ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ವೃದ್ಧಿಗೆ ಮಳೆನೀರು ಸಂಗ್ರಹಿಸಿ

ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಜಲತಜ್ಞ ಎನ್.ಕೆ.ದೇವರಾಜ ರೆಡ್ಡಿ
Last Updated 22 ಏಪ್ರಿಲ್ 2017, 3:49 IST
ಅಕ್ಷರ ಗಾತ್ರ
ದಾವಣಗೆರೆ: ‘ದೇಶದಲ್ಲಿ 7 ಕೋಟಿ ಕೊಳವೆಬಾವಿಗಳಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಳೆನೀರು ಸಂಗ್ರಹ ಮಾಡುವ ಮೂಲಕ ಈ ಕೊಳವೆಬಾವಿಗಳ ಅಂತರ್ಜಲ ಹೆಚ್ಚಿಸಬಹುದಾಗಿದೆ’ ಎಂದು ಜಲತಜ್ಞ ಎನ್.ಕೆ.ದೇವರಾಜ ರೆಡ್ಡಿ ಹೇಳಿದರು.
 
ನಗರದ ಕುವೆಂಪು ಕನ್ನಡ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಕರ್ನಾಟಕ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಮೈಸೂರು ಇತಿಹಾಸ ವಿಭಾಗ, ಇತಿಹಾಸ ಅಧ್ಯಾಪಕರ ವೇದಿಕೆ, ದಾವಣಗೆರೆ ವಿಶ್ವವಿದ್ಯಾಲಯ ಸಹ ಯೋಗದಲ್ಲಿ ಶುಕ್ರವಾರ ನಡೆದ ‘ಮಧ್ಯಕಾಲೀನ ಕರ್ನಾಟಕದ ಜಲವಾಸ್ತು ಶಿಲ್ಪ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಮಳೆನೀರು ಸಂಗ್ರಹ ಮತ್ತು ಅಂತರ್ಜಲ ಸಂರಕ್ಷಣೆ’ ವಿಷಯ ಕುರಿತು ಅವರು ಮಾತನಾಡಿದರು.
 
ಮಳೆ ಕೊರತೆಯಿಂದ ಅಂತರ್ಜಲ ಕುಸಿಯುತ್ತಿದೆ. ಅಧಿಕ ಕೊಳವೆಬಾವಿಗಳನ್ನು ಕೊರೆಸುವುದು ಸಹ ನೀರಿನ ತೀವ್ರತೆಯನ್ನು ಸೂಚಿಸುತ್ತದೆ. ರೈತರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಬೇಕಾದರೆ ಮೊದಲು ಜಲಮರುಪೂರಣ (ಮಳೆ ನೀರು ಸಂಗ್ರಹ) ಅಳವಡಿಸಿಕೊಳ್ಳಬೇಕು. ನೀರು ಇಂಗುವುದುರ ಮೂಲಕ ಜಲವೃದ್ಧಿ ಯಾಗುತ್ತದೆ. ಪ್ರತಿ ಕೊಳವೆಬಾವಿಗೂ ಇಂಗುಗುಂಡಿ ನಿರ್ಮಿಸುವುದು ಅಗತ್ಯ ಎಂದು ಸಲಹೆ ನೀಡಿದರು.
 
ಮಳೆ ನೀರು ಕುಡಿಯಲು ಯೋಗ್ಯವಾಗಿದ್ದು, ಇದರ ಬಳಕೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. ನಾಗರಿಕರು ತಮ್ಮ ಮನೆಯ ಅಥವಾ ತೋಟಗಳಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹಿಸಬಹುದಾಗಿದೆ. ಇದರಿಂದ ನೀರಿನ ಸಮಸ್ಯೆ ನಿವಾರಣೆಯಾಗುವುದು. ಅಗತ್ಯವಿದ್ದಾಗ ಮಳೆ ನೀರು ಬಳಕೆ ಮಾಡಿಕೊಳ್ಳಬಹುದು. ವ್ಯವಸ್ಥಿತ ನೀರಿನ ಸದ್ಬಳಕೆಗೆ ಮಳೆ ನೀರು ಸಂಗ್ರಹ ಸಹಾಯಕವಾಗಲಿದೆ ಎಂದು ವಿವರಿಸಿದರು.
 
ಕೊಳವೆಬಾವಿಗಳನ್ನು ಕೊರೆಸುವಾಗ ಪೂಜೆ, ಮಾಟ–ಮಂತ್ರಗಳಿಗೆ ಮೊರೆಹೋಗಬಾರದು. ಹುಲಿಕಟ್ಟಿ, ಆಲದಕಟ್ಟಿ, ತೆಂಗಿನಕಾಯಿ ಹಿಡಿದು ಜಲಮೂಲ ಕಂಡುಹಿಡಿಯಲು ಸಾಧ್ಯವಿಲ್ಲ. ರೈತರು ಕೊಳವೆಬಾವಿಗಳನ್ನು ಕೊರೆಸುವಾಗ ಜಲತಜ್ಞರ ಸಲಹೆ ಪಡೆಯಬೇಕು ಎಂದು ಹೇಳಿದರು.
 
‘ಮಧ್ಯಕಾಲೀನ ಕರ್ನಾಟಕದಲ್ಲಿ ಕೋಟೆಗಳಲ್ಲಿ ಜಲ ನಿರ್ವಹಣೆ’ ವಿಷಯ ಕುರಿತು ಮಾತನಾಡಿದ ಡಾ.ಶಶಿಶೇಖರ ರೆಡ್ಡಿ, ‘ಹರಪ್ಪ ಸಂಸ್ಕೃತಿಯಲ್ಲಿ ಜಲನಿರ್ವಹಣೆ ಇತ್ತು. ಪ್ರತಿ ಮನೆಯಲ್ಲೂ ಬಾವಿಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿತ್ತು.
 
ನೀರಿನ ಸಮಸ್ಯೆ ತಲೆದೋರದಂತೆ ಸದ್ಬಳಕೆ ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಆದರೆ, ಈಗ ಊರಿಗೆ ಒಂದು ಬಾವಿ ಇಲ್ಲ. ತುಂಬಿರುತ್ತಿದ್ದ ಬಾವಿಗಳು ಸಂಪೂರ್ಣ ಮುಚ್ಚಿಹೋಗಿವೆ. ಇದು ಮನುಷ್ಯ ಜೀವಿಯ ಅವನತಿಯ ಒಂದು ಭಾಗವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
 
ಈಗಿನ ಜನವಸತಿ ಪ್ರದೇಶಗಳಲ್ಲಿ ಜಲಮೂಲ ಇಲ್ಲ. ನೀರಿನ ಸಂಪತ್ತು ಕ್ಷೀಣಿಸಿದೆ. ಪರಿಸರ ನಾಶ ಹಾಗೂ ಪ್ಲಾಸ್ಟಿಕ್‌ ಬಳಕೆಯಿಂದ ಅಂತರ್ಜಲ ಬತ್ತಿ ಹೋಗಿದೆ. ಇದು ಹೀಗೆ ಮುಂದುವರಿದರೆ ‘ನೀರು’ ಎನ್ನುವ ಪದ ಇತಿಹಾಸ ಸೇರಿಲಿದೆ.
 
ಪೋಷಕರು ಮಕ್ಕಳಿಗೆ ಜಲಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ನಾಶಕ್ಕೆ ಕಡಿವಾಣ ಹಾಕಿ ಮಳೆ ಸಂಗ್ರಹ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
 
ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮೆಹಬೂಬ್ ಬಾಷಾ, ಡಾ.ಎನ್.ಜಿ.ಪ್ರಕಾಶ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT