ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹುಬಲಿ’ಯ ಕಟ್ಟಪ್ಪ, ಸತ್ಯರಾಜ್ ಕ್ಷಮಾಪಣೆ

Last Updated 21 ಏಪ್ರಿಲ್ 2017, 19:32 IST
ಅಕ್ಷರ ಗಾತ್ರ

ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ತಾವು ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ತಮಿಳು ನಟ ಸತ್ಯರಾಜ್‌ ಅವರು ಶುಕ್ರವಾರ ಕನ್ನಡಿಗರ ಕ್ಷಮೆ ಕೋರಿದ್ದಾರೆ. ಇದರೊಂದಿಗೆ ‘ಬಾಹುಬಲಿ–2’ ಚಿತ್ರದ ಬಿಡುಗಡೆಗೆ ಎದುರಾಗಿದ್ದ ವಿವಾದಕ್ಕೆ ತಾರ್ಕಿಕ ಅಂತ್ಯ ದೊರೆತಂತಾಗಿದೆ.

ಸತ್ಯರಾಜ್‌ ಕ್ಷಮೆ ಕೋರದ ಹೊರತು ‘ಬಾಹುಬಲಿ–2’ ಚಿತ್ರವನ್ನು ಕರ್ನಾಟಕದಲ್ಲಿ ತೆರೆಕಾಣಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟುಹಿಡಿದಿದ್ದವು. ಈ ಒತ್ತಡಕ್ಕೆ ಮಣಿದಿರುವ ಅವರು, ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಕ್ಷಮಾಪಣಾ ಹೇಳಿಕೆಯನ್ನು ಓದಿದರು.

‘ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತಂತೆ ನಾನು ಆಡಿದ ಮಾತುಗಳು ಕರ್ನಾಟಕದಲ್ಲಿ ಉದ್ವೇಗ ಉಂಟುಮಾಡಿವೆ ಎನ್ನುವುದು ನನಗೆ ತಿಳಿದಿದೆ. ನಾನು ಕರ್ನಾಟಕದ ಅಥವಾ ಕನ್ನಡಿಗರ ವಿರೋಧಿಯಲ್ಲ. ಮೂವತ್ತೈದು ವರ್ಷಗಳಿಂದ ನನಗೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಶೇಖರ್‌ ಎನ್ನುವ ವ್ಯಕ್ತಿ ಕನ್ನಡಿಗನಾಗಿರುವುದೇ ಇದಕ್ಕೆ ಉದಾಹರಣೆ’ ಎಂದು ಹೇಳಿದ್ದಾರೆ.

‘ಒಂಬತ್ತು ವರ್ಷಗಳ ಹಿಂದೆ ನಾನು ನೀಡಿದ ಹೇಳಿಕೆಗಾಗಿ ಮನಸಾರೆ ಕ್ಷಮೆ ಕೋರುವೆ. ಬಾಹುಬಲಿ ಚಿತ್ರದಲ್ಲಿ ನಾನೊಬ್ಬ ಪುಟ್ಟ ನಟನಾಗಿದ್ದು, ನನ್ನ ಹೇಳಿಕೆಯಿಂದಾಗಿ ದೊಡ್ಡ ಹೂಡಿಕೆಯ ಸಿನಿಮಾಕ್ಕೆ ತೊಂದರೆಯಾಗಬಾರದು. ಕರ್ನಾಟಕದಲ್ಲಿನ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರಿಗೆ ನಷ್ಟವಾಗಬಾರದು’ ಎಂದು ಹೇಳಿರುವ ಅವರು, ನನ್ನ ಹೇಳಿಕೆಯನ್ನು ತಮಿಳರು ಕೂಡ ಅರ್ಥಮಾಡಿಕೊಳ್ಳಬೇಕು ಎಂದು ಕೋರಿಕೊಂಡಿದ್ದಾರೆ.

‘ಇನ್ನುಮುಂದೆಯೂ ತಮಿಳು ಈಳಂ ಹಾಗೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟಗಳಿಗೆ ನನ್ನ ಬೆಂಬಲ ಮುಂದುವರೆಯುತ್ತದೆ. ಒಬ್ಬ ನಟನಾಗಿ ಸಾಯುವ ಬದಲು, ತಮಿಳಿಗನಾಗಿ ಸಾಯುವುದರಲ್ಲಿ ನನಗೆ ಹೆಚ್ಚು ಸಂತೋಷವಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನ್ನಿಂದ ಸಿನಿಮಾಕ್ಕೆ ತೊಂದರೆ ಆಗುತ್ತದೆ ಎನ್ನುವುದಾದರೆ ನಿರ್ಮಾಪಕರು ನನಗೆ ಅವಕಾಶ ಕೊಡುವುದು ಬೇಡ’ ಎಂದೂ ಹೇಳಿದ್ದಾರೆ.

ಚಿತ್ರದ ಬಿಡುಗಡೆಗೆ ಕನ್ನಡಿಗರು ಸಹಕರಿಸಬೇಕೆಂದು ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ಗುರುವಾರ ಮನವಿ ಮಾಡಿಕೊಂಡಿದ್ದರು. ಈ ಕೋರಿಕೆಯ ಬೆನ್ನಿಗೇ ಸತ್ಯರಾಜ್‌ ಕ್ಷಮಾಪಣೆ ಕೋರಿದ್ದಾರೆ.

ಸತ್ಯರಾಜ್‌ ಹೇಳಿದ್ದೇನು?: ಒಂಬತ್ತು ವರ್ಷಗಳ ಹಿಂದೆ ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ತಲೆದೋರಿದ್ದ ಬಿಕ್ಕಟ್ಟಿನ ಸಂದರ್ಭದಲ್ಲಿ ಸತ್ಯರಾಜ್‌ ಕನ್ನಡಪರ ಹೋರಾಟಗಾರರನ್ನು ಗೇಲಿ ಮಾಡಿದ್ದರು. ಕಾವೇರಿ ನೀರಿಗೆ ಸಂಬಂಧಿಸಿದಂತೆ ತಮಿಳು ಚಿತ್ರರಂಗ ನಡೆಸಿದ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಅವರ ಕೆಲವು ಮಾತುಗಳು ಹೀಗಿವೆ:

‘ಕರ್ನಾಟಕದಲ್ಲಿ ತಮಿಳರನ್ನು ಹೊಡೆದು ಸಾಯಿಸುತ್ತಿದ್ದಾರೆ. ಅದನ್ನು ವಿರೋಧಿಸಲು ನಾನಿಲ್ಲಿಗೆ ಬಂದಿದ್ದೇನೆ. ತಮಿಳರನ್ನು ಕನ್ನಡದವರು ಮನುಷ್ಯರೆಂದು ಭಾವಿಸಿಲ್ಲ. ಅವರು ನಮ್ಮನ್ನು ಒಂದು ಮರವೆನ್ನುವ ರೀತಿಯಲ್ಲಿ ಭಾವಿಸಿದ್ದಾರೆ. ಒಂದು ಮರ ಸಿಕ್ಕರೆ ನಾಯಿಗಳು ಏನು ಮಾಡುತ್ತವೆ?

ಕಾವೇರಿ ವಿಚಾರದಲ್ಲಿ, ನಮ್ಮ ನೀರನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಹೆಂಡತಿಯ ಪಕ್ಕ ನಾವು ಮಲಗಿದರೆ ಅವರಿಗೇನು ನಷ್ಟ? ವಾಟಾಳ್ ನಾಗರಾಜ್ ಎನ್ನುವ ಒಬ್ಬ ವ್ಯಕ್ತಿ ಇದ್ದಾನೆ. ಭಯಂಕರ ಮಾತುಗಾರ, ಕಾಮಿಡಿಯನ್. ಅವರ ಮುಂದೆ ವಡಿವೇಲು ಕೂಡ ಏನೂ ಅಲ್ಲ. ಸದ್ಯ, ಆ ವ್ಯಕ್ತಿ ಚಿತ್ರರಂಗದಲ್ಲಿ ಇಲ್ಲ! ಈರೋಡ್‌, ಕೃಷ್ಣಗಿರಿ, ಮದ್ರಾಸ್‌, ಇವೆಲ್ಲ ಕರ್ನಾಟಕಕ್ಕೆ ಸೇರಬೇಕು ಎನ್ನುತ್ತಾನೆ.

ತಮಿಳಿನವರು ಇವರ ಮುಂದೆ ಬಗ್ಗಿದರೆ ಸವಾರಿ ಮಾಡುತ್ತಲೇ ಇರುತ್ತಾರೆ. ಅವರ ಬಾಲವನ್ನು ಕತ್ತರಿಸುವ ಧೈರ್ಯವನ್ನು ತಮಿಳಿನವರು ಮಾಡಬೇಕು. ತಮಿಳಿನ ಜನ ಎಲ್ಲೆಲ್ಲಿಂದಲೋ ಬಂದು ಕೂತವರನ್ನು ತಲೆ ಮೇಲೆ ಕೂರಿಸಿಕೊಂಡು ತಿರುಗುತ್ತಿದ್ದಾರೆ...’

***

ನಾಳೆ ತೀರ್ಮಾನ
ಮೇಲ್ನೋಟಕ್ಕೆ ಸತ್ಯರಾಜ್‌ ಅವರು ತಾವು ಆಡಿದ ಮಾತಿನ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದು ಕಾಣುತ್ತದೆ. ಅವರು ಕ್ಷಮೆ ಕೋರಿದ್ದರಿಂದ ನಮಗೂ ಸಮಾಧಾನವಾಗಿದೆ. ನಾಳೆ ಎಲ್ಲ ಕನ್ನಡಪರ ಸಂಘಟನೆಗಳೂ ಸಭೆ ಸೇರಿ ಈ ಬಗ್ಗೆ ಚರ್ಚಿಸುತ್ತೇವೆ.

ಆ ಸಭೆಯಲ್ಲಿಯೇ ಮುಂದಿನ ನಡೆ ಹೇಗಿರಬೇಕು ಎಂಬ ಕುರಿತೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ  ಸಾ.ರಾ. ಗೋವಿಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT