ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿ ನೋಡಿ ಸಿರಿಧಾನ್ಯ ಆಹಾರ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಜ್ಜೆ ಬಾದಾಮಿ ಬಿಸ್ಕೆಟ್ (ಪರ್ಲ್ ಆಲ್ ಮಂಡ್ ಕುಕೀಸ್):
20 ಬಿಸ್ಕೇಟ್ ಮಾಡಲು ಬೇಕಾಗುವ ಸಾಮಗ್ರಿಗಳು : ಸಜ್ಜೆ ಹಿಟ್ಟು –115 ಗ್ರಾಂ, ಬೆಲ್ಲದ ಪುಡಿ – 175 ಗ್ರಾಂ, ಉಪ್ಪು– ಒಂದು ಚಿಟಿಕೆ, ಬಾದಾಮಿ – 50 ಗ್ರಾಂ, ವೆನಿಲ್ಲಾ ಎಸೆನ್ಸ್ – ½ ಚಮಚ, ಬೆಣ್ಣೆ – 80 ಗ್ರಾಂ.

ತಯಾರಿಸುವ ವಿಧಾನ : ಸಜ್ಜೆ ಹಿಟ್ಟು ಮತ್ತು ಬೆಲ್ಲದ ಪುಡಿಯನ್ನು ಜರಡಿ ಹಿಡಿದು ಒಂದು ಬೌಲ್ ನಲ್ಲಿಟ್ಟುಕೊಳ್ಳಬೇಕು.
ಸಣ್ಣದಾಗಿ ಹೆಚ್ಚಿದ ಬಾದಾಮಿ ತುಣುಕನ್ನು ಬೌಲ್‌ನಲ್ಲಿರುವ ಮಿಶ್ರಣಕ್ಕೆ ಸೇರಿಸಬೇಕು. ಈ ಮಿಶ್ರಣಕ್ಕೆ ಬೆಣ್ಣೆ, ವೆನಿಲ್ಲಾ ಎಸೆನ್ಸ್ ಅನ್ನು ಮಿಶ್ರಣ ಮಾಡಿ ಹದವಾಗಿ ನಾದಿಡಬೇಕು. ಬೇಕಿದ್ದರೆ ಹಿಟ್ಟು ಹದ ಮಾಡಲು ಸ್ವಲ್ಪ ನೀರನ್ನು ಸಿಂಪಡಿಸಿಕೊಳ್ಳಬಹುದು. ಹಿಟ್ಟನ್ನು ನಿಧಾನವಾಗಿ ಬಿಸ್ಕೇಟ್ (ಕುಕೀಸ್) ಆಕಾರಕ್ಕೆ ಬರುವಂತೆ ಮಾಡಿಕೊಂಡು 3 ಸೆಂ.ಮೀ ಅಳತೆಯಲ್ಲಿ ವೃತ್ತಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು.

ಕತ್ತರಿಸಿದ ಕುಕೀಸ್ ಅನ್ನು ತಳ ಹಿಡಿದುಕೊಳ್ಳದಂತೆ ಬೆಣ್ಣೆಯನ್ನು ಸವರಿ ಸಿದ್ಧವಿಟ್ಟುಕೊಂಡ ಬೇಕಿಂಗ್ ಟ್ರೇನಲ್ಲಿ ಇಟ್ಟು 180 ಡಿಗ್ರಿ ಸೆಲ್ಸಿಯಸ್ ನಲ್ಲಿ 30 ನಿಮಿಷಗಳ ಕಾಲ ಬೇಯಿಸಬೇಕು. ಇದು ಸ್ವಲ್ಪ (ಗೋಲ್ಡನ್ ಬ್ರೌನ್) ಕಂದು ಬಣ್ಣಕ್ಕೆ ಬರುವವರೆಗೆ ಬೇಯಿಸಬೇಕು.

ಬಾದಾಮಿಯನ್ನು ಕತ್ತರಿಸಿ ಬೇಯಿಸಿದ ಕುಕೀಸ್ ಮೇಲಿಟ್ಟು ಸಿಂಗರಿಸಿದರೆ ಸಜ್ಜೆ ಬಾದಾಮಿ ಬಿಸ್ಕೇಟ್(ಕುಕೀಸ್)ಸವಿಯಲು ಸಿದ್ಧ.

ರಾಗಿ ಸೂಪ್ (ಇಬ್ಬರಿಗೆ)
ಬೇಕಾಗುವ ಸಾಮಗ್ರಿಗಳು: ರಾಗಿ 20ಗ್ರಾಂ,  ಕ್ಯಾರೆಟ್ 20ಗ್ರಾಂ,  ಈರುಳ್ಳಿ 10ಗ್ರಾಂ,  ಸ್ಟಾಕ್ 400ಮಿಲೀ.,  ಬೀನ್ಸ್ 10ಗ್ರಾಂ,  ಬೆಳ್ಳುಳ್ಳಿ 2ರಿಂದ3 , ಜಜ್ಜಿದ ಮೆಣಸಿನಕಾಳು 5ರಿಂದ6,  ತುಪ್ಪ 10ಮಿಲೀ, ಉಪ್ಪು ರುಚಿಗೆ ತಕ್ಕಷ್ಟು , ಕಡಲೆ ಹಿಟ್ಟು 10ಗ್ರಾಂ, ಕೊತ್ತಂಬರಿ ಸೊಪ್ಪು 3-4 ಚಿಗುರು 
ತಯಾರಿಸುವ ವಿಧಾನ: ರಾಗಿಯನ್ನು ಸ್ವಚ್ಚ ಮಾಡಿ ತೊಳೆದು, ರಾಗಿಯ ಎರಡರಷ್ಟು ನೀರನ್ನು ಹಾಕಿ ಬೇಯಿಸಿ.

ಈರುಳ್ಳಿ, ಬೀನ್ಸ್ ಮತ್ತು ಕ್ಯಾರೆಟ್ ಅನ್ನು ತೊಳೆದು ಕತ್ತರಿಸಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ತೊಳೆದು ಹೆಚ್ಚಿಟ್ಟುಕೊಳ್ಳಿ. ಮೆಣಸು ಮತ್ತು ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿ. 

ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದಕ್ಕೆ ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಕಡಲೆ ಹಿಟ್ಟನ್ನು ಸೇರಿಸಿ ಸ್ವಲ್ಪಕಾಲ ಬೇಯಿಸಿ.
ನಂತರ ಅದೇ ಬಾಣಲೆಗೆ ಕತ್ತರಿಸಿದ ತರಕಾರಿ,ಬೇಯಿಸಿದ ರಾಗಿ, ಸ್ಟಾಕ್ ಮತ್ತು ಉಪ್ಪನ್ನು ಸೇರಿಸಿ. ಹತ್ತು ನಿಮಿಷ ಬೇಯಿಸಿದ ಬಳಿಕ ಸೇವಿಸಿ.

ರಾಗಿ ಬ್ರೌನಿ (ಫಿಂಗರ್ ಮಿಲೆಟ್ ಬ್ರೌನಿ):
ಬೇಕಾಗುವ ಸಾಮಗ್ರಿ :
ಉಪ್ಪು ರಹಿತ ಬೆಣ್ಣೆ -185 ಗ್ರಾಂ, ಕೋಕೊ ಚಾಕೊಲೆಟ್ -185 ಗ್ರಾಂ, ರಾಗಿ ಹಿಟ್ಟು– 85 ಗ್ರಾಂ, ತಾಜಾ ಕೊಕೊವಾ ಪೌಡರ್– 40 ಗ್ರಾಂ, ಮಿಲ್ಕ್ ಚಾಕೊಲೆಟ್–100ಗ್ರಾಂ, ಮೊಸರು–150 ಗ್ರಾಂ, ಬೆಲ್ಲ –275 ಗ್ರಾಂ.

ತಯಾರಿಸುವ ವಿಧಾನ: ಮೊದಲು ದೊಡ್ಡ ಬಾಣಲೆಯಲ್ಲಿ ಬೆಣ್ಣೆ ಮತ್ತು ಚಾಕೊಲೆಟ್ ಅನ್ನು ಕಲೆಸಬೇಕು. ಒಲೆಯ ಮೇಲಿಟ್ಟ ಬಳಿಕ ಗಂಟಾಗದಂತೆ ಕದಡುತ್ತಾ ಇರಬೇಕು.  ಕರಗಿದ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕು.

ಸಪಾಟು ತಟ್ಟೆಯಲ್ಲಿ ನಾನ್‌ಸ್ಟಿಕ್ ಶೀಟ್ ಇಟ್ಟು ಅದರ ಮೇಲೆ ಚೌಕಾಕಾರದಲ್ಲಿ ಕತ್ತರಿಸಲು ಬರುವಂತೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ರಾಗಿ ಹಿಟ್ಟು ಮತ್ತು ಕೊಕೊವಾ ಪೌಡರ್ ಅನ್ನು ಜರಡಿ ಹಿಡಿದು ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕು. ಚೂಪಾದ ಚಾಕುವಿನಿಂದ ಮಿಲ್ಕ್ ಚಾಕೊಲೆಟ್ ಅನ್ನು ಕತ್ತರಿಸಿಕೊಳ್ಳಿ.
ಮೊಸರನ್ನು ಒಂದು ದೊಡ್ಡಬೌಲ್ ನಲ್ಲಿ ಹಾಕಿ ಕದಡಿಕೊಂಡ ನಂತರ ಬೆಲ್ಲವನ್ನು ಸೇರಿಸಿ ದಪ್ಪ ಮಿಶ್ರಣವಾಗುವವರೆಗೆ ಕದಡಬೇಕು.

ಮೊಸರು ಮತ್ತು ಬೆಲ್ಲದ ಮಿಶ್ರಣಕ್ಕೆ ತಣ್ಣಗಾಗಿರುವ ಚಾಕೊಲೆಟ್ ಮಿಶ್ರಣವನ್ನು ನಿಧಾನವಾಗಿ ಹಾಕಿ ರಬ್ಬರ್ ಚಾಕುವಿನಿಂದ ಮೇಲ್ಮೈ ಸವರಬೇಕು.
ಈ ಮಿಶ್ರಣಕ್ಕೆ ರಾಗಿ ಹಿಟ್ಟು ಮತ್ತು ಕೊಕೊವಾ ಪೌಡರ್ ಅನ್ನು ನಿಧಾನವಾಗಿ ಹಾಕಿ ಸವರಬೇಕು.

ಕೊನೆಗೆ ಮಿಲ್ಕ್ ಚಾಕೊಲೆಟ್ ತುಣುಕುಗಳು ಎಲ್ಲಾ ಕಡೆ ಹರಡಿಕೊಳ್ಳುವವರೆಗೆ ಕಲಕಬೇಕು.

ಈಗಾಗಲೇ ಸಿದ್ಧಪಡಿಸಿಕೊಂಡಿರುವ ಸಪಾಟು ತಟ್ಟೆಯ ಮೇಲೆ ಮಿಶ್ರಣವನ್ನು ಹಾಕಿ ಪ್ರತಿ ಮೂಲೆಗೂ ತಲುಪುವಂತೆ ಹರಡಬೇಕು.
ಓವನ್‌ನಲ್ಲಿಟ್ಟು 180 ಡಿಗ್ರಿ ಪ್ರಮಾಣದಲ್ಲಿ 25 ರಿಂದ 30 ನಿಮಿಷಗಳ  ಬೇಯಿಸಬೇಕು.

ಸ್ಟಾಕ್
ಬೇಕಾಗುವ ಸಾಮಗ್ರಿಗಳು: ಈರುಳ್ಳಿ 200 ಗ್ರಾಂ, ಕ್ಯಾರೆಟ್ 200 ಗ್ರಾಂ, ಕೊತ್ತಂಬರಿ ದಂಟು 200 ಗ್ರಾಂ, ಶುಂಠಿ 10 ಗ್ರಾಂ, ನೀರು 2 ಲೀಟರ್,
ತಯಾರಿಸುವ ವಿಧಾನ: ಎಲ್ಲಾ ಸಾಮಗ್ರಿಗಳನ್ನು ತೊಳೆದು, ಸಿಪ್ಪೆತೆಗೆದು ಕತ್ತರಿಸಿಕೊಳ್ಳಬೇಕು. ಅದಕ್ಕೆ ನೀರನ್ನು ಸೇರಿಸಿ ಸಾಧಾರಣ ಉರಿಯಲ್ಲಿ 2-3 ತಾಸು ಬೇಯಿಸಿಕೊಳ್ಳಬೇಕು. ಎಷ್ಟು ಬೇಕೊ ಅಷ್ಟು ಪ್ರಮಾಣದವರೆಗೆ ಬೇಯಿಸಿಕೊಳ್ಳಬಹುದು.

ನವಣೆ ಬಿಸಿಬೇಳೆ ಬಾತ್ (ಇಬ್ಬರಿಗೆ)
ಬೇಕಾಗುವ ಸಾಮಗ್ರಿಗಳು:
ನವಣೆ 50ಗ್ರಾಂ, ತೊಗರಿ ಬೇಳೆ 50ಗ್ರಾಂ,  ಕ್ಯಾರೆಟ್ 20ಗ್ರಾಂ,  ಬೀನ್ಸ್ 20ಗ್ರಾಂ,  ಹಸಿರು ಬಟಾಣಿ 10ಗ್ರಾಂ,  ಕೆಂಪು ಮೆಣಸಿನ ಪುಡಿ 1ಚಮಚ,  ಜೀರಿಗೆ ಪುಡಿ ½ಚಮಚ, ಧನಿಯಾ ಪುಡಿ 1ಚಮಚ, ಬೆಲ್ಲ 5-10ಗ್ರಾಂ, ಅರಿಶಿಣ ಒಂದು ಚಿಟಿಕೆ,  ಹುಣಸೆಹಣ್ಣು 10ಗ್ರಾಂ,  ಟೊಮೆಟೊ  250ಗ್ರಾಂ, ಎಣ್ಣೆ 1ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ ½ ಕಟ್ಟು, ಬಿಸಿಬೇಳೆ ಬಾತ್ ಪುಡಿ 10ಗ್ರಾಂ,   ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:  ನವಣೆಯನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ತೊಳೆಯಬೇಕು. ನಂತರ ಅದರ ಎರಡರಷ್ಟು ನೀರನ್ನು ಹಾಕಿ ಬೇಯಿಸಬೇಕು.
ಮೇಲೆ ಹೇಳಿದ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಬೇಕು. ತೊಗರಿಬೇಳೆಗೆ ಎಣ್ಣೆ ಮತ್ತು ಅರಿಶಿಣವನ್ನು ಹಾಕಿ ಬೇಯಿಸಲು ಇಡಬೇಕು. ಅರ್ಧ ಬೆಂದ ಬೇಳೆಗೆ ಕ್ಯಾಪ್ಸಿಕಂ ಮತ್ತು ಸಣ್ಣ ಈರುಳ್ಳಿ ಬಿಟ್ಟು ಉಳಿದ ತರಕಾರಿಯನ್ನು ಹಾಕಬೇಕು.

ಬೇಯಿಸಿದ ಬೇಳೆಗೆ ನವಣೆ, ಹುಣಸೆಹಣ್ಣಿನ ರಸ, ಬಿಸಿಬೇಳೆ ಬಾತ್ ಪುಡಿ, ಉಪ್ಪು, ಜೀರಿಗೆ, ಬೆಲ್ಲ, ದನಿಯಾ ಪುಡಿ, ಮೆಣಸಿನಕಾಯಿಪುಡಿ, ಕತ್ತರಿಸಿಟ್ಟುಕೊಂಡಿರುವ ಕರಿಬೇವಿನಸೊಪ್ಪು ಹಾಕಿ ಹದಬರುವವರೆಗೆ ಬೇಯಿಸಬೇಕು.

ಮೆಣಸಿನಕಾಳು ಮತ್ತು ಬೆಳ್ಳುಳ್ಳಿಯನ್ನು ತೆಂಗಿನಕಾಯಿ ತುರಿಯ ಜತೆ ರುಬ್ಬಿಕೊಳ್ಳಬೇಕು.

ಒಗ್ಗರಣೆಗೆ ಮೊದಲು ತುಪ್ಪವನ್ನು ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು, ಇಂಗು, ಗೋಡಂಬಿ ಬೀಜ, ಕ್ಯಾಪ್ಸಿಕಂ, ಸಣ್ಣ ಈರುಳ್ಳಿ ಮತ್ತು ರುಬ್ಬಿಕೊಂಡ ಕಾಯಿತುರಿ ಮಿಶ್ರಣ ಸೇರಿಸಿ ಕುದಿಸಿದರೆ ಬಿಸಿಬೇಳೆ ಬಾತ್‌ ಸಿದ್ಧ.

ಒಗ್ಗರಣೆಗೆ ಬೇಕಾಗುವ ಸಾಮಗ್ರಿ
ತುಪ್ಪ 25ಗ್ರಾಂ,  ಸಾಸಿವೆ 1ಚಮಚ, 1, ಜೀರಿಗೆ 2ಚಮಚ, ಬ್ಯಾಡಗಿ ಮೆಣಸು 2-3, ಕ್ಯಾಪ್ಸಿಕಮ್ 25ಗ್ರಾಂ, ಚಿಕ್ಕ ಈರುಳ್ಳಿ 5ರಿಂದ6, ತೆಂಗಿನಕಾಯಿ ತುರಿ 20ಗ್ರಾಂ, ಬೆಳ್ಳುಳ್ಳಿ 4ರಿಂದ 5, ಮೆಣಸಿನ ಕಾಳು 4ರಿಂದ 5, ಕರಿಬೇವಿನ ಸೊಪ್ಪು, ಗೋಡಂಬಿ 10 ಗ್ರಾಂ, ಇಂಗು ಸ್ವಲ್ಪ. 

(ಸಂಗ್ರಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT