದ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಸುವ ಜವಾಬ್ದಾರಿ ಶಿಕ್ಷಕರದ್ದು ಮತ್ತು ಪೋಷಕರದ್ದು. ಆದರೆ, ಶಿಕ್ಷಕರು ಪಠ್ಯಗಳ ಬಗ್ಗೆಯಷ್ಟೇ ಒತ್ತಡ ಹೇರುವಾಗ, ಪೋಷಕರು ಪುಸ್ತಕಗಳಿಂದ ದೂರವಾಗಿ ಆಧುನಿಕ ಉಪಕರಣಗಳನ್ನು ಅಪ್ಪಿಕೊಂಡಿರುವಾಗ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಯಲು ಹೇಗೆ ಸಾಧ್ಯ.

‘ಮಕ್ಕಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕೆಂದು ಹೇಳುವ ಮೊದಲು ಪೋಷಕರಿಗೆ ಪುಸ್ತಕ ಪ್ರೀತಿ ಇದೆಯೇ ಎಂಬುದನ್ನು ನೋಡಬೇಕು. ಮಕ್ಕಳು ಮನೆಯಲ್ಲಿರುವ ದೊಡ್ಡವರನ್ನೇ ಅನುಕರಿಸುತ್ತಾರೆ. ಹೀಗಾಗಿ ಪೋಷಕರೇ ಅವರಿಗೆ ಮಾದರಿ. ಪೋಷಕರು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಮಕ್ಕಳಲ್ಲೂ ಆ ಪ್ರೀತಿ ಬೆಳೆಯುತ್ತದೆ’ ಎನ್ನುತ್ತಾರೆ ಮಕ್ಕಳ ಹಕ್ಕುಗಳ ತಜ್ಞ ವಾಸುದೇವ ಶರ್ಮಾ.

‘ಮಕ್ಕಳಿಗಾಗಿ ಪುಸ್ತಕ ಓದುವ ಸ್ಪರ್ಧೆ, ಬರೆಯುವ ಸ್ಪರ್ಧೆ, ಕತೆ ಹೇಳುವ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಅವರಲ್ಲಿ ಪುಸ್ತಕದ ಪ್ರೀತಿ ಬೆಳೆಸಬಹುದು. ದೊಡ್ಡವರು ಮಕ್ಕಳೊಂದಿಗೆ ತಾವೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂಬುದು ವಾಸುದೇವ ಶರ್ಮಾ ಅವರ ಸಲಹೆ.

ಕನ್ನಡದಲ್ಲಿ ಮಕ್ಕಳ ಪುಸ್ತಕಗಳ ಕೊರತೆ
ಮಕ್ಕಳಿಗಾಗಿ ಇಂಗ್ಲಿಷ್‌ನಲ್ಲಿ ಸಾಕಷ್ಟು ಪುಸ್ತಕಗಳು ಬರುತ್ತಿವೆ. ಆದರೆ, ಕನ್ನಡದಲ್ಲಿ ಮಕ್ಕಳ ಪುಸ್ತಕಗಳ ಕೊರತೆ ಇದೆ ಎಂಬುದು ಪುಸ್ತಕ ವ್ಯಾಪಾರಿಗಳ ದೂರು.

‘ಇಂಗ್ಲಿಷ್‌ನಲ್ಲಿ ಕಾಮಿಕ್‌ ಪುಸ್ತಕಗಳು ಹೆಚ್ಚಾಗಿ ಬರುತ್ತಿವೆ. ಆದರೆ ಕನ್ನಡದಲ್ಲಿ ಮಕ್ಕಳಿಗಾಗಿ ಇಂಥ ಪುಸ್ತಕಗಳು ಬರುತ್ತಿಲ್ಲ. ‘ಚಂದಮಾಮ’, ‘ಬಾಲ ಮಿತ್ರ’, ‘ಬಾಲ ಮಂಗಳ’ದಂಥ ಕಾಮಿಕ್‌ ಪುಸ್ತಕಗಳ ಕನ್ನಡ ಆವೃತ್ತಿ ಎಲ್ಲೆಡೆ ಲಭ್ಯವಿಲ್ಲ. ಇದರಿಂದ ಕನ್ನಡದ ಮಕ್ಕಳು ಕಾಮಿಕ್‌ ಜಗತ್ತಿನಿಂದ ದೂರ ಉಳಿಯುವಂತಾಗುತ್ತದೆ’ ಎಂಬುದು ಆಕೃತಿ ಬುಕ್ಸ್‌ನ ಗುರುಪ್ರಸಾದ್‌ ಅವರ ಮಾತು.

‘ಮಕ್ಕಳಿಗೆ ಪುಸ್ತಕ ಪ್ರೀತಿ ಬೆಳೆಸಬೇಕೆಂಬ ಅರಿವು ಇತ್ತೀಚೆಗೆ ಪೋಷಕರಲ್ಲಿ ಮೂಡುತ್ತಿದೆ. ಸಾಕಷ್ಟು ಪೋಷಕರು ಮಕ್ಕಳಿಗಾಗಿ ಕಾಮಿಕ್‌ ಪುಸ್ತಕಗಳನ್ನು ಕೊಳ್ಳುತ್ತಾರೆ. ಮಕ್ಕಳನ್ನು ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟಿ.ವಿ.ಗಳಿಂದ ದೂರ ತರಲು ಇರುವ ಏಕೈಕ ಮಾರ್ಗ ಪುಸ್ತಕ. ಹೀಗಾಗಿ ಮಕ್ಕಳಿಗೆ ಪುಸ್ತಕ ಕೊಡಿಸಬೇಕೆಂಬ ಜಾಗೃತಿ ಪೋಷಕರಲ್ಲಿ ಹೆಚ್ಚುತ್ತಿದೆ’ ಎನ್ನುತ್ತಾರೆ ಅವರು.

ಕಷ್ಟ, ಆದರೂ ಸಾಧ್ಯ: ‘ಮನೆಯಲ್ಲಿ ದೊಡ್ಡವರು ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್, ಟಿ.ವಿ.ಯಿಂದ ದೂರ ಬರುವುದು ಕಷ್ಟ. ಮಕ್ಕಳಿಗಿಂತ ಮೊದಲು ದೊಡ್ಡವರೇ ಈ ವ್ಯಸನಕ್ಕೆ ಸಿಲುಕಿರುತ್ತಾರೆ. ದೊಡ್ಡವರು ಈ ವ್ಯಸನದಿಂದ ದೂರಾಗಿ ಪುಸ್ತಕಗಳ ಬಗ್ಗೆ ಒಲವು ಬೆಳೆಸಿಕೊಂಡರೆ ಮಕ್ಕಳೂ ಸಹಜವಾಗಿಯೇ ಪುಸ್ತಕಗಳ ಬಗ್ಗೆ ಆಸಕ್ತಿ ತೋರುತ್ತಾರೆ’ ಎಂಬುದು ನಾಗರಬಾವಿ ನಿವಾಸಿ ರಮೇಶ್‌ ಅವರ ಅಭಿಪ್ರಾಯ.

‘ಕಾಮಿಕ್‌ ಪುಸ್ತಕ, ಸುಲಭ ಗಣಿತ, ಕುತೂಹಲ ಕೆರಳಿಸುವ ಸಾಹಸ ಕತೆಗಳ ಪುಸ್ತಕ, ಬಣ್ಣ ಬಣ್ಣದ ಚಿತ್ರಗಳಿರುವ ಪುಸ್ತಕಗಳು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ. ನಾನು ಮಕ್ಕಳಿಗೆ ಇಂತಹ ಪುಸ್ತಕಗಳನ್ನೇ ಕೊಡಿಸುತ್ತೇನೆ. ಪೋಷಕರು ಮನಸ್ಸು ಮಾಡಿದರೆ ಮಕ್ಕಳಿಗೆ ಪುಸ್ತಕ ಪ್ರೀತಿ ಬೆಳೆಸುವುದೇನೂ ಕಷ್ಟವಲ್ಲ’ ಎಂಬುದು ಅವರ ಅನುಭವದ ಮಾತು.  


ಬೊಳುವಾರು ಫತ್ವಾ

ನಾವು ರಿಪೇರಿಯಾಗದೆ ನಮ್ಮ ಮಕ್ಕಳು ರಿಪೇರಿಯಾಗುವುದು ಹೇಗೆ? ಸದ್ಯಕ್ಕೆ ಅವಸರದಲ್ಲಿ ಒಂದು  ‘ಫತ್ವಾ’ ಹೊರಡಿಸುತ್ತಿದ್ದೇನೆ:
‘ಕನಿಷ್ಠ ಮುಂದಿನ ಒಂದು ವಾರದ ಕಾಲವಾದರೂ ನನ್ನಂಥ ದೊಡ್ಡವರನ್ನು ‘ಮೊಬೈಲು,’ ‘ಫೇಸ್ ಬುಕ್ಕು’, ‘ಟ್ವಿಟ್ಟರ್, ‘ವಾಟ್ಸ್ಅಪ್ಪು’ಗಳಿಂದ ಸೆಳೆದು ಪುಸ್ತಕದತ್ತ ಮುಖ ತಿರುಗಿಸಬಲ್ಲವನಿಗೆ, ಸೋನು ನಿಗಮನಿಗೆ ಘೋಷಿಸಿದ್ದಕ್ಕಿಂತಲೂ ದೊಡ್ಡ ಮೊತ್ತದ ಬಹುಮಾನ ಘೋಷಿಸುತ್ತಿದ್ದೇನೆ’
– ಬೊಳುವಾರು ಮಹಮ್ಮದ್‌ ಕುಂಞಿ , ಸಾಹಿತಿ

* * *


ಇಂಗ್ಲಿಷ್‌ ಕಾಮಿಕ್‌ ಪುಸ್ತಕಗಳಿಗೆ ಹೆಚ್ಚು ಬೇಡಿಕೆ

‘ಇಂಗ್ಲಿಷ್‌ ಕಾಮಿಕ್‌ ಪುಸ್ತಕಗಳಿಗೆ ಸದ್ಯ ಹೆಚ್ಚು ಬೇಡಿಕೆ ಇದೆ. ಪೋಷಕರು ಇಂಗ್ಲಿಷ್‌ ಕಾಮಿಕ್‌ ಪುಸ್ತಕಗಳನ್ನು ಹೆಚ್ಚಾಗಿ ಮಕ್ಕಳಿಗೆ ಕೊಡಿಸುತ್ತಿದ್ದಾರೆ. ಕನ್ನಡದಲ್ಲಿ ಪಂಚತಂತ್ರ, ಅಕ್ಬರ್‌ ಬೀರಬಲ್‌ ಕತೆ ಪುಸ್ತಕಗಳು ಲಭ್ಯವಿದ್ದರೂ ಇವುಗಳನ್ನು ಕೊಳ್ಳುವವರಿಲ್ಲ. ಇನ್ನು ಕನ್ನಡದಲ್ಲಿ ಕಾಮಿಕ್‌ ಪುಸ್ತಕಗಳೇ ಬರುತ್ತಿಲ್ಲ. ಹೀಗಾಗಿ ಮಕ್ಕಳು ಕನ್ನಡ ಪುಸ್ತಕಗಳಿಂದ ದೂರಾಗುತ್ತಿದ್ದಾರೆ. ಕನ್ನಡದಲ್ಲಿ ಮಕ್ಕಳಿಗಾಗಿ ಬರುತ್ತಿರುವ ಸಾಹಿತ್ಯವೂ ಕಡಿಮೆ’
–ಪ್ರಕಾಶ್‌ ಕಂಬತ್ತಳ್ಳಿ, ಪ್ರಕಾಶಕ

* * *

ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವುದು ಹೀಗೆ...
*ಮನೆಯಲ್ಲಿರುವ ದೊಡ್ಡವರು ಮೊಬೈಲ್‌, ಟ್ಯಾಬ್‌, ಟಿ.ವಿ. ಬಿಟ್ಟು ಪುಸ್ತಕ ಹಿಡಿಯಿರಿ
*ಮನೆಯಲ್ಲಿ ಸಾಧ್ಯವಾದಷ್ಟೂ ಕಡೆ ಪುಸ್ತಕಗಳನ್ನು ಇಡಿ
*ಮಕ್ಕಳೊಂದಿಗೆ ಆಗಾಗ ಪುಸ್ತಕದಂಗಡಿಗಳಿಗೆ ಹೋಗಿ ಬನ್ನಿ
*ಪುಸ್ತಕ ಮೇಳ, ಪುಸ್ತಕ ಪರಿಷೆಗೆ ಮಕ್ಕಳನ್ನು ತಪ್ಪದೆ ಕರೆದುಕೊಂಡು ಹೋಗಿ
*ಮಕ್ಕಳು ಆಟ–ಪಾಠದ ಮಧ್ಯೆ ಗ್ರಂಥಾಲಯಗಳಿಗೆ ಹೋಗುವುದನ್ನು ಉತ್ತೇಜಿಸಿ
*ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಅಭ್ಯಾಸ ಬೆಳೆಸಿಕೊಳ್ಳಿ
*ಚಿಣ್ಣರ ಹುಟ್ಟುಹಬ್ಬಕ್ಕೆ ಕಾಮಿಕ್‌ ಪುಸ್ತಕಗಳ ಉಡುಗೊರೆ ಕೊಡುವುದನ್ನು ಕಡ್ಡಾಯ ಮಾಡಿಕೊಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT