ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಸರಿ, ಆದರೆ... ಕಾಯ್ದೆಯ ಅನುಷ್ಠಾನ ಹೇಗೆ?

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬದಲಾವಣೆ ತರಲಿದೆ ಎಂದು ನಂಬಲಾದ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಒಂದು ವಲಯದಲ್ಲಿ ಭಾರಿ ನಿರೀಕ್ಷೆಗಳನ್ನೂ  ವಾಹನ ಸವಾರರಲ್ಲಿ ಈಗಾಗಲೇ ಭಯವನ್ನೂ ಹುಟ್ಟು ಹಾಕಿದೆ!

ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿವರ್ಷ ಸಂಭವಿಸುವ  ಐದು ಲಕ್ಷ ರಸ್ತೆ ಅಪಘಾತಗಳಲ್ಲಿ 1.5 ಲಕ್ಷ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅಪಘಾತ  ಮತ್ತು ಅದರಲ್ಲಿ ಸಾವನ್ನಪ್ಪುವವರ ಸಂಖ್ಯೆಯನ್ನು ಶೇ 50ರಷ್ಟು ಇಳಿಸುವ ಉದ್ದೇಶ  ಈ ಕಾಯಿದೆಯ ಮೂಲಕ ಕಾರ್ಯರೂಪಕ್ಕೆ ಬಂದರೆ ಅದೊಂದು ಪವಾಡವೇ ಸರಿ.

ನೂರು ಕೋಟಿಗೂ ಹೆಚ್ಚಿನ ಜನಸಂಖ್ಯೆ, ವಿಪರೀತ ಪ್ರಮಾಣದಲ್ಲಿ ವಾಹನಗಳನ್ನು ಹೊಂದಿರುವ ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ  ಹೊಸ ಕಾಯ್ದೆ, ಕಾನೂನು ಜಾರಿ ಅಂದುಕೊಂಡಷ್ಟು ಸುಲಭವಲ್ಲ.  ಅದೇ ರೀತಿ ಮೋಟಾರು ವಾಹನ ತಿದ್ದುಪಡಿ ಮಸೂದೆ ಕೂಡ ಸವಾಲುಗಳನ್ನು ಎದುರಿಸಬೇಕಾಗಿದೆ. ಆದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಗೆ ಎದುರಾದ ದೊಡ್ಡಮಟ್ಟದ ಪ್ರತಿರೋಧ ಮೋಟಾರು ವಾಹನ ಕಾಯಿದೆಗೆ ಎದುರಾಗಲಿಲ್ಲ. 

ಆದರೆ, ಸುರಕ್ಷಿತವಲ್ಲದ ರಸ್ತೆ ಮತ್ತು ಹೆದ್ದಾರಿಗಳು, ಮಿತಿ ಮೀರಿದ ಭ್ರಷ್ಟಾಚಾರ, ಅನಕ್ಷರತೆ, ಪೌರಪ್ರಜ್ಞೆಯ ಕೊರತೆ, ಸುಲಭವಾಗಿ ಉಲ್ಲಂಘಿಸಬಹುದಾದ ಕಾನೂನು... ಇಂತಹ ನೂರಾರು ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಭಾರಿ ಮೊತ್ತದ ದಂಡ ವಿಧಿಸುವುದು ಎಷ್ಟು ಸರಿ ಎಂಬ ಜಿಜ್ಞಾಸೆ  ನಡೆದಿದೆ.

ಕಾಣದ ಧಾವಂತ: ಎಲ್ಲ ಪ್ರಕ್ರಿಯೆ ಮುಗಿದು ಈ ಮಸೂದೆ ಕಾಯ್ದೆಯ ರೂಪ ಪಡೆಯಲು ಕನಿಷ್ಠ ಇನ್ನೂ  ಆರು ತಿಂಗಳಿಂದ ಒಂದು ವರ್ಷವಾದರೂ ಬೇಕು. ಹೀಗಾಗಿ ಹೊಸ ಕಾನೂನು ಜಾರಿಗೆ ಅಗತ್ಯ ಸಿದ್ಧತೆ ಮತ್ತು ಧಾವಂತ ಕಾನೂನು ಅನುಷ್ಠಾನ ಪ್ರಾಧಿಕಾರಗಳಾದ  ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ.

‘ಮಸೂದೆಗೆ ಇನ್ನೂ ರಾಜ್ಯಸಭೆಯಲ್ಲಿ  ಅನು ಮೋದನೆ ದೊರೆಯಬೇಕಿದೆ. ಆ ನಂತರ ಶಾಸನ ವಾಗ ಬೇಕಿದೆ. ಈ ಹಂತದಲ್ಲಿ ಸಾರ್ವಜನಿಕವಾಗಿ ಆ ಬಗ್ಗೆ ಚರ್ಚಿಸುವುದು ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿದಂತೆ’ ಎನ್ನುವುದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌. ಹಿತೇಂದ್ರ ಅವರ ನಿಲುವು. 

ಪ್ರಸಕ್ತಇರುವ ಮೋಟಾರು ವಾಹನ ಕಾಯಿದೆಯಲ್ಲಿ 223 ಸೆಕ್ಷನ್‌ಗಳಿದ್ದು, ಆ ಪೈಕಿ ಮೂಸೂದೆಯಲ್ಲಿ 68 ಸೆಕ್ಷನ್‌ಗಳಿಗೆ ತಿದ್ದುಪಡಿ ತರುವ ಜತೆಗೆ  28 ಹೊಸ ಸೆಕ್ಷನ್‌ಗಳ ಸೇರ್ಪಡೆಯ ಪ್ರಸ್ತಾವವನ್ನೂ ಹೊಂದಿದೆ. 

ಕನಿಷ್ಠ ಒಂದು ವರ್ಷ ಬೇಕು: ‘ಕೇಂದ್ರ  ಕಾಯ್ದೆಗೆ ಪೂರಕವಾಗಿ ಕರ್ನಾಟಕ ವಾಹನ ನಿಯಮಾವಳಿ ರೂಪಿಸಬೇಕಾಗುತ್ತದೆ. ಇದಕ್ಕೆಲ್ಲ ಕನಿಷ್ಠ ಇನ್ನೂ ಒಂದು ವರ್ಷವಾದರೂ ಬೇಕು. ಇದುವರೆಗೂ ನಮಗೆ ಆ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕಾನೂನು ಜಾರಿಗೆ ಸನ್ನದ್ಧರಾಗುವ ಪ್ರಶ್ನೆಯೇ  ಉದ್ಭವಿಸುವುದಿಲ್ಲ’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಈ ಬಗ್ಗೆ ಮಾಹಿತಿ ನೀಡಲು ನನಗೆ ಅಧಿಕಾರವಿಲ್ಲ. ಹೀಗಾಗಿ ಹೆಸರನ್ನು ಗೌಪ್ಯವಾಗಿ ಇಡಬೇಕು’ ಎಂಬ ಷರತ್ತಿನೊಂದಿಗೆ ಅವರು ಮಾತಿಗಿಳಿದರು. ‘ಮಸೂದೆಯಲ್ಲಿರುವ ಪ್ರಸ್ತಾವನೆ ಗಮನಿಸಿದರೆ ಕಾನೂನು ಜಾರಿಗೆ ಸದ್ಯದ ಸಿಬ್ಬಂದಿ ಸಾಕಾಗುವುದಿಲ್ಲ. ಸಿ.ಸಿ.ಟಿ.ವಿ, ಆನ್‌ಲೈನ್‌ ಸೇರಿದಂತೆ ತಂತ್ರಜ್ಞಾನದ ನೆರವು ಪಡೆಯಬೇಕಾಗುತ್ತದೆ’ ಎಂದರು.  

ಬದಲಾವಣೆಗೆ ನಾಂದಿ: ಅಮಾಯಕರ ಪ್ರಾಣ ರಕ್ಷಿಸುವ ಉದ್ದೇಶ  ಹೊಂದಿರುವ ಮೋಟಾರು ವಾಹನ ಕಾಯಿದೆ ಜಾರಿಯಾದರೆ  ದೇಶದ ಸಾರಿಗೆ ಕ್ಷೇತ್ರದಲ್ಲಿ ನಿಜಕ್ಕೂ ದೊಡ್ಡ ಬದಲಾವಣೆಯಾಗಲಿದೆ ಎನ್ನುತ್ತಾರೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಸಿ ದಿನೇಶ್‌.

ಬೋಗಸ್ ಲೈಸೆನ್ಸ್‌ಗಳಿಗೆ (ಚಾಲನಾ ಪರವಾನಗಿ) ಕಡಿವಾಣ,  ವಾಹನ ಕಳ್ಳತನಕ್ಕೆ ತಡೆ, ಟ್ರಾಫಿಕ್ ನಿಯಮಾವಳಿ ಉಲ್ಲಂಘಿಸಿದವರಿಗೆ ಭಾರಿ ದಂಡ ಮತ್ತು ಅಪಘಾತದ ವೇಳೆ ನೆರವಿಗೆ ಬರುವ ದಯಾಳುಗಳಿಗೆ ರಕ್ಷಣೆ ಒದಗಿಸುವ  ಮಸೂದೆ ಖಂಡಿತ ದೇಶದ ಸಾರಿಗೆ ರಂಗದಲ್ಲಿ ಆಮೂಲಾಗ್ರ ಬದಲಾವಣೆ ಕಾರಣವಾಗಲಿದೆ  ಎನ್ನುವುದು ಅವರ ವಿಶ್ವಾಸ.

ಕಾನೂನು ಬಿಗಿಯಾಗಿ ಇರದಿದ್ದರೆ ವ್ಯವಸ್ಥೆ ಅವ್ಯವಸ್ಥೆಯಾಗುತ್ತದೆ. ದೊಡ್ಡ ಮೊತ್ತದ ದಂಡ ವಿಧಿಸದಿದ್ದರೆ ಜನರು ಹೆದರುವುದಿಲ್ಲ. ಕಾನೂನು ಉಲ್ಲಂಘಿಸುವ ಮನೋಭಾವ ಬದಲಾಗಬೇಕಿದೆ. ನಾಗರಿಕರಲ್ಲಿ ಪೌರಪ್ರಜ್ಞೆ ಬೆಳೆಯಬೇಕಿದೆ. ಅದರೊಂದಿಗೆ ಚಾಲನಾ ಪರವಾನಗಿ (ಲೈಸನ್ಸ್‌) ನೀಡುವ ವ್ಯವಸ್ಥೆಯೂ ಆಮೂಲಾಗ್ರವಾಗಿ ಬದಲಾಗಬೇಕು. ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಾಗ ಮಾತ್ರ   ಸಂಚಾರ ವ್ಯವಸ್ಥೆ ಸರಿ ದಾರಿಗೆ ಬರುತ್ತದೆ ಎನ್ನುವುದು ದಿನೇಶ್‌ ಅವರ ಅಭಿಪ್ರಾಯ.

ಕೊಲೆ, ಸುಲಿಗೆ ಮಾಡಬೇಕೆ?: ‘ಕೇವಲ ದಂಡದ ಮೊತ್ತ ಹೆಚ್ಚಿಸಿದರೆ ಅಪಘಾತ ತಪ್ಪಿಸಬಹುದು ಎನ್ನುವುದು ಭ್ರಮೆ. ಮೇಲಾಗಿ ಒಳ್ಳೆಯ ರಸ್ತೆಗಳಿಲ್ಲ. ಟ್ರಾಫಿಕ್‌ ಪೊಲೀಸ್‌ ಮತ್ತು ಆರ್‌ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದಕ್ಕೆ ಕಡಿವಾಣ ಹಾಕದೇ ವಾಹನ ಸವಾರರ ಮೇಲೆ ಸವಾರಿ ಮಾಡಿದರೆ ಹೇಗೆ’ ಎಂದು ಜೆ.ಜೆ. ನಗರದ ಆಟೋ ಚಾಲಕ ಮೊಹಮ್ಮದ್‌ ನಾಸೀರ್‌  ಪ್ರಶ್ನಿಸುತ್ತಾರೆ.

‘ದಿನಕ್ಕೆ ಹೆಚ್ಚೆಂದರೆ ₹1,000 ದುಡಿಯುತ್ತೇವೆ. ಓಲಾ, ಉಬರ್‌ ಕ್ಯಾಬ್‌ ಬಂದ ನಂತರ ಅದೂ ಸಾಧ್ಯವಾಗುತ್ತಿಲ್ಲ. ಚಿಕ್ಕಪುಟ್ಟ ತಪ್ಪುಗಳಿಗೂ ದುಡಿದ ಹಣವನ್ನೆಲ್ಲ ದಂಡ ನೀಡಿ ಬರಿಗೈಯಲ್ಲಿ ಮನೆಗೆ ಹೋಗಬೇಕೆ? ಕುಡಿದು ವಾಹನ ಓಡಿಸುವವರಿಗೆ ಬೇಕಾದಷ್ಟು ದಂಡ ವಿಧಿಸಲಿ. ಎಲ್ಲರಿಗೂ ಐದಾರು ಸಾವಿರ ರೂಪಾಯಿ ದಂಡ ವಿಧಿಸಿದರೆ ಹೇಗೆ? ಎಲ್ಲದಕ್ಕೂ ವಿದೇಶದ ಉದಾಹರಣೆ ನೀಡುತ್ತಾರೆ. ಅಲ್ಲಿರುವ ರಸ್ತೆ, ಲಂಚಮುಕ್ತ ವ್ಯವಸ್ಥೆ ಇಲ್ಲಿದೆಯೇ’ ಎಂಬ ನಾಸೀರ್‌ ಮಾತಿನಲ್ಲಿ ಸಿಟ್ಟು, ಅಸಮಾಧಾನ, ಅಸಹಾಯಕತೆ ಕಾಣುತಿತ್ತು.

ಸ್ವಾಗತಾರ್ಹ ಕ್ರಮ: ರಸ್ತೆ ಸುರಕ್ಷತೆ ಮತ್ತು ಸಾರಿಗೆ ವಲಯದಲ್ಲಿ ಇದೊಂದು ಅತಿ ದೊಡ್ಡ ಸುಧಾರಣೆ ಎಂದು ಬಣ್ಣಿಸುವ ಬೆಂಗಳೂರು ವಾಣಿಜ್ಯೋದ್ಯಮ ಸಂಘದ(ಬಿಸಿಐಸಿ) ಅಧ್ಯಕ್ಷ ತ್ಯಾಗು ವಳ್ಳಿಯಪ್ಪ,  ಲೈಸೆನ್ಸ್‌ ಅಮಾನತು, ಇ–ಆಡಳಿತ ಬಳಿಸಿಕೊಂಡು ದೇಶದಲ್ಲಿ ಸಾರಿಗೆ ಸೇವೆ ಉತ್ತಮಪಡಿಸುವ ಪ್ರಸ್ತಾವನೆ ಸ್ವಾಗತಾರ್ಹ ಎಂದರು.

ಮೋಟಾರು ವಾಹನ ಅಪಘಾತ ನಿಧಿ ಸ್ಥಾಪನೆಯಿಂದ ಎಲ್ಲ ಅಪಘಾತ ಸಂತ್ರಸ್ತರಿಗೂ ತ್ವರಿತ ಪರಿಹಾರ ಮತ್ತು ವಿಮೆ ದೊರೆಯಲಿದೆ ಎನ್ನುವುದು ಪಾಲಿಸಿ ಬಜಾರ್‌ ಡಾಟ್‌ ಕಾಮ್‌ ವಿಮಾ ವಿಭಾಗದ ಮುಖ್ಯಸ್ಥ ನೀರಜ್‌ ಗುಪ್ತಾ ಅವರ ವಿಶ್ವಾಸ.

ಪರಿಹಾರ ಮತ್ತು ವಿಮೆ ನೀಡುವ ಪ್ರಕ್ರಿಯೆ ತ್ವರಿತಗೊಳ್ಳಲಿದ್ದು, ಅಪಘಾತ ಪ್ರಕರಣ ಬೇಗ ಇತ್ಯರ್ಥಗೊಳ್ಳಲಿವೆ. ಎಲ್ಲ ಪ್ರಕರಣಗಳಲ್ಲಿ ಸಂತ್ರಸ್ತರು ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗುವ ಪ್ರಮೇಯ ಬರುವುದಿಲ್ಲ. ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎನ್ನುತ್ತಾರೆ.

ಎಲ್ಲವೂ ಸರಿ, ಆದರೆ... ಎಲ್ಲವೂ ಸರಿ, ಎಷ್ಟರ ಮಟ್ಟಿಗೆ ಈ ಕಾಯಿದೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತದೆ. ಲೈಸೆನ್ಸ್‌ ವಿತರಣಾ ವ್ಯವಸ್ಥೆ  ಯಾವ ಮಟ್ಟಿಗೆ ಪಾರದರ್ಶಕವಾಗಿರುತ್ತದೆ ಎಂಬ ಕುತೂಹಲವಂತೂ ಇದ್ದೇ ಇದೆ.

***

ಹೊಸ ಮಸೂದೆಯಲ್ಲಿರುವ ಹೊಸ ವಿಚಾರಗಳು

ಕೇಂದ್ರ ಸರ್ಕಾರವು ಚಾಲನಾ ಪರವಾನಗಿಗಳಿಗೆ ಸಂಬಂಧಿಸಿದ ರಾಷ್ಟ್ರೀಯ ನೋಂದಣಿ ವ್ಯವಸ್ಥೆ ರೂಪಿಸಬೇಕು. ಎಲ್ಲ ರಾಜ್ಯಗಳ ವಾಹನ ಚಾಲನಾ ನೋಂದಣಿ ವ್ಯವಸ್ಥೆಗಳು ಕೇಂದ್ರದ ವ್ಯವಸ್ಥೆಯಡಿ ಬರಬೇಕು.

*

ಅಧಿಕೃತ ಡೀಲರ್‌ಗಳು ವಾಹನಗಳ ನೋಂದಣಿಗೆ ಅವುಗಳನ್ನು ನೋಂದಣಿ ಪ್ರಾಧಿಕಾರಕ್ಕೆ ತರುವ ಅಗತ್ಯ ಇಲ್ಲ. ಈಗ ಜಾರಿಯಲ್ಲಿರುವ ಕಾಯ್ದೆಯ ಅನುಸಾರ, ವಾಹನ ನೋಂದಣಿ ವೇಳೆ ವಾಹನಗಳನ್ನು ಪ್ರಾಧಿಕಾರದ ಕಚೇರಿಗೆ ಕೊಂಡೊಯ್ಯಬೇಕು.

*

ವಾಹನ ನೋಂದಣಿಗೆ ಸಂಬಂಧಿಸಿದ ರಾಷ್ಟ್ರೀಯ ಮಾಹಿತಿ ಕೋಶವನ್ನು ಕೇಂದ್ರ  ಸರ್ಕಾರ ಸ್ಥಾಪಿಸಬೇಕು.

*

ನಿರ್ದಿಷ್ಟ ಮಾದರಿಯ ವಾಹನಗಳಿಂದ ಪರಿಸರಕ್ಕೆ ಹಾನಿ ಆಗುವಂತಿದ್ದರೆ, ವಾಹನದ ಚಾಲಕನಿಗೆ ಅಥವಾ ಪ್ರಯಾಣಿಕರಿಗೆ ಹಾನಿ ಆಗುವಂತಿದ್ದರೆ, ದಾರಿಹೋಕರಿಗೆ ಹಾನಿ ಆಗುವಂತಿದ್ದರೆ ಅಂತಹ ವಾಹನಗಳನ್ನು ಹಿಂಪಡೆಯುವಂತೆ ತಯಾರಿಕಾ ಕಂಪೆನಿಗಳಿಗೆ ಸೂಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ವಾಹನಗಳನ್ನು ಹಿಂಪಡೆದ ಕಂಪೆನಿಯು, ಅದರ ಮೌಲ್ಯಕ್ಕೆ ಸಮನಾದ ಹಣವನ್ನು ಮಾಲೀಕನಿಗೆ ಪರಿಹಾರದ ರೂಪದಲ್ಲಿ ನೀಡಬೇಕು. ಅಥವಾ ಅದೇ ಮಾದರಿಯ ಇನ್ನೊಂದು ವಾಹನವನ್ನು ಆತನಿಗೆ ನೀಡಬೇಕು.

*
ನಾಲ್ಕು ವರ್ಷಗಳಿಗಿಂತ ಚಿಕ್ಕ ವಯಸ್ಸಿನವರನ್ನು ದ್ವಿಚಕ್ರವಾಹನಗಳಲ್ಲಿ ಕೂರಿಸಿಕೊಳ್ಳುವಾಗ ಅವರ ರಕ್ಷಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಕೇಂದ್ರ ನಿಯಮ ರೂಪಿಸಬಹುದು.

*

ರಸ್ತೆ ನಿರ್ಮಾಣ ಮಾಡುವವರು, ಕೇಂದ್ರ ಸರ್ಕಾರ ರೂಪಿಸುವ ಸುರಕ್ಷತಾ ನಿಯಮಗಳ ಅನುಸಾರ ಆ ಕೆಲಸ ಮಾಡಬೇಕು. ರಸ್ತೆಯ ವಿನ್ಯಾಸ ಸರಿಯಾಗಿಲ್ಲದೆ, ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟರೆ ಅಥವಾ ಗಾಯಗೊಂಡರೆ ರಸ್ತೆ ಗುತ್ತಿಗೆದಾರರಿಗೆ, ವಿನ್ಯಾಸಕಾರರಿಗೆ
₹1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

*

ಕೇಂದ್ರ ಸರ್ಕಾರವು ಮೊಟಾರು ವಾಹನ ಅಪಘಾತ ನಿಧಿ ಸ್ಥಾಪಿಸಬೇಕು. ದೇಶದಲ್ಲಿ ರಸ್ತೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸುವವರಿಗೆ ವಿಮೆ ಸೌಲಭ್ಯ ಒದಗಿಸಲು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲು, ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಸಾವಿಗೀಡಾಗುವವರ ಕುಟುಂಬಕ್ಕೆ ಪರಿಹಾರ ನೀಡಲು, ಇಂಥ ಪ್ರಕರಣಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಪರಿಹಾರ ನೀಡಲು ನಿಧಿಯಲ್ಲಿರುವ ಹಣ ಬಳಸಿಕೊಳ್ಳಬೇಕು.

*

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವ ಆಪದ್ಬಾಂಧವರ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಕ್ರಮ ಜರುಗಿಸಲು ಅವಕಾಶವಿಲ್ಲ.

*
ನಗರಗಳಲ್ಲಿ, ಹೆದ್ದಾರಿಗಳಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆ ಮಾಡಲು ಎಲೆಕ್ಟ್ರಾನಿಕ್ ವ್ಯವಸ್ಥೆ ಅಳವಡಿಸುವ ಹೊಣೆ ರಾಜ್ಯ ಸರ್ಕಾರದ್ದು.

*

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ವ್ಯಕ್ತಿ ಮೃತಪಟ್ಟರೆ ಆತನ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತ ₹ 2 ಲಕ್ಷಕ್ಕೆ ಹೆಚ್ಚಳ. ಗಂಭೀರವಾಗಿ ಗಾಯಗೊಂಡರೆ ₹ 50,000 ಪರಿಹಾರ.

*

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ರಸ್ತೆ ಅಪರಾಧ ಎಸಗಿದ್ದರೆ, ಆತನಿಗೆ 25 ವರ್ಷ ವಯಸ್ಸಾಗುವವರೆಗೆ ವಾಹನ ಚಾಲನಾ ಪರವಾನಗಿ ನೀಡುವಂತಿಲ್ಲ.

*

ರಸ್ತೆ ಅಪಘಾತಗಳಿಗೆ ತುತ್ತಾದವರಿಗೆ ಆಸ್ಪತ್ರೆಗಳಲ್ಲಿ ಆರಂಭದ ಕೆಲವು ಗಂಟೆಗಳವರೆಗೆ ಉಚಿತವಾಗಿ ಚಿಕಿತ್ಸೆ ಒದಗಿಸಬೇಕು. ಇದಕ್ಕೆ ಅಗತ್ಯವಿರುವ ನಿಧಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಬೇಕು.

***

ಸಕಾರಾತ್ಮಕ ಬೆಳವಣಿಗೆ
ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಭಾರತದಂತಹ ಪ್ರಗತಿಶೀಲ ರಾಷ್ಟ್ರದಲ್ಲಿ  ಮೋಟಾರು ವಾಹನ ಮಸೂದೆಗೆ ತಿದ್ದುಪಡಿ ತರುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ರಸ್ತೆ ಸಂಚಾರವನ್ನು ಹೆಚ್ಚು ಸುರಕ್ಷಿತ  ಮತ್ತು ಉತ್ತಮ ದರ್ಜೆಗೆ ಏರಿಸಲು ‘ರಾಷ್ಟ್ರೀಯ ಸಾರಿಗೆ ನೀತಿ’ ರೂಪಿಸುವ ಪ್ರಸ್ತಾವನೆ ಕೂಡ ಮಸೂದೆಯಲ್ಲಿರುವುದು ಶ್ಲಾಘನೀಯ.

-ಕಮಲ್‌ ಬಾಲಿ, ಅಧ್ಯಕ್ಷರು ಸಿಐಐ ಮತ್ತು ವ್ಯವಸ್ಥಾಪಕ ನಿರ್ದೇಶಕರು, ವೊಲ್ವೊ ಇಂಡಿಯಾ ಗ್ರೂಪ್‌

**

ರಸ್ತೆ ಮೂಲಸೌಕರ್ಯಗಳೆಲ್ಲವೂ ಉತ್ತಮವಾಗಿದ್ದಾಗ ಮಾತ್ರ ನಿಯಮ ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಮಸೂದೆಗೆ ಮಹತ್ವ ದೊರೆಯುತ್ತದೆ.

-ಎಂ.ಎನ್. ಶ್ರೀಹರಿ, ಸಾರಿಗೆ ತಜ್ಞ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT